Ticker

6/recent/ticker-posts

Ad Code

Responsive Advertisement

ಬೆಂಗಳೂರಿನ ವಸತಿ ಸಮುಚ್ಚಯಗಳಲ್ಲಿ ವ್ಯಾಪಕ ಕೋವಿಡ್ ಪ್ರಕರಣ


 ಬೆಂಗಳೂರು ನಗರದಲ್ಲಿ ಒಂದೇ ಕಡೆ ಮೂರಕ್ಕಿಂತ ಹೆಚ್ಚು ಮಂದಿಗೆ ಸೋಂಕು ಕಾಣಿಸಿಕೊಂಡಿದ್ದು ಅಪಾರ್ಟ್‌ಮೆಂಟ್‌ ಸಮುಚ್ಚಯಗಳಲ್ಲೇ ಹೆಚ್ಚು. ಸೋಂಕಿತರಲ್ಲಿ ಕೆಲವರು, ಕೋವಿಡ್‌ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿರುವ ಕೇರಳ ಹಾಗೂ ಮಹಾರಾಷ್ಟ್ರ ರಾಜ್ಯಗಳಿಗೆ ಪ್ರಯಾಣ ಬೆಳೆಸಿದ್ದರು ಎಂದು ಬಿಬಿಎಂಪಿ ಮೂಲಗಳು ತಿಳಿಸಿವೆ. ನಗರದಲ್ಲಿ ಮೂರಕ್ಕಿಂತ ಹೆಚ್ಚು ಕೋವಿಡ್‌ ಪ್ರಕರಣಗಳು ಇರುವ ಒಟ್ಟು 136 ಪ್ರದೇಶಗಳನ್ನು ಕಂಟೈನ್‌ಮೆಂಟ್‌ ವಲಯಗಳೆಂದು ಗುರುತಿಸಲಾಗಿದೆ. ಇವುಗಳಲ್ಲಿ ಶೇ 25ಕ್ಕೂ ಅಧಿಕ ಕಂಟೈನ್ಮೆಂಟ್‌ ವಲಯಗಳು ಅಪಾರ್ಟ್‌ಮೆಂಟ್‌ ಸಮುಚ್ಚಯಗಳಲ್ಲೇ ಇವೆ. 

ಬಿಬಿಎಂಪಿ ಬಿಡುಗಡೆ ಮಾಡಿದ ಅಂಕಿ ಅಂಶಗಳ ಪ್ರಕಾರ ಕೋವಿಡ್‌ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿರುವ 35 ಕಂಟೈನ್‌ಮೆಂಟ್‌ ವಲಯಗಳಲ್ಲಿ 13 ಅಪಾರ್ಟ್‌ಮೆಂಟ್‌ ಸಮುಚ್ಚಯಗಳು. ಇನ್ನುಳಿದ ಕಂಟೈನ್‌ಮೆಂಟ್‌ ವಲಯಗಳು ಬಡಾವಣೆಗಳಲ್ಲಿ, ಸೈನಿಕರ ವಸತಿಗಳಲ್ಲಿವೆ.

ಬೊಮ್ಮನಹಳ್ಳಿ ವಲಯದಲ್ಲಿ ಐದು ಕಡೆ ಅತಿಹೆಚ್ಚು ಪ್ರಕರಣಗಳು ವರದಿಯಾಗಿದ್ದು, ಅವುಗಳಲ್ಲಿ ನಾಲ್ಕು ಅಪಾರ್ಟ್‌ಮೆಂಟ್‌ ಸಮುಚ್ಚಯಗಳು. ಯಲಹಂಕ ವಲಯದಲ್ಲಿ ಅತಿ ಹೆಚ್ಚು ಪ್ರಕರಣಗಳು ವರದಿಯಾಗಿರುವ ನಾಲ್ಕು ಕಂಟೈನ್‌ಮೆಂಟ್‌ ವಲಯಗಳಲ್ಲಿ ಎರಡು ಅಪಾರ್ಟ್‌ಮೆಂಟ್‌ ಸಮುಚ್ಚಯಗಳು ಸೇರಿವೆ. ಮಹದೇವಪುರ ವಲಯದಲ್ಲಿ ಅತಿ ಹೆಚ್ಚು ಪ್ರಕರಣಗಳಿರುವ ಐದು ಕಂಟೈನ್‌ಮೆಂಟ್‌ ವಲಯಗಳಲ್ಲಿ ಎರಡು ಅಪಾರ್ಟ್‌ಮೆಂಟ್‌ ಸಮುಚ್ಚಯಗಳು. ಆರ್‌.ಆರ್‌.ನಗರ ವಲಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೊರೊನಾ ಸೋಂಕು ಇರುವ ಐದು ಕಂಟೈನ್‌ಮೆಂಟ್‌ ವಲಯಗಳಲ್ಲಿ ಒಂದು ಅಪಾರ್ಟ್‌ಮೆಂಟ್‌ ಸಮುಚ್ಚಯ. ಪಶ್ಚಿಮ ವಲಯದಲ್ಲಿ 21 ಪ್ರಕರಣಗಳು ಒಂದೇ ಅಪಾರ್ಟ್‌ಮೆಂಟ್‌ ಸಮುಚ್ಚಯದಲ್ಲಿ ಕಾಣಿಸಿಕೊಂಡಿದೆ. ಇಲ್ಲಿ ಒಟ್ಟು ನಾಲ್ಕು ಕಂಟೈನ್‌ಮೆಂಟ್‌ ವಲಯಗಳಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚು ಇದೆ. 

‘ಅಪಾರ್ಟ್‌ಮೆಂಟ್‌ ಸಮುಚ್ಚಯಗಳಲ್ಲಿ ಕೋವಿಡ್‌ ಕಾಣಿಸಿಕೊಂಡರೆ, ಅಲ್ಲಿನ ಇತರ ನಿವಾಸಿಗಳಿಗೂ ಸೋಂಕು ಪಸರಿಸುವ ಅಪಾಯವಿದೆ. ಏಕೆಂದರೆ ಇಂತಹ ಕಟ್ಟಡಗಳಲ್ಲಿ ಒಂದೇ ಕಡೆ ಹೆಚ್ಚಿನ ಸಂಖ್ಯೆಯಲ್ಲಿ ಜನ ವಾಸಿಸುತ್ತಾರೆ. ಕೆಲವು ಕಟ್ಟಡಗಳಲ್ಲಿ ವಾತಾಯನ ವ್ಯವಸ್ಥೆಯೂ ಸಮರ್ಪಕವಾಗಿರುವುದಿಲ್ಲ’ ಎನ್ನುತ್ತಾರೆ ತಜ್ಞರು.

 

Post a Comment

0 Comments

Ad Code

Responsive Advertisement