ಬೆಂಗಳೂರು, ಆಗಸ್ಟ್ 16 (ಕರ್ನಾಟಕ ವಾರ್ತೆ): ಜಪಾನ್ ದೇಶದ ಟೋಕಿಯೋ ನಗರದಲ್ಲಿ ಪ್ಯಾರಾ ಒಲಂಪಿಕ್ಸ್-2020 ಕ್ರೀಡಾಕೂಟವು 2021 ರ ಆಗಸ್ಟ್ 24 ರಿಂದ ಸೆಪ್ಟೆಂಬರ್ 5 ರವರೆಗೆ ನಡೆಯಲಿದೆ. ಈ ಕ್ರೀಡಾಕೂಟದಲ್ಲಿ ಭಾರತ ದೇಶದಿಂದ 54 ಕ್ರೀಡಾಪಟುಗಳು 09 ವಿವಿಧ ಕ್ರೀಡೆಗಳಲ್ಲಿ ಭಾಗವಹಿಸುತ್ತಿದ್ದಾರೆ. ಎಲ್ಲಾ ಕ್ರೀಡಾಪಟುಗಳು ಉತ್ತಮ ಸಾಧನೆ ತೋರಿ ಪದಕ ಗೆದ್ದು, ಭಾರತ ದೇಶದ ಕೀರ್ತಿ ಪತಾಕೆಯನ್ನು ಬಾನೆತ್ತರದಲ್ಲಿ ಹಾರಿಸಲಿ ಎಂದು ಯುವ ಸಬಲೀಕರಣ ಮತ್ತು ಕ್ರೀಡೆ ಹಾಗೂ ರೇಷ್ಮೆ ಸಚಿವರಾದ ಡಾ.ಕೆ.ಸಿ. ನಾರಾಯಣಗೌಡ ರವರು ಹಾರೈಸಿದರು.
ಕರ್ನಾಟಕ ರಾಜ್ಯದಿಂದ ಇಬ್ಬರು ಕ್ರೀಡಾಪಟುಗಳಾದ ಕು.ಶಕೀನಾ ಖಾತುನ್- ಪ್ಯಾರಾ ಪವರ್ ಲಿಪ್ಟಿಂಗ್, ಕು.ನಿರಂಜನ್ ಮುಕುಂದನ್-ಪ್ಯಾರಾ ಈಜಿನಲ್ಲಿ ಟೋಕಿಯೋ ಪ್ಯಾರಾ ಒಲಂಪಿಕ್ಸ್‍ಗೆ ಅರ್ಹತೆ ಪಡೆದಿರುತ್ತಾರೆ.
ರಾಜ್ಯಕ್ಕೆ ಹೆಮ್ಮೆ ತಂದಿರುವ ಈ ಇಬ್ಬರು ಕ್ರೀಡಾಪಟುಗಳಿಗೆ ತಲಾ ರೂ.10.00 ಲಕ್ಷಗಳ ನಗದು ಪುರಸ್ಕಾರ ನೀಡಿ ಪ್ರೋತ್ಸಾಹಿಸಿದರು. ಕ್ರೀಡಾಪಟುಗಳಿಗೆ ಟೋಕಿಯೋ ಪ್ಯಾರಾ ಒಲಂಪಿಕ್ಸ್‍ನಲ್ಲಿ ಉತ್ತಮ ಸಾಧನೆ ಮಾಡಿ ರಾಜ್ಯಕ್ಕೆ ಕೀರ್ತಿ ತರಲೆಂದು ಶುಭ ಹಾರೈಸಿದರು. ಅಲ್ಲದೆ ಮುಂದಿನ ದಿನಗಳಲ್ಲಿ ಕ್ರೀಡಾ ಸಾಧನೆ ಮಾಡಲು ಪ್ರತಿಭಾವಂತ ಕ್ರೀಡಾಪಟುಗಳಿಗೆ ಎಲ್ಲಾ ರೀತಿಯ ನೆರವು ನೀಡಲು ಸರ್ಕಾರವು ಸದಾ ಸಿದ್ದವಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳಾದ ಡಾ.ಶಾಲಿನಿ ರಜನೀಶ್ ಭಾ.ಆ.ಸೇ, ಪ್ಯಾರಾ ಒಲಂಪಿಕ್ ಅಸೋಸಿಯೇಷನ್‍ನ ಅಧ್ಯಕ್ಷರು ಹಾಗೂ ಇತರೆ ಸದಸ್ಯರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಆಯುಕ್ತರಾದ ವೆಂಕಟೇಶ್‍ಕುಮಾರ್ ಆರ್, ಭಾ.ಆ.ಸೇ., ರಾಜ್ಯ ಒಲಂಪಿಕ್ಸ್ ಅಸೋಸಿಯೇಷನ್ ಅಧ್ಯಕ್ಷ ಗೋವಿದರಾಜು, ಮತ್ತು ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

0 Comments