Ticker

6/recent/ticker-posts

Ad Code

Responsive Advertisement

ಮಲ್ಲೇಶ್ವರದ ಮಿಲೇನಿಯಂ ವೋಟರ್ಸ್ ರನ್ ಸುತ್ತಮುತ್ತ.... !

ತಿಂಗಳಿಗೆ ಮೂರು ಲಕ್ಷ - ಐದು ಲಕ್ಷ - ಹತ್ತು ಲಕ್ಷ ಮೀರಿ ದುಡಿಯುವವರು ಹೇಗಿರ್ತಾರೆ ಗೊತ್ತಾ ? ಇವರನ್ನು ನೋಡಬೇಕಾದರೆ ಮಲ್ಲೇಶ್ವರದ ಮಿಲ್ಲೇನಿಯಂ ವೋಟರ್ಸ್ ರನ್,ಹೆಲ್ತ್ ರನ್, ಡಯಾಬಿಟೀಸ್ ಅವೇರ್ನೆಸ್ ನಡಿಗೆ,ಟೆನ್ ಕೆ ರನ್,ಫೈವ್ ಕೆ ರನ್ ಇಂತಹ ನಡುವೆ ಅಥವಾ ಓಟಗಳಲ್ಲಿ ಭಾಗವಹಿಸುವವರನ್ನು ನೋಡಬೇಕು ಉದಾಹರಣೆಗೆ ಶ್ರೀ.ದೇವರಾಜ್ ರೆಡ್ಡಿ ಮತ್ತು ಶ್ರೀ.ದಿವಾಕರ್ ಶಾಸ್ತ್ರಿಯಂತಹವರು. 

ಹಳೇ ಕಾಲ ಹೋಯ್ತು.ಹೆಚ್ಚು ಸಂಪಾದಿಸುವವರಿಗೆ ಲೆವೆಲ್ ಜಾಸ್ತಿ.ದೊಡ್ಡ ಬಂಗಲೆ ದೊಡ್ಡ ಕಾರು ಧಿಮಾಕು ಹೀಗೆಲ್ಲಾ ಇರುತ್ತದೆ.ಬಡವರ ಬಗ್ಗೆ ಕನಿಕರ ಇರುವುದಿಲ್ಲ.ಮನುಷ್ಯತ್ವ  ಖಂಡಿತಾ ಇರೋದಿಲ್ಲ.ಇವೆಲ್ಲಾ ಇಂದಿಗೆ ಅಪ್ರಸ್ತುತ.ಇಂದು ತಿಂಗಳಿಗೆ ಹಲವು ಲಕ್ಷ ಮೀರಿ ದುಡಿಯುವವರು ಅತ್ಯಂತ ಸಾಮಾನ್ಯರಂತೆ ಇರುತ್ತಾರೆ. ದೊಡ್ಡ ಕಾರು ಮನೆ ವಿದೇಶ ಪ್ರಯಾಣ ಅಂತ ಓಡಾಡುತ್ತಿದ್ದರೂ ಗ್ರೌಂಡ್ ಟು ಅರ್ಥ್ ಎನ್ನುವ ಹಾಗೆ ಇರುತ್ತಾರೆ.ಕೆಂಪೇಗೌಡ ರಸ್ತೆಯ ಚಿತ್ರಮಂದಿರಗಳಲ್ಲಿ ನೂಕು ನುಗ್ಗಲಿನಲ್ಲಿ ಸೆಕೆಂಡ್ ಕ್ಲಾಸ್ ಸಿನಿಮಾ ನೋಡಲು ಬಂದವರಂತೆ ಮಲ್ಲೇಶ್ವರಂ ಗ್ರೌಂಡಿನಲ್ಲಿ ಫ್ರೆಂಡ್ಸ್ ಜೊತೆ ಕ್ರಿಕೆಟ್ ಆಡಲು ಬಂದ ಮಧ್ಯಮ ವರ್ಗದ ಬಡಾವಣೆಯ ಹುಡುಗರಂತೆ ಇರ್ತಾರೆ.ರಸ್ತೆ ಬದಿ ಪಾನಿಪುರಿ ತಿಂದು ಸಂಭ್ರಮಿಸುವ ಸಾಮಾನ್ಯರಲ್ಲಿ ಸಾಮಾನ್ಯರಂತೆ ಇರುತ್ತಾರೆ.ದುಡ್ಡೂ ಕಾಸಿನ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ನನಗಿಷ್ಟು ಸಂಬಳ.ನಾನು ಹೀಗೆ ಹಣ ತೊಡಗಿಸುತ್ತೇನೆ.ನನ್ನ ಹೂಡಿಕೆಗಳು ಹೀಗಿವೆ ಅಂತ ಎಲ್ಲೂ ಜಾಗಟೆ ಬಾರಿಸುವುದಿಲ್ಲ.ನಿಮಗೆ ತಿಳಿದಿರಲಿ ಚೆನ್ನಾಗಿ ದುಡಿದು ಸಂಪಾದಿಸುವ ಮಂದಿಯನ್ನು ನೋಡಿದರೆ ಇವರಿಗೆ ಇಷ್ಟೊಂದು ಸಂಬಳ ಬರುತ್ತದಾ ಎಂಬ ಪ್ರಶ್ನೆ ಇತರರಿಗೆ ಬರಬೇಕಷ್ಟೇ.ತುಂಬಿದ ಕೊಡ ತುಳುಕುವುದಿಲ್ಲ ವ್ಯಕ್ತಿತ್ವ ಬಹುತೇಕ ಈ ವರ್ಗದವರದು.ಇಂತಹ ನನ್ನ ಸ್ನೇಹಿತರ ಪೈಕಿ ಇಬ್ಬರು ಶ್ರೀ.ದೇವರಾಜ್ ರೆಡ್ಡಿ ಮತ್ತು ಶ್ರೀ.ದಿವಾಕರ್ ಶಾಸ್ತ್ರಿ.ಸಮಿ - ಸಬಿನ್ಸಾ ಸಮೂಹ ಸಂಸ್ಥೆಗಳ ಕಾರ್ಯನಿರ್ವಹಣೆಯ ಉಪಾಧ್ಯಕ್ಷ ಅಂದರೆ ವೈಸ್ ಪ್ರೆಸಿಡೆಂಟ್ ಹುದ್ದೆಯಲ್ಲಿರುವ ಶ್ರೀ.ದೇವರಾಜ್ ರೆಡ್ಡಿಯವರು ನಾನು ನೆನಪಿನಲ್ಲಿದ್ದೇನಾ ರಮೇಶ್.ನಮ್ಮದೂ ಕೋಲಾರ ನಮ್ಮದೂ ಚಿಂತಾಮಣಿ ಅಂತ ನನ್ನ ಬರಹಗಳಿಗೆ ಸರಳವಾಗಿ ಪ್ರತಿಕ್ರಿಯಿಸಿರುತ್ತಾರೆ.ಹೇಗೆ ತಾನೇ ಮರೆಯಲು ಸಾಧ್ಯ ನಾನೂ ಹಿಂದೆ ಆ ಸಂಸ್ಥೆಯಲ್ಲಿ ಅವರ ಸಹೋದ್ಯೋಗಿಯಾಗಿ ಕೆಲಸ ಮಾಡಿದವನು.ಇನ್ನು ಅವರ ಬಾಲ್ಯದ ಸ್ನೇಹಿತ ಚಿಂತಾಮಣಿ ಮೂಲದ ಮಹಾಲಕ್ಷ್ಮಿ ಬಡಾವಣೆಯ ಸಿಐಸಿಬಿ ಸಂಸ್ಥೆಯಲ್ಲಿ ಉನ್ನತ ಹುದ್ದೆಯಲ್ಲಿರುವ ಶ್ರೀ.ದಿವಾಕರ್ ಶಾಸ್ತ್ರಿಯವರು ನನ್ನ ಕಾಲೇಜು ದಿನಗಳ ಸ್ನೇಹಿತ ಶ್ರೀ.ವಿ ಗೋಪಾಲ್ ಅವರ ಮನೆಯಲ್ಲಿ ಕಳೆದ ಬಾಲ್ಯ‌.ಅವರ ಅಮ್ಮ ನನಗೆ ಅನ್ನಪೂರ್ಣೇಶ್ವರಿಯಾಗಿದ್ದರು ಅಂತಲೋ ರಮೇಶ್ ನೀವು ಇವತ್ತು ಬೆಳಿಗ್ಗೆ ಸದಾಶಿವನಗರದ ಬ್ರಾಹ್ಮಿನ್ಸ್ ತಟ್ಟೆ ಇಡ್ಲಿ ಹೋಟೆಲ್ಲಿಗೆ ಬಂದಿದ್ರಿ ಅಲ್ವಾ ? ನೀವೇ ಅಲ್ವೋ ಡೌಟಾಯಿತು ಅಂತ ಸೌಜನ್ಯ ಮೆರೆಯುತ್ತಾರೆ.ನಾನಾದರೋ ಒಂದು ಹವಾಯಿ ಚಪ್ಪಲಿ ಹಾಕಿಕೊಂಡು ಒಂದು ಬರ್ಮುಡಾ ಯಾವುದೋ ಮಾಸಿದ ಟೀ ಶರ್ಟ್ ತೊಟ್ಟು ತಲೆ ಕೆದರಿಕೊಂಡು ಶೇವಿಂಗ್ ಮಾಡಿಲ್ಲದೆ ಸ್ನಾನ ಮಾಡದೇ ಬೆಳ್ ಬೆಳಿಗ್ಗೆ ಕಾಣಿಸಿಕೊಂಡರೆ ನಾನೇನಾ ಎಂಬ ಸಂದೇಹ ಮೂಡುವುದು ಸಹಜ ! 


