Ticker

6/recent/ticker-posts

Ad Code

Responsive Advertisement

ಆರ್‌ಟಿಒದಲ್ಲಿ ಇನ್ನು ಮುಂದೆ ಪರೀಕ್ಷೆ ಇಲ್ಲದೇ ಸಿಗಲಿದೆ DL


 ಡ್ರೈವಿಂಗ್ ಲೈಸೆನ್ಸ್‌ ನಿರೀಕ್ಷೆಯಲ್ಲಿರುವ ಜನರಿಗೆ ಸರ್ಕಾರ ಸಿಹಿ ಸುದ್ದಿಯೊಂದನ್ನು ನೀಡಿದೆ. ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯ ಚಾಲನಾ ಪರವಾನಗಿ ಪಡೆಯಲು ಹೊಸ ಅಧಿಸೂಚನೆ ಹೊರಡಿಸಿದ್ದು, ಈ ನಿಯಮದ ಪ್ರಕಾರ ನೀವು ಡ್ರೈವಿಂಗ್ ಲೈಸೆನ್ಸ್‌ ಪಡೆಯಲು ಇದೀಗ ಆರ್‌ಟಿಒಗೆ ಹೋಗಿ ಚಾಲನಾ ಪರೀಕ್ಷೆಗೆ ಒಳಪಡಬೇಕಾಗಿಲ್ಲ.

ಆದರೆ ಯಾವುದೇ ಸರ್ಕಾರಿ ಮಾನ್ಯತೆ ಪಡೆದ ಚಾಲನಾ ತರಬೇತಿ ಕೇಂದ್ರದಿಂದ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವುದು ಕಡ್ಡಾಯವಾಗಿದೆ. ಅಂಥವರಿಗೆ ಚಾಲನಾ ಪರವಾನಗಿ ಅರ್ಜಿ ಸಲ್ಲಿಸುವಾಗ ಆರ್‌ಟಿಒದಲ್ಲಿ ನಡೆಯಲಿರುವ ಚಾಲನಾ ಪರೀಕ್ಷೆಯಿಂದ ವಿನಾಯಿತಿ ಸಿಗಲಿದೆ. 

ಜುಲೈ 1ರಿಂದ ಈ ಹೊಸ ನಿಯಮ ಜಾರಿಗೆ ಬರಲಿದೆ. ಚಾಲನಾ ಪರವಾನಗಿ ಪಡೆಯಲು ಅರ್ಜಿ ಸಲ್ಲಿಸುವ ವ್ಯಕ್ತಿಗೆ ಇನ್ನು ಆರ್‌ಟಿಒದಲ್ಲಿ ಚಾಲನಾ ಪರೀಕ್ಷೆಯ ಅಗತ್ಯವಿರುವುದಿಲ್ಲ. ಅವರ ಚಾಲನಾ ಪರವಾನಗಿಯನ್ನು ಅವರು ಚಾಲನೆ ತರಬೇತಿ ಪಡೆದುಕೊಂಡ, ರಾಜ್ಯ ಸಾರಿಗೆ ಪ್ರಾಧಿಕಾರ ಅಥವಾ ಕೇಂದ್ರ ಸರ್ಕಾರದಿಂದ ಮಾನ್ಯತೆ ಪಡೆದ ಖಾಸಗಿ ಚಾಲನಾ ತರಬೇತಿ ಕೇಂದ್ರದ ಪ್ರಮಾಣ ಪತ್ರವನ್ನು ಪರಿಗಣಿಸಿ ನೀಡಲಾಗುವುದು.

ಚಾಲನಾ ಟ್ರ್ಯಾಕ್, ಐಟಿ ಹಾಗೂ ಬಯೋಮೆಟ್ರಿಕ್ ವ್ಯವಸ್ಥೆಯ ಮಾನದಂಡಗಳನ್ನು ಪೂರೈಸುವ ಹಾಗೂ ನಿಗದಿತ ಪಠ್ಯಕ್ರಮದ ಪ್ರಕಾರ ತರಬೇತಿ ನೀಡುವ ಚಾಲನಾ ಕೇಂದ್ರಗಳಿಗೆ ಮಾನ್ಯತೆ ನೀಡಲಾಗುವುದು ಎಂದು ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯ ತನ್ನ ಅಧಿಸೂಚನೆಯಲ್ಲಿ ಉಲ್ಲೇಖಿಸಿದೆ. ಈ ಖಾಸಗಿ ಚಾಲನಾ ತರಬೇತಿ ಕೇಂದ್ರಗಳ ಮಾನ್ಯತೆ ಐದು ವರ್ಷಗಳವರೆಗೆ ಇರುತ್ತದೆ. ನಂತರ ಅವುಗಳನ್ನು ಸರ್ಕಾರ ನವೀಕರಿಸಬೇಕಾಗುತ್ತದೆ.

