ಬಳ್ಳಾರಿ ಆ 22.ಎಐಡಿವೈಒ ಮತ್ತು ಅಖಿಲ ಭಾರತ ನಿರುದ್ಯೋಗಿ ಯುವಜನ ಹೋರಾಟ ಸಮಿತಿ ವತಿಯಿಂದ ಕೆ.ಪಿ.ಎಸ್.ಸಿ ಸ್ವಚ್ಛಗೊಳಿಸಿ- ಉದ್ಯೋಗಾಕಾಂಕ್ಷಿಗಳಿಗೆ ನ್ಯಾಯ ಒದಗಿಸಿ!! ವಿಷಯದ ಕುರಿತು ಇಂದು ವೆಬಿನಾರ್‌ಅನ್ನು ಸಂಘಟಿಸಲಾಗಿತ್ತು.
ಭಾಷಣಕಾರರಾಗಿ ಮಾತನಾಡಿದ ಸುಪ್ರೀಮ್ ಕೋರ್ಟ್ ನಿವೃತ್ತ ನ್ಯಾಯಾಧೀಶ ಮತ್ತು ನಿವೃತ್ತ ಲೋಕಾಯುಕ್ತ ಜಸ್ಟಿಸ್ ಎನ್. ಸಂತೋಷ್ ಹೆಗ್ಡೆ ಯವರು, “ಇಂದು ಅಧಿಕಾರದಲ್ಲಿರುವವರಿಗೆ ತಪ್ಪು ಮಾಡುವುದೇನೂ ತಪ್ಪಲ್ಲ ಎಂಬ ಭಾವನೆಯಿದೆ. ಅವರಲ್ಲಿನ ಸ್ವಾರ್ಥ ಮತ್ತು ದುರಾಸೆಗಳಿಂದಾಗಿ ಭ್ರಷ್ಟಾಚಾರ ಲಂಚಗುಳಿತನ ಇಂದು ಈ ಹಂತ ಮುಟ್ಟಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.ಮುಂದುವರೆದು “ಈಗಿನ ಕೆ.ಪಿ.ಎಸ್.ಸಿ ಅಧ್ಯಕ್ಷರ ನೇಮಕವು ಮೇಲ್ನೋಟಕ್ಕೆ ಕಾನೂನುಬಾಹಿರವಾಗಿದೆ.
ಆದರೆ ಇತ್ತೀಚಿನ ದಿನಗಳಲ್ಲಿ ಇಂತಹ ಉಲ್ಲಂಘನೆಗಳು ಸಾಮಾನ್ಯವಾಗಿಬಿಟ್ಟಿವೆ. ಜೈಲಿಗೆ ಹೋಗಿ ಜಾಮೀನು ಕೊಟ್ಟು ಬಿಡುಗಡೆಗೊಂಡವರಿಗೆ ಜೈಕಾರ ಹಾಕುವ ಜನ ನಮ್ಮಲ್ಲಿದ್ದಾರೆ. ಅಪರಾಧ ಮಾಡಿದವರಿಗೆ ಶಿಕ್ಷೆಯ ಅಂತಿಮ ತೀರ್ಪು ಹೊರಬೀಳಲು ಐವತ್ತು ವರ್ಷಗಳೇ ಆಗುತ್ತಿವೆ. ಶಿಕ್ಷೆಯ ಭಯವಿಲ್ಲದ ಭ್ರಷ್ಟರು ಅವ್ಯಾಹತವಾಗಿ ಹಗರಣಗಳನ್ನು ಮಾಡುತ್ತಿದ್ದಾರೆ. ದಿನದಿಂದ ದಿನಕ್ಕೆ ಹಗರಣಗಳ ಮೊತ್ತ ಏರಿಕೆಯಾಗುತ್ತಿದೆ. 1954ರಲ್ಲಿ 52 ಲಕ್ಷ ರೂಪಾಯಿಗಳ ಜೀಪು ಹಗರಣ ನಡೆದರೆ, 1984ರ ಬೊಪೋರ್ಸ್ ಹಗರಣದಲ್ಲಿ ದೇಶಕ್ಕೆ 64 ಕೋಟಿ ರೂ.ಗಳ ನಷ್ಟವಾಗಿತ್ತು. 2010ರ ಕಲ್ಲಿದ್ದಲು ಹಗರಣದಲ್ಲಿ ಅದು 1,88,000 ಕೋಟಿ ರೂ. ಆಯಿತು! ಆಡಳಿತದಲ್ಲಿರುವವರ ಸ್ವಾರ್ಥ-ದುರಾಸೆಗಳು ಇವುಗಳಿಗೆಲ್ಲಾ ಕಾರಣ” ಎಂದರು.
