ಒಕ್ಕಲಿಗರ ಸಂಘ ಹಾಗೂ ಸಂಘದ ಆಸ್ತಿಯ ಉಳಿವಿಗಾಗಿ ನನ್ನ ಹೋರಾಟ ನಿರಂತರ. ಇದನ್ನೇ ಮಾನದಂಡವಾಗಿಸಿ ಕೊಂಡು ಸಂಘದ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದೇನೆ ಎಂದು ಒಕ್ಕಲಿಗರ ಸಂಘದ ಮಾಜಿ ಅಧ್ಯಕ್ಷ ಡಾ. ಅಪ್ಪಾಜಿಗೌಡ ತಿಳಿಸಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಈ ಹಿಂದಿನ ನನ್ನ ಅಧಿಕಾರವಧಿಯಲ್ಲಿ ಸಂಘದ ಕಾರ್ಯ ಚಟುವಟಿಕೆಗಳನ್ನ ಉನ್ನತ ಶ್ರೇಣಿಗೇರಿಸಲು ಬಹಳಷ್ಟು ಶ್ರಮಿಸಿದ್ದೇನೆ. ಬಹುತೇಕ ಮಹತ್ವದ ನಿರ್ಣಯದ ಸಂದರ್ಭಗಳಲ್ಲಿ ಒಂದು ವ್ಯವಸ್ಥಿತ ಷಡ್ಯಂತ್ರದಿಂದ ಹಿನ್ನಡೆಯಾಯಿತು. ವಿನಾಕಾರಣ ಸುಳ್ಳು ಆರೋಪಗಳನ್ನು ಎದುರಿಸುವಂತಾಯಿತು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಗ್ರಾಮೀಣ ಪ್ರದೇಶದ ಬಡ ಮಕ್ಕಳ ಅಭ್ಯುದಯಕ್ಕಾಗಿ ನಗರದ ಸಜ್ಜೇಪಾಳ್ಯದಲ್ಲಿ ಜಮೀನು ಮೀಸಲಿರಿಸಲಾಗಿದ್ದು ಈಗ ಇದರ ಮೌಲ್ಯ ಸುಮಾರು 2 ಸಾವಿರ ಕೋಟಿಯಷ್ಟಿದೆ. ಈ ಜಮೀನಿನ ದಾಖಲೆ ಪತ್ರದ ದುರ್ಬಳಕೆ ಮಾಡುವ ಪಿತೂರಿಯನ್ನ ಈ ಹಿಂದಿನಿಂದಲೂ ವಿರೋಧಿಸುತ್ತಾ ಬಂದಿದ್ದೇನೆ. ಹಡ್ಸನ್ ಸರ್ಕಲ್ ನಲ್ಲಿರುವ ಒಕ್ಕಲಿಗರ ಭವನವನ್ನ ನಾವು ಈ ಹಿಂದೆ ಉದ್ದೇಶಿಸಿದಂತೆ ರಿಪೇರಿ ಮಾಡಿಸಿ ಬಾಡಿಗೆಗೆ ಕೊಟ್ಟಿದ್ದರೆ ತಿಂಗಳಿಗೆ ಕನಿಷ್ಟ ಒಂದು ಕೋಟಿ ಬಾಡಿಗೆ ಪಡೆಯಬಹುದಿತ್ತು. ಆದರೆ ಸಂಘದ ವಿಚಾರಕ್ಕೆ ರಾಜಕಾರಣ ಪ್ರವೇಶವಾಗಿ ಅದು ನೆನೆಗುದಿಗೆ ಬಿದ್ದಿದೆ. 75 ಕೋಟಿ ಖರ್ಚು ಮಾಡಿ ರಾಜ್ಯಾದ್ಯಂತ ನಿರ್ಮಾಣ ಮಾಡಿದ್ದ ಒಕ್ಕಲಿಗರ ಹಾಸ್ಟೆಲ್ ಗಳ ಸರಿಯಾದ ನಿರ್ವಹಣೆ ಆಗಿಲ್ಲ. ಕೆಂಪೇಗೌಡ ಆಸ್ಪತ್ರೆ ಸಂಪೂರ್ಣ ದುಸ್ಥಿತಿಗೆ ತಲುಪಿದೆ. ಕೆಂಗಲ್ ಹನುಮಂತಯ್ಯ ಆಸ್ಪತ್ರೆ ಮುಚ್ಚಿ ಬಿಟ್ಟಿದ್ದಾರೆ ಎಂದು ಅವರು ಅಸಹನೆ ವ್ಯಕ್ತಪಡಿಸಿದ್ದಾರೆ.
ಕೇವಲ ಓರ್ವ ವ್ಯಕ್ತಿಯನ್ನು ಗುರಿಯಾಗಿಸಿ ಸಂಘವನ್ನು ಬಲಿಪಶು ಮಾಡುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿರುವ ಅವರು, ಕಾನೂನು ಬದ್ದವಾಗಿ ಯಾವುದೇ ತನಿಖೆಯಾದರೂ ನಾನು ಎದುರಿಸಲು ಸಿದ್ದನಿದ್ದೇನೆ. ನನ್ನ ಮೇಲೆ ಹೊರಿಸಿರುವ ಎಲ್ಲಾ ಸುಳ್ಳು ಆರೋಪಗಳಿಗೂ ಸಮರ್ಥ ಉತ್ತರ ನೀಡುವುದಕ್ಕೆ ನಾನು ಬದ್ದ. ನನ್ನ ಈ ಹೋರಾಟವನ್ನು ಮನಗಂಡಿರುವ ಬಹುದೊಡ್ಡ ವರ್ಗ ನನ್ನ ಬೆಂಬಲಕ್ಕೆ ಇದೆ. ಮುಂಬರುವ ಒಕ್ಕಲಿಗರ ಸಂಘದ ಚುನಾವಣೆಯಲ್ಲಿ ಇದೇ ಬೆಂಬಲ ನನಗೆ ಬಹುದೊಡ್ಡ ಶಕ್ತಿಯಾಗಲಿದ್ದು ಖಂಡಿತವಾಗಿಯೂ ಗೆಲುವು ಸಾಧಿಸುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಈಗಾಗಲೇ ಡಾ. ಅಪ್ಪಾಜಿಗೌಡ ಮತ್ತು ಅವರ ಸಿಂಡಿಕೆಟ್ ಸದಸ್ಯರಾದ ಡಾ ನಿಸರ್ಗ ರಾಮಲಿಂಗೇಗೌಡ, ಆವಲಹಳ್ಳಿ ಡಾ ಹೆಚ್ ಶ್ರೀನಿವಾಸ್, ವಿ ಪ್ರಸನ್ನಕುಮಾರ್, ಜಿ ಎಸ್ ನಾಗರಾಜು, ಉಗ್ರಯ್ಯ, ಗೀತಾ ಶಂಕರ್ , ಟಿ ಎನ್ ಹೊನ್ನಪ್ಪ, ಆರ್ ಕೆ ರಾಮಚಂದ್ರ ಒಟ್ಟಾಗಿ ಒಕ್ಕಲಿಗ ಸಂಘದ ಚುನಾವಣಾಧಿಕಾರಿಗಳಿಗೆ ನಾಮಪತ್ರ ಸಲ್ಲಿಸಿದ್ದು ಬಿರುಸಿನ ಚಟುವಟಿಕೆಗಳು ಗರಿಗೆದರಿಕೊಂಡಿವೆ.
0 Comments