ಅನ್ನದಾನಕ್ಕಿಂತ ಶ್ರೇಷ್ಠವಾದ ದಾನ ಮತ್ತೊಂದಿಲ್ಲ ಎಂದು ಬಲ್ಲವರು ಹೇಳುತ್ತಾರೆ.
ಅಂಥ ಒಂದು ಮಹತ್ವದ ಕಾರ್ಯವನ್ನು ಬೆಂಗಳೂರು ನಗರದ ಅಕ್ಷೋಭಿಯಾ ಫೌಂಡೇಷನ್ ಎಲೆಮರೆಕಾಯಾಗಿ ಕಳೆದ ವರ್ಷದಿಂದ ಅಂದರೆ ಕೋವಿಡ್ 19 ಹಿನ್ನೆಲೆಯಲ್ಲಿ ನಿರ್ವಹಿಸಿಕೊಂಡು ಬಂದಿದ್ದು ಆ ಮೂಲಕ ಅಶಕ್ತರ ನೆರವಿಗೆ ಕೈಜೋಡಿಸಿಕೊಂಡು ಬಂದಿದೆ. ನಿರ್ಗತಿಕರಿಗೆ, ಅಶಕ್ತರಿಗೆ ಆಹಾರ ಹಾಗೂ ಬಟ್ಟೆ ಸೇರಿದಂತೆ ಅನೇಕ ರೀತಿಯ ದಿನ ಬಳಕೆ ವಸ್ತುಗಳನ್ನು ನೀಡಿಕೊಂಡು ಬಂದಿರುವ ಈ ಫೌಂಡೇಷನ್ ಸಾಮಾಜಿಕ ಕಳಕಳಿ ದೃಷ್ಟಿಯಿಂದ ಹುಟ್ಟಿಕೊಂಡಿರುತ್ತದೆ. ತನ್ನ ಸೇವೆಯನ್ನು ಬೆಂಗಳೂರು ನಗರಕ್ಕಷ್ಟೇ ಸೀಮಿತಗೊಳಿಸದೆ ರಾಜ್ಯದ ಮೂಲೆಮೂಲೆಗಳಲ್ಲಿ ತನ್ನ ಸೇವಾ ಕೈಂಕರ್ಯವನ್ನು ಪಸರಿಸಿಕೊಂಡು ಬಂದಿದೆ ಎನ್ನುತ್ತಾರೆ ಅಧ್ಯಕ್ಷರಾದ ಅನಿತಾ ಎಂ. ಆಚಾರ್ಯಾ ಅವರು.
ತಮ್ಮ ಈ ಎಲ್ಲ ಸೇವಾ ಕಾರ್ಯಗಳಿಗೆ ಇವೆಂಟ್ ಶೋಗಳನ್ನು ಆಯೋಜಿಸಿ ಬಂದ ಲಾಭವನ್ನು ವಿನಿಯೋಗಿಸಲಾಗುತ್ತದೆ. ರಾಜ್ಯದ ಯಾವುದೇ ಜಿಲ್ಲೆಯ ಯಾವುದೇ ಮೂಲೆಯಲ್ಲಿ ಅಶಕ್ತರು, ನಿರ್ಗತಿಕರ ನೆರವಿಗೆ ಧಾವಿಸುವುದು ಇವರ ಹವ್ಯಾಸವಾಗಿದೆ. ಕೋವಿಡ್ 19 ರ ಈ ಸಂದರ್ಭದಲ್ಲಿ ಹಸಿದವರಿಗಾಗಿ ಬೆಂಗಳೂರು ನಗರದ ಮಲ್ಲೇಶ್ವರಂ, ಬಸವೇಶ್ವರನಗರ, ರಾಜಾಜಿನಗರ ಹಾಗೂ ಶ್ರೀರಾಂಪುರ ವಲಯಗಳಲ್ಲಿ ನಿತ್ಯ 300 ಕ್ಕೂ ಹೆಚ್ಚು ಆಹಾರ ಪೊಟ್ಟಣ ಹಾಗೂ ನೀರನ್ನು ವಿತರಣೆ ಮಾಡಲಾಗುತ್ತಿದೆ. ಹಸಿದವರ ಹೊಟ್ಟೆ ತುಂಬಿಸುವ, ದಣಿದವರ ದಣಿವಾರಿಸುವ ಹಾಗೂ ಅನಾರೋಗ್ಯ ಪೀಡಿತರಿಗೆ ಮೆಡಿಷನ್ಸ್ ಅನ್ನು ನೀಡುವ ಕಾಯಕದಲ್ಲಿ ಭಾಗಿಯಾಗಿ ಜನ ಮೆಚ್ಚುಗೆ ಗಳಿಸಿದೆ ಅಕ್ಷೋಭಿಯಾ ಫೌಂಡೇಷನ್.