“ಮರವೇ ದುರಾಸೆಯದಾದರೆ ಅದರ ಫಲವೂ ದುರಾಸೆಯಿಂದಲೇ ಕೂಡಿರುತ್ತದೆ. ಅಂತೆಯೇ ಲಂಚ ಕೊಟ್ಟು ನೌಕರಿ ಪಡೆಯುವ ನೌಕರ ತಾನೂ ಲಂಚಕೋರನಾಗುತ್ತಾನೆ. ಆದ್ದರಿಂದ ಹೇಗಾದರೂ ಮಾಡಿ ಉದ್ಯೋಗ ಪಡೆಯಬೇಕೆಂಬ ಹಂಬಲದಲ್ಲಿ ಯಾರೂ ಸಹ ಲಂಚ ಕೊಟ್ಟು ನೌಕರಿ ಪಡೆಯಬೇಡಿ, ಅದು ನಿಮ್ಮನ್ನೂ ಭ್ರಷ್ಟರನ್ನಾಗಿಸುತ್ತದೆ. ಅರ್ಹತೆಗನುಸಾರವಾಗಿ ಉದ್ಯೋಗ ಪಡೆಯಲು ಹೋರಾಟ ಬೆಳೆಸಿ ಉದ್ಯೋಗ ಪಡೆಯಿರಿ. ಆ ಹೋರಾಟ ಮೌಲ್ಯಾಧಾರಿತವಾಗಿರಬೇಕು. ಅಂತಹ ಹೋರಾಟ ಮಾತ್ರ ನೈತಿಕವಾಗಿರುತ್ತದೆ ಮತ್ತು ಗೆಲ್ಲುತ್ತದೆ. ಈ ದಿಸೆಯಲ್ಲಿ ಎಐಡಿವೈಓ ಮತ್ತು ಎಐಯುವೈಎಸ್‌ಸಿ ನಡೆಸುತ್ತಿರುವ ಹೋರಾಟಗಳನ್ನು ನಾನು ಗಮನಿಸುತ್ತಿದ್ದೇನೆ. ಅವು ನ್ಯಾಯಸಮ್ಮತವಾಗಿವೆ. ಇಂತಹ ಹೋರಾಟಗಳಿಗೆ ಎಂದಿಗೂ ನನ್ನ ಬೆಂಬಲವಿರುತ್ತದೆೆ” ಎಂದರು.ಮತ್ತೋರ್ವ ಭಾಷಣಕಾರರಾಗಿ ಮಾತನಾಡಿದ ಎಐಡಿವೈಒ ಅಖಿಲ ಭಾರತ ಅಧ್ಯಕ್ಷರಾದ ರಾಮಾಂಜನಪ್ಪ ಆಲ್ದಳ್ಳಿಯವರು “ಸಮಾಜದಲ್ಲಿನ ಭ್ರಷ್ಟಾಚಾರವನ್ನು ಸ್ವಚ್ಛಗೊಳಿಸಲು ಇಂದಿನ ಯುವಸಮುದಾಯ ಮುಂದಾಗಬೇಕು. ಆಗ ಮಾತ್ರ ಉದ್ಯೋಗಾಕಾಂಕ್ಷಿಗಳಿಗೆ ನ್ಯಾಯ ಸಿಗಲು ಸಾಧ್ಯ” ಎಂದರು.