ರಾಮನಗರ: ರಾಜ್ಯದ ಮುಖ್ಯಮಂತ್ರಿ ಎಸ್.ಆರ್. ಬೊಮ್ಮಾಯಿ ಅವರ ನೇತೃತ್ವದ ಸರ್ಕಾರದಿಂದ ಭೋವಿ ಜನಾಂಗಕ್ಕೆ ಅನ್ಯಾಯವಾಗಿದೆ. ಜನಾಂಗದ ನಾಲ್ಕು ಜನ ಶಾಸಕರಿದ್ದರೂ ಯಾವುದೇ ರಾಜಕೀಯ ಪ್ರಾತಿನಿಧ್ಯ ನೀಡಲಾಗಿಲ್ಲ ಎಂದು ಕರ್ನಾಟಕ ಭೋವಿ ಸಂಘರ್ಷ ಸಮಿತಿ ಸಂಸ್ಥಾಪಕ ಅಧ್ಯಕ್ಷರಾದ ಆನೇಕಲ್ ಗೌತಮ್(ವೆಂಕಿ) ಅವರು ತಮ್ಮ ಅಸಮದಾನ ವ್ಯಕ್ತಪಡಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಕರೆಯಲಾಗಿದ್ದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿ, ಭೋವಿ ಸಮುದಾಯಕ್ಕೆ ಸರ್ಕಾರದಿಂದ ದೊರೆಯಬೇಕಾದ ಸವಲತ್ತುಗಳು ಸರಿಯಾಗಿ ದೊರೆಯುತ್ತಿಲ್ಲ. ಸಮುದಾಯದ ಜನ ಪ್ರತಿನಿಧಿಗಳಿಗೆ ಕನಿಷ್ಠ ನಿಗಮ ಮಂಡಳಿಗಳಿಗಾದರೂ ನೇಮಕ ಮಾಡಿ ರಾಜಕೀಯ ಸ್ಥಾನಮಾನ ನೀಡುವ ಸೌಜನ್ಯವನ್ನು ಸಹ ಮುಖ್ಯಮಂತ್ರಿಗಳಾದ ಬೊಮ್ಮಾಯಿ ಅವರು ತೋರಿಲ್ಲ ಎಂದು ಹೇಳಿದರು.
ಡಾ. ಬಿ.ಆರ್. ಅಂಬೇಡ್ಕರ್ ಅವರು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗೆ ಕಾನೂನು ಸಲಹೆಗಾರರಾಗಿ ನೇಮಕವಾಗಿದ್ದ ಸಮಯದಲ್ಲಿ ನೀಡಲಾಗಿದ್ದ ಮೀಸಲಾತಿಯ ಸ್ಥಾನಮಾನಗಳನ್ನು ವಿರೋಧಿಸಿರುವ ಸದಾಶಿವ ಆಯೋಗದ ವರದಿಯನ್ನು ಭೋವಿ ಸಮುದಾಯವು ಸಂಪೂರ್ಣವಾಗಿ ವಿರೋಧಿಸಿ ಮುಂದಿನ ದಿನಗಳಲ್ಲಿ ಬೃಹತ್ ಪ್ರತಿಭಟನೆಯನ್ನು ನಡೆಸಲಾಗುತ್ತಿದೆ ಎಂದು ತಿಳಿಸಿದರು. ಕರ್ನಾಟಕ ಭೋವಿ ಸಂಘರ್ಷ ಸಮಿತಿ ರಾಮನಗರ ಜಿಲ್ಲಾಧ್ಯಕ್ಷ ರಾಮಸಾಗರ ಕೃಷ್ಣ ಅವರು ಮಾತನಾಡಿ, ರಾಜ್ಯಾಡಳಿತದ ಚುಕ್ಕಾಣಿ ಹಿಡಿದಿರುವ ಬಿಜೆಪಿ ಪಕ್ಷವು ಜಿಲ್ಲೆಯಲ್ಲಿ ಭೋವಿ ಸಮುದಾಯ ಮುಖಂಡನಾಗಿ ಪಕ್ಷದಲ್ಲಿ ರಾಜಕೀಯ ಸ್ಥಾನ ನೀಡಿದ್ದರೂ ಸಹ ಸಮುದಾಯದ ಹೋರಾಟಕ್ಕೆ ಪ್ರಥಮ ಪ್ರಾಶಸ್ತö್ಯ ನೀಡಬೇಕಾಗುತ್ತದೆ. ಆದ್ದರಿಂದ ನಮ್ಮ ಜನಾಂಗವು ಸಮುದಾಯ ಮೂಲಕ ಬೀದಿಗೆ ಇಳಿದು ತಮ್ಮ ಸ್ಥಾನಮಾನಗಳಿಗೆ, ಸರಕಾರದ ಸವಲತ್ತುಗಳಿಗೆ ಹೋರಾಟ ನಡೆಸುವುದನ್ನು ನಿಲ್ಲಿಸಲು ರಾಜ್ಯ ಬಿಜೆಪಿ ಪಕ್ಷದ ಮುಖಂಡರುಗಳಲ್ಲಿ ಮಾತನಾಡಿ ಪ್ರಾಮಾಣಿಕವಾಗಿ ಪ್ರಯತ್ನಿಸುವುದಾಗಿ ಭರವಸೆ ನೀಡಿದರು.
ಕರ್ನಾಟಕ ಭೋವಿ ಸಂಘರ್ಷ ಸಮಿತಿ ರಾಜ್ಯ ಪ್ರಧಾನ ಕಾರ್ಯದರ್ಶಿ ಚಿಕ್ಕವೆಂಕಟಪ್ಪ, ರಾಜ್ಯ ಯುವ ಘಟಕದ ಅಧ್ಯಕ್ಷ ಕೃಷ್ಣ, ಬೆಂಗಳೂರು ಗ್ರಾಮಾಂತರದ ಅಧ್ಯಕ್ಷ ವೆಂಕಟೇಶ್, ಬೆಂಗಳೂರು ನಗರ ಜಿಲ್ಲಾ ಕಾರ್ಯದರ್ಶಿ ಮಂಜುನಾಥ್, ರಾಮನಗರ ಜಿಲ್ಲಾ ಕಾರ್ಯದರ್ಶಿ ಉಮೇಶ್, ರಾಮನಗರ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾವತಿ, ಉಪಾಧ್ಯಕ್ಷೆ ಜಯಲಕ್ಷಿö್ಮ, ಕನಕಪುರ ತಾಲ್ಲೂಕು ಅಧ್ಯಕ್ಷ ನರಸಿಂಹಯ್ಯ, ಮಾಗಡಿ ತಾಲ್ಲೂಕು ಅಧ್ಯಕ್ಷ ಕುಮಾರ್, ನಾರಾಯಣ ಸೇರಿದಂತೆ ಭೋವಿ ಸಮುದಾಯದ ಇನ್ನಿತರೆ ಮುಖಂಡರು ಗೋಷ್ಠಿಯಲ್ಲಿ ಹಾಜರಿದ್ದರು.
0 Comments