ರಾಘವೇಂದ್ರ ಸ್ವಾಮಿಗಳು ತಿರುಪತಿ ಸನ್ನಿಧಾನಕ್ಕೆ ಬಂದು ಸ್ವಾಮೀ ಪುಷ್ಕರಿಣಿಯಲ್ಲಿ ಸ್ನಾನ ಮಾಡಿದರು. ಶ್ರೀ ವರಾಹ ಸ್ವಾಮಿಯ ದರ್ಶನ ಪಡೆದು ದೇವಸ್ಥಾನದ ಮಹಾದ್ವಾರಕ್ಕೆ ಬಂದರು. ದೇವಸ್ಥಾನದ ಅಧಿಕಾರಿಗಳು ಶ್ರೀಮದಾಚಾರ್ಯರ ಮೂಲಮಹಾಸಂಸ್ಥಾನದ ಗುರುಗಳನ್ನು ಸಾಂಪ್ರದಾಯಿಕವಾಗಿ ಬರಮಾಡಿಕೊಂಡು ನೇರವಾಗಿ ಗರ್ಭಗುಡಿಗೆ ಕರೆದುಕೊಂಡು ಹೋದರು.
ಶ್ರೀ ಶ್ರೀನಿವಾಸನ ಭವ್ಯ-ದಿವ್ಯವಾದ ದರ್ಶನದಿಂದ ಪುಳಕಿತರಾದ ಶ್ರೀ ರಾಘವೇಂದ್ರರು ಭಗವಂತನ ದಿವ್ಯ ಪಾದಪದ್ಮಗಳಿಗೆ ಸಾಷ್ಟಾಂಗವೆರಗಿದರು. ಪರಮಾತ್ಮನ ದಿವ್ಯ ಪಾದಗಳ ಸ್ಪರ್ಶದಿಂದ ಭಕ್ತ್ಯುದ್ರೇಕಗೊಂಡ ಶ್ರೀ ಗುರುರಾಯರ ಕಣ್ಣಿನಿಂದ ಆನಂದ ಭಾಷ್ಪ ಹರಿಯತೊಡಗಿತು.
ಶ್ರೀ ಗುರುರಾಯರು ಭಗವಂತನಿಗೆ ಮಂಗಳಾರತಿಯೆತ್ತಿ ಅವನನ್ನು ವೇದ ಮಂತ್ರಗಳಿಂದ ಹಾಗೂ ಸ್ತೋತ್ರಗಳಿಂದ ವಿಧವಿಧವಾಗಿ ಸ್ತುತಿಸಿದರು. ಶ್ರೀ ರಾಘವೇಂದ್ರ ತೀರ್ಥರು ಭಗವಂತನ ಏಕಾಂತ ಸೇವೆಯನ್ನು ಮಾಡಲಿಚ್ಚಿಸಿದಾಗ ದೇವಸ್ಥಾನದ ಅಧಿಕಾರಿಗಳು ಮರುದಿನ ಬ್ರಾಹ್ಮೀಮುಹೂರ್ತದಲ್ಲಿ ಆಗಬಹುದೆಂದರು.
ಮರುದಿನ ಶ್ರೀ ಗುರುರಾಯರು ಬ್ರಾಹ್ಮೀಮುಹೂರ್ತದಲ್ಲಿ ಪ್ರಾತರಾಹ್ನಿಕಗಳನ್ನು ಮುಗಿಸಿ, ಕೆಲವೇ ಕೆಲವು ಶಿಷ್ಯರ ಜೊತೆ ದೇವಸ್ಥಾನಕ್ಕೆ ಬಂದರು. ದೇವಸ್ಥಾನದ ಅಧಿಕಾರಿಗಳು ಅವರನ್ನು ತಕ್ಷಣ ಗರ್ಭಗುಡಿಗೆ ಕರೆದೊಯ್ದು, ಗರ್ಭಗುಡಿಯ ಒಳಗೆ ಅವರೊಬ್ಬರನ್ನೇ ಬಿಟ್ಟು, ಗರ್ಭಗುಡಿಯ ತೆರೆ ಎಳೆದರು. ಶ್ರೀ ಗುರುರಾಯರು ಭಗವಂತನ ದಿವ್ಯಾಕೃತಿಯನ್ನು ಕಣ್ತುಂಬ ನೋಡಿದರು. ಅವನ ದಿವ್ಯ ಪಾದಪದ್ಮಗಳಿಗೆ ಸಾಷ್ಟಾಂಗ ನಮಸ್ಕಾರ ಮಾಡಿದರು.
ನಂತರ ಪದ್ಮಾಸನದಲ್ಲಿ ಕುಳಿತು ಕಣ್ಮುಚ್ಚಿ ಶ್ರೀ ಶ್ರೀನಿವಾಸನನ್ನು ಧ್ಯಾನಿಸಿದರು. ತಕ್ಷಣವೇ ಶ್ರೀ ಶ್ರೀನಿವಾಸ ಅವರ ಹೃದಯ ಮಂದಿರದಲ್ಲಿ ಗೋಚರಿಸಿದ. ಅವನ ದಿವ್ಯದರ್ಶನವನ್ನು ಶ್ರೀ ಗುರುರಾಯರು ಪಡೆಯುತ್ತಿರುವಾಗಲೇ ಅವನು ಅಲ್ಲಿಂದ ಅದೃಶ್ಯನಾದ! ಇದೇನಚ್ಚರಿಯೆಂದು ಶ್ರೀ ಗುರುರಾಯರು ಕಣ್ತೆರೆದು ನೋಡಲು, ಆಶ್ಚರ್ಯವೆಂಬಂತೆ ಎದುರಿಗಿನ ಶ್ರೀ ಶ್ರೀನಿವಾಸನ ವಿಗ್ರಹ ಜೀವಂತವೆಂಬಂತೆ ದಿವ್ಯ ಪ್ರಭೆಯಿಂದ ಕಂಗೊಳಿಸುತ್ತಿತ್ತು.
