ನಿನ್ನೆ ಕುಮಾರಕೃಪ ಅತಿಥಿಗೃಹದಲ್ಲಿ ಅರುಣ್ ಸಿಂಗ್ ಅವರನ್ನು ಭೇಟಿಯಾದ ವೇಳೆ ವಿಜಯೇಂದ್ರ ಜೊತೆ ಮಾತುಕತೆ ನಡೆಸಿದ ಅವರು, ಅನಗತ್ಯವಾಗಿ ಮೈಮೇಲೆ ವಿವಾದಗಳನ್ನು ಎಳೆದುಕೊಳ್ಳಬೇಡಿ ಎಂದು ಕಿವಿಮಾತು ಹೇಳಿದ್ದಾರೆ.
ಸಚಿವರು , ಶಾಸಕರು , ನಾಯಕರು ನಿಮ್ಮ ಮೇಲೆಯೇ ಆರೋಪ ಮಾಡುತ್ತಾರೆ. ಹೈಕಮಾಂಡ್ ಬಳಿಯೂ ಕೂಡ ನಿಮ್ಮ ಮೇಲೆ ಆರೋಪ ಮಾಡಲಾಗಿದೆ. ಇಷ್ಟೆಲ್ಲ ಗೊಂದಲಕ್ಕೆ ನೀವೇ ಕಾರಣ ಎನ್ನಲಾಗುತ್ತಿದೆ. ಕೆಲವು ಸಚಿವರ ಇಲಾಖೆ ಹಾಗೂ ಸರ್ಕಾರದ ಪ್ರಮುಖ ತೀರ್ಮಾನಗಳಲ್ಲಿ ಹಸ್ತಕ್ಷೇಪ ಮಾಡಲಾಗುತ್ತಿದೆ ಎಂಬ ಆರೋಪದ ಹಿನ್ನೆಲೆ, ಮುಖ್ಯಮಂತ್ರಿ ಯಡಿಯೂರಪ್ಪ ಅವರ ಪುತ್ರ ಬಿ.ವೈ.ವಿಜಯೇಂದ್ರ ಅವರಿಗೆ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಬುದ್ದಿವಾದ ಹೇಳಿದ್ದಾರೆ.
ಸಚಿವರ ಇಲಾಖೆಯಲ್ಲಿ ಹಸ್ತಕ್ಷೇಪ ಸಿಎಂ ಆಡಳಿತದಲ್ಲಿ ಶಕ್ತಿಕೇಂದ್ರವಾಗಿರುವುದರಿಂದ ಬೇರೆ ಬೇರೆ ಭ್ರಷ್ಟಾಚಾರ ಆರೋಪ ಕೇಳಿ ಬಂದಿದೆ. ಇದು ಪಕ್ಷ ಮತ್ತು ಸರ್ಕಾರದ ವರ್ಚಸ್ಸಿಗೆ ಡ್ಯಾಮೇಜ್ ಆಗಲಿದೆ ಎಂದು ಅಸಮಾಧಾನ ಹೊರ ಹಾಕಿದ್ದಾರೆ.
ಕೋವಿಡ್ ಸಂದರ್ಭದಲ್ಲಿ ಸಾರ್ವಜನಿಕರು , ವಿಪಕ್ಷಗಳ ಮುಂದೆ ಮುಜುಗರವಾಗಿದೆ. ನಿಮ್ಮ ತಂದೆ ಯಡಿಯೂರಪ್ಪ ದೊಡ್ಡ ನಾಯಕ ರಾಜ್ಯದಲ್ಲಿ ಬಿಜೆಪಿ ಕಟ್ಟಿ ಬೆಳೆಸಿದವರು. ದಕ್ಷಿಣ ಭಾರತದಲ್ಲಿ ಬಿಜೆಪಿಯನ್ನು ಅಕಾರಕ್ಕೆ ತಂದವರು ಜನಪ್ರಿಯ ಯೋಜನೆಗಳನ್ನು ಜಾರಿಗೆ ತಂದವರು. ನಿಮ್ಮಿಂದ ಯಡಿಯೂರಪ್ಪ ಅವರಿಗೆ ಕೆಟ್ಟ ಹೆಸರು ಬರದಂತೆ ನೋಡಿಕೊಳ್ಳಿ ಎಂದು ಸಲಹೆ ಮಾಡಿದ್ದಾರೆಂದು ತಿಳಿದುಬಂದಿದೆ.
ನಿಮ್ಮ ತಂದೆಯ ಹೆಸರು ಉಳಿಸಿ. ನೀವಿನ್ನು ಯುವಕರು. ನಿಮಗೆ ಮುಂದೆ ಎತ್ತರಕ್ಕೆ ಬೆಳೆಯುವೀ ಅವಕಾಶಗಳು ಸಾಕಷ್ಟಿವೆ. ತಂದೆಯವರ ಹೆಸರೆ ನಿಮಗೆ ದೊಡ್ಡ ಬ್ರಾಂಡ್. ಪಕ್ಷ ಮತ್ತು ಸರ್ಕಾರದ ಇಮೇಜ್ ಹೆಚ್ಚಿಸುವಲ್ಲಿ ಗಮನ ಕೊಡಿ ಸಚಿವರ ಇಲಾಖೆಗಳಲ್ಲಿ ಹಸ್ತಕ್ಷೇಪ ಮಾಡಬೇಡಿ. ನೀವು ಬಿಜೆಪಿಯ ದೊಡ್ಡ ನಾಯಕ ಆಗೋ ಲಕ್ಷಣ ಇದೆ. ಮುಂದೆ ಹೈಕಮಾಂಡ್ ನಿಮ್ಮನ್ನ ಕೈ ಹಿಡಿಯಲಿದೆ ಒಳ್ಳೆ ನಾಯಕನಾಗುವ ಎಲ್ಲಾ ಲಕ್ಷಣಗಳು ನಿಮಗಿದೆ. ಎಚ್ಚರಿಕೆಯಿಂದ ಹೆಜ್ಜೆ ಇಡಿ ಎಂದು ಬೆನ್ನುತಟ್ಟಿದ್ದಾರೆ.
ಬಿಎಸ್‍ವೈಗೆ ಉತ್ತಮ ಆಡಳಿತ ಕೊಡುವಲ್ಲಿ ನೆರವಾಗಿ ಪಕ್ಷ ಸಂಘಟನೆ ಮಾಡಿ, ಹೈಕಮಾಂಡ್ ಪ್ರೀತಿ ಪಾತ್ರ ಗಳಿಸಿ ಎಂದು ಬುದ್ದಿ ಮಾತು ಹೇಳಿದ್ದಾರೆ.

0 Comments