ಕಳೆದ 6 ತಿಂಗಳ ಹಿಂದಷ್ಟೇ ಅಧಿಕೃತವಾಗಿ ನೋಂದಣಿ ಮಾಡಿಸಿಕೊಂಡಿರುವ ಈ ಫೌಂಡೇಷನ್ ಕಾಯಕ 15 ವರ್ಷಗಳಿಂದಲೂ ಸದ್ದಿಲ್ಲದೆ ಸಾಗಿದೆ. ಸ್ಕಿಲ್ ಡೆವಲಪ್‌ಮೆಂಟ್ ಗಾಗಿ ಹುಟ್ಟಿಕೊಂಡ ಈ ಸಂಸ್ಥೆ ಶಿವಮೊಗ್ಗ ಜಿಲ್ಲೆ ಸೇರಿದಂತೆ ಆರ್ಥಿಕವಾಗಿ ಹಿಂದುಳಿದ ವಿವಿಧ ಪ್ರದೇಶಗಳಲ್ಲಿ ಉಚಿತವಾಗಿ ಕುಶಲಗಾರಿಕೆ ಹಾಗೂ ವಿವಿಧ ಕಲಾತ್ಮಕತೆಯನ್ನು ಕಲಿಸುವ ಯೋಜನೆ ಹೊಂದಿರುತ್ತದೆ. ಇದಿಷ್ಟೇ ಅಲ್ಲದೆ ಬೆಂಗಳೂರು ನಗರದ ಹೆಸರಘಟ್ಟ ಬಳಿ ಹಾಲು ಕರೆಯದ ಗೊಡ್ಡು ಹಸುಗಳ ಸಾಕಾಣಿಕೆಗಾಗಿ ಗೋಶಾಲೆ ನಿರ್ಮಿಸುವ ಕಾರ್ಯವನ್ನು ಸದ್ಯದಲ್ಲೇ ಕೈಗೊಳ್ಳಲಾಗುತ್ತದೆ ಎಂದು ಫೌಂಡೇಷನ್ ಮುಖ್ಯಸ್ಥರು ತಿಳಿಸಿರುವರು. ಯಾವುದೇ ರಾಜಕೀಯ ಭಿನ್ನ ಭೇದ ಇಲ್ಲದೆ ಈ ಕಾರ್ಯವನ್ನು ಸಾಮಾಜಿಕ ಕಳಕಳಿಯಿಂದ ಸಮಾನವಾಗಿ ಮುಂದುವರಿಸಿಕೊಂಡು ಸಾಗುವುದು ನಮ್ಮಮುಖ್ಯ ಉದ್ದೇಶ ವಾಗಿದೆ ಎಂದಿರುವ ಅವರ ಕಾರ್ಯ ಯಾವುದೇ ಅಡೆತಡೆಗಳಿಲ್ಲದೆ ಸಾಗಲಿ ಎಂದು ಆಶಿಸೋಣ.
