Ticker

6/recent/ticker-posts

Ad Code

Responsive Advertisement

ದಸರಾ ಉದ್ಘಾಟನೆ ರಾಜಕೀಕರಣಗೊಳಿಸುವುದು ಕೆಟ್ಟ ಸಂಪ್ರದಾಯ

ಮೈಸೂರಿನ ದಸರಾ ಉದ್ಘಾಟನೆಗೆ ಸಾಂಸ್ಕೃತಿಕ ಕ್ಷೇತ್ರದ ಸಾಧಕರ ಬದಲು ರಾಜಕಾರಣಿ ಎಸ್‌.ಎಂ.ಕೃಷ್ಣರವರನ್ನು ಆಯ್ಕೆ ಮಾಡಿರುವುದಕ್ಕೆ ಆಮ್‌ ಆದ್ಮಿ ಪಾರ್ಟಿಯ ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್‌ ವಿ. ಸದಂರವರು ವಿರೋಧ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಟ್ವೀಟ್‌ ಮಾಡಿರುವ ಜಗದೀಶ್‌ ವಿ. ಸದಂ, "ದೇಶದಲ್ಲಿಯೇ ಸುಪ್ರಸಿದ್ಧ, ಪಾರಂಪರಿಕ, ಮಹೋನ್ನತ ಇತಿಹಾಸವುಳ್ಳ ದಸರಾ ಉತ್ಸವ ಉದ್ಘಾಟನೆಯನ್ನು ರಾಜಕೀಕರಣಗೊಳಿಸುತ್ತಿರುವ ನಿಮಗೆ ನಾಚಿಕೆಯಾಗುತ್ತಿಲ್ಲವೇ? ಕರ್ನಾಟಕ ಸಾಹಿತ್ಯಲೋಕದ ದಿಗ್ಗಜರುಗಳಿಗೆ ಮಾಡುತ್ತಿರುವ ಮಹಾನ್ ಅಪಮಾನ" ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.


"ಮೈಸೂರು ದಸರಾ ಆಯ್ಕೆಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರನ್ನು ಆಯ್ಕೆ ಮಾಡುವ ಪರಂಪರೆಯು ಹಲವು ದಶಕಗಳಿಂದ ನಡೆದುಕೊಂಡು ಬಂದಿದೆ. ಅನೇಕ ಸಾಹಿತಿಗಳು, ಸಮಾಜ ಸೇವಕರು, ಸಾಧಕರು ದಸರಾ ಉದ್ಘಾಟಿಸಿದ್ದಾರೆ. ಆದರೆ ಈ ಬಾರಿ ರಾಜಕಾರಣಿಯನ್ನು ಆಯ್ಕೆ ಮಾಡುವ ಮೂಲಕ ಕೆಟ್ಟ ಸಂಪ್ರದಾಯಕ್ಕೆ ನಾಂದಿ ಹಾಡಲಾಗಿದೆ. ಇದನ್ನೇ ಮಾದರಿಯಾಗಿಟ್ಟುಕೊಂಡು ಮುಂದಿನ ಸರ್ಕಾರಗಳು ಕೂಡ ಸಾಧಕರ ಬದಲು ತಮ್ಮ ಪಕ್ಷದ ರಾಜಕಾರಣಿಗಳಿಗೆ ಮಣೆ ಹಾಕುವ ಅಪಾಯವಿದೆ" ಎಂದು ಜಗದೀಶ್‌ ವಿ. ಸದಂ ಹೇಳಿದರು.


"ರಾಜಕೀಯ ಹೊರತು ಪಡಿಸಿದರೆ ಎಸ್‌.ಎಂ.ಕೃಷ್ಣರವರ ಸಾಧನೆ ಶೂನ್ಯ. ಸಕ್ರಿಯ ರಾಜಕೀಯದಲ್ಲಿರುವ ಅವರು ಬಿಜೆಪಿ ಹಾಗೂ ಪ್ರಧಾನಿ ಮೋದಿಯವರನ್ನು ಹೊಗಳುತ್ತಾ, ಬೇರೆ ಪಕ್ಷಗಳನ್ನು ಟೀಕಿಸುತ್ತಾ ಕಾಲ ಕಳೆಯುತ್ತಿದ್ದಾರೆ. ಈ ಮೂಲಕ ರಾಜಕೀಯ ಕೆಸರೆರಚಾಟಕ್ಕೆ ಗುರಿಯಾಗುತ್ತಿದ್ದಾರೆ. ದಸರಾ ಉದ್ಘಾಟನೆಗೆ ಅವರನ್ನು ಆಯ್ಕೆ ಮಾಡಿರುವುದು ನಾಡಹಬ್ಬದ ಪಾವಿತ್ರ್ಯತೆಗೆ ಕಳಂಕವಾಗಿದೆ. ಸಿಎಂ ಬಸವರಾಜ ಬೊಮ್ಮಾಯಿಯವರು ತಕ್ಷಣವೇ ಉದ್ಘಾಟಕರನ್ನು ಬದಲಿಸಲು ಮುಂದಾಗಬೇಕು. ರಾಜಕೀಯದಿಂದ ದೂರವಿರುವ ಹಾಗೂ ನಾಡಿಗೆ ನಿಸ್ವಾರ್ಥ ಸೇವೆ ಸಲ್ಲಿಸಿರುವವರನ್ನು ಆಯ್ಕೆ ಮಾಡಬೇಕು" ಎಂದು ಜಗದೀಶ್‌ ವಿ. ಸದಂ ಆಗ್ರಹಿಸಿದರು.

Post a Comment

0 Comments

Ad Code

Responsive Advertisement