ಭಾನುವಾರ ನಡೆದ ಬೆಳವಣಿಗೆಯೊಂದರಲ್ಲಿ ಸಿಡಿ ಕೇಸಿನಲ್ಲಿ ಪ್ರಮುಖವಾಗಿ ಕೇಳಿ ಬರುತ್ತಿದ್ದ ಹೆಸರು ಶ್ರವಣ್ ಮತ್ತು ನರೇಶ್ ಗೌಡ ಅವರದ್ದು. ಅದರಲ್ಲಿ ನರೇಶ್ ಗೌಡ ಅವರು ಕಾಂಗ್ರೆಸ್ಸಿಗೆ ಸೇರ್ಪಡೆಯಾದ ವಿದ್ಯಮಾನ ನಡೆದಿದೆ.
ಭಾನುವಾರ, ತಮ್ಮ ಸ್ವಂತ ಊರಾದ ತುಮಕೂರಿನ ಶಿರಾದ ಭುವನಹಳ್ಳಿಯಲ್ಲಿ ನರೇಶ್ ಗೌಡ ಪ್ರತ್ಯಕ್ಷರಾಗಿದ್ದಾರೆ. ಇವರು ಗ್ರಾಮಕ್ಕೆ ಆಗಮಿಸುತ್ತಿದ್ದಂತೆಯೇ ಅವರಿಗೆ ಗ್ರಾಮಸ್ಥರಿಂದ ಅದ್ದೂರಿ ಸ್ವಾಗತ ದೊರಕಿದೆ. ಭುವನಹಳ್ಳಿಯಲ್ಲಿ ತಳಿರು ತೋರಟ ಕಟ್ಟಿ, ಪಟಾಕಿ ಸಿಡಿಸಿ, ಯುವ ಕಾಂಗ್ರೆಸ್ ಮುಖಂಡ ಎಂದು ಬ್ಯಾನರ್ ಹಾಕಿ ಅವರನ್ನು ಸ್ವಾಗತಿಸಲಾಗಿದೆ.
ಯುವ ಕಾಂಗ್ರೆಸ್ ಮುಖಂಡ ಎಂದು ಹಾಕಿರುವ ಬ್ಯಾನರಿನಲ್ಲಿ ಸಿದ್ದರಾಮಯ್ಯ, ಡಿಕೆಶಿ ಮತ್ತು ಟಿ.ಬಿ.ಜಯಚಂದ್ರ ಅವರ ಭಾವಚಿತ್ರ ಕೂಡಾ ಇದೆ. ಸಿಡಿ ಪ್ರಕರಣದಲ್ಲಿ ಕಾಂಗ್ರೆಸ್ ಮುಖಂಡರ ಕೈವಾಡವಿದೆ ಎಂದು ರಮೇಶ್ ಜಾರಕಿಹೊಳಿ ಆರೋಪವನ್ನು ಮಾಡುತ್ತಲೇ ಇದ್ದರು. ಈಗ, ನರೇಶ್ ಗೌಡ ಅವರು ಕಾಂಗ್ರೆಸ್ ಯುವ ಮುಖಂಡ ಎಂದು ಅವರನ್ನು ಸ್ವಾಗತಿಸಿದ್ದು, ಮುಂದಿನ ದಿನಗಳಲ್ಲಿ ಇದು ರಾಜಕೀಯ ಟ್ವಿಸ್ಟ್ ಪಡೆದುಕೊಳ್ಳುವ ಸಾಧ್ಯತೆಯಿದೆ.
ಈ ಸಿಡಿ ಪ್ರಕರಣದಲ್ಲಿ ಮಹಾನ್ ನಾಯಕರೊಬ್ಬರ ಕೈವಾಡವಿದೆ ಎಂದು ಡಿಕೆಶಿ ಹೆಸರು ಹೇಳದೇ, ಜಾರಕಿಹೊಳಿ ಗಂಭೀರ ಆರೋಪವನ್ನು ಮಾಡಿದ್ದರು. ಸಿಡಿಯಲ್ಲಿ ಇದ್ದರು ಎನ್ನಲಾಗುತ್ತಿರುವ ಮಹಿಳೆ ಮತ್ತು ಇದರ ಜೊತೆಗೆ ಶ್ರವಣ್ ಮತ್ತು ನರೇಶ್ ಗೌಡ ಅವರ ಹೆಸರು ತುಳುಕು ಹಾಕಲಾಗುತ್ತಿತ್ತು. ಪೊಲೀಸರ ಹರಸಾಹಸ ಪಟ್ಟರೂ, ನರೇಶ್ ಗೌಡ್ ಅವರನ್ನು ಟ್ರೇಸ್ ಮಾಡಲು ಆಗಿರಲಿಲ್ಲ.

0 Comments