ಒಕ್ಕಲಿಗರ ಸಂಘದ ಚುನಾವಣೆಯಲ್ಲಿ ನನ್ನ ಉಮೇದುವಾರಿಕೆ ವಿರುದ್ದ ದುರುದ್ದೇಶಪೂರಿತ ಷಡ್ಯಂತ್ರ ನಡೆಯುತ್ತಿದೆ ಎಂದು ಕರ್ನಾಟಕ ರಾಜ್ಯ ಒಕ್ಕಲಿಗರ ಸಂಘದ ಮಾಜೀ ಅಧ್ಯಕ್ಷ ಅಪ್ಪಾಜಿ ಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಮುಂಬರುವ ಚುನಾವಣೆಯಲ್ಲಿ ನಾನು ಸ್ಫರ್ಧಿಸಬಾರದು, ಅಕಸ್ಮಾತ್ ಸ್ಪರ್ಧಿಸಿರೂ ಗೆಲ್ಲಬಾರದು ಎನ್ನುವ ಕಾರಣಕ್ಕೆ ನನ್ನ ಮೇಲೆ ಸುಳ್ಳು ಕೇಸ್ ಗಳನ್ನ ಹಾಕಿ ತೇಜೋವಧೆ ಮಾಡುವ ಕೆಲಸ ಮಾಡುತ್ತಿದ್ದಾರೆ.
ನನ್ನದು ಭ್ರಷ್ಟರ ಕೈಗಳಿಗೆ ಅಧ್ಯಕ್ಷ ಸ್ಥಾನ ತಪ್ಪಿಸುವ ಹಾಗೂ ಒಕ್ಕಲಿಗರ ಸಂಘದ ಆಸ್ತಿಯ ರಕ್ಷಣೆ , ದುರ್ಬಳಕೆ ತಡೆಯುವ ಸಲುವಾದ ಹೋರಾಟ. ಇದಕ್ಕಾಗಿಯೇ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಿದ್ದೇನೆ ಎಂದು ಹೇಳಿದರು. ಯಾವುದೇ ಹಗರಣವಾಗಲಿ, ನನ್ನೊಬ್ಬನನ್ನೇ ಏಕೆ ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದ ಅವರು, ತನಿಖೆ ನಡೆಸುವುದಾದರೆ 10 ರಿಂದ 15 ವರ್ಷ ಆಡಳಿತದಲ್ಲಿದ್ದವರ ಬಗ್ಗೆಯೂ ಸಹ ತನಿಖೆ ನಡೆಸಲಿ, ಎಲ್ಲಾ ಆರೋಪಗಳಿಗೂ ಸಮರ್ಪಕವಾದ ಉತ್ತರ ದೊರಕಲಿ ಎಂದು ಒತ್ತಾಯಿಸಿದರು.
ನನ್ನ ಅಧಿಕಾರದ ಅವಧಿಯಲ್ಲಿ ಸುಮಾರು 75 ಕೋಟಿ ಖರ್ಚು ಮಾಡಿ ರಾಜ್ಯದ ಮಂಡ್ಯ ಮೈಸೂರು ಸೇರಿದಂತೆ ಇತರ ಜಿಲ್ಲೆಗಳಲ್ಲಿ ಹಾಸ್ಟೇಲ್ ನಿರ್ಮಾಣ ಮಾಡಿದ್ದೆ. ಆದರೆ ಇವುಗಳಲ್ಲಿ ಮೈಸೂರು ಹೊರತು ಪಡಿಸಿ ಎಲ್ಲಾ ಹಾಸ್ಟೆಲ್ ಗಳು ಖಾಲಿ ಇವೆ. ನನ್ನ ಅವಧಿಯಲ್ಲಿ ಕೆಂಪೆಗೌಡ ಆಸ್ಪತ್ರೆ ಉತ್ತಮವಾಗಿ ನಡೆಯುತಿತ್ತು. ರೋಗಿಗಳು ಉತ್ತಮ ಸೇವೆ ಪಡೆಯುತ್ತಿದ್ದರು. ನನ್ನ ನಂತರ ಬಂದವರ ಕಳಪೆ ನಿರ್ವಹಣೆ ಕಾರಣದಿಂದ ಚಿಕಿತ್ಸೆಗಾಗಿ ಆಸ್ಪತ್ರೆಗೆ ಬರುವ ರೋಗಿಗಳ ಸಂಖ್ಯೆ ಕಡಿಮೆಯಾಗಿದೆ ಎಂದು ಅವರು ಈ ಸಂದರ್ಭದಲ್ಲಿ ಅಸಹನೆ ವ್ಯಕ್ತಪಡಿಸಿದರು.
