ಕುಟುಂಬ ಸಮೇತ ತೆರಳಿ ಪವರ್ ಸ್ಟಾರ್ ಗೆ ನಮನ
ಬೆಂಗಳೂರು- ವರನಟ ದಿ. ಡಾ.ರಾಜ್ ಕುಮಾರ್ ಕುಟುಂಬದವರ ಜೊತೆ ಚರ್ಚೆಸಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಸಮಾಜ ಸೇವೆಯಲ್ಲಿ ಕೈ ಜೋಡಿಸುವುದಾಗಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾ ಚಾರ್ಯ ಅವರು ಹೇಳಿದ್ದಾರೆ.
ಇಂದು ಬೆಂಗಳೂರಿನ ಕಂಠೀರವ ಸ್ಟುಡಿಯೋಕ್ಕೆ ತಮ್ಮ ಕುಟುಂಬ ಸಮೇತ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಸಮಾಧಿಗೆ ತೆರಳಿ ನಮನ ಸಲ್ಲಿಸಿದ ಬಳಿಕ ಅವರು, ಸುದ್ದಿಗಾರರೊಂದಿಗೆ ಮಾತನಾಡಿದರು.
ಪುನೀತ್ ರಾಜ್ ಕುಮಾರ್ ಅವರು ಕೇವಲ ಸಿನಿಮಾ ನಟರಾಗಿ ಗುರುತಿಸಿಕೊಳ್ಳದೆ ಅವರು, ಅನೇಕ ಸಮಾಜ ಸೇವೆಗಳನ್ನು ಮಾಡಿದ್ದರು. ಆದ್ದರಿಂದಲೇ ಅವರು ಅತೀ ಚಿಕ್ಕ ವಯಸ್ಸಿನಲ್ಲೇ ಜನಪ್ರಿಯ ನಟರಾಗಿ ಬೆಳೆದರು ಎಂದು ಸ್ಮರಿಸಿದರು.
ಆನಾಥಶ್ರಮ, ಸಾವಿರಾರು ವಿದ್ಯಾರ್ಥಿಗಳಿಗೆ ಶಿಕ್ಷಣ, ಹಿರಿಯ ನಾಗರೀಕರಿಗೆ ಸಹಾಯ, ಬಡಮಕ್ಕಳಿಗೆ ಆರ್ಥಿಕ ನೆರವು, ದತ್ತು ಮಕ್ಕಳನ್ನು ಪಡೆದಿದ್ದು, ಸಂಘ ಸಂಸ್ಥೆಗಳಿಗೆ ಹಣಕಾಸಿನ ನೆರವು ಸೇರಿದಂತೆ ಹತ್ತು ಹಲವು ಸೇವೆಗಳನ್ನು ಮಾಡಿದ್ದರು ಎಂದು ಹೇಳಿದರು.
ಅವರ ಸಾಮಾಜಿಕ ಸೇವೆಗಳನ್ನು ಪುನೀತ್ ರಾಜ್ ಕುಮಾರ್ ಸಹೋದರರಾದ ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್ ಜೊತೆ ಚರ್ಚೆಸಿ ನಮ್ಮ ಕೈಲಾದ ರೀತಿಯಲ್ಲಿ ಮುಂದುವರೆಸುತ್ತೇನೆ ಎಂದು ತಿಳಿಸಿದರು.
ನಾವು ಕೂಡ ನಾನಾ ರೀತಿಯಲ್ಲಿ ಸಮಾಜ ಸೇವೆಯನ್ನು ಮಾಡುತ್ತಿದ್ದೇವೆ. ಪುನೀತ್ ರಾಜ್‍ಕುಮಾರ್ ಅವರ ಸೇವೆಯಲ್ಲಿ ನಮ್ಮದೊಂದು ಅಳಿಲು ಸೇವೆ ಎಂದು ವಿವರಿಸಿದರು. ಪುನೀತ್ ರಾಜ್ ಕುಮಾರ್ ರವರು ಅವರತಂದೆಯಂತೆಯೇ ನೇತ್ರದಾನ ಮಾಡಿ, ಸಾವಿನಲ್ಲಿಯೂ ಸಾರ್ಥಕತೆ ಮೆರೆದು ಜಗತ್ತಿಗೇ ಮಾದರಿಯಾಗಿದ್ದಾರೆ. ಇವರಿಂದ ಪ್ರೇರಣೆಗೊಂಡು ಲಕ್ಷಾಂತರ ಜನರು ನೇತ್ರದಾನ ಮಾಡಲು ಮುಂದೆ ಬಂದಿರುತ್ತಾರೆ. ನಾನು ಹಾಗೂ ನನ್ನ ಕುಟುಂಬದರೂ ಸಹ ನೇತ್ರದಾನ ಮಾಡುತ್ತೇವೆ ಹಾಗೂ ಈ ಬಗ್ಗೆ ಸಾರ್ವಜನಿಕರಲ್ಲಿ ಆದಷ್ಟು ಜಾಗೃತಿ ಮೂಡಿಸಲು ಪ್ರಯತ್ನಿಸುತ್ತೇನೆ. ಪುನೀತ್ ರಾಜ್ ಕುಮಾರ್ ರವರ ಸಹಾಯ ಮಾಡುತ್ತಿದ್ದ ಮೈಸೂರಿನ ಶಾಂತಿಧಾಮಕ್ಕೆ ನಾನು ಸಹ ನನ್ನ ಕೈಲಾದಷ್ಟು ಧನಸಹಾಯ ಮಾಡುತ್ತೇನೆ.
