ಬೆಂಗಳೂರು : ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯು ಸೋಮವಾರದಂದು ಎಫ್ ಕೆ ಸಿ ಸಿ ಐ ನ ಸರ್ ಎಂ.ವಿ.ಸಭಾಂಗಣದಲ್ಲಿ ಆಯೋಜಿಸಿದ್ದ 66 ನೇ ಕನ್ನಡ ರಾಜ್ಯೋತ್ಸವ ಸಮಾರಂಭವನ್ನು ರಾಜ್ಯ ಕಂದಾಯ ಸಚಿವ ಆರ್.ಅಶೋಕ್ ರವರು ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಸಿ.ಸೋಮಶೇಖರ ಭಾ.ಆ.ಸೇ. (ನಿ), ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ ವಿಶ್ರಾಂತ ಕುಲಪತಿಗಳು ಪ್ರೋ. ಮಲ್ಲೇಪುರಂ ಜಿ. ವೆಂಕಟೇಶ್ ರವರ ಸಮ್ಮುಖದಲ್ಲಿ ಜ್ಯೋತಿಯನ್ನು ಬೆಳಗುವ ಮೂಲಕ ಉದ್ಘಾಟನೆ ಮಾಡಿದರು.
ಈ ಸಂದರ್ಭದಲ್ಲಿ ಮಹಾಸಂಸ್ಥೆಯ ಅಧ್ಯಕ್ಷ ಡಾ. ಐ.ಎಸ್. ಪ್ರಸಾದ್, ಹಿರಿಯ ಉಪಾಧ್ಯಕ್ಷ ಬಿ.ವಿ.ಗೋಪಾಲ್ ರೆಡ್ಡಿ, ಉಪಾಧ್ಯಕ್ಷ ರಮೇಶ್ ಚಂದ್ರ ಲಹೋಟಿ, ನಿಕಟಪೂರ್ವ ಅಧ್ಯಕ್ಷ ಡಾ. ಪೆರಿಕಲ್ ಎಂ. ಸುಂದರ್, ಸದಸ್ಯತ್ವ ಅಭಿವೃದ್ಧಿಯ ಛೇರ್ಮನ್ ರೋ. ಎಂ.ಜಿ.ಬಾಲಕೃಷ್ಣ, ನಾಗರಿಕ ವ್ಯವಹಾರ ಸಮಿತಿಯ ಛೇರ್ಮನ್ ಕೆ.ವಿ.ರಾಜೇಂದ್ರ ಕುಮಾರ್, ಮಹಾಕಾರ್ಯದರ್ಶಿ ಎಂ. ಲೋಕರಾಜ್, ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಖ್ಯಾತ ಚಿತ್ರನಟ ಶ್ರೀ ಪುನೀತ್ ರಾಜ್ ಕುಮಾರ್ ರವರಿಗೆ ಪುಷ್ಪ ನಮನದ ಮೂಲಕ ಶ್ರದ್ಧಾಂಜಲಿಯನ್ನು ಅರ್ಪಿಸಲಾಯಿತು.
ಕರೋನಾ ಸಂಕಷ್ಟದ ಸಮಯದಲ್ಲಿ ತಮ್ಮ ಜೀವಗಳನ್ನು ಒತ್ತೆಯಿಟ್ಟು ಜನರ ಸೇವೆಯಲ್ಲಿ ನಿರತರಾದ ಬಿಬಿಎಂಪಿ ಆರೋಗ್ಯಾಧಿಕಾರಿಗಳಾದ ಡಾ. ಬಿ.ವೈ.ನಂದ, ಡಾ. ಮನೋರಂಜನ್ ಹೆಗ್ಡೆ, ಡಾ. ಸತ್ಯವತಿ, ಕರೋನ ಸಂದರ್ಭದಲ್ಲಿ ನಿಸ್ವಾರ್ಥ ಸಮಾಜ ಸೇವೆಗೆ ಹಗಲಿರುಳು ತೊಡಗಿಸಿಕೊಂಡ ಶಿವ ಶಕ್ತಿ ಪ್ರಸಾದ್ ಹಾಗೂ ವಿನೋದ್ ಕರ್ತವ್ಯರವರುಗಳನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಡಾ. ಸಿ. ಸೋಮಶೇಖರ ರವರು ಈ ಸಂದರ್ಭದಲ್ಲಿ ಮಾತನಾಡುತ್ತಾ, ಪ್ರಾಧಿಕಾರದ ಅಧ್ಯಕ್ಷರಾಗಿ ಗಡಿ ಭಾಗಗಳಿಗೆ ತಾವು ಭೇಟಿ ನೀಡಿದಾಗ ತಮಗೆ ಕಂಡುಬಂದ ಚಿತ್ರಣವನ್ನು ವಿವರಿಸಿ' ಆ ಗಡಿ ಭಾಗಗಳಲ್ಲಿ ಕನ್ನಡ ಶಾಲೆಗಳ ದುಸ್ಥಿತಿಯನ್ನು ಹೋಗಲಾಡಿಸುವ ಜೊತೆಗೆ ಕನ್ನಡ ನಾಡು ನುಡಿಯ ಅಭಿವದ್ಧಿಯ ಸಂಕಲ್ಪ ಹಾಗೂ ಇಚ್ಛಾಶಕ್ತಿಗೆ ಪೂರಕವಾಗಿ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯು ಕೆಲವು ಶಾಲೆಗಳನ್ನು ದತ್ತು ಸ್ವೀಕರಿಸುವ ಮೂಲಕ ಗಡಿ ಭಾಗಗಳಲ್ಲಿ ಕನ್ನಡ ಭಾಷೆ ಹಾಗೂ ಸಂಸ್ಕೃತಿಯ ಉಳಿವಿಗೆ ಮುಂದಾಗಬೇಕಿದೆ ಎಂದು ಕರೆಕೊಟ್ಟರು. ಇದಕ್ಕೂ ಕಂದಾಯ ಸಚಿವ ಆರ್.ಅಶೋಕ್ ರವರು ಮಾತನಾಡುತ್ತಾ, ಕಂದಾಯ ಇಲಾಖೆಯಲ್ಲಿ ಹೊಸ ನೀತಿಗಳನ್ನು ಜಾರಿ ಮಾಡುವ ಮೂಲಕ ವ್ಯಾಪಾರ ವಹಿವಾಟು, ಉದ್ಯಮಗಳಿಗೆ ಸರ್ಕಾರದ ವತಿಯಿಂದ ಅನುಕೂಲವಾಗುವಂತೆ 109 ಕಾಯಿದೆಗೆ ಬದಲಾವಣೆ ತಂದಿರುವಂತೆ, ಕಂದಾಯ ಇಲಾಖೆಯಲ್ಲಿ ಅನೇಕ ಹೊಸ ಕ್ರಮಗಳನ್ನು ಪರಿಚಯಿಸುತ್ತಾ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲು ಪ್ರಯತ್ನಿಸುತ್ತಿರುವುದುರೊಂದಿಗೆ ತಾವು ಕಂದಾಯ ಮಂತ್ರಿಗಳಾಗಿ ಪ್ರತಿ ತಿಂಗಳ ಮೂರನೇ ಶನಿವಾರದಂದು ಗ್ರಾಮ ವಾಸ್ತವ್ಯವನ್ನು ಸರ್ಕಾರಿ ಶಾಲೆಗಳಲ್ಲಿ ತಂಗಿಕೊಂಡು ಇಲಾಖೆಯ ಅಧಿಕಾರಿಗಳೊಂದಿಗೆ ಸುತ್ತಮುತ್ತಲಿನ ಪ್ರದೇಶದ ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ಸಾರ್ವಜನಿಕರ ಕುಂದುಕೊರತೆಗಳನ್ನು ಶೇ. ನೂರಕ್ಕೆ ನೂರು ಸಮಸ್ಯೆಗಳನ್ನು ಪರಿಹರಿಸುವ ಕೆಲಸ ಮಾಡುವುದನ್ನು ಇನ್ನು ಮುಂದೆಯೂ ಮುಂದುವರಿಸುತ್ತಾ ನಾಡಿನ ಜನರಿಗೆ ಅನುಕೂಲ ಮಾಡುತ್ತೇನೆ ಎಂದು ಭರವಸೆಯನ್ನು ನೀಡಿದರು. ಸವಿತಾ ಮತ್ತು ತಂಡದವರು ಕಾರ್ಯಕ್ರಮದಲ್ಲಿ ಕನ್ನಡದ ಜನಪ್ರಿಯ ಹಾಡುಗಳ ಮೂಲಕ ಸಭೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದ ಕನ್ನಡಾಭಿಮಾನಿಗಳಿಗೆ ಹರ್ಷವನ್ನುಂಟು ಮಾಡಿದರು.
0 Comments