ಶ್ರೀ.ದೇವರಾಜ ರೆಡ್ಡಿ ಮತ್ತು ಶ್ರೀ.ದಿವಾಕರ ಶಾಸ್ತ್ರಿಯವರ ತರಹ ಸ್ನೇಹಿತರನ್ನು ನೋಡಿದರೆ ಬಹಳ ಹೆಮ್ಮೆ ಎನಿಸುತ್ತದೆ.ಇಂತಹ ಸ್ನೇಹಿತರ ಬೃಹತ್ ಪಡೆ ವಾರಾಂತ್ಯ ಬಂದರೆ ಸುಮ್ಮನೆ ಒಂದು ಟೀ ಷರ್ಟ್ ತೊಟ್ಟು ಒಂದು ಷಾರ್ಟ್ ಧರಿಸಿ ಬೆಳ್ಳಂ ಬೆಳಿಗ್ಗೆ ಹತ್ತು ಇಪ್ಪತ್ತು ಕಿಲೋ ಮೀಟರ್ ಓಡುವ ಅಭ್ಯಾಸ ಇಂತಹವರಲ್ಲಿ ಇದೆ.ಯಾವುದೋ ಎನ್ ಜಿ ಓ ಜೊತೆ ಸೇರಿಕೊಂಡು ಸಾಕಷ್ಟು ಹಣ ನೀಡಿ ಸಹಾಯ ಸಮಾಜ ಸೇವೆ ಮಾಡುತ್ತಾರೆ.ಡಂಗುರ ಬಾರಿಸುವುದಿಲ್ಲ.ಬಹಳ ಆರೋಗ್ಯವಂತ ನಗು.ಯಾರೇ ಪರಿಚಯದವರು ಸಿಕ್ಕರೂ ಮುಗುಳುನಗೆ ಬೀರಿ ಪುಟ್ಟದಾಗಿ ಮಾತನಾಡಿ ಮುಂದೆ ಸಾಗುತ್ತಾರೆ.ಜಂಭ ಅಹಂಕಾರ ದರ್ಪ ದೌಲತ್ತು ಒಂದೂ ಇರುವುದಿಲ್ಲ.ಅವರು ಸರಿಯಿಲ್ಲ ಇವರು ಸರಿಯಿಲ್ಲ ಅಂತ ಯಾರ ಬಗ್ಗೆಯೂ ಕೆಟ್ಟದ್ದಾಗಿ ಮಾತನಾಡುವುದಿಲ್ಲ. ಇವರಲ್ಲಿರುವ ಕ್ರೀಡಾ ಮನೋಭಾವ ಅನನ್ಯ.ಬೇಕು ಎನಿಸಿದಾಗ ಹೋಗುಮಾ ಹೋಗುಮಾ... ಮಾಡುಮಾ ಮಾಡುಮಾ.... ಎಣ್ಣೇನೂ ನಂದೇ ಊಟಾನೂ ನಂದೇ ಅಂತ ಖುಷಿಯಾಗಿ ಎಲ್ಲರಿಗೂ ಯಾವಾಗ ಬೇಕಾದರೂ ಯಾವ ಪಾರ್ಟಿ ಬೇಕಾದರೂ ಕೊಡಿಸುತ್ತಾರೆ ಆದರೆ ಅವರು ಫಿಟ್ & ಫೈನ್ ಎಂಬ ಆರೋಗ್ಯ ಕಾಳಜಿಯುಳ್ಳವಾಗಿರುತ್ತಾರೆ. ಚಟಗಳಿಗೆ ದಾಸರಾಗುವುದಿಲ್ಲ ! 

