ಮಧುಗಿರಿ: ತಾಲೂಕಿನ ಪುರವರ ಹೋಬಳಿಯ ಪುರವರದ ಸರ್ಕಾರಿ ಪ್ರೌಢಶಾಲೆಯಲ್ಲಿ ಇಂದು ನಡೆಯುವ 10ನೇ ತರಗತಿ ಪರೀಕ್ಷೆಗೆ ಮಕ್ಕಳು ಆಗಮಿಸಿದ್ದಾರೆ. ಪರೀಕ್ಷೆಯ ಆತಂಕ ಮನೆಮಾಡಿದ್ದ ಹತ್ತನೇ ತರಗತಿ ಮಕ್ಕಳಲ್ಲಿ, ಇಂದು ನಿರಾಳ ಭಾವ ಮೂಡಿದೆ. ಕರೋನ ಪರಿಸ್ಥಿತಿಯಿಂದಾಗಿ ಪ್ರತಿವರ್ಷದಂತೆ ನಡೆಯಬೇಕಿದ್ದ ಹತ್ತನೇ ತರಗತಿ ಪರೀಕ್ಷೆಯು ಈ ಬಾರಿ ಕೇವಲ ಎರಡು ಪತ್ರಿಕೆಗಳನ್ನು ಒಳಗೊಂಡಿರುತ್ತದೆ. ಮೊದಲನೇ ಪತ್ರಿಕೆಯಾಗಿ ಇಂದು ಸಮಾಜ ವಿಜ್ಞಾನ, ಗಣಿತ ಮತ್ತು ವಿಜ್ಞಾನ ವಿಷಯಗಳು ಸೇರಿ ಒಂದು ಪತ್ರಿಕೆಯಾಗಿ ರೂಪಿಸಿದ್ದಾರೆ. ಹಾಗೆಯೇ ಪ್ರಶ್ನೆಪತ್ರಿಕೆಯು ಬಹು ಆಯ್ಕೆ ಪ್ರಶ್ನೆ ಪತ್ರಿಕೆ ಯಾಗಿದ್ದು ,ವಿದ್ಯಾರ್ಥಿಗಳು ಸರಿಯಾದ ಉತ್ತರವನ್ನು ಮಾತ್ರ ಆಯ್ಕೆ ಮಾಡುವ ಅವಕಾಶವಿರುತ್ತದೆ .
ಪರೀಕ್ಷೆ ಭಯದಲ್ಲಿ ತಲ್ಲಣಗೊಂಡಿದ್ದ ವಿದ್ಯಾರ್ಥಿಗಳು ಆರೋಗ್ಯದ ಹಿತದೃಷ್ಟಿಯಿಂದ ಮಾಸ್ಕ್ ಮತ್ತು ಸ್ಯಾನಿಟೈಸರ್ ಗಳನ್ನು ಬಳಸಿ ಅಂತರ ಕಾಪಾಡಿಕೊಳ್ಳುತ್ತಿದ್ದಾರೆ. ಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ ಪುರವರ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದಮಹೇಶ್ ಬಾಬು, ಹಾಗೂ ಶಿಕ್ಷಕರಾದ ಹನುಮಂತರಾಯಪ್ಪ, ಹೆಚ್ಚಿನ ಜಾಗೃತಿ ವಹಿಸಿ ಮಕ್ಕಳ ಕೈಗಳಿಗೆ ಸ್ಯಾನಿಟೈಸರ್ ಹಾಕಿ ಮಾಸ್ಕ್ ಗಳನ್ನು ನೀಡಿ, ಅಂತರವನ್ನು ಕಾಪಾಡಿ ಪರೀಕ್ಷೆ ಬರೆಸಲು ರೂಪರೇಷೆ ರೂಪಿಸಿರುವುದಾಗಿ ತಿಳಿಸಿದರು. ಹಾಗೆಯೇ ಮಕ್ಕಳನ್ನು ಪರೀಕ್ಷೆಗೆ ಕರೆದು ತಂದಿದ್ದ ಪೋಷಕರು ಸಹ ಅಂತರ ಕಾಯ್ದುಕೊಂಡು ಪರೀಕ್ಷೆ ಮುಗಿಯುವವರೆಗೂ ಕಾಯ್ದಿದ್ದು ಪರೀಕ್ಷೆ ಮುಗಿದ ನಂತರ ತಮ್ಮ ಮಕ್ಕಳನ್ನು ಸುರಕ್ಷಿತವಾಗಿ ತಮ್ಮ ಮನೆಗಳಿಗೆ ಕರೆದುಕೊಂಡು ಹೋಗಲು ಶಿಕ್ಷಕರು ಪೋಷಕರಿಗೆ ತಿಳಿಸಿದ್ದಾರೆ. . ವಿದ್ಯಾರ್ಥಿಗಳು, ಶಿಕ್ಷಕವೃಂದ,ಬೋಧಕೇತರ ವರ್ಗ ಮತ್ತು ಪೋಷಕರು ಸಹ ಹೆಚ್ಚಿನ ಜಾಗೃತಿ ವಹಿಸಿ ರುವುದಾಗಿ ಮುಖ್ಯೋಪಾಧ್ಯಾಯರು ತಿಳಿಸಿದರು. ಪರೀಕ್ಷೆ ಬರೆಯುತ್ತಿರುವ ಎಲ್ಲ ಮಕ್ಕಳಿಗೂ ಒಳ್ಳೆಯದಾಗಲಿ ಎಂದು ನಾವು ಸಹ ಆಶಿಸೋಣ. ಈ ವೇಳೆಯಲ್ಲಿ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತರು ಇದ್ದರು.

0 Comments