ಬಿ.ಎಸ್.ಯಡಿಯೂರಪ್ಪ ಅವರನ್ನೇ ಮುಖ್ಯಮಂತ್ರಿಯಾಗಿ ಮುಂದುವರಿಸಬೇಕು ಎಂದು ನಾಡಿನ ವಿವಿಧ ಸಮುದಾಯಗಳ ಮಠಾಧೀಶರು ಆಗ್ರಹಿಸಿದ್ದು, ಇಲ್ಲಿಯವರೆಗೆ ರಾಜಕೀಯ ಮೇಲಾಟಗಳಿಗೆ ಸೀಮಿತವಾಗಿದ್ದ ಬಿಜೆಪಿ ಜಗಳಕ್ಕೆ ‘ಜಾತಿ-ಧರ್ಮ’ದ ಬಣ್ಣ ಬಂದಂತಾಗಿದೆ.
‘ಒಂದು ವೇಳೆ ಯಡಿಯೂರಪ್ಪ ಅವರನ್ನು ಪದಚ್ಯುತಿ ಗೊಳಿಸಿದರೆ ಭಾರಿ ಬೆಲೆ ತೆರಬೇಕಾಗುತ್ತದೆ’ ಎಂದೂ ಕೆಲವು ಸ್ವಾಮೀಜಿಗಳು ಬಿಜೆಪಿ ವರಿಷ್ಠರಿಗೆ ಎಚ್ಚರಿಕೆಯನ್ನೂ ನೀಡಿದ್ದಾರೆ.
ರಂಭಾಪುರಿ ವೀರಸೋಮೇಶ್ವರ ಸ್ವಾಮೀಜಿ ಅವರು ಯಡಿಯೂರಪ್ಪ ಪರ ಹೇಳಿಕೆ ನೀಡಿದ ಬೆನ್ನಲ್ಲೇ ವೀರಶೈವ? ಲಿಂಗಾಯತ ಅಲ್ಲದೆ ಇತರ ಸಮುದಾಯದ ಮಠಾಧೀಶರೂ ಅವರ ಬೆಂಬಲಕ್ಕೆ ಧಾವಿಸಿದ್ದಾರೆ.
ಚಿತ್ರದುರ್ಗದ ಮುರುಘಾ ಶರಣರು, ಉಡುಪಿಯ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಶ್ರೀಶೈಲ ಪೀಠದ ಜಗದ್ಗುರು ಚನ್ನಸಿದ್ದರಾಮ ಶಿವಾಚಾರ್ಯ ಸ್ವಾಮೀಜಿ, ಬಸವ ಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ, ಬಾಲೆಹೊಸೂರು ದಿಂಗಾಲೇಶ್ವರ ಸ್ವಾಮೀಜಿ, ಯಡಿಯೂರಪ್ಪ ಪರ ಧ್ವನಿ ಎತ್ತಿರುವ ಮಠಾಧೀಶರಲ್ಲಿ ಪ್ರಮುಖರಾಗಿದ್ದಾರೆ. ದಿಂಗಾಲೇಶ್ವರ ಸ್ವಾಮಿಜಿ ನೇತೃತ್ವದಲ್ಲಿ 30 ಕ್ಕೂ ಹೆಚ್ಚು ಸ್ವಾಮೀಜಿ ಗಳು ಯಡಿಯೂರಪ್ಪ ಅವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿ ಮುಖ್ಯಮಂತ್ರಿ ಹುದ್ದೆಯಲ್ಲೇ ಮುಂದುವರಿಯುವಂತೆ ಒತ್ತಾಯಿಸಿದರು.
ಸುದ್ದಿಗಾರರ ಜತೆ ಮಾತ ನಾಡಿದ ದಿಂಗಾಲೇಶ್ವರ ಸ್ವಾಮೀಜಿ, ‘ಯಡಿಯೂರಪ್ಪ ಅವರನ್ನು ಬದಲಿಸಿದರೆ ಬಿಜೆಪಿ ಸರ್ವನಾಶ ಆಗಲಿದೆ. ಬಿಜೆಪಿ ನಾಯಕರು ಕೆಟ್ಟ ಪರಿಸ್ಥಿತಿ ಎದುರಿಸಬೇಕಾಗುತ್ತದೆ. ಇದು ಎಲ್ಲ ಮಠಾಧೀಶರ ಅಭಿಪ್ರಾಯ’ ಎಂದರು.
