ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷರು ಮತ್ತು ಸಂಸದರೂ ಆದ ಶ್ರೀ ನಳಿನ್ ಕುಮಾರ್ ಕಟೀಲ್ ಅವರು ಇಂದು ಚಿತ್ರದುರ್ಗದಲ್ಲಿ ರಾಜ್ಯ ಪದಾಧಿಕಾರಿಗಳ ಸಭೆ ನಡೆಸಿದರು.
ಎರಡು ವರ್ಷಗಳ ಅವಧಿಯಲ್ಲಿ ಮುಖ್ಯಮಂತ್ರಿಗಳಾದ ಶ್ರೀ ಯಡಿಯೂರಪ್ಪ ಅವರು ಅತ್ಯುತ್ತಮವಾದ ಆಡಳಿತವನ್ನು ನೀಡಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಜೀವ, ಜೀವನ ಉಳಿಸುವ ಕೆಲಸವನ್ನು ಶ್ರೀ ಯಡಿಯೂರಪ್ಪ ಅವರ ನೇತೃತ್ವದ ಸರಕಾರ ಮಾಡಿದೆ. ಅದಕ್ಕಾಗಿ ಅವರಿಗೆ ಅಭಿನಂದನೆ ಸಲ್ಲಿಸುವುದಾಗಿ ಶ್ರೀ ನಳಿನ್‍ಕುಮಾರ್ ಕಟೀಲ್ ಅವರು ಉದ್ಘಾಟನಾ ಭಾಷಣದಲ್ಲಿ ತಿಳಿಸಿದರು.
ಶ್ರೀ ಯಡಿಯೂರಪ್ಪ ಅವರು 45 ವರ್ಷಗಳ ಕಾಲ ರೈತಪರ ಹೋರಾಟ, ಪಾದಯಾತ್ರೆ ಮೂಲಕ ಪಕ್ಷವನ್ನು ಬೆಳೆಸಿದವರು. ಅವರಿಗೆ ಜನರ ಕಷ್ಟದ ಅರಿವಿದೆ. ಆದ್ದರಿಂದ ಅವರು ಜನಪರ ಆಡಳಿತ ನೀಡಿದ್ದಾರೆ ಎಂದು ಮೆಚ್ಚುಗೆ ಸೂಚಿಸಿದರು.
ಚುನಾವಣೆಗೆ ಎರಡು ವರ್ಷಗಳಿರುವಾಗಲೇ ಕಾಂಗ್ರೆಸ್ ಪಕ್ಷದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಸಂಗೀತ ಕುರ್ಚಿ ಆರಂಭವಾಗಿದೆ. ಅದಲ್ಲದೆ ದಲಿತ ಮುಖ್ಯಮಂತ್ರಿ ಕುರಿತ ಚರ್ಚೆಯೂ ಆರಂಭವಾಗಿದೆ. ಕಾಂಗ್ರೆಸ್ಸಿಗರಿಗೆ ದಲಿತರ ಬಗ್ಗೆ ಪ್ರೀತಿ ಮತ್ತು ಅಭಿಮಾನ ಇದ್ದರೆ ಮಲ್ಲಿಕಾರ್ಜುನ ಖರ್ಗೆ ಅವರನ್ನು ಮುಂದಿನ ಮುಖ್ಯಮಂತ್ರಿ ಎಂದು ಘೋಷಿಸಿ ಎಂದು ಶ್ರೀ ನಳಿನ್‍ಕುಮಾರ್ ಅವರು ಸವಾಲೆಸೆದರು.
ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಮುಗಿಸುವ ತಂತ್ರ ಕಾಂಗ್ರೆಸ್‍ನಲ್ಲಿ ನಡೆಯುತ್ತಿದೆ. ಹಿಂದೆ ಗುರುಗಳಿಗೆ ಕೈಕೊಟ್ಟು ಹೊರಬಂದ ಸಿದ್ದರಾಮಯ್ಯ ಅವರು ಅಹಿಂದ ಚಳವಳಿ ಪ್ರಾರಂಭಿಸಿದರು. ಆದರೆ, ಮುಖ್ಯಮಂತ್ರಿಯಾದ ಬಳಿಕ ಹಿಂದುಳಿದ ವರ್ಗಗಳನ್ನೇ ಮರೆತರು. ಅವರಿಗೆ ನ್ಯಾಯ ಕೊಡಲಿಲ್ಲ. ದಲಿತ ಮುಖ್ಯಮಂತ್ರಿ ಚರ್ಚೆಯನ್ನು ಮುಚ್ಚಿ ಹಾಕಿದರು ಎಂದು ತಿಳಿಸಿದರು.