ಸಹೃದಯೀ ದಾನಿಯೊಬ್ಬರು ಒಕ್ಕಲಿಗರ ಸಂಘಕ್ಕೆ ಸುಮಾರು 96 ಎಕರೆ ಜಮೀನನ್ನು ದಾನವಾಗಿ ನೀಡಿದ್ದಾರೆ. ಈಗಾಗಲೇ ಈ ಜಮೀನಿನ 54 ಎಕರೆ ಪ್ರದೇಶವನ್ನು ಲಪಟಾಯಿಸಲಾಗಿದೆ. ಬಾಕೀ ಉಳಿದ 42 ಎಕರೆ ಜಮೀನನ್ನೂ ಕೂಡ ಲಪಟಾಯಿಸುವ ಪ್ರಯತ್ನ ನಡೆದಿದೆ ಎಂದು ಗಂಭೀರ ಆರೋಪ ಮಾಡಿದ ಅಪ್ಪಾಜಿ ಗೌಡ, ಯಾವುದೇ ಕಾರಣಕ್ಕೂ ಸಂಘದ ಆಸ್ತಿಯ ದುರ್ಬಳಕೆಗೆ ಅವಕಾಶ ಕೊಡುವುದಿಲ್ಲ. ಭ್ರಷ್ಟರ ವಿರುದ್ದ ನನ್ನ ಹೋರಾಟ ನಿರಂತರವಾಗಿರುತ್ತದೆ ಎಂದು ಹೇಳಿದರು.
ಸಜ್ಜೆಪಾಳ್ಯ ಭೂ ವಿವಾದಕ್ಕೆ ಸಂಬಂದಿಸಿದಂತೆ ಭೂ ಮಾಲಿಕರ ಜೊತೆ ಚರ್ಚೆ ನಡೆಸಿ ಇತ್ಯರ್ಥಗೊಳಿಸಲಾಗಿದೆ ಎನ್ನುವ ಕೆಂಚೇಗೌಡರ ಸ್ಪಷ್ಟೀಕರಣಕ್ಕೆ ಪ್ರತಿಕ್ರಿಯಿಸಿದ ಅವರು, ಈ ಜಮೀನಿಗೆ ಸಂಬಂದಿಸಿದಂತೆ ರಂಗಮ್ಮ ಎನ್ನುವವರು 1962 ರಲ್ಲಿ ವಿಲ್ ಬರೆದಿದ್ದಾರೆ. ಒಕ್ಕಲಿಗ ಸಮುದಾಯದ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ನಿರ್ಮಾಣ ಮಾಡುವ ಉದ್ದೇಶಕ್ಕೆ ಜಮೀನು ನೀಡಲಾಗಿತ್ತು. 1978 ಈ ಪತ್ರವನ್ನು ಅವರ ಆಪ್ತ ಪುಟ್ಟಸ್ವಾಮಿ ಎಂಬುವವರು ಒಕ್ಕಲಿಗರ ಸಂಘಕ್ಕೆ ವರ್ಗಾಯಿಸಿದ್ದಾರೆ. 1982 ರಲ್ಲಿ ಪುಟ್ಟಸ್ವಾಮಿಯವರು ನಿಧನರಾಗಿದ್ದಾರೆ. ಆದರೆ 2003 ರಲ್ಲಿ ಪುಟ್ಟಸ್ವಾಮಿಯವರ ಮಗ ಮಹೇಂದ್ರ ಎನ್ನುವವರಿಗೆ 38 ಎಕರೆ ಜಮೀನು ಕೊಟ್ಟು. ಉಳಿದ 6ಎಕರೆ ಜಮೀನು ವನ್ನು ಸಂಘಕ್ಕೆ ಉಳಿಸಿಕೊಳ್ಳುವ ಕುರಿತು ಯೋಜನೆ ರೂಪಿಸಲಾಗಿದೆ ಎಂದರು.
