ಮೈಸೂರು : ಮೈಸೂರು ದಸರಾ ಉತ್ಸವಕ್ಕೆ ಚಾಲನೆ ದೊರೆತಿದೆ. ವಿಶ್ವ ವಿಖ್ಯಾತ ದಸರಾ ಮಹೋತ್ಸವಕ್ಕೆ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರು ಚಾಲನೆ ನೀಡಿದ್ದು, ಚಾಮುಂಡೇಶ್ವರಿ ದೇವಿಗೆ ಪುಷ್ಪಾರ್ಚನೆ ಮಾಡಿದರು. ಎಸ್.ಎಂ.ಕೃಷ್ಣ ಅವರು, ಯಾವ ಜನ್ಮದ ಪುಣ್ಯದ ಫಲವೋ, ನನಗೆ ಮೈಸೂರು ದಸರಾ ಉದ್ಘಾಟಿಸುವ ಸೌಭಾಗ್ಯ ದೊರೆತಿದೆ. ವಿದ್ಯಾಭ್ಯಾಸದ ದಿನಗಳಲ್ಲೇ ದೇವಿಗೆ ನಿತ್ಯವೂ ನಮಿಸುತ್ತಿದೆ. ಆದರೆ ಇಂದು ದಸರಾ ಉದ್ಘಾಟಿಸಲು ಅವಕಾಶ ಕಲ್ಪಿಸಿದ ಸಿಎಂ ಬಸವರಾಜ್ ಬೊಮ್ಮಾಯಿ ಅವರಿಗೆ ಅನಂತ ಧನ್ಯವಾದಗಳನ್ನು ತಿಳಿಸಿದ್ದಾರೆ.
ಮೈಸೂರಿನಲ್ಲಿ ಕಳೆದ ಬಾಲ್ಯದ ದಿನಗಳ ಕುರಿತು ಎಸ್.ಎಂ.ಕೃಷ್ಣ ಅವರು ಮೆಲುಕು ಹಾಕಿದರು. ಸುಂದರ ನಗರ ಮೈಸೂರು, ಇಂತಹ ನಗರವನ್ನು ಅಭಿವೃದ್ದಿ ಮಾಡಬೇಕು. ಅಭಿವೃದ್ದಿಯಾದ್ರೆ ಪ್ರವಾಸೋದ್ಯಮ ಕೂಡ ಅಭಿವೃದ್ದಿಯಾಗುತ್ತದೆ. ಜನರು ಸಿಂಗಾಪುರ ನೋಡಲು ಹೋಗುತ್ತಾರೆ. ಅದಕ್ಕೆ ಕಾರಣವಾಗಿರೋದು ನಗರದಲ್ಲಿನ ಸ್ವಚ್ಚತೆ. ಹೀಗಾಗಿ ಮೈಸೂರನ್ನು ಕೂಡ ಸುಂದರ ನಗರವನ್ನಾಗಿಸಿ ಎಂದು ಸಿಎಂ ಗೆ ಸಲಹೆ ನೀಡಿದ್ದಾರೆ.
ಇನ್ನು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಮಾತನಾಡಿ, ಮುಂದಿನ ಬಾರಿ ಕೊರೊನಾ ಮಹಾಮಾರಿಯನ್ನು ಹೊಡೆದೋಡಿಸಿ ವೈಭವಯುತ ದಸರಾ ಮಹೋತ್ಸವ ಆಚರಣೆಗೆ ಚಾಮುಂಡೇಶ್ವರಿ ಅವಕಾಶವನ್ನು ಕಲ್ಪಿಸಲಿ ಎಂದು ಪ್ರಾರ್ಥಿಸಿಕೊಂಡಿದ್ದಾರೆ. ಏನೇ ಕಷ್ಟ ಬಂದರೂ ನನಗೆ ಬರಲಿ, ಕಷ್ಟವನ್ನು ಸಹಿಸುವ ಶಕ್ತಿಯನ್ನು ದೇವರು ನನಗೆ ಕರುಣಿಸಲಿ ಎಂದಿದ್ದಾರೆ. ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಎರಡನೇ ಬಾರಿಗೆ ದಸರಾ ಮಹೋತ್ಸವವನ್ನು ಸರಳ ಹಾಗೂ ಸಾಂಪ್ರದಾಯಿಕವಾಗಿ ಆಚರಿಸಲಾಗುತ್ತಿದೆ.
ಚಾಮುಂಡೇಶ್ವರಿಗೆ ಅಗ್ರಪೂಜೆಯ ಬಳಿಕ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ಗುರುವಾರ ಬೆಳಿಗ್ಗೆ 8.26ಕ್ಕೆ ಪುಷ್ಪಾರ್ಚನೆ ನೆರವೇರಿಸುವ ಮೂಲಕ 411ನೇ ದಸರಾ ಉತ್ಸವಕ್ಕೆ ಚಾಲನೆ ನೀಡಿದ್ದಾರೆ. ದಸರಾ ಉದ್ಘಾಟನಾ ಸಮಾರಂಭದಲ್ಲಿ ಮೈಸೂರು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಅವರು ಆಗಮಿಸಿದ್ದ ಗಣ್ಯರನ್ನು ಅದ್ದೂರಿಯಾಗಿ ಸ್ವಾಗತಿಸಿದ್ದಾರೆ. ಶಾಸಕ ಜಿ.ಟಿ.ದೇವೇಗೌಡ ಅಧ್ಯಕ್ಷತೆ ವಹಿಸಿದ್ದರು.

0 Comments