Ticker

6/recent/ticker-posts

Ad Code

Responsive Advertisement

ಕಾಂಗ್ರೆಸ್, ಬಿಜೆಪಿ, ದಳದಿಂದ ದಲಿತ ಮುಖ್ಯಮಂತ್ರಿ ಸಾಧ್ಯವಿಲ್ಲ - ಬಿಎಸ್ಪಿ ರಾಜ್ಯಾಧ್ಯಕ್ಷ ಎಂ. ಕೃಷ್ಣಮೂರ್ತಿ

ಚಾಮರಾಜನಗರ: ಕಾಂಗ್ರೆಸ್ ಬಿಜೆಪಿ ಮುಂತಾದ ಮನುವಾದಿ ಪಕ್ಷಗಳಿಂದ ದಲಿತ ಮುಖ್ಯಮಂತ್ರಿ ಸಾಧ್ಯವಿಲ್ಲ, ಬಿಎಸ್ಪಿಯಿಂದ ಮಾತ್ರ ಸಾಧ್ಯ ಎಂದು ಬಿಎಸ್ಪಿ ರಾಜ್ಯಾಧ್ಯಕ್ಷ ಎಂ. ಕೃಷ್ಣಮೂರ್ತಿ ಹೇಳಿದರು. 

ಜಿಲ್ಲಾ  ಮತ್ತು ತಾಲೂಕು ಪಂಚಾಯತ್ ಚುನಾವಣೆಯ ಸಿದ್ಧತೆಗಾಗಿ ಚಾಮರಾಜನಗರದ ಜಿಲ್ಲಾ ಪದಾಧಿಕಾರಿಗಳ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ಕಾಂಗ್ರೆಸ್-ಬಿಜೆಪಿ ಮುಂತಾದ ಮನುವಾದಿ ಪಕ್ಷಗಳು ದಲಿತರನ್ನು ಕೇವಲ ವೋಟ್ ಬ್ಯಾಂಕ್ ಗಾಗಿ ಮಾತ್ರ ಬಳಸಿಕೊಂಡಿವೆ.

ಪ್ರಧಾನಮಂತ್ರಿ ಮತ್ತು ಮುಖ್ಯಮಂತ್ರಿ ಸ್ಥಾನಗಳ ವಿಚಾರ ಬಂದಾಗ ದಲಿತರನ್ನು ಅಸ್ಪೃಶ್ಯರನ್ನಾಗಿ ನಡೆಸಿಕೊಳ್ಳಲಾಗಿದೆ ಎಂದು ದೂರಿದರು.

ಪ್ರಧಾನಮಂತ್ರಿ ಮತ್ತು ಮುಖ್ಯಮಂತ್ರಿ ಸ್ಥಾನಗಳನ್ನು ಮನುವಾದಿ ಹೈಕಮಾಂಡ್ ಗಳ ಮುಂದೆ ಭಿಕ್ಷೆ ಬೇಡಿ ಪಡೆಯಲು ಸಾಧ್ಯವಿಲ್ಲ.

ಬಿಎಸ್ಪಿಯಂತಹ ಸ್ವಂತ ಪಕ್ಷದಿಂದ ಸಮಾಜವನ್ನು ಸಂಘಟಿಸಿ ದಕ್ಕಿಸಿಕೊಳ್ಳಬಹುದು ಎಂಬುದನ್ನು ಬಹುಜನ ಸಮಾಜ ಪಕ್ಷದ ಸಂಸ್ಥಾಪಕ ಮಾನ್ಯವರ್ ಕಾನ್ಸಿರಾಮ್ ಜೀ ಮತ್ತು ಉತ್ತರಪ್ರದೇಶದಲ್ಲಿ ನಾಲ್ಕು ಬಾರಿ ಮುಖ್ಯಮಂತ್ರಿಯಾಗಿದ್ದ ಅಕ್ಕ ಮಾಯಾವತಿ ಜೀ ಸಾಧಿಸಿ ತೋರಿಸಿದ್ದಾರೆ ಎಂದರು.

ಕಾಂಗ್ರೆಸ್ ಬಾಬಾಸಾಹೇಬ್ ಅಂಬೇಡ್ಕರ್ ಅವರನ್ನು ಪ್ರಧಾನಿಯಾಗಲು ಬಿಡಲಿಲ್ಲ.

ಇನ್ನು ಬಾಬು ಜಗಜೀವನರಾಮ್ ಕಾಂಗ್ರೆಸ್ ತೊರೆಯುವವರೆಗೆ ಉಪ ಪ್ರಧಾನಿಯಾಗಲು ಸಾಧ್ಯವಾಗಲಿಲ್ಲ.

