Ticker

6/recent/ticker-posts

Ad Code

Responsive Advertisement

ಸಿದ್ದರಾಮಯ್ಯ ಹೇಳಿಕೆ ಖಂಡಿಸಿ ಬಿಜೆಪಿ ಪ್ರತಿಭಟನೆ

ಬೆಂಗಳೂರು: ದಲಿತರ ಕುರಿತು ಆಕ್ಷೇಪಕಾರಿ ಹೇಳಿಕೆ ನೀಡಿದ ಸಿದ್ದರಾಮಯ್ಯರವರು ಸಾರ್ವಜನಿಕರ ಮತ್ತು ಬಿಜೆಪಿಯ ಕ್ಷಮೆ ಕೇಳಬೇಕು ಎಂದು ಶಾಸಕರಾದ ಪಿ.ರಾಜೀವ್ ಅವರು ಆಗ್ರಹಿಸಿದರು.



ಬಿಜೆಪಿ ಎಸ್.ಸಿ. ಮೋರ್ಚಾ ರಾಜ್ಯ ಘಟಕದ ವತಿಯಿಂದ ಇಂದು ಬೆಂಗಳೂರಿನ “ಮೌರ್ಯ ವೃತ್ತ”ದ ಬಳಿ, ಸಿದ್ದರಾಮಯ್ಯ ಅವರ “ದಲಿತರು ಬಿಜೆಪಿಗೆ ಹೊಟ್ಟೆಪಾಡಿಗಾಗಿ ಹೋಗಿದ್ದಾರೆ” ಎನ್ನುವ ಹೇಳಿಕೆಯನ್ನು ವಿರೋಧಿಸಿ ಬೃಹತ್ ಪ್ರತಿಭಟನೆ ಸಂದರ್ಭದಲ್ಲಿ ಅವರು ಮಾತನಾಡಿದರು. 

ಬಿಜೆಪಿ ಸರಕಾರಗಳು ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿಕೊಂಡು ದಲಿತರು ಮತ್ತು ಹಿಂದುಳಿದ ವರ್ಗದವರು ಸಹಜವಾಗಿಯೇ ಬಿಜೆಪಿಯನ್ನು ಬೆಂಬಲಿಸುತ್ತಿದ್ದಾರೆ. ಸಿದ್ದರಾಮಯ್ಯರ ಹೇಳಿಕೆಯಿಂದ ದಲಿತ ಸಮುದಾಯಕ್ಕೆ ಅತ್ಯಂತ ನೋವಾಗಿದೆ. ಆದ್ದರಿಂದ ಅವರು ಕೂಡಲೇ ಕ್ಷಮೆ ಕೇಳಲಿ ಎಂದು ಅವರು ಒತ್ತಾಯಿಸಿದರು.

ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಅಶ್ವತ್ಥನಾರಾಯಣ್ ಅವರು ಮಾತನಾಡಿ, ಸಿದ್ದರಾಮಯ್ಯ ಅವರು ಬಿಜೆಪಿ ಕ್ಷಮೆ ಕೇಳಬೇಕು ಎಂದರಲ್ಲದೆ ಕಾಂಗ್ರೆಸ್ ಪಕ್ಷದ ತಿರಸ್ಕಾರಕ್ಕೆ ಜನರು ಮುಂದಾಗಲಿದ್ದಾರೆ. ನೀವು ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು. ಮುಂದಿನ ಚುನಾವಣೆಯಲ್ಲಿ ಸಿದ್ದರಾಮಯ್ಯ ಸೋಲು ಖಚಿತ ಎಂದೂ ಅವರು ತಿಳಿಸಿದರು.

ಎಸ್‍ಸಿ ಮೋರ್ಚಾ ಪ್ರಭಾರಿಗಳು ಮತ್ತು ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಸಿದ್ದರಾಜು ಅವರು ಮಾತನಾಡಿ, ಸಿದ್ದರಾಮಯ್ಯ ಅವರ ಹೇಳಿಕೆ ಅಕ್ಷಮ್ಯ. ಅವರು ಕೂಡಲೇ ಬಿಜೆಪಿ ಮತ್ತು ದಲಿತ ಸಮಾಜದ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು. ಸಿದ್ದರಾಮಯ್ಯ ಅವರು ಚಪ್ಪಾಳೆ ಗಿಟ್ಟಿಸಲು ಕಾಮೆಡಿಯನ್ ಆಗಿ ವರ್ತಿಸುತ್ತಿದ್ದಾರೆ ಎಂದು ತಿಳಿಸಿದರು.

