82ನೇ ಅಖಿಲ ಭಾರತ ಪೀಠಾಸೀನಾಧಿಕಾರಿಗಳ ಸಮ್ಮೇಳನದ ಸಂದರ್ಭದಲ್ಲಿ ಪ್ರಧಾನಮಂತ್ರಿಗಳು ವರ್ಚುಯಲ್ ಮೂಲಕ ಕರ್ತವ್ಯವನ್ನು ರಾಷ್ಟ್ರೀಯ ಕರ್ತವ್ಯದ ಸ್ಫೂರ್ತಿಯಾಗಿ ಪರಿಗಣಿಸಿ ಎಲ್ಲಾ ಚಟುವಟಿಕೆಗಳನ್ನು ಕೇಂದ್ರೀಕರಿಸಿ ಪರಿಣಾಮಕಾರಿಯಾಗಿ ಗುರಿ ತಲುಪಲು ಹೆಚ್ಚಿನ ಒತ್ತು ನೀಡಬೇಕೆಂದು ಕರೆ ನೀಡಿದರು ಎಂದು ವಿಧಾನಸಭೆ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು.
ಇಂದು ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿ ನವೆಂಬರ್ 16 ರಿಂದ 19 ರವರೆಗೆ ನಡೆದ 82ನೇ ಅಖಿಲ ಭಾರತ ಪೀಠಾಸೀನಾಧಿಕಾರಿಗಳ ಸಮ್ಮೇಳನದಲ್ಲಿ ನವೆಂಬರ್ 17 ಮತ್ತು 18 ರಂದು ಭಾಗವಹಿಸಿ ಶತಮಾನದ ಪಯಣ-ಮೌಲ್ಯಮಾಪನ ಮತ್ತು ಸಾಗಬೇಕಾದ ಮಾರ್ಗ ಹಾಗೂ ಸಂವಿಧಾನ, ಸದನ ಮತ್ತು ಜನತೆಯ ಅಭಿಮುಖವಾಗಿ ಪೀಠಾಸೀನಾಧಿಕಾರಿಗಳ ಹೊಣೆಗಾರಿಕೆ ಕುರಿತು ಎರಡು ವಿಷಯಗಳ ಬಗ್ಗೆ ಅಭಿಪ್ರಾಯವನ್ನು ಮಂಡಿಸಲಾಯಿತು ಎಂದರು.
ಇದೇ ಸಂದರ್ಭದಲ್ಲಿ ಕೆಲವು ನಿರ್ಣಯಗಳನ್ನು ಕೈಗೊಂಡಿದ್ದು, ವರ್ಷದಲ್ಲಿ ಒಂದು ಬಾರಿ ಏರ್ಪಡಿಸುತ್ತಿದ್ದ ಸಮ್ಮೇಳನವನ್ನು ಇನ್ನು ಮುಂದೆ ವರ್ಷದಲ್ಲಿ ಎರಡು ಬಾರಿ ನಡೆಸುವಂತೆ ನಿರ್ಣಯಿಸಲಾಗಿದೆ. ಮೊದಲ ಸಮ್ಮೇಳನವನ್ನು ದೆಹಲಿಯಲ್ಲಿ ಎರಡನೇ ಸಮ್ಮೇಳನವನ್ನು ಹೊರ ರಾಜ್ಯಗಳಲ್ಲಿ ನಡೆಸಲು ಹಾಗೂ ಆಯ್ಕೆಯಾದ ಶಾಸಕರಿಗೆ ತರಬೇತಿ ಶಿಬಿರಗಳನ್ನು ಹಮ್ಮಿಕೊಳ್ಳಬೇಕೆಂದು ನಿರ್ಣಯಿಸಲಾಗಿದೆ ಎಂದು ಹೇಳಿದರು.
ವಿಧಾನಪರಿಷತ್ತು ಮತ್ತು ವಿಧಾನಸಭೆಗೆ ಅತ್ಯುತ್ತಮ ಪ್ರಶಸ್ತಿ ನೀಡಲು ಚರ್ಚಿಸಲಾಗಿದ್ದು, ಇದಕ್ಕೆ ಮಾನದಂಡಗಳನ್ನು ರೂಪಿಸಲು ಸಮಿತಿಯ ಅವಶ್ಯಕತೆಯಿದ್ದು, ಸಮಿತಿ ರಚಿಸಲು ಅಂಗೀಕರಿಸಲಾಯಿತು. ಸದನ ನಡೆಸುವ ಸಂದರ್ಭದಲ್ಲಿ ರಾಷ್ಟ್ರಪತಿಗಳು ಮತ್ತು ರಾಜ್ಯಪಾಲರ ಭಾಷಣ ಮತ್ತು ಪ್ರಶ್ನೋತ್ತರ ವೇಳೆಯಲ್ಲಿ ಸದನದಲ್ಲಿ ಗದ್ದಲ ಉಂಟಾಗದಂತೆ ಸರ್ವ ಪಕ್ಷಗಳ ಮುಖಂಡರ ಜೊತೆ ಚರ್ಚಿಸಿ, ಸದನವನ್ನು ಸುಗಮವಾಗಿ ನಡೆಸಲು ನಿರ್ಣಯಿಸಲಾಯಿತು ಎಂದರು.