ಅಸಲಿಗೆ ರಂಗಮ್ಮರವರು ಜಮೀನಿನ ಅಧೀಕೃತ ಮಾಲಿಕರಾಗಿದ್ದು ಮಹೇಂದ್ರರಿಗೂ ಜಮೀನಿಗೂ ಯಾವುದೇ ಸಂಬಂದ ಇಲ್ಲ. ರಂಗಮ್ಮನವರು ಮೃತಪಟ್ಟಿರುವ ಕಾರಣದಿಂದ ಮಹೇಂದ್ರರನ್ನು ಮುಂದಿಟ್ಟುಕೊಂಡು ಜಮೀನು ಲಪಟಾಯಿಸುವ ಹುನ್ನಾರ ನಡೆಯುತ್ತಿದೆ ಎಂದು ಆರೋಪಿಸಿದ ಅವರು, ಕೆಂಚೇಗೌಡರು ಜಮೀನಿನ ಮಾಲೀಕರ ಜೊತೆ ಮಾತನಾಡಿ ಸಮಸ್ಯೆ ಬಗೆ ಹರಿಸಿದ್ದೇನೆ ಎಂದು ಹೇಳುತ್ತಿರುವುದು ಶುದ್ದ ಸುಳ್ಳು. ಯಾವುದೇ ವ್ಯಕ್ತಿ ತನ್ನ ಆಸ್ತಿಯನ್ನು ಸಂಘ ಸಂಸ್ಥೆಗಳಿಗೆ ನೀಡಿದರೆ ಅದು ಸಾರ್ವಜನಿಕ ಆಸ್ತಿಯಾಗುತ್ತದೆ. ಈ ಬಗ್ಗೆ ನ್ಯಾಯಾಲಯ ಕೂಡ ಸ್ಪಷ್ಟಪಡಿಸಿದೆ. ಯಾವುದೇ ಕಾರಣಕ್ಕೂ ಸಂಘದ ಆಸ್ತಿ ಮತ್ತೊಬ್ಬರ ಪಾಲಾಗುವುದಕ್ಕೆ ಬಿಡುವುದಿಲ್ಲ ಎಂದು ಹೇಳಿದರು.
ಪತ್ರಿಕಾಗೋಷ್ಠಿಯ ನಂತರ ಡಾ ಅಪ್ಪಾಜಿಗೌಡ ಮತ್ತು ಅವರ ತಂಡದ ಸ್ಪರ್ಧಾರ್ಥಿಗಳಾದ ಡಾ ನಿಸರ್ಗ ರಾಮಲಿಂಗೇಗೌಡ, ಆವಲಹಳ್ಳಿ ಡಾ ಹೆಚ್ ಶ್ರೀನಿವಾಸ್, ವಿ ಪ್ರಸನ್ನಕುಮಾರ್, ಜಿ ಎಸ್ ನಾಗರಾಜು, ಉಗ್ರಯ್ಯ, ಗೀತಾ ಶಂಕರ್ , ಟಿ ಎನ್ ಹೊನ್ನಪ್ಪ, ಆರ್ ಕೆ ರಾಮಚಂದ್ರ ಒಟ್ಟಾಗಿ ತೆರಳಿ ಒಕ್ಕಲಿಗ ಸಂಘದ ಚುನಾವಣಾಧಿಕಾರಿಗಳಿಗೆ ನಾಮಪತ್ರ ಸಲ್ಲಿಸಿದರು.
0 Comments