ಬೆಂಗಳೂರು, ಜುಲೈ 03 (ಕರ್ನಾಟಕ ವಾರ್ತೆ): ರಾಷ್ಟ್ರೀಯ ವೈದ್ಯರ ದಿನದಂದು ಮಾನ್ಯ ಆರೋಗ್ಯ ಸಚಿವರಿಂದ ಚಾಲನೆ ಪಡೆದ ಕನ್ನಡ ಕಾಯಕ ವರ್ಷದ "ಬಾರಿಸು ಕನ್ನಡ ಡಿಂಡಿಮವ ಅಭಿಯಾನಗಳ ಸರಣಿಯ" ವೈದ್ಯಕೀಯ ವಲಯದಲ್ಲಿ ಕನ್ನಡ ಬಳಕೆ ಜಾಗೃತಿ ಅಭಿಯಾನ ಸತತವಾಗಿ ಮೂರು ದಿನಗಳು ರಾಜ್ಯಾದ್ಯಂತ ಯಶಸ್ವಿಯಾಗಿ ನಡೆದಿದ್ದು, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ರಾಜ್ಯಮಟ್ಟದ ಸದಸ್ಯರ ನೇತೃತ್ವದಲ್ಲಿ, ರಾಜ್ಯಾದ್ಯಂತ ಇರುವ ಎಲ್ಲಾ ಜಿಲ್ಲಾ ಮಟ್ಟದ, ಮಹಾನಗರಪಾಲಿಕೆ, ಬೆಂಗಳೂರು ವಿಧಾನಸಭಾ ಕ್ಷೇತ್ರ ಮಟ್ಟದ ಕನ್ನಡ ಜಾಗೃತಿ ಸಮಿತಿ ಸದಸ್ಯರು ಮತ್ತು ಸ್ವಯಂಪ್ರೇರಿತ ಕನ್ನಡ ಕಾಯಕ ಪಡೆ ಸದಸ್ಯರು ವೈದ್ಯಕೀಯ ವಲಯದಲ್ಲಿ ಬರುವ ಆಸ್ಪತ್ರೆಯ ವೈದ್ಯಕೀಯ ಸಿಬ್ಬಂಧಿ, ಶುಶ್ರೂಕರು, ಪರಿಣಿತ ಶಸ್ತ್ರಚಿಕಿತ್ಸಕರು, ಔಷಧಾಲಯಗಳ ಮುಖ್ಯಸ್ಥರು, ಜಿಲ್ಲಾ ಆರೋಗ್ಯ ಇಲಾಖೆಯ ಮುಖ್ಯಸ್ಥರು ಹಾಗೂ ಔಷಧಿ ವ್ಯಾಪಾರಿಗಳು, ವಿತರಕರು, ವೈದ್ಯಕೀಯ ಶಿಕ್ಷಣ ಸಂಸ್ಥೆಗಳಿಗೆ ಭೇಟಿ ನೀಡಿ ಕರ್ನಾಟಕದಲ್ಲಿ ವೈದ್ಯಕೀಯ ಸೇವೆ ಪಡೆಯಲು ಬರುವ ಕನ್ನಡ ಬಲ್ಲ ಸಾಮಾನ್ಯ ಕನ್ನಡಿಗರ ನಾಳೆಗಳಿಗಾಗಿ ವೈದ್ಯಕೀಯ ಕ್ಷೇತ್ರದಲ್ಲಿ ಕನ್ನಡದ ಬಳಕೆ ಕಡ್ಡಾಯವಾಗಿ ಬೇಕೇ..ಬೇಕೆಂಬ ಹಕ್ಕೊತ್ತಾಯವನ್ನು ಸಲ್ಲಿಸಿ ಮನವಿ ಮಾಡಿಕೊಂಡಿದ್ದಾರೆ.
ಮುಖ್ಯಮಂತ್ರಿಗಳಿಂದ ಘೋಷಣೆಯಾದ ಕನ್ನಡ ಕಾಯಕ ವರ್ಷ ಈ ಕೊರೊನಾ-19 ರ ಸಂಕಷ್ಟದ ಸಮಯದಲ್ಲಿ ದಿನೇ ದಿನೇ ಕನ್ನಡಿಗರಲ್ಲಿ ಮರೆಯಾಗುತ್ತಿರುವ ಕನ್ನಡ ಬಳಕೆಯ ಕುರಿತು ಜಾಗೃತಿ ಮೂಡಿಸುವ ಸುಂದರ ಪರಿಕಲ್ಪನೆಯಾಗಿದ್ದು ಪ್ರಾಧಿಕಾರ ಈ ವರೆಗೂ ಸುಮಾರು 7 ಅಭಿಯಾನಗಳನ್ನು ಮಾಡಿದ್ದು, ಎಲ್ಲವೂ ಕರ್ನಾಟಕದ ಹತ್ತು ಹಲವು ಬಗೆಹರಿಯದ ಕನ್ನಡಿಗರ ಕೊರತೆಗಳಿಗೆ ಪರಿಹಾರ ಸೂಚಿಸುವ ಮೂಲಕ ಸಕಾರಾತ್ಮಕ ಬದಲಾವಣೆಗಳನ್ನು ತಂದಿವೆ. ಪ್ರಾಧಿಕಾರ ಮುಂದಿನ ದಿನಗಳಲ್ಲಿ ಈ ರೀತಿಯ ಹೆಚ್ಚೆಚ್ಚು ಕಾರ್ಯಕ್ರಮಗಳನ್ನು ಹಾಕಿಕೊಂಡಿದ್ದು, ಪ್ರತಿ ತಿಂಗಳಿಗೊಂದು ನೂತನ ಆಲೋಚನೆಗಳೊಂದಿಗೆ ಜನಸಾಮಾನ್ಯರನ್ನು ತಲುಪುವ ನಿಟ್ಟಿನಲ್ಲಿ ದಾಪುಗಾಲು ಹಾಕುತ್ತಾ ಕನ್ನಡದ ಅಸ್ಮಿತೆಗಾಗಿ ಹಾತೊರೆಯುತ್ತಿದೆ. ಈ ನಿಟ್ಟಿನಲ್ಲಿ ತಮ್ಮೆಲ್ಲರ ಸಹಕಾರ ಅತ್ಯಮೂಲ್ಯವಾಗಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.
0 Comments