ಲೋಕಸಭಾ ಮಾದರಿಯಲ್ಲಿ ಎಲ್ಲಾ ರಾಜ್ಯಗಳಲ್ಲಿ ಆರ್ಥಿಕ ಸ್ವಾಯತ್ತತೆ ನೀಡಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಆರ್ಥಿಕ ಸ್ವಾಯತ್ತತೆಯನ್ನು ಪಡೆದ ಮೊದಲ ರಾಜ್ಯ ಶಿಮ್ಲಾವಾಗಿದ್ದು, ಇದನ್ನು ರಾಜ್ಯಗಳಲ್ಲಿ ಅಳವಡಿಸುವಂತೆ ಸಭೆಯಲ್ಲಿ ತೀರ್ಮಾನಿಸಲಾಯಿತು.
ಭಾರತೀಯ ಶಾಸಕಾಂಗ, ಕಾರ್ಯಾಂಗ, ಚಟುವಟಿಕೆಯಲ್ಲಿ ಸಂವಿಧಾನದ ಕರ್ತವ್ಯಗಳು ಮತ್ತು ಜವಾಬ್ದಾರಿಗಳನ್ನು ಸಮರ್ಪಕವಾಗಿ ನಿರ್ವಹಿಸಲು ಮಹತ್ವ ನೀಡಲಾಗಿದ್ದು, ಹೊಸ ಶತಮಾನದ ಆರಂಭದಲ್ಲಿ ಸೂಕ್ತ ತೀರ್ಮಾನಗಳನ್ನು ಕೈಗೊಳ್ಳಲು ವ್ಯವಸ್ಥಿತವಾಗಿ ಚರ್ಚೆ ನಡೆಸಲಾಗುವುದು. 1921 ರಿಂದ 2021 ರವರೆಗೆ ಕೈಗೊಂಡ ಎಲ್ಲಾ ನಿರ್ಣಯ, ನಿರ್ಧಾರಗಳನ್ನು ಹೊಸ ಶತಮಾನದ ಆರಂಭದಲ್ಲಿ ಸುಗಮವಾಗಿ ನಡೆಸಲು ನಿರ್ಣಯಿಸಲಾಯಿತು ಎಂದರು.
ಶಾಸಕಾಂಗ ನಿಯಮಗಳಲ್ಲಿ ಏಕರೂಪತೆ ಮತ್ತು ಆರ್ಥಿಕ ಸ್ವಾಯತ್ತತೆಯನ್ನು ತರಲು ಸಂವಿಧಾನದ 10ನೇ ಶೆಡ್ಯೂಲ್‍ನಲ್ಲಿ ಅಂತಿಮ ವರದಿ ಸಿದ್ಧವಾಗಿದೆ. ಮಾಹಿತಿ ಮತ್ತು ತಂತ್ರಜ್ಞಾನದ ಬಳಕೆಯನ್ನು ಹೆಚ್ಚಿಸಿಕೊಂಡು ಸಂಸತ್‍ನಲ್ಲಿ ನಡೆದ ಚರ್ಚೆಗಳನ್ನು ಸಾರ್ವಜನಿಕರಿಗೆ ಆ್ಯಪ್ ಮೂಲಕ ತಲುಪಿಸಲು ಕ್ರಮ ಕೈಗೊಳ್ಳಬೇಕು. ಸ್ವಾತಂತ್ರ್ಯ ಅಮೃತ ಮಹೋತ್ಸವ ಕುರಿತು ಶತಮಾನೋತ್ಸವದಲ್ಲಿ ಪಂಚಾಯತ್‍ರಾಜ್ ಇಲಾಖೆಗಳು, ಗ್ರಾಮಪಂಚಾಯಿತಿಗಳು ಸಾರ್ವಜನಿಕರಿಗೆ ಜನಜಾಗೃತಿ ಮೂಡಿಸಲು ಮನ್ನಣೆ ನೀಡಬೇಕೆಂದು ತೀರ್ಮಾನಿಸಲಾಯಿತು. ಸಮ್ಮೇಳನದಲ್ಲಿ ಒಟ್ಟು 12 ನಿರ್ಣಯಗಳನ್ನು ಕೈಗೊಳ್ಳಲಾಯಿತು ಎಂದು ತಿಳಿಸಿದರು.
ಸಮ್ಮೇಳನದಲ್ಲಿ ಲೋಕಸಭೆಯ ಸಭಾಧ್ಯಕ್ಷರಾದ ಓಂ ಬಿರ್ಲಾ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಸಮ್ಮೇಳನದಲ್ಲಿ ಪೀಠಾಧ್ಯಕ್ಷರು, ನಾನೂ ಸೇರಿದಂತೆ ವಿಧಾನಪರಿಷತ್ ಸಭಾಪತಿಗಳಾದ ಬಸವರಾಜ ಹೊರಟ್ಟಿ, ಕಾರ್ಯದರ್ಶಿಗಳು ಹಾಗೂ ದೇಶದ ಸುಮಾರು 20ಕ್ಕೂ ಹೆಚ್ಚು ರಾಜ್ಯಗಳ ವಿಧಾನಸಭೆ, ವಿಧಾನಪರಿಷತ್‍ನ ಅಧ್ಯಕ್ಷರುಗಳು, ಸದಸ್ಯರುಗಳು, ಕಾರ್ಯದರ್ಶಿಗಳು ಭಾಗವಹಿಸಿದ್ದರು ಎಂದು ಮಾಹಿತಿ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ವಿಧಾನಸಭೆಯ ಕಾರ್ಯದರ್ಶಿ ಎಂ.ಕೆ.ವಿಶಾಲಾಕ್ಷಿ, ಸಭಾಧ್ಯಕ್ಷರ ವಿಶೇಷ ಕರ್ತವ್ಯಾಧಿಕಾರಿಗಳಾದ ಓಂ ಪ್ರಕಾಶ್ ಹಾಗೂ ಅಮರನಾಥ್, ವಿಧಾನಸಭಾ ಕಛೇರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.
0 Comments