ಮಧುಗಿರಿ : ರಾಜ್ಯಾದ್ಯಂತ ಬಡಮಕ್ಕಳ ಶಿಕ್ಷಣಕ್ಕೆ ಸರ್ಕಾರ ಎಲ್ಲ ರೀತಿಯ ಸೌಲಭ್ಯ ನೀಡಿ ಹೆಚ್ಚಿನ ಅನುದಾನ ನೀಡುತ್ತಿದ್ದು, ತಂತ್ರಜ್ಞಾನ ಆಧಾರಿತ ಶಿಕ್ಷಣಕ್ಕೆ ಸರ್ಕಾರ ಸಿದ್ಧವಾಗಿದೆ ಎಂದು ಪರಿಶಿಷ್ಟ ವರ್ಗಗಳ ಕಲ್ಯಾಣ ಹಾಗೂ ಸಾರಿಗೆ ಸಚಿವ ಶ್ರೀರಾಮುಲು ತಿಳಿಸಿದರು.
ತಾಲೂಕಿನ ಸೋದೆನಹಳ್ಳಿಯಲ್ಲಿ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ನಿರ್ಮಾಣವಾದ 18 ಕೋಟಿ ವೆಚ್ಚದ ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಯ ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ.ಜಾತಿ/ಪಂಗಡದ ಮಕ್ಕಳು ಖಾಸಗಿ ಶಾಲೆಯ ಮಕ್ಕಳಿಗೆ ಸರಿಸಮನಾಗಿ ಅಂಕಗಳನ್ನು ಗಳಿಸುವ ಸಾಮಥ್ರ್ಯವನ್ನು ಸರ್ಕಾರ ಇಂದು ನೀಡಿದ್ದು, ಇದು ಸರ್ಕಾರದ ವಿವಿಧ ಯೋಜನೆಯ ವಸತಿ ಶಾಲೆಗಳಿಂದ ಸಾಧ್ಯವಾಗಿದೆ. ಇದಕ್ಕೆ ಶಕ್ತಿ ತುಂಬುವ ಕೆಲಸ ಉಪಾಧ್ಯಯರಿಂದ ಸಿಗುತ್ತಿದ್ದು, ಮಕ್ಕಳು ಸದುಪಯೋಗ ಮಾಡಿಕೊಳ್ಳಬೇಕು. ಇಂದು ಕರೊನಾ ಶಿಕ್ಷಣಕ್ಕೆ ಹೆಚ್ಚಿನ ಪೆಟ್ಟು ನೀಡಿದೆ. ಆದರೆ ಮಾಜಿ ಸಿಎಂ ಯಡಿಯೂರಪ್ಪ ಹಾಗೂ ಈಗಿನ ಸಿಎಂ ಬಸವರಾಜ ಬೊಮ್ಮಾಯಿ ಕೂಡ ಇದೇ ಹಾದಿಯಲ್ಲಿ ನಡೆಯುತ್ತಿದ್ದು, ಮಕ್ಕಳ ಕಲಿಕೆಗೆ ಯಾವುದೇ ತೊಡಕಾಗದಂತೆ ಕ್ರಮವಹಿಸುತ್ತಿದ್ದಾರೆ. ಒಂದು ವೇಳೆ 3ನೇ ಅಲೆ ಬಂದರೂ ಕೂಡ ಮಕ್ಕಳಿಗೆ ಲ್ಯಾಪ್‍ಟಾಪ್ ನೀಡಿ ತಂತ್ರಜ್ಞಾನ ಆಧಾರಿತ ಶಿಕ್ಷಣವನ್ನು ಮನೆಯಲ್ಲೇ ಕೊಡಿಸಲು ಎಲ್ಲ ಕ್ರಮ ಕೈಗೊಳ್ಳಲಾಗುವುದು. ಕ್ಷೇತ್ರದ ಅಭಿವೃದ್ಧಿಗೆ ಶಾಸಕರಿಗೆ ಎಲ್ಲ ರೀತಿಯ ಸಹಕಾರ ನೀಡುವುದಾಗಿ ತಿಳಿಸಿದರು.