ತಾನು ಜ್ಞಾನಿ ಮೇಧಾವಿ ಬುದ್ಧಿವಂತ ಎಂಬಂತೆ ಈ ವರ್ಗ ಬಿಂಬಿಸಿಕೊಳ್ಳುವುದಿಲ್ಲ. ಬದುಕಿನ ಪುಟ್ಟ ಘಟನೆಗಳನ್ನು ಕುತೂಹಲದಿಂದ ಆಸಕ್ತಿಯಿಂದ ತಿಳಿದು ಕೊಳ್ಳುತ್ತಾರೆ. ಯಾರೊಂದಿಗೂ ಘಂಟೆಗಟ್ಟಲೆ ಹರಟುವುದಿಲ್ಲ.ವಾಟ್ಸಪ್ ಫೇಸ್ಬುಕ್ ಅಂತ ಹೆಚ್ಚಾಗಿ ಜೋತು ಬೀಳುವುದಿಲ್ಲ. ಎಷ್ಟೋ ಜನ ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಳ್ಳುವುದೂ ಇಲ್ಲ. ಖಾತೆ ಇದ್ದರೂ ಸಕ್ರಿಯವಾಗಿ ನೋಡುವುದಿಲ್ಲ.ಇವರು ಇತರರನ್ನು ಹುರಿದುಂಬಿಸುತ್ತಾರೆ. ಯಾರಾದರು ಸಣ್ಣ ಸಾಧನೆ ಮಾಡಿದರೂ ಮನಃಪೂರ್ವಕವಾಗಿ ತುಂಬು ಹೃದಯದಿಂದ ಹಾರೈಸುತ್ತಾರೆ. ಐ ಜಸ್ಟ್ ಲವ್ ದಿಸ್ ಎಲೈಟ್ ಕ್ಲಾಸ್.ಇವರಲ್ಲಿರುವ ಒಳ್ಳೆಯ ತನ ಎಲ್ಲರಿಗೂ ಒಳ್ಳೆಯದು ಮಾಡಬೇಕೆಂಬ ಪ್ರಾಮಾಣಿಕ ಮನಸ್ಸು ಬಹಳ ದೊಡ್ಡದು. ನೋಡಿ ಸ್ವಾಮಿ ನಾವಿರೋದು ಹೀಗೆ ಅಂತ ನಗ್ತಾ ನಗ್ತಾ ಸಾಮಾನ್ಯರಾಗಿ ಸರಳರಾಗಿ ಸಂಭ್ರಮ ಸಡಗರಗಳ ಬದುಕನ್ನು ನೆಮ್ಮದಿಯಾಗಿ ಸಾಗಿಸುವ ಮಂದಿ ಈ ವರ್ಗ. ಇದಕ್ಕೆಲ್ಲಾ ಮೂಲ ಕಾರಣ "ಸಂತೃಪ್ತಿ" ಕಂಡ ಬದುಕು.ಇಂತಹವರ ಸಾಲಿನಲ್ಲಿ ಶ್ರೀ.ದೇವರಾಜ ರೆಡ್ಡಿಯವರು ಮತ್ತು ಶ್ರೀ.ದಿವಾಕರ ಶಾಸ್ತ್ರಿಯವರು ಅಗ್ರಗಣ್ಯರು. ಹಾಗಾಗಿ ಅವರನ್ನು ವಿಶೇಷವಾಗಿ ಅಭಿನಂದಿಸುತ್ತೇನೆ. 