‘ತಮ್ಮ ಕೈಯಲ್ಲಿ ಏನೂ ಇಲ್ಲ. ಎಲ್ಲವೂ ವರಿಷ್ಠರ ನಿರ್ಧಾರ ಎಂದು ಯಡಿಯೂರಪ್ಪ ಹೇಳಿದ್ದಾರೆ. ಬಿಜೆಪಿ ವರಿಷ್ಠರ ತೀರ್ಮಾನ ನಾವು ಒಪ್ಪುವು ದಿಲ್ಲ. ಅವಧಿ ಪೂರ್ಣಗೊಳಿಸಲು ಅವಕಾಶ ನೀಡಬೇಕು. ಎರಡು- ಮೂರು ದಿನಗಳಲ್ಲಿ ಬೆಂಗಳೂರಿನಲ್ಲಿ 500 ಮಠಾಧೀಶರು ಸಭೆ ಸೇರಿ ಈ ಬಗ್ಗೆ ಒಕ್ಕೊರಲಿನ ತೀರ್ಮಾನ ತೆಗೆದುಕೊಳ್ಳುತ್ತೇವೆ’ ಎಂದು ಅವರು ಹೇಳಿದರು.
‘ರಾಜ್ಯದಲ್ಲಿ ನಾಯಕತ್ವ ಬದಲಾವಣೆಗೆ ಕಾಲ ಸೂಕ್ತವಾಗಿಲ್ಲ’ ಎಂದು ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಉಡುಪಿಯಲ್ಲಿ ಹೇಳಿದ್ದಾರೆ.
‘ಯಡಿಯೂರಪ್ಪನವರು ನಾಯಕತ್ವ ಚೆನ್ನಾಗಿ ನಿಭಾಯಿಸಿದ್ದಾರೆ. ಕೋವಿಡ್ ಸಂದರ್ಭವನ್ನು ಸಮರ್ಥವಾಗಿ ಎದುರಿಸಿದ್ದಾರೆ. ನಾಯಕತ್ವ ಬದಲಾವಣೆ ಸಂಬಂಧ ಬಿಜೆಪಿಯಲ್ಲಿ ಯಾವ ಚರ್ಚೆಗಳು ನಡೆದಿವೆ ಎಂಬ ಮಾಹಿತಿ ಇಲ್ಲ. ಯಡಿಯೂರಪ್ಪ ಅವರು ರಾಜ್ಯದಲ್ಲಿ ಬಿಜೆಪಿಯನ್ನು ಕಟ್ಟಿದ ರೀತಿ ಹಾಗೂ ಅವರ ನಡೆ ಗಮನಿಸಿ ವೈಯಕ್ತಿಕ ಅಭಿಪ್ರಾಯ ಹೇಳಿದ್ದೇನೆ’ ಎಂದಿದ್ದಾರೆ.
‘ದಕ್ಷಿಣ ಭಾರತದಲ್ಲಿ ಪ್ರಥಮವಾಗಿ ಬಿಜೆಪಿ ಯನ್ನು ಅಧಿಕಾರಕ್ಕೆ ತಂದವರು ಯಡಿಯೂರಪ್ಪ. ಅವರು ಅಧಿಕಾರಕ್ಕೆ ಬಂದ ನಂತರ ಎಲ್ಲ ಶೋಷಿತ ಸಮುದಾ ಯದ ಮಠಗಳನ್ನು ಮೇಲೆತ್ತಿದರು. ಅವರು ಮುಖ್ಯಮಂತ್ರಿಯಾದಾಗಲೆಲ್ಲ ಸುಗಮ ಆಡಳಿತ ನಡೆಸಲು ಬಿಡುತ್ತಿಲ್ಲ ಎಂಬ ಚರ್ಚೆ ಸಾರ್ವಜನಿಕ ವಲಯದಲ್ಲಿ ನಡೆಯುತ್ತಿದೆ. ಇದು ಪುನರಾವರ್ತನೆ ಆಗುತ್ತಿರುವುದು ಸರಿಯಲ್ಲ’ ಎಂದು ಮಾದಾರ ಚನ್ನಯ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.