ಕೋವಿಡ್ ಪಾಸಿಟಿವ್ ನಿಂದ ಹೋಮ್ ಕ್ವಾರಂಟೈನ್ ಆದ ಸೋಂಕಿತರಿಗೆ ಮೆಡಿಕಲ್ ಕಿಟ್ಗಳನ್ನು ನೀಡಲಾಗುತ್ತಿದೆ. ಜತೆಗೆ ಕೋವಿಡ್ ಸಂದರ್ಭದಲ್ಲಿ ಆಹಾರ ವಿತರಣೆಯಷ್ಟೇಯಲ್ಲದೆ ದಿನಬಳಕೆ ವಸ್ತಗಳಾದ ತರಕಾರಿ, ಸ್ಯಾನಿಟರಿ ನ್ಯಾಪ್ ಕಿನ್ಸ್ , ಬುಕ್ಸ್ ಹಾಗೂ ಮೆಡಿಕಲ್ ಕಿಟ್ ಗಳನ್ನು ಪೂರೈಸಲಾಗುತ್ತದೆ. ಮಾಸ್ಕ್ ಮತ್ತು ಸ್ಯಾನಿಟೈಸರ್ ಸಹ ನೀಡಲಾಗುತ್ತದೆ. ಕೋವಿಡ್ ಸಂದರ್ಭದಲ್ಲಿ ಸೀಲ್ ಡೌನ್ ಆದ ಏರಿಯಾಗಳಾದ ಚಂದ್ರಾಲೇ ಔಟ್, ಕನಕಪುರ , ಮಾರತ್ ಹಳ್ಳಿ, ದೇವನಹಳ್ಳಿ ,ಉತ್ತರಹಳ್ಳಿ ಹಾಗೂ ಸುಬ್ರಹ್ಮಣ್ಯಪುರ ಸೇರಿದಂತೆ ಮುಂತಾದ ಪ್ರದೇಶಗಳ ಜನರಿಗೆ ದಿನಸಿ ಕಿಟ್ ಹಾಗೂ ಮೆಡಿಕಲ್ ಕಿಟ್ ಗಳನ್ನು ವಿತರಿಸಲಾಗಿದೆ. ಸಿನಿಮಾ ಕಾರ್ಮಿಕರು ಹಾಗೂ ಪೌರ ಕಾರ್ಮಿಕರಿಗೆ ದಿನಸಿ ಪದಾರ್ಥಗಳ ಕಿಟ್ ಗಳನ್ನು ಸಹ ವಿತರಿಸಿದೆ. ಇದೇ ಜೂನ್ 11ರಂದು ಸಕ್ರಿಯಾ ಫೌಂಡೇಷನ್ ಜತೆಗೂಡಿ ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಐ.ಡಿ.ಹಳ್ಳಿ ಗ್ರಾಮದ ಹಕ್ಕಿಪಿಕ್ಕಿ ಜನಾಂಗದ 80 ಕುಟುಂಬಗಳಿಗೆ ದಿನಸಿ, ತರಕಾರಿ, ಸ್ಯಾನಿಟರಿ ನ್ಯಾಪ್ ಕಿನ್ಸ್ , ಬುಕ್ಸ್ ಹಾಗೂ ಮೆಡಿಕಲ್ ಕಿಟ್ ಗಳನ್ನು ವಿತರಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಅಕ್ಷೋಭಿಯಾ ಫೌಂಡೇಷನ್ ಮುಖ್ಯಸ್ಥರಾದ ಅನಿತಾ ಎಂ. ಆಚಾರ್ಯಾ ಹೇಳಿದರು.
ಕೋವಿಡ್ 19 ಹಿನ್ನೆಲೆಯಲ್ಲಿ ಬೆಂಗಳೂರು ನಗರದ ಮಲ್ಲೇಶ್ವರಂನ ಹಳ್ಳಿಮನೆ ಸಮೀಪದಲ್ಲಿರುವ ಅಕ್ಷೋಭಿಯಾ ಫೌಂಡೇಷನ್ ತನ್ನ ಮುಖ್ಯ ಕಚೇರಿ ಬಳಿ ವಿವಿಧ ವರ್ಗದ ಜನರಿಗೆ ಆಹಾರ ವಿತರಣೆ ಕಾರ್ಯಕ್ರಮ ನೆರವೇರಿಸಿತು.





0 Comments