ಅಕ್ಟೋಬರ್ 01, ಬೆಂಗಳೂರು: ಈ ಹಿಂದೆ ನಮ್ಮ ಹಿರಿಯ ನಾಯಕರಾದ ಬಿ ಎಸ್ ಯಡಿಯೂರಪ್ಪನವರು ಸಿಎಂ ಆಗಿದ್ದಾಗ ನನ್ನನ್ನು ಗುತುತಿಸಿ ಸಿಎಂ ರಾಜಕೀಯ ಕಾರ್ಯದರ್ಶಿಯನ್ನಾಗಿ ಮಾಡಿದ್ದರು.
ಆಗ ಪ್ರಮಾಣಿಕವಾಗಿ ನಾನು ಕೆಲಸ ಮಾಡಿದ್ದೇನೆ, ಈಗ ಮತ್ತೆ ನಮ್ಮ ಪಕ್ಷದ ನೂತನ ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಾಯಿರವರು ನನ್ನನ್ನು ಮತ್ತೆ ರಾಜಕೀಯ ಕಾರ್ಯದರ್ಶಿಯಾಗಿ ಮಾಡಿದ್ದಾರೆ ಎಂದು ಎಂ ಪಿ ರೇಣುಕಾಚಾರ್ಯ ಹೇಳಿದರು.
ಇಂದು ನಗರದ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯನ್ನಾಗಿ ನನ್ನನ್ನು ಮಾಡಿದ್ದಾರೆ ಎಂದರು.
ಇದರಲ್ಲಿ ವಿಶೇಷ ಏನೂ ಇಲ್ಲ. ಸಿಎಂ ಬಸವರಾಜ್ ಬೊಮ್ಮಾಯಿ ಮತ್ತು ಶಾಸಕರ ನಡುವೆ ಸೇತುವೆ ಆಗಿ ನಾನು ಕೆಲಸ ಮಾಡುತ್ತೇನೆ. ನನ್ನ ಸಿಎಂ ರಾಜಕೀಯ ಕಾರ್ಯದರ್ಶಿಯಾಗಿ ಆಯ್ಕೆ ಮಾಡಿದ ನಮ್ಮ ಪಕ್ಷ ಮತ್ತು ಪಕ್ಷದ ನಾಯಕರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಇನ್ನೂ ಬಾಕಿ ಉಳಿದಿರುವ ನಾಲ್ಕು ಸಚಿವ ಸ್ಥಾನ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ನಾನು ಪಕ್ಷದ ನಿಷ್ಠಾವಂತ ಕಾರ್ಯಕರ್ತ, ಈ ಬಗ್ಗೆ ನಾನು ಹೇಳಲಾರೆ.
ಈಗಾಗಲೇ ಸಚಿವನಾಗಿ ಕೆಲಸ ಮಾಡಿದ್ದೇನೆ, ಸದ್ಯ ಹಾನಗಲ್ ಹಾಗೂ ಸಿಂದಗಿ ಉಪ ಚುನಾವಣೆ ಬರ್ತಿದೆ. ಹೀಗಾಗಿ ಈಗ ಸಚಿವ ಸ್ಥಾನ ಕೇಳುವುದು ಸರಿಯಲ್ಲ ಕಾಲ ಬಂದಾಗ ಕೇಳುತ್ತೇನೆ ಎಂದರು.

0 Comments