ಮಧುಗಿರಿ - ಕೋವಿಡ್ ಸಮಯದಲ್ಲಿ ಕಾಂಗ್ರೇಸ್ ಪಕ್ಷದವರು ಅತೀ ಹೆಚ್ಚು ಅಪಪ್ರಚಾರ ಮಾಡಿದ್ದರಿಂದ ದೇಶದಲ್ಲಿ ಹೆಚ್ಚು ಸಾವು-ನೋವುಗಳು ಸಂಭವಿಸಿದೆ ಎಂದು ಬಿಜೆಪಿ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವತ್ಥ ನಾರಾಯಣ ತಿಳಿಸಿದರು.
ಪಟ್ಟಣದ ವಕ್ಕಲಿಗರ ಸಮುದಾಯ ಭವನದಲ್ಲಿ ಭಾರತೀಯ ಜನತಾ ಪಾರ್ಟಿ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕಾರಿಣಿ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಕೋವಿಡ್ ಸೋಂಕು ಮೊದಲನೆ ಅಲೆಯಲ್ಲಿ ದೇಶದಲ್ಲಿ ವ್ಯಾಪಕವಾಗಿ ಹರಡುತ್ತಿದ್ದ ಸಮಯದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಹಲವಾರು ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡು ಲಾಕ್ ಡೌನ್ ವಿಧಿಸಿ ರೋಗ ಹರಡದಂತೆ ತೆಡಗಟ್ಟುವಲ್ಲಿ ಯಶಸ್ವಿಯಾಗಿ ಎರಡನೇ ಅಲೆಗೂ ಮುನ್ನ ಲಸಿಕೆ ತಂದು ಸಾರ್ವಜನಿಕರಿಗೆ ನೀಡಲು ಮುಂದಾಗಿದ್ದರು. ಆದರೆ ಕಾಂಗ್ರೇಸ್ ಪಕ್ಷದ ಅನೇಕ ಮುಖಂಡರು ಲಸಿಕೆ ಇಂದ ಯಾವುದೇ ಪ್ರಯೋಜನವಿಲ್ಲವೆಂಬಂತೆ ಬಿಂಬಿಸಿ ಅಪಪ್ರಚಾರ ಮಾಡಿದರು. ಇದರಿಂದ ಎರಡನೇ ಅಲೆಯಲ್ಲಿ ಹೆಚ್ಚು ಸಾವು ನೋವುಗಳು ಸಂಭವಿಸಿದವು ಎಂದು ತಿಳಿಸಿದರು.
ಪಕ್ಷದ ಬಲವರ್ದನೆಗೆ ಕಾರ್ಯಕರ್ತರ ಶ್ರಮ ಸಾಕಷ್ಟಿದ್ದು, ಬಿಜೆಪಿ ಪಕ್ಷದಲ್ಲಿ ನಾಯಕರಿಗಿಂತ ಕಾರ್ಯಕರ್ತರಿಗೆ ಹೆಚ್ಚು ಬೆಲೆ ಇದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನೀಡಿರುವ ಜನಪರ ಆಡಳಿತಗಳನ್ನು ಜನತೆಗೆ ತಿಳಿಸುವ ಮೂಲಕ ಜಿ.ಪಂ ಹಾಗೂ ತಾ.ಪಂ ಚುನಾವಣೆಗಳನ್ನು ಎದುರಿಸಬೇಕು ಎಂದರು.
ಬಿಜೆಪಿ ಪಕ್ಷದ ರಾಜ್ಯ ಉಪಾಧ್ಯಕ್ಷ ಎಲ್.ನಂದೀಶ್ ಮಾತನಾಡಿ, ಕಳೆದ ಲೋಕಸಭೆಯಲ್ಲಿ ಬಿಜೆಪಿ ಪಕ್ಷದ ಕಾರ್ಯಕರ್ತರ ಶ್ರಮದಿಂದ ಹಾಗೂ ನರೇಂದ್ರ ಮೋದಿ ಅವರು ನೀಡಿದ ಜನಪರ ಆಡಳಿತದಿಂದ ಮಧುಗಿರಿ ಕ್ಷೇತ್ರದಿಂದ ಅತೀ ಹೆಚ್ಚು ಮತ ಬಂದಿದ್ದು, ಇದೇ ಶ್ರಮದಿಂದ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಲು ಕಾರ್ಯಕರ್ತರು ಪಣತೊಡಬೇಕು ಎಂದು ಕರೆ ನೀಡಿದರು.
ಮಂಡಲ ಅಧ್ಯಕ್ಷ ಪಿ.ಎಲ್.ನರಸಿಂಹಮೂರ್ತಿ, ದಾವಣಗೆರೆ ವಿಭಾಗದ ಸಂಘಟನಾ ಕಾರ್ಯದರ್ಶಿ ಜಯಪ್ರಕಾಶ್, ಜಿಲ್ಲಾ ಉಪಾಧ್ಯಕ್ಷರಾದ ಚೌಧರಿ ನಾಗೇಶ್, ಪ್ರಧಾನ ಕಾರ್ಯದರ್ಶಿಗಳಾದ ಬಿ.ಕೆ.ಮಂಜುನಾಥ್, ಸಂಪಿಗೆ ಶ್ರೀಧರ್, ಮಹಿಳಾ ಮೊರ್ಚಾ ಅಧ್ಯಕ್ಷೆ ಅಂಬಿಕಾ ಹುಲಿನಾಯಕರ್, ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಸೀತಾರಾಮು, ನಾಗೇಂದ್ರ, ಯುವ ಮೋರ್ಚಾ ಅಧ್ಯಕ್ಷ ಕಾರ್ತೀಕ್ ಆರಾಧ್ಯ, ಶಾಂತಾರಾಧ್ಯ ಹಾಗೂ ಇನ್ನಿತರರು ಇದ್ದರು.

0 Comments