ಸರಳವಾಗಿ ನನಗನ್ನಿಸುವುದು.

ನಿಮ್ಮ ಓಟ ನಿಮಗಿರಲಿ.ನಿಮ್ಮ ಓಟದ ಸ್ಪರ್ಧಯಲ್ಲಿ ನೀವು ಓಡಿ ಅಕ್ಕ ಪಕ್ಕದವರನ್ನು.ಮುಂದೆ ಇರುವವರನ್ನು ನೋಡಬೇಡಿ. ಹೀಗೆ ಮೌಲ್ಯವನ್ನು ತಿಳಿಸುವ ಸುಂದರ ವಾಟ್ಸಪ್ ಸಂದೇಶ ಒಂದು ಹರಿದಾಡುತ್ತಿದೆ.ಓದಲು ಅರ್ಥಪೂರ್ಣವಾಗಿದೆ.ವೃತ್ತಿ ಜೀವನ ಶುರು ಮಾಡಿದಾಗ ಮತ್ತು ಹಲವಾರು ವರ್ಷಗಳು ನನಗೆಷ್ಟು ಸಂಬಳ,ನನಗೇನು ಕೆಲಸ.ಅವರಿಗೆಷ್ಟು ಸಂಬಳ. ಅವರಿಗೇನು ಕೆಲಸ.ಅಬ್ಬಾ ಎಷ್ಟೊಂದು ಸಾಧನೆ ಮಾಡಿದ್ದಾರೆ ಅವರು. ಎಷ್ಟೊಂದು ಆಸ್ತಿ ಅಂತಸ್ತು ಹೊಂದಿದ್ದಾರೆ ಅವರು.ನಾನು ಅವರಂತೆ ಆಗಲು ಸಾಧ್ಯವೇ ಇಲ್ಲ."ಬಡವ ಮಡಗಿದಂಗೆ ಇರು" ಎಂಬಂತೆ ಎಲ್ಲ ಕಂಪೇರ್ ಮಾಡಿಕೊಳ್ಳುವುದನ್ನು ಬಿಟ್ಟು ಬಿಟ್ಟೆ.ಕೆಲಸಕ್ಕೆ ಬಾರದ ಕೆಲಸಗಳಲ್ಲಿ ಪೈಪೋಟಿ ನಿಲ್ಲಿಸಿದೆ.ಸಂಘ ಸಂಸ್ಥೆ ಪದಾಧಿಕಾರ ಎಂಬ ಗೀಳು ಬಿಟ್ಟೆ.ಆದರೆ ಇವೆಲ್ಲಾ ಮಾಡಲು ತುಂಬಾ ವರ್ಷಗಳು ಬೇಕಾಯಿತು.ಆದರೂ ನಾನು ಯಾವುದೇ ಸ್ಪರ್ಧೆಯಲ್ಲಿ ಇಲ್ಲ ಯಾರೊಂದಿಗೂ ಸ್ಪರ್ಧೆಯಲ್ಲಿ ಇಲ್ಲ ಎಂಬುದನ್ನು ನಿರ್ಧರಿಸಿದೆ.  ನನ್ನ ಪಾಡಿಗೆ ನಾನು ನಡೆದಿದ್ದು ಅಷ್ಟೇ ! ಮರೆತೇ ಹೋದ ಜೀವನದಲ್ಲಿ ಮುಂದಿದ್ದವರನ್ನು  ಈಗ ಗಮನಿಸಿದಾಗ ಹಲವರನ್ನು ಬಹಳ ಹಿಂದೆಯೇ ಹಿಂದಿಕ್ಕಿರುವುದು ಕಂಡು ಬಂದಿದೆ.ಐ ಯಾಮ್ ನಾಟ್ ಇನ್ ಎನಿ ರೇಸ್! ಅದೇ ಸಮಾಧಾನ.ಇದೇ ಕ್ರೀಡಾ ಮನೋಭಾವ ಇರುವ ಉತ್ತಮ ಮಿತ್ರರಿಂದ ಕಲಿತ ಪಾಠ. 