ಡಾ. ಅಂಬೇಡ್ಕರ್ ಅವರು ಚುನಾವಣೆಗೆ ನಿಂತಾಗ ಸೋಲಿಸಿದ, ಅವರ ಶವಸಂಸ್ಕಾರಕ್ಕೆ ದೆಹಲಿಯಲ್ಲಿ ಜಾಗ ನೀಡದ ಕಾಂಗ್ರೆಸ್ಸಿಗರು ದಲಿತರ ಅಭ್ಯುದಯದ ಬಗ್ಗೆ ಮಾತನಾಡುತ್ತಿದ್ದಾರೆ. ಆದರೆ, ಅಂಬೇಡ್ಕರರ ಪಂಚತೀರ್ಥಗಳಿಗೆ ರಕ್ಷಣೆ ನೀಡಿ ಅವುಗಳ ಅಭಿವೃದ್ಧಿ ಮಾಡಿದ್ದರೆ ಅದು ಬಿಜೆಪಿಯ ಶ್ರೀ ನರೇಂದ್ರ ಮೋದಿ ಅವರ ಸರಕಾರ. ಕಾಂಗ್ರೆಸ್ ಆ ಕಾರ್ಯ ಮಾಡಿರಲಿಲ್ಲ ಎಂದು ವಿವರಿಸಿದರು.
ಎಸ್‍ಸಿ, ಎಸ್‍ಟಿ ಜನಾಂಗಕ್ಕೆ ಜಾಗ ಕೊಟ್ಟಿದ್ದರೆ ಅದು ಶ್ರೀ ಯಡಿಯೂರಪ್ಪನವರು. ನಮ್ಮ ಸರಕಾರವು ಅದ್ಭುತವಾಗಿ ಕೆಲಸ ಮಾಡುತ್ತಿದೆ. ಗೋಹತ್ಯೆ ನಿಷೇಧ- ಕೃಷಿ ಸಂಸ್ಕøತಿ ಉಳಿಸುವ ಕಾರ್ಯವನ್ನು ನಮ್ಮ ಸರಕಾರ ಜಾರಿಗೊಳಿಸಿದೆ ಎಂದರು. ಪ್ರತಿಯೊಂದು ಜಿಲ್ಲೆಗೆ ಒಂದು ಗೋಶಾಲೆ ತೆರೆಯುವ ನಿರ್ಧಾರವನ್ನೂ ಶ್ರೀ ಯಡಿಯೂರಪ್ಪ ಅವರ ಸರಕಾರ ಮಾಡಿದ್ದು, ಅವರನ್ನು ಅಭಿನಂದಿಸುವುದಾಗಿ ತಿಳಿಸಿದರು.
ರೈತರಿಗೆ ನೇರ ಮಾರುಕಟ್ಟೆ ಒದಗಿಸುವ ನಿರ್ಧಾರವನ್ನು ಇಲ್ಲಿನ ರಾಜ್ಯ ಬಿಜೆಪಿ ಸರಕಾರ ಕೈಗೊಂಡಿದೆ. ಆ ಮೂಲಕ ರೈತಪರ ಸರಕಾರ ಎಂಬುದನ್ನು ಸಾಬೀತುಪಡಿಸಿದೆ ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಅರುಣ್ ಕುಮಾರ್, ಸಂಸದರಾದ ಶ್ರೀ ಜಿ. ಎಂ. ಸಿದ್ದೇಶ್ವರ್, ಶಾಸಕರುಗಳಾದ ಶ್ರೀ ತಿಪ್ಪಾರೆಡ್ಡಿ, ಶ್ರೀ ಚಂದ್ರಪ್ಪ, ಶ್ರೀ ಗೂಳಿಹಟ್ಟಿ ಶೇಖರ್, ಶ್ರೀಮತಿ ಪೂರ್ಣಿಮಾ ಶ್ರೀನಿವಾಸ್, ವಿಧಾನ ಪರಿಷತ್ ಸದಸ್ಯರಾದ ಶ್ರೀ ಚಿದಾನಂದ ಗೌಡ, ಚಿತ್ರದುರ್ಗ ಬಿಜೆಪಿ ಜಿಲ್ಲಾಧ್ಯಕ್ಷರಾದ ಶ್ರೀ ಮುರಳಿ, ರಾಜ್ಯ ಪದಾಧಿಕಾರಿಗಳು, ಪ್ರಮುಖರು ಉಪಸ್ಥಿತರಿದ್ದರು. ಈ ಸಭೆಯಲ್ಲಿ ಪಕ್ಷದ ಸಂಘಟನೆ, ಭವಿಷ್ಯದ ಕಾರ್ಯ ಚಟುವಟಿಕೆಗಳ ಕುರಿತು ಚರ್ಚಿಸಲಾಯಿತು.
ವಿವಿಧ ಕ್ಷೇತ್ರಗಳಲ್ಲಿ ಅಪೂರ್ವ ಸಾಧನೆಗೈದ ಸಾಧಕರನ್ನು ಗುರುಪೂರ್ಣಿಮೆಯ ಹಿನ್ನೆಲೆಯಲ್ಲಿ ರಾಜ್ಯಾಧ್ಯಕ್ಷರು ಸನ್ಮಾನಿಸಿದರು.


0 Comments