Ticker

6/recent/ticker-posts

Ad Code

Responsive Advertisement

ನಾವಿನ್ಯತೆ ಮತ್ತು ಅಭಿವೃದ್ಧಿ ಕೇಂದ್ರಕ್ಕೆ ಉಪ ರಾಷ್ಟ್ರಪತಿ ಚಾಲನೆ, ಕೃಷಿ ಅಭಿವೃದ್ಧಿಗೆ ಪೂರಕವಾದ ಸಂಶೋಧನೆ ಕೈಗೊಳ್ಳಲು ಸಲಹೆ

ಬೆಂಗಳೂರು ಆಗಸ್ಟ್ 16, (ಕರ್ನಾಟಕ ವಾರ್ತೆ): ಭಾರತ ದೇಶವು ಕೃಷಿ ಪ್ರಧಾನ ದೇಶವಾಗಿದೆ. ದೇಶದ ಬೆನ್ನೆಲುಬಾಗಿರುವ ಕೃಷಿ ವಲಯಕ್ಕೆ ಆದ್ಯತೆ ನೀಡುವ ಮೂಲಕ ರೈತರ ಅಭಿವೃದ್ಧಿಗೆ ಪೂರಕವಾದ ಕೃಷಿ ಸಂಶೋಧನೆಯನ್ನು ವಿಜ್ಞಾನಿಗಳು ಕೈಗೊಳ್ಳಬೇಕು ಎಂದು ಭಾರತದ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಹೇಳಿದರು.



ಐದು ದಿನಗಳ ರಾಜ್ಯ ಪ್ರವಾಸ ಕೈಗೊಂಡಿರುವ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಸೋಮವಾರ ಬೆಂಗಳೂರಿನ ಜಕ್ಕೂರಿನಲ್ಲಿರುವ ಜವಾಹರಲಾಲ್ ನೆಹರು ಅನ್ವಯಿಕ ವೈಜ್ಞಾನಿಕ ಸಂಶೋಧನಾ ಸಂಸ್ಥೆಗೆ ಭೇಟಿ ನೀಡಿ, ನಾವಿನ್ಯತೆ ಮತ್ತು ಅಭಿವೃದ್ಧಿ ಕೇಂದ್ರ ನಿರ್ಮಾಣಕ್ಕೆ ಶಿಲನ್ಯಾಸವನ್ನು ನೇರವೇರಿಸಿ ಮಾತನಾಡಿದ ಅವರು ಇಂದು ಸಂಶೋಧಕರೊಂದಿಗೆ ಸಂವಹನ ನಡೆಸುತ್ತಿರುವುದು ನನಗೆ ತುಂಬಾ ಸಂತೋಷವನ್ನು ನೀಡುತ್ತದೆ ಎಂದು ಹೇಳಿದರು.

 ಮೊದಲಿಗೆ ಕನ್ನಡ ಭಾಷೆಯಲ್ಲಿ ಪ್ರಾರಂಭಿಕ ನುಡಿಗಳನ್ನಾಡಿದ ಮಾನ್ಯ ಉಪರಾಷ್ಟ್ರಪತಿಗಳು, ತನ್ನದೇ ಗುರುತರ ಕೆಲಸಗಳ ಮೂಲಕ ಜವಾಹರಲಾಲ್ ನೆಹರು ಸೆಂಟರ್ ಫಾರ್ ಅಡ್ವಾನ್ಸ್ಡ್ ಸೈಂಟಿಫಿಕ್ ರಿಸರ್ಚ್ ಸೆಂಟರ್ ಜಾಗತಿಕವಾಗಿ ಗುರುತಿಸಿಕೊಂಡಿದೆ. ಈ ಸಂಸ್ಥೆಯು  300 ಪೇಟೆಂಟ್ಗಳನ್ನು ತನ್ನದಾಗಿಸಿಕೊಂಡಿದೆಯಲ್ಲದೇ ಗಮನಾರ್ಹ ವೈಜ್ಞಾನಿಕ ಸಂಶೋಧನೆಗಳಿಂದ ಹೆಸರು ಮಾಡಿದೆ. ಕೃಷಿ ಕ್ಷೇತ್ರಕ್ಕೂ ಸಂಸ್ಥೆಯ ಕೊಡುಗೆ ಅಪಾರವಾಗಿದೆ ಎಂದ ಅವರು, ಜವಾಹರಲಾಲ್ ನೆಹರು ಸೆಂಟರ್ ಫಾರ್ ಅಡ್ವಾನ್ಸ್ಡ್ ಸೈಂಟಿಫಿಕ್ ರಿಸರ್ಚ್ ಸೆಂಟರ್ ನ ಸಾಧನೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಭಾರತದ ಕೃಷಿ ವಿಶ್ವಾದ್ಯಂತ ಹೆಸರುವಾಸಿ, ಅಂತಹ ಕೃಷಿ ವಲಯವನ್ನು ಅಭಿವೃದ್ಧಿ ಪಡಿಸುವುದು ಎಲ್ಲರ ಜವಾಬ್ದಾರಿಯಾಗಿರುತ್ತದೆ. ಕೃಷಿಯಲ್ಲಿ ವಿವಿಧ ಸಂಶೋಧನೆಗಳನ್ನು ನಡೆಸಿ ರೈತರಿಗೆ ನೆರವಾಗಬೇಕು. ಕೃಷಿ ಆಧಾರಿತ ತಂತ್ರಜ್ಞಾನದ ಅಭಿವೃದ್ಧಿ, ಯುವಪೀಳಿಗೆಗೆ ವೈಜ್ಞಾನಿಕ ಮನೋಭಾವ ಬಿತ್ತುವ ಜೊತೆಗೆ ಸಮಾಜದ ಒಳಿತಿಗಾಗಿ ವೈಜ್ಞಾನಿಕ ಸಂಶೋಧನೆಗಳನ್ನು ನಡೆಸಬೇಕು ಎಂದು ಸಲಹೆ ನೀಡಿದರು.