ಕರ್ನಾಟಕದಲ್ಲಿ ಬಿ. ಬಸವಲಿಂಗಪ್ಪ, ಎನ್. ರಾಚಯ್ಯ, ಕೆ. ಎಚ್. ರಂಗನಾಥ್, ಮಲ್ಲಿಕಾರ್ಜುನ ಖರ್ಗೆ, ಕೆ.ಎಚ್. ಮುನಿಯಪ್ಪ, ವಿ. ಶ್ರೀನಿವಾಸ್ ಪ್ರಸಾದ್, ಜಿ. ಪರಮೇಶ್ವರ್ ಅವರನ್ನು ಬಳಸಿಕೊಂಡು ಮೂಲೆಗುಂಪು ಮಾಡಿದೆ ಎಂದರು.

ಇನ್ನು ಪ್ರಾರಂಭದಿಂದಲೂ ದಲಿತ ವಿರೋಧಿ ನೀತಿ ಮಾತ್ರವಲ್ಲ ಸಂವಿಧಾನ ಮತ್ತು ಪ್ರಜಾಪ್ರಭುತ್ವ ವಿರೋಧಿ ಮನಸ್ಥಿತಿ ಹೊಂದಿರುವ ಬಿಜೆಪಿಯಿಂದ ದಲಿತ ಸಿಎಂ, ಪಿಎಂ ಸಾಧ್ಯವಿಲ್ಲ ಎಂದರು.

ಹಾಗೆಯೇ ಕಾಂಗ್ರೆಸ್ ಎಡ-ಬಲ ಎಂದು ದಲಿತರನ್ನು ಒಡೆದು ಹಾಕಿದ್ದರೆ, ಬಿಜೆಪಿಯು ಸ್ಪೃಶ್ಯ ಮತ್ತು ಅಸ್ಪೃಶ್ಯರನ್ನು ಬೇರ್ಪಡಿಸಿ ಒಡೆದು ಆಳುವ ನೀತಿಯನ್ನು ಅನುಸರಿಸುತ್ತಿದೆ.

ಕಾಂಗ್ರೆಸ್ ಬಿಜೆಪಿ ಮುಂತಾದ ಪಕ್ಷಗಳಲ್ಲಿರುವ ದಲಿತ ನಾಯಕರು ಗಟ್ಟಿಧ್ವನಿಯಲ್ಲಿ ಮಾತನಾಡದಷ್ಟು ದುರ್ಬಲರಾಗಿದ್ದಾರೆ.

ಉದಾಹರಣೆಗೆ  ಕಾಂಗ್ರೆಸ್ ಸರ್ಕಾರದಲ್ಲಿ ಗೃಹ ಮಂತ್ರಿಯಾಗಿದ್ದ ಜಿ. ಪರಮೇಶ್ವರ್ ತಮ್ಮ ಗಮನಕ್ಕೆ ಬಾರದೆ ಐಪಿಎಸ್ ಅಧಿಕಾರಿಗಳ ವರ್ಗಾವಣೆ ಆಗುತ್ತಿದ್ದಾರೆ ಎಂದು ಅಳಲು ತೋಡಿಕೊಂಡಿದ್ದರು.

ಇನ್ನು ಬಿಜೆಪಿಯಲ್ಲಿ ಉಪಮುಖ್ಯಮಂತ್ರಿಯಾಗಿ ಲೋಕೋಪಯೋಗಿ ಸಚಿವರಾಗಿರುವ ಗೋವಿಂದ ಕಾರಜೋಳ ಅವರಿಗೆ ಒಬ್ಬ ಎಕ್ಸಿಕ್ಯೂಟಿವ್ ಇಂಜಿನಿಯರ್ ವರ್ಗಾವಣೆ ಮಾಡುವ ಶಕ್ತಿಯೂ ಇಲ್ಲ ಎಂಬುದು ವಾಸ್ತವ ಸಂಗತಿ ಯಾಗಿದೆ.

ಇನ್ನು ಸ್ವಂತ ಪಕ್ಷದಿಂದ ಉಚ್ಚಾಟಿಸಿ ಕೊಂಡು ಅತಂತ್ರವಾಗಿರುವ ಜಿಲ್ಲೆಯ ಶಾಸಕರೊಬ್ಬರು, ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ದಲಿತ ಮುಖ್ಯಮಂತ್ರಿ ಮಾಡಬೇಕೆಂದು ಒತ್ತಾಯಿಸುತ್ತಿರುವುದು ಹಾಸ್ಯಾಸ್ಪದ.

