Ticker

6/recent/ticker-posts

Ad Code

Responsive Advertisement

AAM ADMI KARNATAKA : ಗುತ್ತಿಗೆ ಕಾಮಗಾರಿ: ಭ್ರಷ್ಟಾಚಾರದ ತನಿಖೆಗೆ ಆಗ್ರಹಿಸಿ ಪ್ರತಿಭಟನೆ

ಗುತ್ತಿಗೆ ಕಾಮಗಾರಿಗಳ ಶೇ. 40ರಷ್ಟು ಮೊತ್ತವು ರಾಜಕಾರಣಿಗಳ ಪಾಲಾಗುತ್ತಿರುವುದರ ಕುರಿತು ಸಮಗ್ರ ತನಿಖೆಗೆ ಆಗ್ರಹಿಸಿ ನವೆಂಬರ್‌ 24ರಂದು ಬೃಹತ್‌ ಪ್ರತಿಭಟನೆ ನಡೆಸಲು ಆಮ್‌ ಆದ್ಮಿ ಪಾರ್ಟಿ ನಿರ್ಧರಿಸಿದೆ.

ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಎಎಪಿಯ ರಾಜ್ಯ ಮಾಧ್ಯಮ ಸಂಚಾಲಕರಾದ ಜಗದೀಶ್‌ ವಿ. ಸದಂ, “ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷರಾಗಿರುವ ಡಿ. ಕೆಂಪಣ್ಣರವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದು ರಾಜ್ಯದ ಜನಪ್ರತಿನಿಧಿಗಳ ಮುಖವಾಡ ಕಳಚಿದ್ದಾರೆ. ಯಾವುದೇ ರಾಜಕಾರಣಿ ಅಥವಾ ವಿರೋಧ ಪಕ್ಷದವರಲ್ಲದ ಕೆಂಪಣ್ಣರವರು ಲಿಖಿತ ರೂಪದಲ್ಲಿ ಮಾಡಿರುವ ಆರೋಪವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಬೇಕಿದೆ. ಬೇರೆ ಪಕ್ಷದ ಆಡಳಿತವಿದ್ದಾಗ ಕರ್ನಾಟಕ ಸರ್ಕಾರವನ್ನು 10% ಸರ್ಕಾರವೆಂದು ಕರೆದಿದ್ದ ಮೋದಿಯವರು ಈಗ ʻ40% ಬಿಜೆಪಿ ಟ್ಯಾಕ್ಸ್‌ʼ ಸಂಗ್ರಹವಾಗುತ್ತಿರುವುದನ್ನು ಗುತ್ತಿಗೆದಾರರೇ ಬಹಿರಂಗಪಡಿಸಿದಾಗಲೂ ಸುಮ್ಮನಿರುವುದು ಸರಿಯಲ್ಲ. ಈ ಪ್ರಕರಣದಲ್ಲಿ ಪ್ರಧಾನಿ ಮೋದಿಯವರು ಮಧ್ಯಪ್ರವೇಶಿಸಿ ಪ್ರತಿಕ್ರಿಯಿಸಬೇಕು” ಎಂದು ಆಗ್ರಹಿಸಿದರು,


“ವಿವಿಧ ಕಾಮಗಾರಿಗಳಿಗೆ ಸರ್ಕಾರದ ಬೊಕ್ಕಸದಿಂದ ಸಾವಿರಾರು ಕೋಟಿ ಖರ್ಚಾಗುತ್ತಿದ್ದರೂ ರಾಜ್ಯವು ಅಭಿವೃದ್ಧಿಯಾಗದಿರುವುದಕ್ಕೆ ಗುತ್ತಿಗೆಯಲ್ಲಿ ಪರ್ಸೆಂಟ್‌ ಲೆಕ್ಕದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರವೇ ಕಾರಣ. ಇದರಿಂದಾಗಿ ಕೇವಲ ಜನಪ್ರತಿನಿಧಿಗಳು ಶ್ರೀಮಂತರಾಗಿ, ತೆರಿಗೆ ಕಟ್ಟಿದ ಸಾಮಾನ್ಯರು ತೊಂದರೆಗಳನ್ನು ಅನುಭವಿಸುತ್ತಲೇ ಬದುಕಬೇಕಾಗಿದೆ. ರಾಜ್ಯಕ್ಕೆ ಶಾಪವಾಗಿರುವ ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ ಪಕ್ಷಗಳು ಗುತ್ತಿಗೆ ಭ್ರಷ್ಟಾಚಾರದ ಬಗ್ಗೆ ಪರಸ್ಪರ ಹೊಂದಾಣಿಕೆ ಮಾಡಿಕೊಂಡಿವೆ. ಆದ್ದರಿಂದಲೇ ಡಿ. ಕೆಂಪಣ್ಣರವರ ಪತ್ರವು ಸಂಚಲನ ಸೃಷ್ಟಿಸಿದ್ದರೂ ಮೂರು ಪಕ್ಷಗಳ ರಾಜಕಾರಣಿಗಳು ಈ ಬಗ್ಗೆ ತುಟಿ ಬಿಚ್ಚುತ್ತಿಲ್ಲ. ಈ ಭ್ರಷ್ಟ ವ್ಯವಸ್ಥೆಯಲ್ಲಿ ಮೂರೂ ಪಕ್ಷಗಳು ಭಾಗಿಯಾಗಿರುವುದು ಇದರಿಂದಲೇ ಸ್ಪಷ್ಟವಾಗುತ್ತದೆ” ಎಂದು ಜಗದೀಶ್‌ ವಿ. ಸದಂ ಹೇಳಿದರು.

