ಬೆಂಗಳೂರು : ನೆರೆ ರಾಜ್ಯ ಕೇರಳದ ಖ್ಯಾತ ವಕೀಲರು, ಬಿಜೆಪಿ ಮುಖಂಡರು, ಒಬಿಸಿ ಮೋರ್ಚಾ ರಾಜ್ಯ ಕಾರ್ಯದರ್ಶಿಗಳು ಆಗಿದ್ದ, ರಂಜಿತ್ ಶ್ರೀನಿವಾಸನ್ ರವರನ್ನು ಕಳೆದ ಭಾನುವಾರದಂದು ಬರ್ಬರವಾಗಿ ಹತ್ಯೆ ಮಾಡಲಾಗಿರುವುದನ್ನು ಖಂಡಿಸಿ, ನಗರದ ಮೈಸೂರು ಬ್ಯಾಂಕ್ ವೃತ್ತದಲ್ಲಿ ಬುಧವಾರ ಸಂಜೆ ಭಾರತೀಯ ಜನತಾ ಪಕ್ಷದ ರಾಜ್ಯ ಹಿಂದುಳಿದ ವರ್ಗಗಳ ಮೋರ್ಚಾ ವತಿಯಿಂದ ರಾಜ್ಯಾಧ್ಯಕ್ಷ ನೆ.ಲ.ನರೇಂದ್ರ ಬಾಬುರವರ ನೇತೃತ್ವದಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಹತ್ಯೆಗೊಳಗಾದ ರಂಜಿತ್ ಶ್ರೀನಿವಾಸ್ ರವರಿಗೆ ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರು ಎಲ್ಲರೂ ತಮ್ಮ ಕೈಗಳಲ್ಲಿ ಮೊಂಬತ್ತಿಗಳನ್ನು ಬೆಳಗಿಸಿ ಎರಡು ನಿಮಿಷಗಳ ಮೌನಾಚರಣೆ ಮಾಡುವ ಮೂಲಕ ಶೋಕಭರಿತ ಶ್ರದ್ಧಾಂಜಲಿಯನ್ನು ಸಮರ್ಪಿಸಿದರು.
ಇದಕ್ಕೂ ಮುನ್ನ ಮಾತನಾಡಿದ ರಾಜ್ಯ ಹಿಂದುಳಿದ ವರ್ಗಗಳ ಮೋರ್ಚಾ ಉಪಾಧ್ಯಕ್ಷರು ಹಾಗೂ ಬಿಬಿಎಂಪಿ ವಾರ್ಡ್ ಕಾಮಗಾರಿ ಸ್ಥಾಯಿ ಸಮಿತಿಯ ಮಾಜಿ ಅಧ್ಯಕ್ಷ ಎ.ಹೆಚ್.ಬಸವರಾಜುರವರು, ಕೇರಳ ರಾಜ್ಯದಲ್ಲಿ ಇತ್ತೀಚಿನ ವರ್ಷಗಳಲ್ಲಿ ಹಿಂದೂಗಳ ಅದರಲ್ಲೂ ವಿಶೇಷವಾಗಿ ಬಿಜೆಪಿ ಪಕ್ಷದ ಕಾರ್ಯಕರ್ತರ ಹತ್ಯೆಗಳು ಗಣನೀಯ ಪ್ರಮಾಣದಲ್ಲಿ ಹೆಚ್ಚಾಗುತ್ತಿದ್ದು' ಆತಂಕವನ್ನು ಉಂಟುಮಾಡುತ್ತಿದೆ. ಎಸ್ ಡಿ ಪಿ ಐ / ಪಿ ಎಫ್ ಐ ಸಂಘಟನೆಗಳ ಹೆಸರಿನಲ್ಲಿ ಹತ್ಯೆ ಮುಂತಾದ ಹಿಂಸಾತ್ಮಕ ಚಟುವಟಿಕೆಗಳಲ್ಲಿ ತೊಡಗಿರುವ ಕೆಲವು ದುಷ್ಟ ಸಮಾಜ ಘಾತುಕ ವ್ಯಕ್ತಿಗಳು, ಸಾಮಾನ್ಯ ಜನರಲ್ಲಿ ಇದು ಭಯೋತ್ಪಾದನೆಯನ್ನು ಉಂಟು ಮಾಡುತ್ತಿದ್ದು, ಕೇಂದ್ರ ಸರ್ಕಾರವು ಈ ಕೂಡಲೇ ಇವುಗಳನ್ನು ಬ್ಯಾನ್ ಮಾಡಲು ಕ್ರಮಕ್ಕೆ ಮುಂದಾಗಬೇಕು ಎಂದು ಅಭಿಪ್ರಾಯಪಟ್ಟರು.