ಪ್ರತಿ ವರ್ಷ ರಸ್ತೆ ಅಪಘಾತದಿಂದ ಸಂಭವಿಸುತ್ತಿರುವ ಸಾವಿನ ಸಂಖ್ಯೆಯನ್ನು ನಿಯಂತ್ರಿಸಲು ಕೇಂದ್ರ ಈ ಕ್ರಮ ತೆಗೆದುಕೊಂಡಿರುವುದಾಗಿ ತಿಳಿಸಿದೆ. ಈ ಹೊಸ ಮಾರ್ಗಸೂಚಿಗಳೊಂದಿಗೆ, ಚಾಲನಾ ಕೌಶಲ ಹೆಚ್ಚಿಸುವ ಉದ್ದೇಶ ಸಚಿವಾಲಯದ್ದಾಗಿದೆ. ಚಾಲನಾ ತರಬೇತಿ ಕೇಂದ್ರಗಳಿಗೆ ಸಂಬಂಧಿಸಿದಂತೆ ರಸ್ತೆ ಮತ್ತು ಸಾರಿಗೆ ಸಚಿವಾಲಯದಿಂದ ಕೆಲವು ಷರತ್ತುಗಳನ್ನು ವಿಧಿಸಿದೆ.

ನಿಬಂಧನೆಗಳು ಏನು?
1. ಪ್ರತಿ 5 ವರ್ಷಗಳಿಗೆ ಖಾಸಗಿ ಚಾಲನಾ ತರಬೇತಿ ಕೇಂದ್ರಗಳ ಮಾನ್ಯತೆಯನ್ನು ನವೀಕರಿಸಿಕೊಳ್ಳಬೇಕು.
2. ದ್ವಿಚಕ್ರ, ತ್ರಿಚಕ್ರ ಹಾಗೂ ಲಘು ಮೋಟಾರು ವಾಹನಗಳ ತರಬೇತಿ ಕೇಂದ್ರಗಳು ಕನಿಷ್ಠ ಒಂದು ಎಕರೆ ಪ್ರದೇಶ ಜಾಗ ಹೊಂದಿರಬೇಕು.
3. ಮಧ್ಯಮ ಮತ್ತು ಭಾರೀ ಪ್ರಯಾಣಿಕ, ಸರಕು ವಾಹನಗಳು ಹಾಗೂ ಟ್ರೇಲರ್‌ಗಳ ತರಬೇತಿ ಕೇಂದ್ರಗಳಿಗೆ ಕನಿಷ್ಠ ಎರಡು ಎಕರೆ ಭೂಮಿ ಇರಬೇಕು.
4. ತರಬೇತುದಾರ ಕನಿಷ್ಠ 12ನೇ ತರಗತಿ ಪಾಸ್ ಆಗಿದ್ದು, ಕನಿಷ್ಠ 5 ವರ್ಷಗಳ ಚಾಲನಾ ಅನುಭವ ಹೊಂದಿರಬೇಕು.
5. ಚಾಲನಾ ತರಬೇತಿ ನೀಡುವವರು ಸಚಿವಾಲಯದ ಬೋಧನಾ ಪಠ್ಯಕ್ರಮದಂತೆ ತರಬೇತಿ ನೀಡಬೇಕು. ಲಘು ಮೋಟಾರು ವಾಹನ ಓಡಿಸಲು 29 ಗಂಟೆಗಳವರೆಗೆ ತರಬೇತಿ ನೀಡಬೇಕು.
6. ಚಾಲನಾ ಕೇಂದ್ರಗಳ ಪಠ್ಯಕ್ರಮವು ಸಿದ್ಧಾಂತ ಹಾಗೂ ಪ್ರಾಯೋಗಿಕ ಈ ಎರಡು ಭಾಗಗಳನ್ನು ಒಳಗೊಂಡಿರಬೇಕು.
7. ಚಾಲನೆಯ ಮೂಲ ಅಂಶಗಳನ್ನು ಪ್ರಾಯೋಗಿಕ ಕಲಿಕೆ ಮೂಲಕ 21 ಗಂಟೆಗಳ ಕಾಲ ಕಲಿಯಬೇಕಾಗುತ್ತದೆ.
8. ಸಿದ್ಧಾಂತದ ಕಲಿಕೆಯು 8 ಗಂಟೆಗಳ ಅವಧಿಯದ್ದಾಗಿರಬೇಕು.

Post a Comment

0 Comments

Ad Code

Responsive Advertisement