ಮುAದುವರೆದು “ನಮ್ಮ ದೇಶದಲ್ಲಿ ಸುಮಾರು 75 ಕೋಟಿ ಯುವಜನರಿದ್ದಾರೆ. ಒಟ್ಟು ಜನಸಂಖ್ಯೆಯಲ್ಲಿ ಶೇಕಡಾ 70ರಷ್ಟು ಜನ 15ರಿಂದ 59ರ ವಯೋಮಾನದಲ್ಲಿದ್ದಾರೆ. ದುಡಿಯಲು ಸಮರ್ಥವಾದ ಹೇರಳವಾದ ಮಾನವ ಸಂಪನ್ಮೂಲ ನಮ್ಮಲ್ಲಿದೆ. ಆದರೆ ಅದನ್ನು ಸರಿಯಾಗಿ ಬಳಸಿಕೊಳ್ಳುವ ಇರಾದೆ ನಮ್ಮ ಆಳ್ವಿಕರಿಗಿಲ್ಲ. ಅವರ ಪೊಳ್ಳು ಭರವಸೆಗಳನ್ನು ನಂಬಿ ಕೂತರೆ ನಮ್ಮ ಯುವಕರಿಗೆ ಉದ್ಯೋಗ ಸಿಗುವುದಿಲ್ಲ. ಅವರು ಉದ್ಯೋಗಕ್ಕಾಗಿ ಸಮರಶೀಲ ಹೋರಾಟ ಕಟ್ಟುವುದು ಇಂದಿನ ಅವಶ್ಯಕತೆಯಾಗಿದೆ. ಏಕೆಂದರೆ ಅರ್ಹರನ್ನು ಉದ್ಯೋಗಕ್ಕೆ ಆಯ್ಕೆ ಮಾಡಬೇಕಾದ ಕೆ.ಪಿ.ಎಸ್.ಸಿ ಯೇ ಇಂದು ಭ್ರಷ್ಟಾಚಾರದಲ್ಲಿ ಮುಳುಗಿರುವುದು ಇಂದು ಜಗಜ್ಜಾಹೀರಾಗಿದೆ. ಸರ್ಕಾರದ ಮುಖ್ಯಸ್ಥರೇ ಇಂದು ತಮ್ಮ ದಲ್ಲಾಳಿಗಳನ್ನು ಕೆ.ಪಿ.ಎಸ್.ಸಿಯ ಸದಸ್ಯರಾಗಿ ಮತ್ತು ಅಧ್ಯಕ್ಷರಾಗಿ ನೇಮಕ ಮಾಡುತ್ತಿದ್ದಾರೆ. ತನ್ಮೂಲಕ ಉದ್ಯೋಗಾಕಾಂಕ್ಷಿಗಳಿAದ ಹಣ ದೋಚುವ ದಂಧೆ ನಡೆಸುತ್ತಿದ್ದಾರೆ.”