ರಾಜ್ಯ ಎಸ್‍ಸಿ ಮೋರ್ಚಾ ಅಧ್ಯಕ್ಷರಾದ ಛಲವಾದಿ ನಾರಾಯಣಸ್ವಾಮಿ ಅವರು ಮಾತನಾಡಿ, ಕಾಂಗ್ರೆಸ್ ಅಂದ್ರೆ ದಲಿತರು, ದಲಿತರು ಅಂದ್ರೆ ಕಾಂಗ್ರೆಸ್ ಅನ್ನೋ ಸಂದರ್ಭ ಇತ್ತು. ದಲಿತರನ್ನೇ ಮತ ಬ್ಯಾಂಕ್ ಮಾಡಿಕೊಂಡು ದೇಶವನ್ನು ಕಾಂಗ್ರೆಸ್ ಆಳುತ್ತಾ ಬಂದಿತ್ತು. ಆದರೆ ಈಗ ಒಬ್ಬೊಬ್ಬ ದಲಿತರೂ ಕಾಂಗ್ರೆಸ್ ತೊರೆಯುತ್ತಿದ್ದಾರೆ. ಈಗ ಕಾಂಗ್ರೆಸ್ ದಲಿತರನ್ನು ಕಳೆದುಕೊಂಡು ಸೋಲುತ್ತಾ ಬಂದಿದೆ. ಸಿದ್ದರಾಮಯ್ಯರಿಗೆ ಭವಿಷ್ಯದಲ್ಲಿ ಇನ್ನಷ್ಟು ಸೋಲು ಕಾದಿದೆ ಎಂದರು.

ಕಾಂಗ್ರೆಸ್ ಲೀಡರ್ಸ್ ಬೋನ್ ಲೆಸ್ ಎಂದ ಅವರು, ಸಿದ್ದರಾಮಯ್ಯ ಹೊರಗಡೆಯಿಂದ 2006ರಲ್ಲಿ ಕಾಂಗ್ರೆಸ್‍ಗೆ ಹೋದವರು. ಅವರು ಹೊಟ್ಟೆಪಾಡಿಗಾಗಿ ಹೋಗಿರೋದು ಎಂದು ಮರೆತರೇ ಎಂದು ಪ್ರಶ್ನಿಸಿದರು. ಕಾಂಗ್ರೆಸ್‍ನ ಎಲ್ಲ ನಾಯಕರಿಗೆ ಸಿದ್ದರಾಮಯ್ಯ ದ್ರೋಹ ಎಸಗಿದ್ದಾರೆ ಎಂದರು.

ರಾಜ್ಯ ಉಪಾಧ್ಯಕ್ಷರಾದ ಎಂ ಶಂಕರಪ್ಪ, ಎಂಸಿಎ ನಿಗಮದ  ಅಧ್ಯಕ್ಷರಾದ ಸಿ ಮುನಿಕೃಷ್ಣ, ಬೆಂಗಳೂರು ಕೇಂದ್ರ ಜಿಲ್ಲೆಯ ಅಧ್ಯಕ್ಷರಾದ ಮಂಜುನಾಥ್, ಉತ್ತರ ಜಿಲ್ಲೆಯ ಅಧ್ಯಕ್ಷರಾದ ಮುನಿರಾಜು ಮತ್ತು ದಕ್ಷಿಣ ಜಿಲ್ಲೆಯ ಅಧ್ಯಕ್ಷರಾದ ಶ್ರೀನಿವಾಸ್ ಹಾಗೂ ಎಸ್.ಸಿ. ಮೋರ್ಚಾ ರಾಜ್ಯ ಉಪಾಧ್ಯಕ್ಷರಾದ ಎಂ ವೆಂಕಟೇಶ್, ಪ್ರಧಾನ ಕಾರ್ಯದರ್ಶಿಗಳಾದ ಜಗದೀಶ್, ಕಾರ್ಯದರ್ಶಿಗಳಾದ ವೆಂಕಟೇಶ್ ದೊಡ್ಡೇರಿ, ಕಾರ್ಯಾಲಯ ಕಾರ್ಯದರ್ಶಿಗಳಾದ ಅರುಣ್ ಕುಮಾರ್ ಮತ್ತು ಅನೇಕ ರಾಜ್ಯ ನಾಯಕರು ಭಾಗವಹಿಸಿದ್ದರು.


Post a Comment

0 Comments

Ad Code

Responsive Advertisement