ಆಮ್‌ ಆದ್ಮಿ ಪಾರ್ಟಿಯ ಮಹಿಳಾ ಘಟಕದ ಅಧ್ಯಕ್ಷರಾದ ಕುಶಲಸ್ವಾಮಿಯವರು ಮಾತನಾಡಿ, “ಗುತ್ತಿಗೆ ಕಾಮಗಾರಿಗಳ ಮೊತ್ತದಲ್ಲಿ ಸಚಿವರಿಗೆ 5%. ಸಂಸದರಿಗೆ 2%, ಸ್ಥಳೀಯ ಜನಪ್ರತಿನಿಧಿಗಳಿಗೆ 10%, ಬಿಲ್‌ ಪಾವತಿಸುವ ಅಧಿಕಾರಿಗಳಿಗೆ 6% ಹೀಗೆ ಶೇ. 40ರಷ್ಟು ಹಣವು ಅಕ್ರಮವಾಗಿ ಜನಪ್ರತಿನಿಧಿಗಳ ಜೇಬು ಸೇರುತ್ತಿರುವುದನ್ನು ಡಿ. ಕೆಂಪಣ್ಣರವರು ಪತ್ರದಲ್ಲಿ ಬಹಿರಂಗಪಡಿಸಿದ್ದಾರೆ. ಅವರು ಪತ್ರದಲ್ಲಿ ಪ್ರಸ್ತಾಪಿಸಿರುವ ವಿಷಯಗಳ ಬಗ್ಗೆ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ತನಿಖೆಯಾಗಬೇಕು. ಕಳೆದ ಹತ್ತು ವರ್ಷಗಳಲ್ಲಿ ಯಾವ್ಯಾವ ಕಾಮಗಾರಿಗಳಲ್ಲಿ ಎಷ್ಟೆಷ್ಟು ಮೊತ್ತ ಯಾವ್ಯಾವ ರಾಜಕಾರಣಿಯ ಜೇಬು ಸೇರಿದೆ ಎಂಬುದು ತನಿಖೆ ನಡೆದರಷ್ಟೇ ಬಯಲಾಗಲಿದೆ” ಎಂದು ಹೇಳಿದರು.

ಪಕ್ಷದ ಹಿರಿಯ ಮುಖಂಡರಾದ ಗುರುಮೂರ್ತಿಯವರು ಮಾತನಾಡಿ, “ಕೆಲವೇ ವರ್ಷಗಳಲ್ಲಿ ತಮ್ಮ ಆಸ್ತಿಪಾಸ್ತಿಗಳನ್ನು ಅನೇಕ ಪಟ್ಟು ಹೆಚ್ಚಿಸಿಕೊಂಡಿರುವ ಜನಪ್ರತಿನಿಧಿಗಳ ಆಸ್ತಿ ಗಳಿಕೆಯ ಮೂಲದ ಕುರಿತು ಹಾಲಿ ನ್ಯಾಯಮೂರ್ತಿಗಳಿಂದ ಸಮಗ್ರ ತನಿಖೆ ನಡೆಯಬೇಕೆಂದು ಒತ್ತಾಯಿಸಿ ನವೆಂಬರ್‌ 24ರ ಬುಧವಾರದಂದು ಬೆಂಗಳೂರಿನ ಮೈಸೂರು ಬ್ಯಾಂಕ್‌ ವೃತ್ತದಲ್ಲಿ ಬೆಳಗ್ಗೆ 11 ಗಂಟೆಗೆ ಬೃಹತ್‌ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ. ಆಮ್‌ ಆದ್ಮಿ ಪಾರ್ಟಿಯ ರಾಜ್ಯ ಸಂಚಾಲಕ ಪೃಥ್ವಿ ರೆಡ್ಡಿ ಹಾಗೂ ಬೆಂಗಳೂರು ನಗರ ಅಧ್ಯಕ್ಷ ಮೋಹನ್ ದಾಸರಿಯವರ ನೇತೃತ್ವದಲ್ಲಿ ಪ್ರತಿಭಟನೆ ನಡೆಯಲಿದೆ. ಪಕ್ಷದ ಮುಖಂಡರು, ನೂರಾರು ಕಾರ್ಯಕರ್ತರು ಹಾಗೂ ಸಾರ್ವಜನಿಕರು ಇದರಲ್ಲಿ ಭಾಗವಹಿಸಲಿದ್ದಾರೆ” ಎಂದು ತಿಳಿಸಿದರು.


Post a Comment

0 Comments

Ad Code

Responsive Advertisement