ಡೆಲ್ಟಾ ಪ್ಲಸ್ ಹೊಸ ರೂಪಾಂತರ ದೇಶದಲ್ಲಿ ಜೂನ್ 11ರಂದು ಪತ್ತೆಯಾಗಿದ್ದು, ಇದು ಕಳವಳಕಾರಿ ರೂಪಾಂತರ ಎಂದು ಕೇಂದ್ರ ಘೋಷಿಸಿದೆ. ಸೋಂಕಿನ ಸ್ವರೂಪದ ಕುರಿತು ಕೆಲವು ಅಂಶಗಳನ್ನು ಪ್ರಾಥಮಿಕ ಅಧ್ಯಯನದಿಂದ ಕಲೆ ಹಾಕಲಾಗಿದೆ. ಇದರ ಪ್ರಕಾರ, ಬೇರೆ ಕೊರೊನಾ ರೂಪಾಂತರಗಳಿಗೆ ಹೋಲಿಸಿದರೆ ಡೆಲ್ಟಾ ಪ್ಲಸ್ ರೂಪಾಂತರ ಶ್ವಾಸಕೋಶದ ಅಂಗಾಂಶಗಳಿಗೆ ಬೇಗನೇ ವ್ಯಾಪಿಸುವುದಾಗಿ ತಿಳಿದುಬಂದಿದೆ.
ದೇಶದಲ್ಲಿ ಈಚೆಗೆ ಪತ್ತೆಯಾಗಿರುವ ಹೊಸ ಕೊರೊನಾ ರೂಪಾಂತರ "ಡೆಲ್ಟಾ ಪ್ಲಸ್" ಕುರಿತು ವಿಶ್ಲೇಷಣೆಗಳು ನಡೆಯುತ್ತಿವೆ. ಡೆಲ್ಟಾ ಪ್ಲಸ್ ರೂಪಾಂತರದ ಸ್ವರೂಪ, ಪ್ರಭಾವ ಹಾಗೂ ವ್ಯಾಪ್ತಿಯ ಕುರಿತು ತಜ್ಞರು ಅಧ್ಯಯನ ನಡೆಸುತ್ತಿದ್ದಾರೆ.
ಕೊರೊನಾ ಸೋಂಕಿನ ಲಸಿಕೆ ಕಾರ್ಯಕ್ರಮದ ರಾಷ್ಟ್ರೀಯ ತಾಂತ್ರಿಕ ಸಲಹಾ ಸಮಿತಿ ಮುಖ್ಯಸ್ಥ ಡಾ. ಎನ್.ಕೆ. ಅರೋರಾ, ಈ ರೂಪಾಂತರದ ಕುರಿತು ಪ್ರಾಥಮಿಕ ಮಾಹಿತಿ ಹಂಚಿಕೊಂಡಿದ್ದು, "ಬೇರೆ ರೂಪಾಂತರಗಳಿಗೆ ಹೋಲಿಕೆ ಮಾಡಿದಾಗ, ಈ ರೂಪಾಂತರ ಶ್ವಾಸಕೋಶದ ಅಂಗಾಂಶಗಳನ್ನು ಬೇಗ ಆವರಿಸುತ್ತವೆ. ಹಾಗೆಂದು ಇದು ಗಂಭೀರ ಸಮಸ್ಯೆ ಎಂದು ಆತಂಕ ಪಡುವ ಅಗತ್ಯವಿಲ್ಲ" ಎಂದು ಹೇಳಿದ್ದಾರೆ.
ದೇಶದಲ್ಲಿ ಇದುವರೆಗೂ ಡೆಲ್ಟಾ ಪ್ಲಸ್ ರೂಪಾಂತರದ 51 ಪ್ರಕರಣಗಳು ಕಂಡುಬಂದಿವೆ. 12 ರಾಜ್ಯಗಳಲ್ಲಿ ಈ ಪ್ರಕರಣಗಳು ಪತ್ತೆಯಾಗಿದ್ದು, ಮಹಾರಾಷ್ಟ್ರದಲ್ಲಿ ಅತಿ ಹೆಚ್ಚಿನ ಪ್ರಕರಣಗಳು ದಾಖಲಾಗಿವೆ.
"ಬೇರೆ ರೂಪಾಂತರಗಳಿಗೆ ಹೋಲಿಸಿದರೆ ಡೆಲ್ಟಾ ಪ್ಲಸ್ ಶ್ವಾಸಕೋಶದ ಮ್ಯೂಕೋಸಲ್ ಲೈನಿಂಗ್ ಮೇಲೆ ಪ್ರಭಾವ ತೋರಲಿದೆ. ಆದರೆ ಎಷ್ಟರ ಮಟ್ಟಿಗೆ ಪರಿಣಾಮ ಬೀರಲಿದೆ ಎಂಬುದರ ಕುರಿತು ಸ್ಪಷ್ಟನೆ ದೊರೆತಿಲ್ಲ. ಜೊತೆಗೆ ಇದು ಅತಿ ಗಂಭೀರ ಮಟ್ಟಕ್ಕೆ ತಲುಪಬಹುದೇ ಎಂಬುದು ತಿಳಿದುಬಂದಿಲ್ಲ" ಎಂದು ಅರೋರಾ ಅವರು ತಿಳಿಸಿದ್ದಾರೆ.
ಹೆಚ್ಚಿನ ಪ್ರಕರಣಗಳು ಪತ್ತೆಯಾಗುತ್ತಿದ್ದಂತೆ ಡೆಲ್ಟಾ ಪ್ಲಸ್ ರೂಪಾಂತರ ಪ್ರಭಾವದ ಕುರಿತು ಸ್ಪಷ್ಟನೆ ಸಿಗುತ್ತದೆ. ಆದರೆ ಒಂದು ಅಥವಾ ಎರಡು ಡೋಸ್ ಲಸಿಕೆ ಪಡೆದ ಎಲ್ಲರಲ್ಲೂ ಈ ಸೋಂಕಿನ ಪ್ರಮಾಣ ಸೌಮ್ಯವಾಗಿರಲಿದೆ. ನಾವು ಬಹಳ ಸೂಕ್ಷ್ಮವಾಗಿ ಈ ಸೋಂಕಿನ ಹರಡುವಿಕೆಯನ್ನು ಗಮನಿಸಬೇಕು. ಆಗ ಇದರ ಪ್ರಸರಣ ವೇಗದ ಬಗ್ಗೆ ಒಂದು ಸ್ಪಷ್ಟತೆ ಸಿಗುತ್ತದೆ ಎಂದಿದ್ದಾರೆ. ಕೊರೊನಾ ಲಕ್ಷಣಗಳು ಕಂಡುಬರದೇ ಸೋಂಕು ಆವರಿಸುವ ಸಾಧ್ಯತೆಯೂ ಇದೆ ಎಂದಿದ್ದಾರೆ.
ಆದರೆ ಈ ರೂಪಾಂತರವನ್ನು ಬಹುಬೇಗನೇ ಗುರುತಿಸಿ ಅದರ ಜೆನೋಮ್ ಸೀಕ್ವೆನ್ಸ್ ನಡೆಸಲಾಗುತ್ತಿದೆ. ಹಲವು ರಾಜ್ಯಗಳು ಈಗಾಗಲೇ ಮೈಕ್ರೋ ಪ್ಲಾನ್‌ಗಳನ್ನೂ ಯೋಜಿಸಿವೆ. ಇದು ಈ ರೂಪಾಂತರ ಹರಡುವಿಕೆ ತಡೆಗೆ ನೆರವಾಗಲಿದೆ. ಈ ಪ್ರದೇಶಗಳಲ್ಲಿ ಲಸಿಕೆಗಳನ್ನೂ ಶೀಘ್ರಗತಿಯಲ್ಲಿ ನೀಡಬೇಕಿದೆ ಎಂದು ಸಲಹೆ ನೀಡಿದ್ದಾರೆ.
ಈ ರೂಪಾಂತರದಿಂದ ಕೊರೊನಾ ಮೂರನೇ ಅಲೆ ಸಾಧ್ಯತೆಯ ಪ್ರಶ್ನೆಗೆ ಉತ್ತರಿಸಿರುವ ಅವರು, "ಈಗಲೇ ರೂಪಾಂತರ ಹಾಗೂ ಅದರ ಪರಿಣಾಮದ ಕುರಿತು ಉತ್ತರಿಸುವುದು ಕಷ್ಟ. ಎರಡನೇ ಅಲೆಯಲ್ಲಿ ಎಷ್ಟು ಜನರು ಸೋಂಕಿಗೆ ಒಳಗಾಗಿದ್ದರು ಎಂಬುದು ಮೂರನೇ ಅಲೆ ಸಾಧ್ಯತೆಯ ಪರಿಣಾಮದ ಬಗ್ಗೆ ಊಹಿಸಬಹುದು. ಜೊತೆಗೆ ಎಷ್ಟು ಜನರು ಲಸಿಕೆ ಪಡೆದುಕೊಂಡಿದ್ದಾರೆ ಎಂಬುದು ಮುಖ್ಯವಾಗುತ್ತದೆ. ಒಂದು ಡೋಸ್ ಲಸಿಕೆಯನ್ನಾದರೂ ಪಡೆದಿದ್ದರೆ ಕೊರೊನಾ ಮೂರನೇ ಅಲೆ ಪ್ರಭಾವವನ್ನು ನಿಯಂತ್ರಿಸಬಹುದಾಗಿದೆ ಎಂದಿದ್ದಾರೆ.

0 Comments