ಬೆಂಗಳೂರು ಅನೇಕ ಕೆರೆ ಕುಂಟೆಗಳ ತಾಣವಾಗಿದ್ದು, ಸರ್ಕಾರ ಕೆರೆಗಳ ಶುಚಿತ್ವ ಮತ್ತು ಅಭಿವೃದ್ಧಿ ಕಾರ್ಯವನ್ನು ಕೈಗೊಳ್ಳಬೇಕು ಎಂದ ಅವರು, ಭಾರತದ ಅಭಿವೃದ್ಧಿ ಭವಿಷ್ಯದ ಪೀಳಿಗೆಯ ಮೇಲಿದೆ. ಕಠಿಣ ಪರಿಶ್ರಮ ಹಾಗೂ ಶಿಸ್ತಿನಿಂದ ಏನ್ನಾದರೂ ಸಾಧನೆ ಮಾಡಬಹುದು ಎಂಬುದನ್ನು ಅರಿತು ಯುವಪೀಳಿಗೆ ಮುನ್ನಡೆಯಬೇಕು ಎಂದು ಕಿವಿಮಾತು ಹೇಳಿದರು.

ಗೌರವಾನ್ವಿತ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ ಅವರು ಮಾತನಾಡಿ, ಕರ್ನಾಟಕ ಅನೇಕ ವಿಚಾರಗಳಲ್ಲಿ ದೇಶಕ್ಕೆ ದೊಡ್ಡ ಕೊಡುಗೆಯನ್ನು ನೀಡಿದೆ, ಕರ್ನಾಟಕ ರಾಜ್ಯವೂ ಪ್ರಗತಿಶೀಲ, ತಂತ್ರಜ್ಞಾನ ಹಾಗೂ ಪವಿತ್ರತೆಯ ನೆಲೆಯಾಗಿರುವುದರ ಜೊತೆಗೆ ಸಮಾನತೆ ಸಾರಿದ ಬಸವಣ್ಣ, ಸಾಧು ಸಂತರು ಸೇರಿದಂತೆ ಭಾರತ ರತ್ನ ಸರ್ ಎಂ ವಿಶ್ವೇಶ್ವರಯ್ಯ ಅವರು ಜನಿಸಿದಂತಹ ತಾಯ್ನಾಡಾಗಿದೆ. ಈ ನಮ್ಮ ಧೀನ ಮಹನೀಯರು ಕಟ್ಟಿದಂತಹ ಕನಸನ್ನು ನನಸು ಮಾಡಲು ಮುಂದಾಗಿರುವ ಯುವ ವಿಜ್ಞಾನಿಗಳಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು.

ಸಮಾರಂಭದಲ್ಲಿ ಭಾರತ ರತ್ನ ಸಿ ಎನ್ ಆರ್ ರಾವ್, ಸನ್ಮಾನ್ಯ ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಾಯಿ, ಜವಾಹರಲಾಲ್ ನೆಹರು ಅನ್ವಯಿಕ ವೈಜ್ಞಾನಿಕ ಸಂಶೋಧನ ಸಂಸ್ಥೆಯ ಕುಲಪತಿಗಳಾದ ಜಿ ಯು ಕುಲಕರ್ಣಿ ಸೇರಿದಂತೆ ಮುಂತಾದ ಗಣ್ಯರು ಉಪಸ್ಥಿತರಿದ್ದರು.


Post a Comment

0 Comments

Ad Code

Responsive Advertisement