ತಿರುವನಂತಪುರಂ: ದಾಖಲೆ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಕೇರಳ ವಿವಿಗೆ ಅರ್ಜಿ ಸಲ್ಲಿಸಿದ್ದು, ಇದರಲ್ಲಿ ಬಹುತೇಕ ವಿದ್ಯಾರ್ಥಿಗಳು ಇರಾಕ್ ಮತ್ತು ಅಫಘಾನಿಸ್ಥಾನ ದೇಶದವರು ಎನ್ನುವುದಿಲ್ಲಿ ಗಮನಿಸಬೇಕಾದ ವಿಚಾರ. ದೇಶದ ಯಾವುದೇ ವಿಶ್ವವಿದ್ಯಾಲಯಕ್ಕೆ ಇಲ್ಲದ ಬೇಡಿಕೆ ಕೇರಳದ ಯುನಿವರ್ಸಿಟಿಗೆ ಸಿಗುತ್ತಿರುವುದು ಹಲವು ಅನುಮಾನಗಳಿಗೆ ಎಡೆಮಾಡಿ ಕೊಟ್ಟಿದೆ.
ಬೇರೆ ಬೇರೆ ಕೋರ್ಸುಗಳಿಗೆ ಸಾವಿರಾರು ಸಂಖ್ಯೆಯಲ್ಲಿ ಈ ಎರಡು ದೇಶಗಳ ವಿದ್ಯಾರ್ಥಿಗಳು ಯುನಿವರ್ಸಿಟಿ ಆಫ್ ಕೇರಳಕ್ಕೆ ಅರ್ಜಿ ಸಲ್ಲಿಸಿರುವುದನ್ನು ಉಲ್ಲೇಖಿಸಿ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆ ವರದಿ ಮಾಡಿದೆ.
ಕಳೆದ ವರ್ಷ ಇರಾನ್ ದೇಶದ ವಿದ್ಯಾರ್ಥಿಗಳಿಂದ ಹೆಚ್ಚಿನ ಅರ್ಜಿ ಸಲ್ಲಿಕೆಯಾಗಿತ್ತು. ಆದರೆ, ಈ ಬಾರಿ ಇರಾಕ್ ಮತ್ತು ಅಫಘಾನಿಸ್ಥಾನ ದೇಶದಿಂದ ಬಂದಿದೆ ಎಂದು ವಿವಿಯ ಅಧಿಕಾರಿಗಳು ಸ್ಪಷ್ಟ ಪಡಿಸಿದ್ದಾರೆ. ದೇಶದ ಗುಪ್ತಚರ ಸಂಸ್ಥೆಗಳು ಇದನ್ನು ಅನುಮಾನಾಸ್ಪದವಾಗಿ ನೋಡುತ್ತಿವೆ ಎಂದು ಹೇಳಲಾಗುತ್ತಿದೆ.
ಕಳೆದ ವರ್ಷದ ವರೆಗೆ ವಿದೇಶಿ ವಿದ್ಯಾರ್ಥಿಗಳು ಭಾರತದ ಯುನಿವರ್ಸಿಟಿಯಲ್ಲಿ ದಾಖಲಾಗಲು ಐಸಿಸಿಆರ್ (ಇಂಡಿಯನ್ ಕೌನ್ಸಿಲ್ ಫಾರ್ ಕಲ್ಚರಲ್ ರಿಲೇಶನ್ಸ್) ಮೂಲಕ ಅರ್ಜಿ ಸಲ್ಲಿಸಬೇಕಾಗಿತ್ತು. ಆದರೆ, ಕೋವಿಡ್ ಹಾವಳಿಯಿಂದಾಗಿ ಈ ನಿಯಮವನ್ನು ಕೇಂದ್ರ ಸರಕಾರ ಬದಲಿಸಿತ್ತು.