ಇನ್ನು ಕಾರ್ಪೋರೇಟ್ ಜಗತ್ತಿನ ಮಂದಿಯ ವಿನೂತನ ರನ್ ಹೇಗಿರುತ್ತದೆ.ಈಗಿನ ಫಾರ್ಮ್ಯಾಟ್ ಏನು ಅಂತ ತಿಳಿಸಲು ಪ್ರಯತ್ನಿಸುತ್ತೇನೆ.

"ಗಂಡಿಗೆ ಹೆಣ್ಣೋ ಹೆಣ್ಣಿಗೆ ಗಂಡೋ ಆಕರ್ಷಣೆ"

ಆಕರ್ಷಣೆ ಮತ್ತು ವಿಕರ್ಷಣೆ ಬದುಕಿನ ಎರಡು ಮಜಲುಗಳು.ಗಂಡಸರಿಗೆ ಮಾತ್ರ ಹೆಣ್ಣಿನ ಆಕರ್ಷಣೆ ಸೆಳೆಯುತ್ತದೆ ಎಂದು ಕೊಂಡರೆ ಹೆಂಗಸರಿಗೆ ಗಂಡಿನ ಆಕರ್ಷಣೆ ಸೆಳೆಯುವುದಿಲ್ಲವಾ??? ಗಂಡು ಹೆಣ್ಣು ಎಂದರೆ ಸ್ವಚ್ಛಂದ ಕಾಮದ ವಸ್ತುಗಳಲ್ಲ.ರಸಿಕತೆ ಎಂದರೆ ಲೈಂಗೀಕತೆ ಮಾನದಂಡವಲ್ಲ.ಪ್ರೀತಿ ಪ್ರೇಮ ಪ್ರಣಯ ಇವುಗಳ ಮಾಲೀಕರು ಯಾರು??? ಗಂಡೋ ಹೆಣ್ಣೋ.ಉತ್ತರ ನನಗೆ ತಿಳಿದಿದೆ ಇಬ್ಬರೂ.ಇಬ್ಬರಿಗೂ ಪರಸ್ಪರ ಸೆಳತಗಳು ಸಹಜ.ಕೆಲವು ಅವ್ಯಕ್ತ ಅಷ್ಟೇ.

