ಮೊದಲ ವರ್ಷದ ಹುಟ್ಟು ಹಬ್ಬದಂದು ಆಕಸ್ಮಿಕವಾಗಿ ಪ್ಲಾಸ್ಟಿಕ್ ಸ್ಟಿಕ್ಕರ್ ನುಂಗಿದ ಪರಿಣಾಮ ಮಗು ಪ್ರಾಣಕ್ಕೆ ಕಂಟಕ ತಂದುಕೊಂಡಿತ್ತು. ಇದರ ಪರಿಣಾಮ ನಿರಂತರವಾಗಿ ಕೆಮ್ಮುವುದು, ಉಸಿರಾಟದ ವೇಳೆ ಜೋರಾದ ಸದ್ದು ಕೇಳಲಾರಂಭಿಸಿತು. ಕೊನೆಗೂ ವೈದ್ಯರ ನೈಪುಣ್ಯತೆಯ ಪರಿಣಾಮವಾಗಿ ಶ್ವಾಸಕೋಶಕ್ಕೆ ನುಗ್ಗಿದ್ದ ಪ್ಲಾಸ್ಟಿಕ್ ಸ್ಟಿಕ್ಕರ್ ಗಳನ್ನ ಹೊರತೆಗೆಯಲಾಗಿದ್ದು, ಮಗು ಅಪಾಯದಿಂದ ಪಾರಾಗಿದೆ.
ಸಾಮಾನ್ಯವಾಗಿ ಹುಟ್ಟುಹಬ್ಬದ ಆಚರಣೆ ಎಂದರೆ ಎಲ್ಲರೂ ಸಂಭ್ರಮದಲ್ಲಿರುತ್ತಾರೆ. ಹಾಗೆಯೇ ಇಲ್ಲಿಯೂ ಸಂಭ್ರಮದ ಕ್ಷಣವೊಂದು ಕೆಲವೇ ಗಂಟೆಗಳಲ್ಲಿ ಆತಂಕದ ಘಳಿಗೆಯಾಗಿ ಮಾರ್ಪಟ್ಟಿತ್ತು. ಆಕಸ್ಮಿಕವಾಗಿ ಮಗು ಹೇಗೋ ಡೆಕೋರೇಷನ್ ಗೆಂದು ತಂದಿದ್ದ ಪ್ಲಾಸ್ಟಿಕ್ ಸ್ಟಿಕ್ಕರ್ ನ ತುಂಡೊಂದನ್ನ ಮಗು ನುಂಗಿಬಿಟ್ಟಿದೆ. ಇದು ಅಲ್ಲಿದ್ದ ಯಾರ ಗಮನಕ್ಕೂ ಬಂದೇಯಿಲ್ಲ. ಅದಾದ ಕೆಲ ಸಮಯದ ನಂತರ ಮಗು ಕೆಮ್ಮುವುದಕ್ಕೆ ಆರಂಭಿಸಿದೆ. ಹಾಗೆಯೇ ಉಸಿರಾಡುವಾಗ ಭಾರೀ ಸದ್ದು ಕೇಳುತ್ತಿತ್ತು. ಎರಡು ವಾರಗಳ ಹೀಗೆ ಮುಂದುವರೆದಿದೆ. ಈ ಸಮಯದಲ್ಲಿ ಹಲವು ವೈದ್ಯರನ್ನ ಭೇಟಿಯಾದರು ಯಾವುದೇ ಪ್ರಯೋಜನವಾಗಿಲ್ಲ. ಆ ನಂತರದಲ್ಲಿ ಶಿಶುಕಾ ಆಸ್ಪತ್ರೆಯ ಮಕ್ಕಳ ತಜ್ಞ ಡಾ ಕೆ ಆರ್ ಭರತ್ ರೆಡ್ಡಿ ಅವರ ಬಳಿ ಕರೆದುಕೊಂಡು ಹೋಗಿದ್ದಾರೆ. ಮಗುವಿನ ಪರಿಸ್ಥಿತಿಯ ಕುರಿತು ಮಾಹಿತಿ ನೀಡಿದ ವೈದ್ಯ ಡಾ ಭರತ್ ರೆಡ್ಡಿ,"ಎರಡು ವಾರಗಳ ಕಾಲ ಮಗು ಕೆಮ್ಮಿನಿಂದ ಬಳಲುತ್ತಿದೆ ಹಾಗೂ ಉಸಿರಾಡುವಾಗ ಸದ್ದು ಕೇಳುತ್ತದೆ ಎಂದು ಪಾಲಕರು ಹೇಳಿದರು. ಆದರೆ ಆ ಗಂಡು ಮಗು ಚೆನ್ನಾಗಿ ಆಟ ಆಡಿಕೊಂಡಿತ್ತು ಹಾಗೂ ಅದರ ಉಸಿರಾಟ ಕೂಡಾ ಸಾಮಾನ್ಯವಾಗಿಯೇ ಇತ್ತು. ಮಗುವಿಗೆ ನೆಬ್ಯೂಲೈಜೇಷನ್ ನೀಡಿದಾಗಲೂ ಹಾಗೂ ಕೆಮ್ಮಿನ ಔಷಧಿ ಕೊಟ್ಟರು ಸದ್ದು ಕೇಳುವುದು ನಿಲ್ಲಲೇ ಇಲ್ಲ. ಆ ವೇಳೆ ಫ್ಲೆಕ್ಸಿಬಲ್ ಬ್ರಾಂಕೊಸ್ಕೋಪಿ (ಇದು ಶ್ವಾಸಕೋಶದ ಏರ್ ವೇಸ್ ಗಳನ್ನ ಪರೀಕ್ಷಿಸಲು ನೆರವು ನೀಡುವ ಪ್ರಕ್ರಿಯೆ) ಮಾಡಲಾಯಿತು. ಆಗ ಬ್ರಾಂಕೋಸ್ ಗೆ ಹಳದಿ ಮತ್ತು ಹಸಿರು ಬಣ್ಣದ ವಸ್ತು ಅಂಟಿಕೊಂಡಿದ್ದು ಕಂಡುಬಂದಿತು. ಇದೇ ಮುಖ್ಯ ಏರ್ ವೇ ಆಗಿದ್ದು, ನೇರವಾಗಿ ಶ್ವಾಸಕೋಶದ ಬಲಭಾಗಕ್ಕೆ ಸೇರುತ್ತದೆ. ಆ ವಸ್ತುವಿನ ಸುತ್ತ ಕೀವು ರೀತಿಯ ಪದಾರ್ಥ ಅಂಟಿಕೊಂಡಿದ್ದು ತಿಳಿಯಿತು. ಅದನ್ನು ಫೋರ್ಸೆಪ್ಸ್ ಉಪಕರಣದಿಂದ ತೆಗೆಯುವ ಪ್ರಯತ್ನ ಮಾಡಿದೆವು. ಆದರೆ ಅದು ಸಾಧ್ಯವಾಗಲಿಲ್ಲ. ಆಗ ರಿಜಿಡ್ ಬ್ರಾಂಕೋಸ್ಕೋಪಿ (ರೋಗಿಯ ಏರ್ ವೇ ಮೂಲಕ ಉಪಕರಣ ಮತ್ತು ಕ್ಯಾಮರಾ ತೂರಿಸಿ ಚಿಕಿತ್ಸೆ ನೀಡುವ ವಿಧಾನ) ಮಾಡಲು ನಿರ್ಧರಿಸಲಾಯಿತು.ಮಗುವಿಗೆ ಚಿಕಿತ್ಸೆ ನೀಡಿ ಪ್ರಾಣಾಪಾಯದಿಂದ ಪಾರು ಮಾಡಿದ ಮಾರತ್ ಹಳ್ಳಿಯ ರೈನ್ ಬೋ ಮಕ್ಕಳ ಆಸ್ಪತ್ರೆಯ ಮಕ್ಕಳ ಶಸ್ತ್ರಚಿಕಿತ್ಸಕ ಡಾ ಅಂಟೋನಿ ರಾಬರ್ಟ್,"ಇದು ನಿಜಕ್ಕೂ ತುಂಬಾ ವಿಶಿಷ್ಟ ಪ್ರಕರಣ. ಹುಡುಗನನ್ನ ಆಸ್ಪತ್ರೆಗೆ ಕರೆ ತಂದಾಗ ಡಾ ಭರತ್ ನಮಗೆಲ್ಲಾ ಮೊದಲೇ ವಿಷಯವನ್ನ ತಿಳಿಸಿದ್ದರಿಂದ ಏನೂ ಚಿಕಿತ್ದೆ ನೀಡಬೇಕು ಎಂದು ನಿರ್ಧರಿಸಲಾಗಿತ್ತು. ಮಗುವಿನ ವಯಸ್ಸಿಗೆ ಅನುಗುಣವಾಗಿ ನಾವು ರಿಜಿಡ್ ಬ್ರಾಂಕೋಸ್ಕೋಪಿ ಮಾಡಿ ವಸ್ತುವನ್ನ ಹೊರ ತೆಗೆದೆವು. ಗಾಳಿ ಕೊಳವೆಯ ಬಲ ಭಾಗಕ್ಕೆ ಅಂಟಿಕೊಂಡಿದ್ದ ವಸ್ತುವು ಅಲ್ಲಿ ಸಣ್ಣ ಪ್ರಮಾಣದ ಹಾನಿಯುಂಟು ಮಾಡಿತ್ತು. ಆದರೆ ಅದು ಗಂಭೀರ ಸಮಸ್ಯೆಯಾಗಿರದ ಕಾರಣ ಮಗುವನ್ನ ಮರುದಿನವೇ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು. ಇದು ಎಲ್ಲಾ ಪಾಲಕರಿಗೆ ಒಂದು ಎಚ್ಚರಿಕೆಯ ಸಂಗತಿಯಾಗಿದ್ದು, ಮಗುವಿನ ಕಡೆಗೆ ಸ್ವಲ್ಪ ಲಕ್ಷ್ಯ ಕೊಡದಿದ್ದರೂ ಅನಾಹುತಗಳೇ ಸಂಭವಿಸಬಹುದು ಎನ್ನುವುದಕ್ಕೆ ನಿದರ್ಶನ. ಇತ್ತೀಚಿಗೆ ನಮ್ಮ ಬಳಿ ಆರು ತಿಂಗಳ ಮಗುವೊಂದು ತಾಯಿಯ ಕಿವಿಯ ಚಿಕ್ಕ ಓಲೆಯನ್ನ ನುಂಗಿದ ಪ್ರಕರಣವೊಂದು ಬಂದಿತ್ತು. ಈ ಎಲ್ಲಾ ಘಟನೆಗಳು ಮಕ್ಕಳ ವಿಷಯದಲ್ಲಿ ಅದೆಷ್ಟು ಕಾಳಜಿ ಅಗತ್ಯ ಎಂಬುದಕ್ಕೆ ಉದಾಹರಣೆಗಳಾಗಿವೆ", ಎಂದು ತಿಳಿಸಿದರು.

0 Comments