ಪುನೀತ್ ರಾಜ್ ಕುಮಾರ್ ನಮ್ಮಿಂದ ದೂರವಾಗಿದ್ದರೂ ಅವರು ಕನ್ನಡಿಗರ ಹೃದಯದಲ್ಲಿ ಶಾಶ್ವತವಾಗಿ ನೆಲೆವೊರಿದ್ದಾರೆ. ಅವರು ಎಂದೆಂದಿಗೂ ಆಜಾರಮರ ಎಂದು ಕೊಂಡಾಡಿದರು.
ನಾನು ಬಾಲ್ಯದಿಂದಲೇ ವರನಟ ಡಾ. ರಾಜ್ ಕುಮಾರ್ ಅವರ ಬಹುದೊಡ್ಡ ಅಭಿಮಾನಿ. ಅವರ ಅನೇಕ ಚಿತ್ರಗಳನ್ನು ನೋಡಿ ಬೆಳೆದವರು. ನಮಗೆಲ್ಲ ಅಣ್ಣಾವ್ರ ಕುಟುಂಬ ಮಾದರಿ ಎಂದು ಪ್ರಶಂಸಿದರು.
ಒಂದು ಬಾರಿ ಅಮೇರಿಕಾದ ನ್ಯೂಜೆರ್ಸಿಗೆ ಅಕ್ಕ ಸಮ್ಮೇಳನಕ್ಕೆ ನಾನು ಮುಖ್ಯ ಅತಿಥಿಯಾಗಿ ಭಾಗಿಯಾಗಿದ್ದಾಗ ಪುನೀತ್ ರಾಜ್ ಕುಮಾರ್ ಕೂಡ ಅತಿಥಿಯಾಗಿ ಆಗಮಿಸಿದ್ದರು. ಅಂದಿನಿಂದ ಇಂದಿನವರೆಗೂ ನಮ್ಮ ಮತ್ತುಅವರ ಸ್ನೇಹ ಆಗಿಯೇ ಇತ್ತು ಎಂದು ಹಳೆಯ ನೆನಪನ್ನು ಸ್ಮರಿಸಿದರು.
ನನ್ನ ಮತಕ್ಷೇತ್ರವಾದ ಹೊನ್ನಾಳಿಯಲ್ಲಿ ನಡೆದ ಕಾರ್ಯಕ್ರಮಕ್ಕೆ ಪುನೀತ್ ರಾಜ್ ಕುಮಾರ್ ಅವರನ್ನೇ ಮುಖ್ಯ ಅತಿಥಿಯಾಗಿ ಆಗಮಿಸಬೇಕು ಎಂದು ಮನವಿ ಮಾಡಿಕೊಂಡಿದ್ದೇವು. ಆದರೆ ಅವರ ಬಿಡುವಿಲ್ಲದ ಕಾರ್ಯಕ್ರಮದ ನಡುವೆಯೂ ಸಹೋದರ ಶಿವರಾಜ್ ರಾಜ್ ಕುಮಾರ್ ಬಂದಿದ್ದರು. ಇದು ನಮ್ಮ ಅವರ ನಡುವಿನ ಗೆಳೆತನಕ್ಕೆ ನಿದರ್ಶನ ಎಂದರು.