ಶಾಸಕ ಎಂ.ವಿ.ವೀರಭದ್ರಯ್ಯ ಮಾತನಾಡಿ ಮಳೆಯಾಶ್ರಿತವಾದ ಬರಪೀಡಿತ ಕ್ಷೇತ್ರದಲ್ಲಿ ಯಾವುದೇ ಆದಾಯದ ಆಸರೆಯಿಲ್ಲ. ಬದಲಾಗಿ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕಿದ್ದು ಇದರಿಂದ ಕುಟುಂಬಗಳು ಸಧೃಡವಾಗಲಿದೆ. ದೊಡ್ಡೇರಿ ಹೋಬಳಿಯಲ್ಲಿ 20 ಎಕರೆ ಸರ್ಕಾರಿ ಭೂಮಿಯಿದ್ದು, ದಲಿತರ ಮಕ್ಕಳ ಶಿಕ್ಷಣಕ್ಕಾಗಿ ಮತ್ತೊಂದು ವಸತಿ ಶಾಲೆ ಮಂಜೂರು ಮಾಡಿಸಿಕೊಡಬೇಕೆಂದು ಸಚಿವರು ಹಾಗೂ ಸಂಸದರಿಗೆ ಮನವಿ ಮಾಡಿ ಒತ್ತಾಯಿಸಿದರು. ಈಗಾಗಲೇ ಕೈಗಾರಿಕಾ ವಲಯ ಮಂಜೂರಾಗಿದೆ. ಎತ್ತಿನಹೊಳೆ ಯೋಜನೆಯಿಂದ ಉದ್ಯೋಗ ಹಾಗೂ ಕೃಷಿ ಕ್ಷೇತ್ರ ಸಧೃಡವಾಗಲಿದ್ದು, ಶಿಕ್ಷಣ, ಕೃಷಿ ಹಾಗೂ ಉದ್ಯೋಗದಿಂದ ಜನರು ನೆಮ್ಮದಿಯಿಂದ ಬದುಕಬಹುದು ಎಂದರು.
ಸಂಸದ ಜಿ.ಎಸ್.ಬಸವರಾಜು ಮಾತನಾಡಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಜವಳಿ ಪಾರ್ಕ್ ಹಾಗೂ ವಿಮಾನ ನಿಲ್ದಾಣಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸÀಲಾಗಿದೆ. ಉಳಿದಂತೆ ಕೃಷಿ ಕ್ಷೇತ್ರದ ಅಭಿವೃದ್ಧಿಗೆ ಎಲ್ಲ ರೀತಿಯ ಸಹಕಾರ ನೀಡುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಚಿದಾನಂದ ಎಂ.ಗೌಡ, ಉಪವಿಭಾಗಾಧಿಕಾರಿ ಸೋಮಪ್ಪ ಕಡಕೋಳ, ಪ.ವರ್ಗಗಳ ಇಲಾಖೆಯ ಅಧಿಕಾರಿ ತ್ಯಾಗರಾಜು, ರಾಜಕುಮಾರ್, ಸಮಾಜ ಕಲ್ಯಾಣ ಇಲಾಖೆಯ ಶಮೀಮ್ ಉನ್ನೀಸಾ, ಪ್ರಾಂಶುಪಾಲ ಈರಣ್ಣ, ಪುರಸಭೆ ಸದಸ್ಯ ಜಗನ್ನಾಥ್, ಜೆಡಿಎಸ್ ಹೋಬಳಿ ಅಧ್ಯಕ್ಷ ಬಸವರಾಜು, ಬಿಜೆಪಿ ಮಂಡಲಾಧ್ಯಕ್ಷ ನರಸಿಂಹಮೂರ್ತಿ, ಗ್ರಾ.ಪಂ. ಅಧ್ಯಕ್ಷೆ ಸವಿತಾ, ಸದಸ್ಯ ಲಕ್ಷ್ಮೀನಾರಾಯಣ್, ಮುಖಂಡರಾದ ತುಂಗೋಟಿ ರಾಮಣ್ಣ, ಕುಮಾರ್, ಕಾಂತಣ್ಣ, ವಿಶ್ವನಾಥ್, ಮಂಜಣ್ಣ ಇತರರು ಇದ್ದರು.
Varthajala, Madhugiri, Tumkur

0 Comments