“ಸರ್ಕಾರಗಳು ಉದ್ಯೋಗ ಸೃಷ್ಟಿಗಾಗಿ ತಮ್ಮ ಬಜೆಟ್‌ನಲ್ಲಿ ಯಾವುದೇ ಅನುದಾನ ಮೀಸಲಿಡುತ್ತಿಲ್ಲ. ಕೈಗಾರಿಕೀಕರಣದ ಹೆಸರಿನಲ್ಲಿ ರೈತರಿಂದ ಸಾವಿರಾರು ಎಕರೆ ಭೂಮಿಯನ್ನು ವಶಪಡಿಸಿಕೊಳ್ಳಲಾಗಿದೆ. ಆದರೆ ಹೊಸ ಕೈಗಾರಿಕೆಗಳೂ ಬಂದಿಲ್ಲ. ಉದ್ಯೋಗಗಳೂ ಸೃಷ್ಟಿಯಾಗಿಲ್ಲ. ಇವನ್ನು ಪ್ರಶ್ನಿಸಿ ನಾವು ಹೋರಾಟ ಬೆಳೆಸಬೇಕು. ಹೋರಾಟದ ಮೂಲಕವೇ ಹೊಸ ಮೌಲ್ಯಗಳೂ ಹುಟುತ್ತವೆ. ಕೇವಲ ತಮ್ಮ ಸ್ವಾರ್ಥಕ್ಕಲ್ಲದೇ ನ್ಯಾಯಕ್ಕಾಗಿ ಹೋರಾಡುವ ಹಾದಿಯಲ್ಲಿ ಉನ್ನತ ಮೌಲ್ಯಗಳನ್ನು ರೂಢಿಸಿಕೊಳ್ಳಲು ಸಾಧ್ಯ. ಈಗಾಗಲೇ ಭ್ರಷ್ಟರಾದವರಿಗೆ ಉಪದೇಶ ನೀಡಿ ಅವರಿಂದ ಮೌಲ್ಯಗಳ ನಿರೀಕ್ಷೆ ಮಾಡುವುದು ವ್ಯರ್ಥ. ಹೊಸ ಉನ್ನತ ಮೌಲ್ಯಗಳು ಹೊಸ ಪೀಳಿಗೆಯ ಜನರಿಂದ ಬರಬೇಕು. ಅವರೇ ಸಮಾಜದ ಭವಿಷ್ಯಕ್ಕೆ ಆಶಾಕಿರಣ. ಆದ್ದರಿಂದ ಇಂದಿನ ಯುಕರಲ್ಲಿ ಕೆಲವರಾದರೂ ಈ ಜವಾಬ್ದಾರಿಯನ್ನು ಹೊರಲು ಮುಂದೆ ಬರಬೇಕು. ಇರುವ ಯುವಜನರಲ್ಲಿ ಶೇಕಡಾ 10ರಷ್ಟು ಮಂದಿ ತಮ್ಮ ವೈಯಕ್ತಿಕ ಬದುಕನ್ನು ಪಕ್ಕಕ್ಕಿಟ್ಟು ಹೋರಾಟದ ಹೊಣೆ ಹೊತ್ತರೂ ಸಾಕು. ಈ ಭ್ರಷ್ಟ ವ್ಯವಸ್ಥೆಯನ್ನು ಕಿತ್ತೊಗೆದು ಸಮಾಜದಲ್ಲಿ ಕ್ರಾಂತಿಕಾರಕ ಬದಲಾವಣೆಯನ್ನು ತರಬಹುದು.”“ಅಜೀಂ ಪ್ರೇಮ್‌ಜಿ ಫೌಂಡೇಷನ್‌ನ ಅಧ್ಯಯನದ ವರದಿಯ ಪ್ರಕಾರ ಕೇವಲ 54,000 ಕೋಟಿ ರೂ.