ಅವರ ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಅವರೆಲ್ಲರೂ ನಮ್ಮನ್ನು ಅತ್ಯಂತ ಆತ್ಮೀಯವಾಗಿ ನೋಡಿಕೊಳ್ಳುತ್ತಿದ್ದರು. ಅಷ್ಟು ದೊಡ್ಡ ನಟರಾಗಿದ್ದರೂ ಅವರ ಸರಳತೆ, ವಿನಯತೆ, ಹಿರಿಯರು- ಕಿರಿಯರು ಎನ್ನದೆ ಎಲ್ಲರನ್ನೂ ಗೌರವದಿಂದ ಕಾಣುತ್ತಿದ್ದರು. ಹೀಗಾಗಿಯೇ ಅವರು ಎಲ್ಲರಿಗೂ ಅಚ್ಚುಮೆಚ್ಚುಗಿದ್ದರು ಎಂದರು.
ಇತ್ತೀಚಿಗೆ ನನ್ನ ಮತ ಕ್ಷೇತ್ರವಾದ ಹೊನ್ನಾಳಿ- ನ್ಯಾಮತಿ ಅವಳಿ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರಿಗೆ ಅತ್ಯುತ್ತಮ ಕೋವಿಡ್ ವಾರಿಯರ್ ಪ್ರಶಸ್ತಿ ಹಾಗೂ ಕೋವಿಡ್ ವಾರಿಯಸ್೯ಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಬಹುತೇಕ ಅಲ್ಲಿನ ಅಭಿಮಾನಿಗಳು ಪುನೀತ್ ರಾಜ್ ಕುಮಾರ್ ಅವರನ್ನು ಕಾರ್ಯಕ್ರಮಕ್ಕೆ ಕರೆಸಬೇಕು ಎಂದು ಒತ್ತಾಯ ಮಾಡಿದ್ದರು. ಆದರೆ ಅ ವೇಳೆಗೆ ಬೇರೊಂದು ಕಾರ್ಯಕ್ರಮ ನಿಗಧಿಯಾದ ಪರಿಣಾಮ ಬರಲು ಸಾಧ್ಯವಾಗಲಿಲ್ಲ ಎಂದು ಹೇಳಿದರು.
ಪುನೀತ್ ರಾಜ್ ಕುಮಾರ್ ನಿಧನರಾದ ವೇಳೆ ಅವರ ಸಹೋದರರು ನಡೆದುಕೊಂಡ ರೀತಿ ನಿಜಕ್ಕೂ ಮೆಚ್ಚುವಂತಹದ್ದು. ಅತೀ ಚಿಕ್ಕ ವಯಸ್ಸಿನಲ್ಲಿ ಎತ್ತರಕ್ಕೆ ಬೆಳೆದು ಇನ್ನು ಸಾಕಷ್ಟು ಬೆಳೆಯಬೇಕಾಗಿದ್ದ ಒಬ್ಬ ಯುವನಟ ನಮ್ಮನ್ನು ಬಿಟ್ಟು ಹೋಗಿದ್ದು ಅತ್ಯಂತ ನೋವಿನ ಸಂಗತಿ.
ಆದರೂ ಅಭಿಮಾನಿಗಳ ಪಾಲಿನ ಅಪ್ಪು ಎಂದೆಂದಿಗೂ ಕನ್ನಡದ ಅಭಿಮಾನಿಗಳ ಹೃದಯದಲ್ಲಿ ಶಾಶ್ವತವಾಗಿ ಇರುತ್ತಾರೆ ಎಂದು ರೇಣುಕಾಚಾರ್ಯ ಹೇಳಿದರು.
ಇದಕ್ಕೂ ಮುನ್ನ ರೇಣುಕಾಚಾರ್ಯ ಅವರು ತಮ್ಮ ಕುಟುಂಬದವರ ಜೊತೆ ಪುನೀತ್ ರಾಜ್ ಕುಮಾರ್ ಸಮಾಧಿ ಬಳಿ ಬೆಳಕಿನ ಹಬ್ಬ ದೀಪಾವಳಿಯಲ್ಲಿ ಸಂಪ್ರದಾಯದಂತೆ ಹಣತೆಗಳನ್ನು ಹಚ್ಚಿ ಆಗಲಿದ ಮೇರು ನಟನೆಗೆ ನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ವರನಟ ಡಾ. ರಾಜ್ ಕುಮಾರ್ ಹಾಗೂ ಪಾರ್ವತಮ್ಮ ರಾಜ್ ಕುಮಾರ್ ರವರ ಸಮಾಧಿಗೆ ಸಹ ನಮನ ಸಲ್ಲಿಸಿದರು.
0 Comments