ಡಿಸೆಂಬರ್ 02, ಭುವನೇಶ್ವರ: ದೇಶಕ್ಕೆ ಶೀಘ್ರವೇ ಮತ್ತೊಂದು ಚಂಡಮಾರುತ ಅಪ್ಪಳಿಸಲಿದೆ. ಜೋವಾದ್ ಎಂಬ ಹೆಸರಿನ ಚಂಡಮಾರುತ ಅಪ್ಪಳಿಸಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹವಾಮಾನ ಇಲಾಖೆ ಪ್ರಕಾರ ಜೋವಾದ್ ಚಂಡಮಾರುತವು 24 ಗಂಟೆಗಳಲ್ಲಿ ಬಲಗೊಳ್ಳುವ ಸಾಧ್ಯತೆಯಿದ್ದು, ಮುಂದಿನ 48 ಗಂಟೆಗಳಲ್ಲಿ ಅಂದರೆ ಡಿಸೆಂಬರ್ 4ರ ಮುಂಜಾನೆ ಆಂಧ್ರಪ್ರದೇಶ, ಪಶ್ಚಿಮ ಬಂಗಾಳ ಮತ್ತು ಒಡಿಶಾ ಕರಾವಳಿ ತೀರಕ್ಕೆ ಅಪ್ಪಳಿಸಲಿದೆ ಎಂದು ತಿಳಿದು ಬಂದಿದೆ.
ಭಾರೀ ಮಳೆ, ಅಪಾರ ಹಾನಿ: ದಕ್ಷಿಣ ಥೈಲ್ಯಾಂಡ್ನ ಸಾಗರದಲ್ಲಿ ವಾಯುಭಾರ ಕುಸಿತ ಉಂಟಾಗಿ ಬಿರುಗಾಳಿ ಬೀಸಲಿದ್ದು, ಅದು ಚಂಡಮಾರುತ ಸ್ವರೂಪ ಪಡೆದುಕೊಳ್ಳಲಿದೆ ಎಂದು ತಿಳಿದುಬಂದಿದೆ. ಬಳಿಕ ಅಂಡಮಾನ್ ಸಾಗರದ ದಕ್ಷಿಣ ಕರಾವಳಿ ಮೂಲಕ ಡಿಸೆಂಬರ್ 4ರಂದು ಭಾರತಕ್ಕೆ ಪ್ರವೇಶ ಪಡೆಯಲಿದೆ. ಪರಿಣಾಮವಾಗಿ ಬೀಳುವ ಭಯಂಕರ ಮಳೆಯಿಂದಾಗಿ ಪಶ್ಚಿಮ ಬಂಗಾಳ, ಆಂಧ್ರಪ್ರದೇಶ ಮತ್ತು ಒಡಿಶಾದಲ್ಲಿ ಭೂಕುಸಿತದ ಜತೆಗೆ ಅಪಾರ ಹಾನಿಯಾಗಬಹುದು ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ. ಇದಲ್ಲದೆ, ಮುಂಬೈ ಗುಜರಾತ್ ಮತ್ತು ಉತ್ತರ ಮಧ್ಯ ಮಹಾರಾಷ್ಟ್ರದ ವಿವಿಧ ಸ್ಥಳಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಪರಿಣಾಮವಾಗಿ ಡಿಸೆಂಬರ್ 4 ಮತ್ತು 5ರಂದು ಆಂಧ್ರಪ್ರದೇಶ ಮತ್ತು ಒಡಿಶಾದಲ್ಲಿ ಭಾರೀ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಲಾಗಿದೆ. ಉಳಿದಂತೆ ಪಶ್ಚಿಮ ಬಂಗಾಳದ ದಕ್ಷಿಣ ಜಿಲ್ಲೆಗಳಾದ ಕೋಲ್ಕತ್ತ, ದಕ್ಷಿಣ ಮತ್ತು ಉತ್ತರದ 24 ಪರಗಣ ಜಿಲ್ಲೆಗಳು, ಮಿಡ್ನಾಪುರದ ಪೂರ್ವ ಮತ್ತು ಪಶ್ಚಿಮ ಪ್ರದೇಶಗಳು, ಹೂಗ್ಲಿ, ನಾದಿಯಾ ಮತ್ತು ಝಾರ್ಗ್ರಾಮ್ಗಳಲ್ಲಿ ವಿಪರೀತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಅಕ್ಟೋಬರ್ ಅಂತ್ಯದಲ್ಲೇ ಭಾರೀ ಮಳೆಯ ಸೂಚನೆ ನೀಡಿದ್ದ ಅಧಿಕಾರಿಗಳು: ಡಿಸೆಂಬರ್ ಮೊದಲ ವಾರದಲ್ಲಿ ಬಂಗಾಳಕೊಲ್ಲಿಯಲ್ಲಿ ಚಂಡಮಾರುತ ಏಳುವ ಸಾಧ್ಯತೆ ಹೆಚ್ಚಿದ್ದು, ಒಡಿಶಾದಲ್ಲಿ ಡಿಸೆಂಬರ್ 2ರಿಂದ 5ರವರೆಗೆ ಭಾರಿ ಮಳೆಯಾಗಲಿದೆ ಎಂದು ಭಾರತ ಹವಾಮಾನ ಇಲಾಖೆ ನಿರ್ದೇಶಕ ಮೃತ್ಯುಂಜಯ ಮೋಹಪಾತ್ರಾ ಅವರು ಅಕ್ಟೋಬರ್ ತಿಂಗಳಾ0ತ್ಯದಲ್ಲೇ ಮಾಹಿತಿ ನೀಡಿದ್ದರು. ಜತೆಗೆ ರಾಜಸ್ತಾನ, ದೆಹಲಿ, ಹರಿಯಾಣ, ಉತ್ತರಪ್ರದೇಶದ, ಪಶ್ಚಿಮ ಭಾಗದಲ್ಲಿ, ಉತ್ತರಾಖಂಡ್ಗಳಲ್ಲಿ ಕೂಡ ಮಳೆಯಾಗುವ ಸಾಧ್ಯತೆ ಇದ್ದು, ಹವಾಮಾನದಲ್ಲಿ ಸಂಪೂರ್ಣ ಬದಲಾವಣೆ ಆಗಬಹುದು ಎಂದು ಐಎಂಸಿ ಸೈಂಟಿಸ್ಟ್ ಆರ್.ಕೆ.ಜೆನಮಣಿ ಎಚ್ಚರಿಕೆ ನೀಡಿದ್ದರು.
ಪ್ರಧಾನಿಯಿಂದ ಸಭೆ: ಡಿಸೆಂಬರ್ 3 ರಿಂದ ಒಡಿಶಾದ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರು ಉನ್ನತ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ. ದೇಶದಲ್ಲಿನ ಚಂಡಮಾರುತ ಪರಿಸ್ಥಿತಿಯ ಅವಲೋಕನದ ಹಿನ್ನೆಲೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಮಾಹಿತಿ ಪಡೆದುಕೊಂಡಿದ್ದಾರೆ. ಮುನ್ನೆಚ್ಚರಿಕೆ ಕ್ರಮಗಳ ಕುರಿತು ಮೋದಿಯವರಿಗೆ ಸಭೆಯಲ್ಲಿ ವಿವರಿಸಿದ್ದಾರೆ ಎಂದು ತಿಳಿದುಬಂದಿದೆ. ಈಗಾಗಲೇ ಅಕಾಲಿಕ ಮಳೆಗೆ ದೇಶದ ಹಲವು ರಾಜ್ಯಗಳು ನಲುಗಿದ್ದು ವಿಪರೀತ ನಷ್ಟವಾಗಿದೆ. ಹೀಗಾಗಿ ಪ್ರಧಾನಿಯವರು ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಲು ಸಭೆ ನಡೆಸಿದ್ದಾರೆ.
0 Comments