ಗಳನ್ನು ಖರ್ಚು ಮಾಡಿದರೆ ದೇಶದ ಎಲ್ಲ ನಗರಗಳಲ್ಲಿರುವ ನಿರುದ್ಯೋಗಿಗಳಿಗೆ ಮಾಸಿಕ 15,000ರೂ. ವೇತನದೊಂದಿಗೆ 8 ತಿಂಗಳು ಉದ್ಯೋಗ ಕೊಡಬಹುದು. ಹಾಗೆಯೇ 1 ಲಕ್ಷ ಕೋಟಿ ರೂ. ಖರ್ಚು ಮಾಡಿದರೆ ಗ್ರಾಮೀಣ ಯುವಜನರಿಗೆ ವರ್ಷಪೂರ್ತಿ ಕೆಲಸ ಕೊಡಬಹುದು. ಆದರೆ ಸರ್ಕಾರ ಇದನ್ನು ಮಾಡುತ್ತಿಲ್ಲ. ಕೇವಲ ಇಂಧನದ ಮೇಲಿನ ತೆರಿಗೆಯಿಂದಲೇ ವರ್ಷಕ್ಕೆ 3,36,000 ಕೋಟಿ ರೂ. ಆದಾಯ ಸರ್ಕಾರಕ್ಕೆ ಸಿಗುತ್ತಿದೆ. ಅದರಲ್ಲಿ ಅರ್ಧದಷ್ಟು ಖರ್ಚುಮಾಡಿದರೂ ಎಲ್ಲ ನಿರುದ್ಯೋಗಿಗಳಿಗೆ ಉದ್ಯೋಗ ಕೊಡಬಹುದು. ಆದರೆ ಸರ್ಕಾರಗಳು ದೇಶದ ಸಂಪತ್ತನ್ನು ಲೂಟಿಹೊಡೆಯುತ್ತಿರುವ ಕೆಲವೇ ಬಂಡವಾಳಗಾರರ ಸೇವೆಗೆ ನಿಂತಿವೆ. ನಮ್ಮ ಹೋರಾಟದ ಮೂಲಕ ಸರ್ಕಾರಗಳನ್ನು ಎಚ್ಚರಿಸಬೇಕಿದೆ.”
“ಇಂದು ಹೋರಾಟಗಳು ಅಲ್ಲಲ್ಲೇ ಸ್ಫೋಟಗೊಳ್ಳುತ್ತಿವೆ. ಇತ್ತೀಚೆಗೆ ಮಧ್ಯಪ್ರದೇಶದಲ್ಲಿ ಪೊಲೀಸರ ದಮನಕ್ಕೂ ಹೆದರದೇ ಮುನ್ನುಗ್ಗುತ್ತಿರುವ ಯುವಜನ ಹೋರಾಟ, ಕೇರಳದ ರ‍್ಯಾಂಕ್ ಹೋಲ್ರ‍್ಸ್ ಅಸೋಸಿಯೇಷನ್‌ನ ಹೋರಾಟ, ಪಶ್ಚಿಮ ಬಂಗಾಳದ ನಿರುದ್ಯೋಗಿ ಯುವಜನರ ಹೋರಾಟ ಹೀಗೆ ಹಲವು ಹೋರಾಟಗಳು ನಡೆಯುತ್ತಿವೆ. ನಮ್ಮ ದೇಶದಲ್ಲಿ ಈ ಹಿಂದೆಯೂ 1975ರ ಜೆ.ಪಿ. ಚಳುವಳಿ, 2011ರ ಅಣ್ಣಾ ಹಜಾರೆ ಹೋರಾಟ ಸೇರಿದಂತೆ ಅನೇಕ ಹೋರಾಟಗಳು ನಡೆದಿವೆ. ಆದರೆ ಅಂತಿಮ ಗುರಿ ತಲುಪಲು ಒಂದು ವೈಜ್ಞಾನಿಕವಾದ ವೈಚಾರಿಕತೆಯ ಆಧಾರದಲ್ಲಿ ಇಡೀ ದೇಶವ್ಯಾಪಿ ಒಂದೇ ಗುರಿಯತ್ತ ಮುನ್ನಡೆಯುವ ಹೋರಾಟ ಇಂದು ಅಗತ್ಯವಿದೆ. ಅಂತಹ ಸಮರಶೀಲ ಹೋರಾಟಕ್ಕೆ ಕರ್ನಾಟಕದ ಯುವಜನತೆ ಮುಂದಾಗಲಿ. ನಮ್ಮ ಸಂಘಟನೆಯ ಅಖಿಲ ಭಾರತ ಸಮಿತಿಯು ಎಂದಿಗೂ ಅಂತಹ ಹೋರಾಟದ ಜೊತೆಗಿರುತ್ತದೆ” ಎಂದರು.