ಮೀನಾ ಮತ್ತು ಮೋನಿಕಾ ಕಳೆದ ವಾರ ನಡೆದ ಐದು ಕಿಲೋಮೀಟರ್ ದೂರದ ಮ್ಯಾರಥಾನ್ ಸ್ಫರ್ಧೆಯಲ್ಲಿ ಎರಡನೇ ಮತ್ತು ಮೂರನೇ ಬಹುಮಾನ ಪಡೆದ ನನ್ನ ಗೆಳತಿಯರು.ಕ್ರೀಡಾ ಮನೋಭಾವದಿಂದ ಬದುಕನ್ನು ತೆಗೆದುಕೊಳ್ಳುವ ಲವಲವಿಕೆ ನಿಜಕ್ಕೂ ಚೆನ್ನ.ಅವರು ಸ್ನೇಹಿತರನ್ನು ಮುಂದಿನ ವಾರದ ಮ್ಯಾರಥಾನ್ ಓಟಕ್ಕೆ ಬನ್ನಿ ಅನ್ನುತ್ತಿದ್ದರು.ಒಂದು ಕೆಲಸ ಮಾಡಿ ಕಪಲ್ ರನ್ ವಿಭಾಗಕ್ಕೆ ನೊಂದಾಯಿಸಿಕೊಳ್ಳಿ.ಒಂದು ಗಂಡು ಒಂದು ಹೆಣ್ಣು ಜೊತೆ ಜೊತೆಯಾಗಿ ನಡೆದರೆ ಐದು ಕಿಲೋ ಮೀಟರ್ ಕ್ರಮಿಸುವುದು ಗೊತ್ತಾಗುವುದಿಲ್ಲ ಎನ್ನುತ್ತಿದ್ದಂತೆ ಹಲವು ನೊಂದಣಿಗಳಾದವು.

ಹಳೆ ಜಮಾನ ಹೋಯಿತು. ಇಂದಿನ ಪೀಳಿಗೆ ಸಾಕಷ್ಟು ಸ್ವತಂತ್ರವಾಗಿದ್ದು ಬಿಡುತ್ತಾರೆ.ಬೋಧನೆ ಮಾಡಿದವರು ಅವರಿಗೆ ಮನೆ ಮುಂದೆ ಶಂಖ ಊದುವ ದಾಸಯ್ಯನಂತೆ ಕಾಣಿಸಿದರೆ ಆಶ್ಚರ್ಯವಿಲ್ಲ.ವಿಮರ್ಶೆಯ ಪೂರ್ವ ಪಶ್ಚಿಮದಲ್ಲಿ ಮನದ ಅಂತರಗಳು ಮಾತ್ರ ಉತ್ತರ ಧ್ರುವದಿಂ ದಕ್ಷಿಣ ಧ್ರುವಕೂ...ಇದೆಲ್ಲದಕ್ಕಿಂತ ನನಗೆ ಮುಖ್ಯ ಅನ್ನಿಸಿದ್ದು ನಿರ್ಮಲವಾದ ಮನಸ್ಸು.ಬದುಕು ನಿರಂತರ ಕಲಿಕೆ ಯಾವುದೇ ಅಪಘಾತ ಆಘಾತಗಳಿಗೆ ಒಳಗಾಗದೆ ಪ್ರಜ್ಞಾವಂತರಾಗಿ ಸಂತೋಷವಾಗಿ ಬದುಕನ್ನು ನಡೆಸ ಬೇಕಿರುವುದು ನವಜೀವನದ ಹೊಸ ಅವಿಷ್ಕಾರಗಳ ಸರಳ ಮಾರ್ಗ. ಹೋಪ್ ಐ ಯಾಮ್ ಯಂಗ್ ! ನಾನು, ದೇವರಾಜ್ ರೆಡ್ಡಿಯವರು ಮತ್ತು ದಿವಾಕರ್ ಶಾಸ್ತ್ರಿಯವರು ಎಲ್ಲಾ ಹೆಚ್ಚೂ ಕಡಿಮೆ ಒಂದೇ ವಯೋಮಾನದವರು ! ಇವರ ಈ ಭಾವಚಿತ್ರಗಳು ಇಷ್ಟು ಬರೆಯಲು ಪ್ರೇರಣೆ ನೀಡಿತು.ಇಬ್ಬರಿಗೂ ನನ್ನ ವಿಶೇಷ ಅಭಿನಂದನೆಗಳು ಮತ್ತು ಧನ್ಯವಾದಗಳು.

-C.N. RAMESH, MALLESWARA.

+91 98442 95260

Post a Comment

0 Comments

Ad Code

Responsive Advertisement