Shri Thaawarchand Gehlot, Hon. Governor of Karnataka inaugurated the Mega Free Camp for wheelchair distribution which was jointly organized by Art of Living Foundation, Bhagwan Mahaveer Viklang Sahayata Samiti, Rotary Club, SBI Mutual Fund at Ayurveda hospital , Bengaluru today.
ಬೆಂಗಳೂರಿನ ಆಯುರ್ವೇದ ಆಸ್ಪತ್ರೆಯಲ್ಲಿ ಆರ್ಟ್ ಆಫ್ ಲಿವಿಂಗ್ ಫೌಂಡೇಶನ್, ಭಗವಾನ್ ಮಹಾವೀರ್ ವಿಕಲಾಂಗ್ ಸಹಾಯತಾ ಸಮಿತಿ, ರೋಟರಿ ಕ್ಲಬ್, ಎಸ್‌ಬಿಐ ಮ್ಯೂಚುವಲ್ ಫಂಡ್ ಜಂಟಿಯಾಗಿ ಆಯೋಜಿಸಿದ್ದ ಉಚಿತ ಗಾಲಿಕುರ್ಚಿ ವಿತರಣೆಯ ಮೆಗಾ ಶಿಬಿರವನ್ನು ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ ಅವರು ಉದ್ಘಾಟಿಸಿದರು.
ಬೆಂಗಳೂರು. ನವೆಂಬರ್ 20(ಕರ್ನಾಟಕ ವಾರ್ತೆ): ಭಾರತ ಸರಕಾರ ಮತ್ತು ರಾಜ್ಯ ಸರ್ಕಾರ ದಿವ್ಯಾಂಗರ ಅಭಿವೃದ್ಧಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ದಿವ್ಯಾಂಗರು ಸರ್ಕಾರದ ಯೋಜನೆಗಳು ಹಾಗೂ ಸವಲತ್ತುಗಳು ಸಮರ್ಪಕವಾಗಿ ಬಳಸಿಕೊಂಡು ತಮ್ಮ ಜೀವನವನ್ನು ಸುಧಾರಿಸಿಕೊಳ್ಳಲು ಮುಂದಾಗಬೇಕು. ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಯೋಜನೆಗಳ ಬಗ್ಗೆ ದಿವ್ಯಾಂಗರಿಗೆ ಅರಿವು ಮೂಡಿಸಬೇಕು ಎಂದು ರಾಜ್ಯಪಾಲರಾ ಥಾವರ್ ಚಂದ್ ಗೆಹ್ಲೋಟ್ ಅವರು ಹೇಳಿದರು.
ಇಂದು ಬೆಂಗಳೂರಿನ ಕನಕಪುರ ರಸ್ತೆಯಲ್ಲಿರುವ ಆರ್ಟ್ ಆಫ್ ಲಿವಿಂಗ್ ನ ಆಯುರ್ವೇದ ಆಸ್ಪತ್ರೆಯಲ್ಲಿ ಆರ್ಟ್ ಆಫ್ ಲಿವಿಂಗ್ ಫೌಂಡೇಶನ್, ಭಗವಾನ್ ಮಹಾವೀರ್ ವಿಕಲಾಂಗ್ ಸಹಾಯತಾ ಸಮಿತಿ, ರೋಟರಿ ಕ್ಲಬ್ ಬೆಂಗಳೂರು, ಎಸ್‌ಬಿಐ ಮ್ಯೂಚುವಲ್ ಫಂಡ್ ಜಂಟಿಯಾಗಿ ಆಯೋಜಿಸಿದ್ದ ಉಚಿತ ಗಾಲಿಕುರ್ಚಿ ವಿತರಣೆಯ ಮೆಗಾ ಶಿಬಿರವನ್ನು ಅವರು ಉದ್ಘಾಟಿಸಿ ಮಾತನಾಡಿದರು.
ದಿವ್ಯಾಂಗರು ಇತರರಿಗಿಂತ ವಿಶೇಷ ಸಾರ್ಮರ್ಥ್ಯ ಹೊಂದಿರುತ್ತಾರೆ. ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಮೂಲಕ ದೇಶದ ಅಭಿವೃದ್ಧಿಯಲ್ಲಿ ಪಾಲುದಾರರನ್ನಾಗಿ ಮಾಡುವುದು ನಮ್ಮ ಗುರಿಯಾಗಿದೆ. ಗೌರವಾನ್ವಿತ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಸಮರ್ಥ ನಾಯಕತ್ವದಲ್ಲಿ ಸಬ್ಕಾ ಸಾಥ್ ಸಬ್ಕಾ ವಿಕಾಸ್ ಮಂತ್ರವನ್ನು ಅರಿತುಕೊಂಡ ಭಾರತ ಸರ್ಕಾರವು ಸಮಾಜದಲ್ಲಿನ ದಿವ್ಯಾಂಗರು ಸೇರಿದಂತೆ ದೇಶದ ಪ್ರತಿಯೊಬ್ಬ ನಾಗರಿಕನ ಬೆಳವಣಿಗಾಗಿ ಅಭೂತಪೂರ್ವ ಕಾರ್ಯವನ್ನು ಮಾಡುತ್ತಿರುವುದು ಶ್ಲಾಘನೀಯ ಎಂದರು.
