ಖ್ಯಾತ ನಟ ದಿ. ಪುನೀತ್ ರಾಜ್‌ಕುಮಾರ್‌ರವರ ಗೌರವಾರ್ಥ ಬೆಂಗಳೂರಿನಲ್ಲಿ ಆಮ್ ಆದ್ಮಿ ಪಾರ್ಟಿ ಆಯೋಜಿಸಿದ್ದ ಉಚಿತ ಹೃದಯ ಚಿಕಿತ್ಸಾ ಶಿಬಿರವು ಯಶಸ್ವಿಯಾಗಿ ನೆರವೇರಿತು.
ಸಂಪಂಗಿರಾಮ ನಗರದ ಶ್ರೀ ಪ್ರಸನ್ನ ಗಣಪತಿ ಕಲ್ಯಾಣ ಮಂಟಪದಲ್ಲಿ ನಡೆದ ಶಿಬಿರದಲ್ಲಿ ಮಾತನಾಡಿದ ಸಂಪಂಗಿರಾಮ ನಗರದ ವಿಧಾನಸಭಾ ಕ್ಷೇತ್ರದ ಎಎಪಿ ಅಧ್ಯಕ್ಷ ಪ್ರಕಾಶ್ ನೆಡುಂಗಡಿ, “ಇತ್ತೀಚಿನ ದಿನಗಳಲ್ಲಿ ಹೃದಯಾಘಾತ ಹಾಗೂ ಹೃದಯಕ್ಕೆ ಸಂಬಂಧಿಸಿದ ಸಮಸ್ಯೆಗಳು ಹೆಚ್ಚುತ್ತಿರುವುದು ಆಘಾತಕಾರಿ. ಇದರಿಂದಾಗಿ ಅನೇಕರನ್ನು ಯುವ ವಯಸ್ಸಿನಲ್ಲೇ ಕಳೆದುಕೊಳ್ಳುತ್ತಿದ್ದೇವೆ. ಕಾಲಕಾಲಕ್ಕೆ ತಪಾಸಣೆ ಮಾಡಿಸಿಕೊಳ್ಳುವ ಹಾಗೂ ಸೂಕ್ತ ಮುನ್ನೆಚ್ಚರಿಕೆ ವಹಿಸುವ ಮೂಲಕ ಹೃದಯದ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಆಮ್ ಆದ್ಮಿ ಪಾರ್ಟಿಯು ಉಚಿತ ಹೃದಯ ಚಿಕಿತ್ಸಾ ಶಿಬಿರವನ್ನು ಆಯೋಜಿಸಿದೆ” ಎಂದು ಹೇಳಿದರು.
ಶಿಬಿರದಲ್ಲಿ ಭಾಗವಹಿಸಿದ್ದ ಅನೇಕ ನುರಿತ ವೈದ್ಯರು ನೂರಾರು ಜನರ ಹೃದಯ ತಪಾಸಣೆ ನಡೆಸಿ, ಔಷಧಿಗಳನ್ನು ವಿತರಿಸಿದರು. ಹೆಚ್ಚಿನ ಚಿಕಿತ್ಸೆಯ ಅಗತ್ಯವಿರುವವರಿಗೆ ಆಸ್ಪತ್ರೆಗೆ ಭೇಟಿಯಾಗುವಂತೆ ಸಲಹೆ ನೀಡಿದರು. ಆಮ್ ಆದ್ಮಿ ಪಾರ್ಟಿಯ ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದು, ವೈದ್ಯರು ಹಾಗೂ ರೋಗಿಗಳಿಗೆ ನೆರವಾದರು.
0 Comments