ಭಕ್ತ್ಯುದ್ರೇಕದಿಂದ ಶ್ರೀ ಗುರುರಾಯರು ಭಗವಂತನನ್ನು ಸ್ತುತಿಸಲು, ಅವರ ಕಣ್ಣಿನಿಂದ ಆನಂದಾಶ್ರು ಹರಿಯತೊಡಗಿತು. ಇದ್ದಕಿದ್ದಂತೆ ಭಗವಂತನ ಮುಖಕಮಲವು ದಿವ್ಯ ಕಾಂತಿಯಿಂದ ಬೆಳಗಲಾರಂಭಿಸಿ, ಪರಮಾತ್ಮನು ತನ್ನ ದಿವ್ಯ ಮಂಜುಳ ಸ್ವರದಿಂದ ಹೀಗೆಂದನು
"ಭಕ್ತ ಶ್ರೇಷ್ಠನೆ! ವೇದಗಳೇ ಸರ್ವಕ್ಕೂ ಮೂಲವಾಗಿದ್ದು, ನಾನು ಸದಾ ಅವುಗಳಲ್ಲಿ ಸನ್ನಿಹಿತನಾಗಿದ್ದೇನೆ. ಆದ್ದರಿಂದ ವೇದಗಳಿಗೆ ಭಾಷ್ಯಗಳನ್ನು ಬರೆದು ನನ್ನನ್ನು ಸೇವಿಸು". ಭಗವಂತನ ಮುಖದಿಂದ ವಾಣಿಯನ್ನು ಆಲಿಸಿದ ಶ್ರೀ ಗುರುರಾಯರ ಆನಂದಕ್ಕೆ ಪಾರವೇ ಇರಲಿಲ್ಲಾ. ಶ್ರೀ ಗುರುರಾಯರು ಉತ್ತರಿಸುತ್ತಾ " ಪರಮಾತ್ಮ! ನಿನ್ನಾಜ್ಞೆಯನ್ನು ಶಿರಸಾಧರಿಸಿ ಖಂಡಿತವಾಗಿಯೂ ನೆರವೇರಿಸುತ್ತೇನೆ! ", ಹೀಗೆಂದು ಶ್ರೀ ಗುರುರಾಯರು ತಮ್ಮ ಶಿರವನ್ನು ಭಗವಂತನ ದಿವ್ಯ ಪಾದಪದ್ಮಗಳ ಮೇಲೆ ಇರಿಸಿ, ಸಾಷ್ಟಾಂಗವೆರಗಿದರು! ಗರ್ಭಗುಡಿಯ ಹೊರಗಡೆ ಇರುವವರಿಗೆ ಶ್ರೀ ಗುರುರಾಯರ ಧ್ವನಿ ಮಾತ್ರ ಕೇಳಿಸಿತು.
ಆದ್ದರಿಂದ ಇದೇನೆಂದು ನೋಡಲು ಅರ್ಚಕರು ಒಳ ಬರಲಾಗಿ, ಅದೇ ಸಮಯಕ್ಕೆ ಸರಿಯಾಗಿ ಶ್ರೀ ಶ್ರೀನಿವಾಸನನ್ನು ಅಲಂಕರಿಸಿದ್ದ ಬೃಹತ್ತಾದ ತುಳಸೀ ಮಾಲೆಯು ಕಳಚಿಬಿದ್ದು, ನಮಸ್ಕರಿಸಿದ ಶ್ರೀ ಗುರುರಾಯರ ಕೊರಳನ್ನು, ಯಾರೋ ಇಟ್ಟಂತೆ, ಅಲಂಕರಿಸಿತು. ಈ ಮಹಿಮೆಯನ್ನು ನೋಡಿ ಅಚ್ಚರಿಗೊಂಡ ಅರ್ಚಕರು, ತಮ್ಮ ಆರು ದಶಕಗಳ ಇತಿಹಾಸದಲ್ಲಿ ಇಂತಹ ಘಟನೆಯನ್ನೆಂದೂ ನೋಡಿಲ್ಲವೆಂದು ಹೇಳಿ, ಅವರೆಲ್ಲರೂ ರಾಯರಿಗೆ ನಮಸ್ಕರಿಸಿದರು. ಭಗವಂತನ ದರ್ಶನ ಹಾಗೂ ಪ್ರತ್ಯಕ್ಷ ಮಾತುಕತೆಯಿಂದ ಸಂಪೂರ್ಣ ತೃಪ್ತಿಗೊಂಡ ಶ್ರೀ ರಾಘವೇಂದ್ರ ತೀರ್ಥರು ನಂತರ ಎಲ್ಲಾ ವಿದ್ವಾಂಸರ ಜೊತೆ ಚರ್ಚಿಸಿ ವೇದಗಳ ಪ್ರತಿಯನ್ನು ಸಂಗ್ರಹಿಸಿದರು.
ಶ್ರೀನಿವಾಸ ದೇವರ ಮತ್ತು ಮಧ್ವಾಚಾರ್ಯರ ಅನುಗ್ರಹದಿಂದ ವೇದಗಳಿಗೆ ಭಾಷ್ಯವನ್ನು ಬರೆದು ಭಗವಂತನಿಗೆ ಸಮರ್ಪಣೆ ಮಾಡಿದರು.

0 Comments