ಭಾರತ ಸರ್ಕಾರದ ವಿಕಲಚೇತನರ ಸಬಲೀಕರಣ ಇಲಾಖೆಯಲ್ಲಿ ವಿವಿಧ ಯೋಜನೆಗಳ ಮೂಲಕ ದೇಶಾದ್ಯಂತ 10668ಕ್ಕೂ ಹೆಚ್ಚು ಶಿಬಿರಗಳನ್ನು ಆಯೋಜಿಸಿ, 20 ಲಕ್ಷ 35 ಸಾವಿರಕ್ಕೂ ಹೆಚ್ಚು ಫಲಾನುಭವಿಗಳಿಗೆ ಪರಿಕರಗಳನ್ನು ಒದಗಿಸಲಾಗಿದೆ. ಅಲ್ಲದೇ, ಸರಕಾರ ಹಿರಿಯ ನಾಗರಿಕರಿಗೆ ಕಾನೂನು ರೂಪಿಸುವ ಜತೆಗೆ ಹಲವು ಯೋಜನೆಗಳನ್ನು ಜಾರಿಗೊಳಿಸಿದೆ ಎಂದು ಮಾಹಿತಿ ನೀಡಿದರು.
ದಿವ್ಯಾಂಗರ ಸಬಲೀಕರಣಕ್ಕಾಗಿ ಸರಕಾರದ ಜತೆಗೆ ಹಲವು ಸ್ವಯಂಸೇವಾ ಸಂಸ್ಥೆಗಳೂ ಶ್ರಮಿಸುತ್ತಿವೆ. ಭಗವಾನ್ ಮಹಾವೀರ್ ವಿಕಲಾಂಗ್ ಸಹಾಯತಾ ಸಮಿತಿಯು ದಿವ್ಯಾಂಗರ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ವಿಶ್ವದ ಅತಿದೊಡ್ಡ ಸರ್ಕಾರೇತರ ಸಂಸ್ಥೆಯಾಗಿದೆ. ಸಂಸ್ಥೆಯು 1975 ರಲ್ಲಿ ರಾಜಸ್ಥಾನದ ಜೈಪುರದಲ್ಲಿ ಸ್ಥಾಪನೆಯಾಯಿತು, ಅಂದಿನಿಂದ ಇಲ್ಲಿಯವರೆಗೂ ಅನೇಕ ಸಾಧನೆಗಳನ್ನು ಮಾಡಿದೆ. ಕಳೆದ 46 ವರ್ಷಗಳಲ್ಲಿ ಸುಮಾರು 20 ಲಕ್ಷ ದಿವ್ಯಾಂಗರಿಗೆ ಸಂಸ್ಥೆಯಿಂದ ವಿವಿಧ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಆರ್ಥಿಕವಾಗಿ ಬಡತನ ಹೊಂದಿರುವ ಕುಟುಂಬದವರು ಈ ಪ್ರಯೋಜನ ಪಡೆದುಕೊಂಡಿದ್ದಾರೆ. ಇಂಡಿಯಾ ಫಾರ್ ಹ್ಯೂಮಾನಿಟಿ ಪ್ರಾಜೆಕ್ಟ್ ಅಡಿಯಲ್ಲಿ ಅನೇಕ ಶಿಬಿರಗಳನ್ನು ಆಯೋಜಿಸುವ ಮೂಲಕ ಇಡೀ ವಿಶ್ವದಲ್ಲೇ ದೇಶದ ಗೌರವ ಹೆಚ್ಚಿಸಿರುವುದು ಹೆಮ್ಮೆಯ ಸಂಗತಿ ಎಂದ ಅವರು, ಸಂಸ್ಥೆಯ ಕಾರ್ಯಕ್ಕೆ ಅಭಿನಂದನೆಗಳನ್ನು ಸಲ್ಲಿಸಿದರು.
ಇದೇ ರೀತಿ ದಿವ್ಯಾಂಗರನ್ನು ಗುರುತಿಸಿ, ಸರ್ಕಾರದ ಸೌಲಭ್ಯಗಳನ್ನು ಒದಗಿಸಿದರೆ, ಅವರ ಮುಖದಲ್ಲಿ ಸಂತೋಷ ಮೂಡಿ ಬರುವುದರ ಜೊತೆಗೆ ಸ್ವಾಭಿಮಾನದ ಬದುಕು ಜೀವಿಸಲು ಸಹಕಾರಿಯಾಗುತ್ತದೆ ಎಂದು ಅಭಿಪ್ರಯಾಪಟ್ಟರು.
ಕಾರ್ಯಕ್ರಮದಲ್ಲಿ ಆರ್ಟ್ ಆಫ್ ಲಿವಿಂಗ್ ನ ರವಿಶಂಕರ್ ಗುರೂಜಿ, ಭಗವಾನ್ ಮಹಾವೀರ್ ವಿಕಲಾಂಗ್ ಸಹಾಯತಾ ಸಮಿತಿಯ ಸಂಸ್ಥಾಪಕ ಡಿ.ಆರ್ ಮೆಹ್ತಾ, ರೋಟರಿ ಸಂಸ್ಥೆಯ ಜಿಲ್ಲಾ ಗವರ್ನರ್ ಫಾಜಲ್ ಮೊಹಮ್ಮದ್, ರೋಟರಿ ಕ್ಲಬ್ ಬೆಂಗಳೂರು ಜಿಲ್ಲಾ ಅಧ್ಯಕ್ಷ ನರ್ಮದಾ ನಾರಾಯಣ, ಆರ್ಟ್ ಆಫ್ ಲಿವಿಂಗ್ ಟ್ರಸ್ಟ್ ನ ಚೇರ್ ಮನ್ ಹರ್ಷ, ಎಸ್ ಬಿಐ ನ ಗುರುಪ್ರೀತ್ ಸಿಂಗ್ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
0 Comments