ಭಾರತ್ ಸಂಚಾರ್ ನಿಗಮ ಲಿಮಿಟೆಡ್ (ಬಿಎಸ್ಎನ್ಎಲ್) ಎಂದರೆ ‘ಬೋತ್ ಸೈಡ್ ನಾಟ್ ಲಿಸನಿಂಗ್’ ಎಂದು ಮೂಗು ಮುರಿಯುತ್ತಿದ್ದ ಸಾರ್ವಜನಿಕರಲ್ಲಿ ಇದೀಗ ಇದ್ದಕ್ಕಿದ್ದಂತೆ ಬಿಎಸ್ಎನ್ಎಲ್ ಮೇಲೆ ಪ್ರೇಮ ಹುಟ್ಟಿಕೊಂಡಿದೆ. ಬಿಎಸ್ಎನ್ಎಲ್ ಬಳಕೆಯೇ ಲೇಸು ಎಂದು ಗ್ರಾಹಕರು ಸರ್ಕಾರಿ ಸ್ವಾಮ್ಯದ ದೂರಸಂಪರ್ಕ ಸಂಸ್ಥೆಯತ್ತ ಒಲವು ತೋರಲಾರಂಭಿಸಿದ್ದಾರೆ.
ಅಷ್ಟಕ್ಕೂ ಹೀಗೆ ಜನರಲ್ಲಿ ಇದ್ದಕ್ಕಿದ್ದಂತೆ ಬಿಎಸ್ಎನ್ಎಲ್ನತ್ತ ಒಲವು ಮೂಡಲು ಪ್ರಮುಖ ಕಾರಣ ಆ ಮೂವರು.
ಅಂದರೆ ಜಿಯೋ, ವೊಡಾಫೋನ್ ಐಡಿಯಾ ಮತ್ತು ಭಾರ್ತಿ ಏರ್ಟೆಲ್ ಕಂಪನಿಗಳು. ವೊಡಾಫೋನ್ ಐಡಿಯಾ ಹಾಗೂ ಭಾರ್ತಿ ಏರ್ಟೆಲ್ ತನ್ನ ಟ್ಯಾರಿಫ್ ದರದಲ್ಲಿ ಹೆಚ್ಚಳ ಮಾಡಿದ ಬೆನ್ನಿಗೆ ಅತ್ಯಂತ ದೊಡ್ಡ ದೂರಸಂಪರ್ಕ ಜಾಲದಲ್ಲಿ ಒಂದಾಗಿರುವ ಜಿಯೋ ಕಂಪನಿ ಕೂಡ ದರ ಹೆಚ್ಚಳ ಮಾಡುವುದಾಗಿ ಘೋಷಿಸಿದೆ.
ಡಿ. 1ರಿಂದ ಜಿಯೋ ಟ್ಯಾರಿಫ್ನಲ್ಲಿ ಶೇ. 20 ಹೆಚ್ಚಳ ಆಗುವುದಾಗಿ ಕಂಪನಿ ಘೋಷಿಸಿದೆ. ಅಂದರೆ 75, 129, 399, 1299, 2399 ರೂ. ಇರುವ ಸದ್ಯದ ಪ್ಲ್ಯಾನ್ಗಳು ಡಿ. 1ರಿಂದ ಕ್ರಮವಾಗಿ 91, 155, 479, 1599, 2879 ರೂ. ಆಗಲಿವೆ. ಸರಿಯಾದ ನೆಟ್ವರ್ಕ್ ಲಭ್ಯ ಇರದಿದ್ದರೂ, ಇಂಟರ್ನೆಟ್ ಸ್ಪೀಡ್ ಸಮರ್ಪಕವಾಗಿ ಇರದಿದ್ದರೂ ಏಕಾಏಕಿ ದರ ಹೆಚ್ಚಳದ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಸಾರ್ವಜನಿಕರು ಖಾಸಗೀಕರಣದ ವಿರುದ್ಧವೂ ಬೇಸರ ಹೊರಹಾಕಿದ್ದಾರೆ.
ಮಾತ್ರವಲ್ಲ, ಬಿಎಸ್ಎನ್ಎಲ್ ಟ್ಯಾರಿಫ್ ಜತೆ ಹೋಲಿಸಿ ಮಾತನಾಡುತ್ತಿರುವ ನೆಟ್ಟಿಗರು, ಅದರತ್ತ ಒಲವು ತೋರಲಾರಂಭಿಸಿದ್ದಾರೆ. ಅಷ್ಟೇ ಅಲ್ಲ #BoycottJioVodaAirtel ಎನ್ನುವ ಜತೆಗೆ ಬಿಎಸ್ಎನ್ಎಲ್ಗೆ ಸ್ವಿಚ್ ಆಗೋಣ ಎಂಬುದಾಗಿ ಅಭಿಯಾನವನ್ನೇ ನಡೆಸುತ್ತಿದ್ದು, #BoycottJioVodaAirtel ಟ್ರೆಂಡಿಂಗ್ನಲ್ಲಿದೆ.
0 Comments