ಈಗ ಐಸಿಸಿಆರ್ ವೆಬ್ ಪೋರ್ಟಲ್ ಆರಂಭಿಸಿದ್ದು, ಆ ಮೂಲಕ ವಿದೇಶಿ ವಿದ್ಯಾರ್ಥಿಗಳು ಭಾರತದ ವಿವಿಧ ನಗರಗಳಲ್ಲಿ ತಮಗೆ ಬೇಕಾಗಿರುವ ಯುನಿವರ್ಸಿಟಿಯನ್ನು ತಾವೇ ಆಯ್ಕೆ ಮಾಡಬಹುದಾಗಿದೆ. ವಿದ್ಯಾರ್ಥಿಗಳು ತಮ್ಮ ಆಯ್ಕೆಯ ವಿವಿಯನ್ನು ನೊಂದಾಯಿಸಿದ್ದರೂ, ಐಸಿಸಿಆರ್ ಅಂತಿಮವಾಗಿ ನಿರ್ಧಾರ ತೆಗೆದುಕೊಳ್ಳುವ ನಿಯಮಗಳನ್ನು ಮಾಡಲಾಗಿದೆ.
"ಅರ್ಜಿ ಸಲ್ಲಿಸಿರುವ ಹೆಚ್ಚಿನ ವಿದ್ಯಾರ್ಥಿಗಳು ಇರಾಕ್ ಮತ್ತು ಅಫಘಾನಿಸ್ಥಾನ ದೇಶದವರು ಮತ್ತು ಇವರು ಪಿಎಚ್ಡಿ ಕೋರ್ಸಿಗೆ ಅರ್ಜಿ ಸಲ್ಲಿಸಿದ್ದಾರೆ. ಅವರ ಇದುವರೆಗಿನ ಶೈಕ್ಷಣಿಕ ಅಂಕಗಳು ಮತ್ತು ಇಂಗ್ಲಿಷ್ ಭಾಷೆಯ ಮೇಲಿರುವ ಹಿಡಿತವನ್ನು ಆಧರಿಸಿ ಮತ್ತು ಐಸಿಸಿಆರ್ ಶಿಫಾರಸಿನ ಮೂಲಕ ಸೀಟು ನೀಡಲಾಗುವುದು"ಎಂದು ಕೇರಳ ವಿವಿಯ ಶಿಬು ಜೋಸೆಫ್ ಹೇಳಿದ್ದಾರೆ.
ಅಮೆರಿಕಾ, ದಕ್ಷಿಣ ಆಫ್ರಿಕಾ, ಬಾಂಗ್ಲಾದೇಶ, ಇಂಡೋನೇಶ್ಯಾ, ಸಿರಿಯಾ, ಪ್ಯಾಲೆಸ್ತೇನ್, ಶ್ರೀಲಂಕಾ, ಕೀನ್ಯಾ, ಘಾನಾ, ಕಂಬೊಡಿಯಾ ಮುಂತಾದ ದೇಶಗಳ ವಿದ್ಯಾರ್ಥಿಗಳೂ ಕೇರಳ ವಿವಿಯಲ್ಲಿ ಅರ್ಜಿ ಸಲ್ಲಿಸಿದ್ದಾರೆ. ವಿದ್ಯಾರ್ಥಿಗಳ ಚಲನವಲನದ ಕಡೆ ಕೂಡಾ ಗಮನ ಹರಿಸಬೇಕಾಗಿರುವುದರಿಂದ ಅತಿಹೆಚ್ಚಿನ ಶುಲ್ಕವನ್ನು ವಿದೇಶಿ ವಿದ್ಯಾರ್ಥಿಗಳಿಂದ ಪಡೆಯಲಾಗುತ್ತಿದೆ. ಉಗ್ರ ಚಟುವಟಿಕೆಗಳಿಗೆ ಮೂಲ ಕೇರಳದಲ್ಲಿ ಹೆಚ್ಚಾಗಿದ್ದ ಕಾರಣಕ್ಕಾಗಿ, ಗುಪ್ತಚರ ಸಂಸ್ಥೆಗಳು ಎರಡು ದೇಶದಿಂದ ಹೆಚ್ಚಿನ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿರುವುದುಅನ್ನು ಅನುಮಾನಾಸ್ಪದವಾಗಿ ನೋಡುತ್ತಿವೆ.

0 Comments