ಹಿಂದುಳಿದ ಮೋರ್ಚಾದ ರಾಜ್ಯಾಧ್ಯಕ್ಷ ನೆ.ಲ. ನರೇಂದ್ರ ಬಾಬು ರವರು ಮಾತನಾಡುತ್ತಾ, ಬಸವರಾಜುರವರ ಅಭಿಪ್ರಾಯಕ್ಕೆ ಸಹಮತವನ್ನು ವ್ಯಕ್ತಪಡಿಸುತ್ತಾ, ಆ ಸಂಘಟನೆಗಳು ಬ್ಯಾನ್ ಆಗುವುದರ ಜೊತೆಗೆ ಪಿನರಾಯಿ ನೇತೃತ್ವದ ಕೇರಳ ರಾಜ್ಯ ಸರ್ಕಾರವನ್ನು ಕೇಂದ್ರ ಸರ್ಕಾರವು ವಜಾಗೊಳಿಸಲು ಕ್ರಮ ಕೈಗೊಂಡು ಅಲ್ಲಿ ರಾಷ್ಟ್ರಪತಿ ಆಡಳಿತವನ್ನು ಜಾರಿ ಮಾಡಬೇಕು ಎಂದು ಆಗ್ರಹಿಸಿ, ಕೇರಳ ಬಿಜೆಪಿಯಲ್ಲಿ ಸಕ್ರಿಯರಾಗಿ ನಿಷ್ಠಾವಂತ ಕಾರ್ಯಕರ್ತರಾಗಿ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವವರಿದ್ದ ರಂಜಿತ್ ಶ್ರೀನಿವಾಸನ್ ರವರನ್ನು ಹಾಗೂ ಈ ಹಿಂದೆ ಇನ್ನಿತರೆ ಅಮಾಯಕ ಬಿಜೆಪಿ ಪಕ್ಷದ ಕಾರ್ಯಕರ್ತರನ್ನು ಬರ್ಬರವಾಗಿ ಹತ್ಯೆಗೈದವರನ್ನು ಶೀಘ್ರವಾಗಿ ಬಂಧಿಸಿ ಕಾನೂನಿನನ್ವಯ ಕಠಿಣಾತಿ ಕಠಿಣ ಶಿಕ್ಷೆಯನ್ನು ನೀಡುವ ಮೂಲಕ ಕುಕೃತ್ಯಗಳಲ್ಲಿ ತೊಡಗಿರುವಂಥವರಿಗೆ, ಆ ಬಗ್ಗೆ ಬಲವಾದ ಸಂದೇಶವನ್ನು ನೀಡುವ ಮೂಲಕ ಜನರ ಮನದಲ್ಲಿ ಮನೆಮಾಡಿರುವ ಆತಂಕವನ್ನು ಕೇಂದ್ರ ಸರ್ಕಾರ ದೂರ ಮಾಡುವುದು ಎಂಬುದು ಜನರ ನಿರೀಕ್ಷೆಯಾಗಿದೆ,
ಅದು ಸಾಧ್ಯವೂ ಹೌದು ಎಂಬುದಾಗಿ ಆಶಯವನ್ನು ವ್ಯಕ್ತಪಡಿಸಿದರು. ಈ ಪ್ರತಿಭಟನೆಯಲ್ಲಿ ಹಿಂದುಳಿದ ಮೋರ್ಚಾದ ರಾಜ್ಯ ಕೋಶಾಧಿಕಾರಿ ಆರ್. ಗೋವಿಂದ ನಾಯ್ಡು, ಬಿಬಿಎಂಪಿ ಬೃಹತ್ ಸಾರ್ವಜನಿಕ ಕಾಮಗಾರಿ ಸ್ಥಾಯಿ ಸಮಿತಿಯ ಮಾಜಿ ಅಧ್ಯಕ್ಷ ಬಿ.ಸೋಮಶೇಖರ್, ಬಿಜೆಪಿ ಓಬಿಸಿ ಅಧ್ಯಕ್ಷ ಎ. ವಿಜಯಕುಮಾರ್, ಪ್ರಧಾನ ಕಾರ್ಯದರ್ಶಿ ಸುರೇಶ್ ಬಾಬು, ಮಾಜಿ ಕಾರ್ಪೊರೇಟರ್ ಗೋವಿಂದರಾಜು ರವರೊಂದಿಗೆ, ಓಬಿಸಿ ಮೋರ್ಚಾ ಪದಾಧಿಕಾರಿಗಳು, ಪಕ್ಷದ ಪದಾಧಿಕಾರಿಗಳು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷದ ಕಾರ್ಯಕರ್ತರು ಭಾಗವಹಿಸಿದ್ದರು.
0 Comments