ಬೆಂಗಳೂರು (ಆ. 29): ಮೆಟ್ರೋ ಯೋಜನೆ ಬೆಂಗಳೂರಿಗೆ ಬಹಳ ಮುಖ್ಯ. ಮೆಟ್ರೋ ಬೆಂಗಳೂರಿನ ನಾಡಿ ಮಾತ್ರ ಅಲ್ಲ, ಭವಿಷ್ಯದ ಜೀವನಾಡಿಯಾಗಿದೆ ಎಂದು ಮುಖ್ಯಮಂತ್ರಿ ಬೊಮ್ಮಾಯಿ ಹೇಳಿದರು.
ನಾಯಂಡಳ್ಳಿಯಿಂದ ಕೆಂಗೇರಿವರೆಗಿನ ಮೆಟ್ರೋ ವಿಸ್ತರಣೆ ಮಾರ್ಗ ಉದ್ಘಾಟಿಸಿ ಮಾತನಾಡುತ್ತಿದ್ದ ಅವರು, ಇಂದಿನಿಂದ ಬೆಂಗಳೂರಿನ ಅಭಿವೃದ್ಧಿ ಯುಗ ಆರಂಭವಾಗಿದೆ ಎಂದರು. ಮೆಟ್ರೋ ರೈಲು ಇರುವುದರಿಂದ ಐಟಿ ಕ್ಷೇತ್ರದ ಜನರು ಬೆಂಗಳೂರಿಗೆ ಬರುತ್ತಿದ್ದಾರೆ. ಇಲ್ಲಿ ಮೂರು ಕಮ್ಯೂನಿಕೇಶನ್ ಮಾರ್ಗ ಮಾಡುತ್ತಿದ್ದೇವೆ. ವಿಮಾನ ನಿಲ್ದಾಣಕ್ಕೆ ಮಾರ್ಗ ಮಾಡುತ್ತಿದ್ದೇವೆ. ದೇಶದ ಬೇರೆಲ್ಲೂ ಈ ಯೋಜನೆ ಇಲ್ಲ ಎಂದು ಸಿಎಂ ಮೆಟ್ರೋದ ವಿಶೇಷತೆಗಳನ್ನ ಬಿಚ್ಚಿಟ್ಟರು.
ಮುಂದೆ ರಾಜಾನುಕುಂಟೆ, ರಾಮನಗರ ಮತ್ತು ಮಾಗಡಿಯವರೆಗೂ ಮೆಟ್ರೋ ರೈಲು ಯೋಜನೆ ವಿಸ್ತರಿಸುವ ಗುರಿ ಹೊಂದಿದ್ದೇವೆ. ಅದಕ್ಕೆ ಬೇಕಾದ ಪ್ಲಾನ್ ಸಿದ್ಧಪಡಿಸುವಂತೆ ಹೇಳಿದ್ಧೇನೆ. ಸಂಚಾರ ದಟ್ಟಣೆ ಇರುವ ಎಲ್ಲಾ ಮಾರ್ಗಗಳಿಗೆ ಯಾವುದೇ ಅಡೆತಡೆ ಇಲ್ಲದೇ ಮುಕ್ತ ಸಂಚಾರಕ್ಕೆ ವ್ಯವಸ್ಥೆ ಮಾಡುತ್ತೇವೆ. ನಮ್ಮಲ್ಲಿ ದುಡಿಯುವ ದೊಡ್ಡ ವರ್ಗ ಇದೆ. ಅವುಗಳನ್ನ ಗಮನದಲ್ಲಿಟ್ಟುಕೊಂಡು 75 ಸ್ಲಮ್ಗಳಿಗೆ ಮೂಲಭೂತ ಸೌಕರ್ಯಗಳನ್ನ ಕಲ್ಪಿಸುತ್ತೇವೆ. ಮುಂದಿನ ದಿನಗಳಲ್ಲಿ ಬೆಂಗಳೂರು ನಗರವನ್ನು ಉನ್ನತ ಮಟ್ಟಕ್ಕೆ ತೆಗೆದುಕೊಂಡು ಹೋಗುತ್ತೇವೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.ಬೆಂಗಳೂರು ಮೆಟ್ರೊ 56 ಕಿ.ಮೀ. ಮಾರ್ಗ ಪೂರ್ಣಗೊಳಿಸಿದೆ. ಎರಡನೇ ಹಂತದ ಮೆಟ್ರೋ ಯಾವಾಗ ಮುಗಿಸಲಾಗುತ್ತದೆ ಎಂದು ಅಧಿಕಾರಿಗಳನ್ನ ನಾನು ಕೇಳಿದೆ. ಅವರು 2025ಕ್ಕೆ ಮುಗಿಸುತ್ತೇವೆ ಎಂದರು. ಕಷ್ಟಪಟ್ಟೇ ಅದನ್ನ ಮುಗಿಸುವಂತೆ ಸೂಚಿಸಿದ್ದೇನೆ ಎಂದು ಮುಖ್ಯಮಂತ್ರಿಗಳು ವಿವರಿಸಿದರು.
ಬೆಂಗಳೂರಿನಲ್ಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಕೊಟ್ಟವರು ಅಟಲ್ ಬಿಹಾರಿ ವಾಜಪೇಯಿ. ಬೆಂಗಳೂರು ಮೆಟ್ರೋ ಕೂಡ ಕೊಟ್ಟವರು ವಾಜಪೇಯಿ ಅವರೆಯೇ. ಅಂದಿನ ನಿಯೋಗದೊಂದಿಗೆ ನಾನೂ ಹೋಗಿದ್ದೆ. ಈಗ ಪ್ರಧಾನಿ ಮೋದಿ ಅವರೂ ಕೂಡ ಮೆಟ್ರೋ ಯೋಜನೆ ಬೇಗ ಮುಗಿಸುವಂತೆ ಸೂಚಿಸಿದ್ದಾರೆ ಎಂದರು.
ಬೆಂಗಳೂರಿನಲ್ಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಕೊಟ್ಟವರು ಅಟಲ್ ಬಿಹಾರಿ ವಾಜಪೇಯಿ. ಬೆಂಗಳೂರು ಮೆಟ್ರೋ ಕೂಡ ಕೊಟ್ಟವರು ವಾಜಪೇಯಿ ಅವರೆಯೇ. ಅಂದಿನ ನಿಯೋಗದೊಂದಿಗೆ ನಾನೂ ಹೋಗಿದ್ದೆ. ಈಗ ಪ್ರಧಾನಿ ಮೋದಿ ಅವರೂ ಕೂಡ ಮೆಟ್ರೋ ಯೋಜನೆ ಬೇಗ ಮುಗಿಸುವಂತೆ ಸೂಚಿಸಿದ್ದಾರೆ ಎಂದರು.





0 Comments