ಇವರು ಸಮ್ಮಿಶ್ರ ಸರ್ಕಾರದಲ್ಲಿ ಮಂತ್ರಿಯಾಗಿದ್ದಾಗ ಸಾವಿರಾರು ದಲಿತ ನೌಕರರಿಗೆ ಹಿಂಬಡ್ತಿ ಯಾಗಿದ್ದ ವಿಚಾರವನ್ನು ವಿಧಾನಸಭೆಯಲ್ಲಿ ಮಾತನಾಡಲು ಹಿಂಜರಿದಿದ್ದು ರಾಜ್ಯದ ಎಲ್ಲಾ ಜನತೆಗೆ ಗೊತ್ತಿದೆ.

ಸಚಿವ ಸಂಪುಟದಲ್ಲಿ ಮತ್ತು ವಿಧಾನಸಭೆಯಲ್ಲಿ ದಲಿತ ನೌಕರರಿಗೆ ಆಗಿದ್ದ ಅನ್ಯಾಯದ ಬಗ್ಗೆ ಗಟ್ಟಿಯಾಗಿ ಮಾತನಾಡದ ವ್ಯಕ್ತಿ, ಮುಖ್ಯಮಂತ್ರಿ ಸ್ಥಾನ ಕುರಿತು ಮಾತನಾಡುತ್ತಿರುವುದು ಬೂಟಾಟಿಕೆ ಅಲ್ಲದೆ ಮತ್ತೇನಲ್ಲ ಎಂದರು.

ದಲಿತ ಮುಖ್ಯಮಂತ್ರಿ ವಿಚಾರದಲ್ಲಿ ಪ್ರಾಮಾಣಿಕವಾಗಿ ಇರುವವರು ಪಕ್ಷಾತೀತವಾಗಿ ಬಿಎಸ್ಪಿಯನ್ನು ಬೆಂಬಲಿಸಬೇಕು. ಅಂತವರಿಗೆ ಬಿಎಸ್ಪಿ ಬಾಗಿಲು ಸದಾ ತೆರೆದಿರುತ್ತದೆ ಎಂದರು.

ರಾಜ್ಯದ ಜನತೆ ಮನುವಾದಿ ಕಾಂಗ್ರೆಸ್, ಬಿಜೆಪಿ ,ದಳಗಳ ಹಣ, ಹೆಂಡ ಮತ್ತು ಜಾತಿ ಆಮಿಷಗಳಿಗೆ ಬಲಿಯಾಗದೆ, ಬಹುಜನ ಸಮಾಜ ಪಕ್ಷ ದಿಂದ ಕೇವಲ 20 ಶಾಸಕರನ್ನು ಆಯ್ಕೆ ಮಾಡಿದರೆ, ಖಂಡಿತವಾಗಿಯೂ  ದಲಿತ ಮುಖ್ಯಮಂತ್ರಿ ಕನಸು ನನಸು ಮಾಡುತ್ತದೆ ಎಂದು ಸವಾಲು ಹಾಕಿದರು.

ರಾಜ್ಯದಲ್ಲಿ ದಲಿತರಿಗೆ ಮಾತ್ರವಲ್ಲ ಮುಸ್ಲಿಂ ಮತ್ತು ಹಿಂದುಳಿದ ವರ್ಗಗಳಿಗೆ ಮುಖ್ಯಮಂತ್ರಿ ಸ್ಥಾನದ ವಿಚಾರದಲ್ಲಿ ಅನ್ಯಾಯವಾಗಿದೆ.

     ಬಿಎಸ್ಪಿ ಮಾತ್ರ ದಲಿತ ಹಿಂದುಳಿದ ಮತ್ತು ಮುಸಲ್ಮಾನರಿಗೆ ಸಾಮಾಜಿಕ ಮತ್ತು ರಾಜಕೀಯ ನ್ಯಾಯವನ್ನು ಒದಗಿಸಲು ಸಾಧ್ಯ.      ಆದ್ದರಿಂದ ದಲಿತ-ಹಿಂದುಳಿದ ಮತ್ತು ಮುಸ್ಲಿಮರು ಬಿಎಸ್ಪಿಯನ್ನು ಬೆಂಬಲಿಸಬೇಕೆಂದು ಕರೆ ನೀಡಿದರು. ಮುಂಬರುವ ಜಿಲ್ಲಾ ಮತ್ತು ತಾಲೂಕ ಪಂಚಾಯತ್ ಚುನಾವಣೆಗಳನ್ನು ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಗಂಭೀರವಾಗಿ ಪರಿಗಣಿಸಿ ಗೆಲ್ಲಬೇಕೆಂದು ಕರೆ ನೀಡಿದರು.