‘ಅತಿವೃಷ್ಟಿ, ಅನಾವೃಷ್ಟಿ ಜತೆಯಲ್ಲೇ ಬಂದ ಕೋವಿಡ್ ಸಂಕಷ್ಟವನ್ನು ಸಮರ್ಥ ವಾಗಿ ನಿಭಾಯಿಸಿದ್ದಾರೆ. ರಾಜ್ಯದ ಅಭಿವೃದ್ಧಿಗೂ ಶ್ರಮಿಸುತ್ತಿದ್ದಾರೆ. ಅವಧಿ ಮುಗಿಯುವವರೆಗೂ ಅವರಿಗೆ ಅವಕಾಶ ನೀಡಬೇಕು’ ಎಂದು ಆಗ್ರಹಿಸಿದರು.
‘ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದರೆ ಮತ್ತೆ ಇತಿಹಾಸ ಮರುಕಳಿಸಲಿದೆ. ಬಿಜೆಪಿ ಅಧಿಕಾರ ಕಳೆದುಕೊಳ್ಳಲಿದೆ’ ಎಂದು ಬೀದರ್ ಜಿಲ್ಲೆ ಭಾಲ್ಕಿಯ ಹಿರೇಮಠ ಸಂಸ್ಥಾನದ ಬಸವಲಿಂಗ ಪಟ್ಟದ್ದೇವರು ಎಚ್ಚರಿಕೆ ನೀಡಿದ್ದಾರೆ.
‘ನಾಯಕತ್ವ ಬದಲಾವಣೆ ಅಪ್ರಸ್ತುತ. ಯಡಿಯೂರಪ್ಪ ಅವರನ್ನು ಕಡೆಗಣಿಸಿ ದರೆ ಪಕ್ಷಕ್ಕೆ ದೊಡ್ಡ ನಷ್ಟವಾಗಲಿದೆ. ಲಿಂಗಾಯತ ಸಮುದಾಯ ಬಿಜೆಪಿಯಿಂದ ದೂರ ಸರಿಯಲಿದೆ. ಅವಧಿ ಮುಗಿಯುವ ವರೆಗೂ ಅವರನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರಿಸಬೇಕು’ ಎಂದು ಒತ್ತಾಯಿಸಿದ್ದಾರೆ.
‘ಜನ ಬೆಂಬಲದ ಜತೆಗೆ ಪಕ್ಷಾತೀತವಾಗಿ ಅನೇಕ ನಾಯಕರ ಬೆಂಬಲವೂ ಅವರಿಗೆ ಇದೆ. ಆದರೂ ಸ್ವಪಕ್ಷದ ಕೆಲ ನಾಯಕರು ಅವರನ್ನು ಅಧಿಕಾರದಿಂದ ಕೆಳಗಿಳಿಸುವ ಹುನ್ನಾರ ನಡೆಸಿರುವುದು ಸರಿಯಲ್ಲ’ ಎಂದು ಅವರು ಹೇಳಿದ್ದಾರೆ.
‘ಯಡಿಯೂರಪ್ಪ ಅವರನ್ನು ಬದಲಾವಣೆ ಮಾಡಲು ಹೊರಟರೆ ಮೂರು ಸಾವಿರಕ್ಕೂ ಹೆಚ್ಚು ಮಠಗಳು ಅವರನ್ನು ಉಳಿಸಿಕೊಳ್ಳಲು ಪ್ರಯತ್ನಿಸಲಿವೆ’ ಎಂದು ಬೆಳ್ಳಾವಿ ಮಠದ ಮಹಂತಲಿಂಗೇಶ್ವರ ಸ್ವಾಮೀಜಿ ಕಿಡಿಕಾರಿದ್ದಾರೆ.

0 Comments