ಅಧ್ಯಕ್ಷತೆ ವಹಿಸಿ ಮಾತನಾಡಿದ ಎಐಡಿವೈಓ ರಾಜ್ಯಾಧ್ಯಕ್ಷೆ ಎಂ.ಉಮಾದೇವಿ ಅವರು “ಕೋವಿಡ್ ನಂತರದ ಅವಧಿಯಲ್ಲಂತೂ ನಿರುದ್ಯೋಗ ಭೀಕರ ಸ್ವರೂಪ ತಾಳಿದೆ. ಯುವಕರು ಹತಾಶೆಗೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. 3ನೇ ಅಲೆಗೆ ಸನ್ನದ್ಧರಾಗಿ ಎಂದು ಹೇಳುವ ಸರ್ಕಾರ ಅದರ ನಿರ್ವಹಣೆಗೆ ಆರೋಗ್ಯ ಇಲಾಖೆಯಲ್ಲಿ ಅವಶ್ಯಕವಿರುವ ಸಿಬ್ಬಂದಿಯನ್ನೂ ನೇಮಕ ಮಾಡುತ್ತಿಲ್ಲ. ನಾವು ಯುವಜನರು ಸುಮ್ಮನೇ ಸರ್ಕಾರಗಳ ಮೇಲೆ ಭರವಸೆಯಿಟ್ಟು ಕೂತರೆ ನಮಗೆ ಉದ್ಯೋಗ ಲಭಿಸುವುದಿಲ್ಲ. ಉದ್ಯೋಗ ನಮ್ಮ ಹಕ್ಕು. ಅದನ್ನು ಪಡೆಯಲು ಮೌಲ್ಯಾಧಾರಿತ ಸಮರಶೀಲ ಹೋರಾಟಕ್ಕೆ ಮುನ್ನುಗ್ಗೋಣ” ಎಂದರು.ಪ್ರಾಸ್ತಾವಿಕವಾಗಿ ಮಾತನಾಡಿದ ನಿರುದ್ಯೋಗಿ ಯುವಜನ ಹೋರಾಟ ಸಮಿತಿಯ ರಾಜ್ಯಾಧ್ಯಕ್ಷರಾದ ಶರಣಪ್ಪ ಉದ್ಭಾಳ್ ಅವರು “ಅರ್ಹರಿಗೆ ಉದ್ಯೋಗ ಕೊಡಬೇಕಾದ ಕೆ.ಪಿ.ಎಸ್.ಸಿ ಅಧ್ಯಕ್ಷರೇ ಅನರ್ಹರಾದರೆ ಇನ್ನು ಉದ್ಯೋಗಾಕಾಂಕ್ಷಿಗಳಿಗೆ ಎಲ್ಲಿಂದ ತಾನೇ ಭರವಸೆ ಮೂಡಲು ಸಾಧ್ಯ. ಆದ್ದರಿಂದ ಭ್ರಷ್ಟಾಚಾರದಿಂದ ತುಂಬಿರುವ ಕೆ.ಪಿ.ಎಸ್.ಸಿಯನ್ನು ಸ್ವಚ್ಛಗೊಳಿಸಿ ಮತ್ತು ಉದ್ಯೋಗಾಕಾಂಕ್ಷಿಗಳಿಗೆ ನ್ಯಾಯ ಒದಗಿಸಿ” ಎಂದು ಆಗ್ರಹಿಸಿದರು.ನಿರುದ್ಯೋಗಿ ಯುವಜನ ಹೋರಾಟ ಸಮಿತಿಯ ರಾಜ್ಯ ಕಾರ್ಯದರ್ಶಿ ಸಿದ್ಧಲಿಂಗ ಬಾಗೇವಾಡಿ ಕಾರ್ಯಕ್ರಮ ನಡೆಸಿಕೊಟ್ಟರು. ರಾಜ್ಯದಾದ್ಯಂತ ಯುವಜರು ಈ ವೆಬಿನಾರ್‌ನಲ್ಲಿ ಭಾಗವಹಿಸಿದ್ದರು.
0 Comments