ದೇಶ ಮತ್ತು ರಾಜ್ಯದಲ್ಲಿ ಕಾಂಗ್ರೆಸ್ ಬಿಜೆಪಿ ಪಕ್ಷಗಳು ಜನಮನ್ನಣೆಯನ್ನು ಕಳೆದುಕೊಂಡಿವೆ. ಬಿಜೆಪಿಯು ಪೆಟ್ರೋಲ್ ಡೀಸೆಲ್ ಮತ್ತು ಗ್ಯಾಸ್ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿ ಜನವಿರೋಧಿ ನೀತಿಯನ್ನು ಅನುಸರಿಸುತ್ತಿದೆ.   ಸರ್ಕಾರಗಳ ವೈಫಲ್ಯವನ್ನು ಗಟ್ಟಿಧ್ವನಿಯಲ್ಲಿ ಖಂಡಿಸಬೇಕಾಗಿದ್ದ ಕಾಂಗ್ರೆಸ್ ವಿರೋಧಪಕ್ಷವಾಗಿ ತನ್ನ ಜವಾಬ್ದಾರಿಯನ್ನು ನಿರ್ವಹಿಸಲು ಆಗದಷ್ಟು ದುರ್ಬಲವಾಗಿದೆ.

     ಇಂತಹ ಸಂದರ್ಭದಲ್ಲಿ ಬಿಎಸ್ಪಿ ಕಾರ್ಯಕರ್ತರು ಮತ್ತು ಮುಖಂಡರು ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ವೈಫಲ್ಯವನ್ನು ಹಾಗೂ ಜನವಿರೋಧಿ ನೀತಿಯ ವಿರುದ್ಧ ಜನರಲ್ಲಿ ಜಾಗೃತಿ ಮೂಡಿಸಬೇಕೆಂದು ಹೇಳಿದರು.   ಕೋವಿಡ್ ಮಹಾಮಾರಿ ಯಿಂದಾಗಿ ಕೋಟ್ಯಂತರ ಜನ ಉದ್ಯೋಗ ಕಳೆದುಕೊಂಡು ಬಡತನಕ್ಕೆ ಸಿಲುಕಿದ್ದಾರೆ. ವಿದ್ಯಾವಂತ ಯುವಕರು ಉದ್ಯೋಗವಿಲ್ಲದೆ ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಎದುರಾಗಿದೆ. ಕೇಂದ್ರದ ಮೂರು ರೈತ ವಿರೋಧಿ ಮಸೂದೆ ಗಳಿಂದಾಗಿ, ರೈತರು ಭೂಮಿ ಕಳೆದುಕೊಳ್ಳುವ ಆತಂಕ ಎದುರಿಸುತ್ತಿದ್ದಾರೆ.

ಇಂತಹ ಸಂದರ್ಭದಲ್ಲಿ ರೈತರು, ಕಾರ್ಮಿಕರು, ಬಡವರು ಮತ್ತು ನಿರುದ್ಯೋಗಿ ಯುವಕರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸವನ್ನು ಬಿಎಸ್ಪಿ ಕಾರ್ಯಕರ್ತರು ಮಾಡಬೇಕೆಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ನಾಗೇಂದ್ರ, ಜಿಲ್ಲಾಧ್ಯಕ್ಷ ನಾಗಯ್ಯ, ಬ್ಯಾಡಮೂಡ್ಲು ಬಸವಣ್ಣ,  ಬ.ಮಾ ಕೃಷ್ಣಮೂರ್ತಿ, ಪ್ರಕಾಶ್, ಸಿದ್ದಯ್ಯನಪುರ ಮಹೇಶ್, ಬಸವಣ್ಣ ಕಿಲಗೆರೆ, ಗ್ರಾಮ ಪಂಚಾಯಿತಿ ಸದಸ್ಯರಾದ ಶಿವಣ್ಣ, ಅಲೋಕ್, ಬಾಲರಾಜ್, ಖಲೀಲ್, ಇನಾಯತ್ ಪಾಷಾ, ರವಿ, ಮುಂತಾದವರು ಉಪಸ್ಥಿತರಿದ್ದರು.

Post a Comment

0 Comments

Ad Code

Responsive Advertisement