Ticker

6/recent/ticker-posts

Ad Code

Responsive Advertisement

ಡೆಲ್ಟಾ ಪ್ಲಸ್; 8 ರಾಜ್ಯಗಳಿಗೆ ಎಚ್ಚರಿಕೆ ನೀಡಿದ ಆರೋಗ್ಯ ಸಚಿವಾಲಯ

 


ಕೇಂದ್ರ ಆರೋಗ್ಯ ಸಚಿವಾಲಯ ಕಾರ್ಯದರ್ಶಿ ರಾಜೇಶ್ ಭೂಷಣ್, ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದು, ಶೀಘ್ರವೇ ಸೋಂಕು ನಿಯಂತ್ರಣ ಕ್ರಮಗಳನ್ನು ಜಾರಿಗೆ ತರುವಂತೆ ಆದೇಶಿಸಿದ್ದಾರೆ. ಡೆಲ್ಟಾ ಪ್ಲಸ್ ಪ್ರಕರಣಗಳು ಪತ್ತೆಯಾಗಿರುವ ಜಿಲ್ಲೆಗಳಲ್ಲಿ ತಕ್ಷಣವೇ ಕೊರೊನಾ ನಿಯಂತ್ರಣ ಕ್ರಮಗಳನ್ನು ಜಾರಿಗೊಳಿಸುವಂತೆ ಶುಕ್ರವಾರ ಕೇಂದ್ರ ಆರೋಗ್ಯ ಸಚಿವಾಲಯ ಏಳು ಮುಖ್ಯ ಕಾರ್ಯದರ್ಶಿಗಳಿಗೆ ಸೂಚಿಸಿದೆ.

ಡೆಲ್ಟಾ ಪ್ಲಸ್ ಪ್ರಕರಣ ಪತ್ತೆಯಾಗಿರುವ ತಮಿಳುನಾಡು, ಕರ್ನಾಟಕ, ಆಂಧ್ರ ಪ್ರದೇಶ, ಗುಜರಾತ್, ಪಂಜಾಬ್, ಹರಿಯಾಣ ಹಾಗೂ ಜಮ್ಮು ಕಾಶ್ಮೀರ ರಾಜ್ಯಗಳಿಗೆ ಎಚ್ಚರಿಕೆ ನೀಡಲಾಗಿದ್ದು, ಜನರು ಒಂದೆಡೆ ಸೇರುವುದನ್ನು ನಿರ್ಬಂಧಿಸಲು ಸೂಚಿಸಿದೆ.

ತಮಿಳುನಾಡಿನಲ್ಲಿ ಮಧುರೈ, ಕಂಚೀಪುರಂ ಹಾಗೂ ಚೆನ್ನೈ, ಕರ್ನಾಟಕದಲ್ಲಿ ಮೈಸೂರು, ಆಂಧ್ರಪ್ರದೇಶದಲ್ಲಿ ತಿರುಪತಿ, ಗುಜರಾತ್‌ನಲ್ಲಿ ಸೂರತ್, ಹರಿಯಾಣದಲ್ಲಿ ಫರೀದಾಬಾದ್, ಪಂಜಾಬ್‌ನ ಪಟಿಯಾಲಾ, ಲೂಧಿಯಾನಾ ಹಾಗೂ ಜಮ್ಮು ಕಾಶ್ಮೀರದ ಕಾತ್ರಾದಲ್ಲಿ ಕಠಿಣ ನಿಯಮಗಳನ್ನು ಹೇರಬೇಕು ಎಂದು ಸೂಚಿಸಲಾಗಿದೆ.

ಇದುವರೆಗೂ 45000 ಮಾದರಿಗಳನ್ನು ಪರೀಕ್ಷಿಸಿದ್ದು, 12 ರಾಜ್ಯಗಳಿಂದ 51 ಪ್ರಕರಣಗಳು ಪತ್ತೆಯಾಗಿವೆ. ಮಹಾರಾಷ್ಟ್ರದಲ್ಲಿ 22, ತಮಿಳುನಾಡಿನಲ್ಲಿ 9, ಮಧ್ಯಪ್ರದೇಶದಲ್ಲಿ 7, ಕೇರಳದಲ್ಲಿ 3, ಪಂಜಾಬ್, ಗುಜರಾತ್‌ನಲ್ಲಿ 2, ಕರ್ನಾಟಕ, ಆಂಧ್ರ, ಒಡಿಶಾ, ರಾಜಸ್ಥಾನ, ಜಮ್ಮು ಮತ್ತು ಕಾಶ್ಮೀರ, ಹರಿಯಾಣದಲ್ಲಿ ತಲಾ 1 ಪ್ರಕರಣಗಳು ದಾಖಲಾಗಿವೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.

"INSACOG ಈ ರೂಪಾಂತರದ ಜೆನೋಮ್ ಸೀಕ್ವೆನ್ಸಿಂಗ್ ನಡೆಸುವ ಕಾರ್ಯದಲ್ಲಿ ತೊಡಗಿಕೊಂಡಿರುವುದು ನಿಮಗೆಲ್ಲಾ ತಿಳಿದಿದೆ. ಸಂಸ್ಥೆ ರೂಪಾಂತರದ ಬಗ್ಗೆ ಸಮಯೋಚಿತ ಮಾಹಿತಿ, ಸಲಹೆಗಳನ್ನೂ ಒದಗಿಸುತ್ತಿದೆ" ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

"INSACOG ಡೆಲ್ಟಾ ಪ್ಲಸ್ ರೂಪಾಂತರದ ಬಗ್ಗೆ ಮೂರು ಮುಖ್ಯ ಸಂಗತಿಗಳನ್ನು ತಿಳಿಸಿದೆ. ಮೊದಲನೆಯದು, ಇದು ವೇಗವಾಗಿ ಹರಡಬಲ್ಲದು. ಎರಡನೆಯದು, ಶ್ವಾಸಕೋಶಗಳ ಮೇಲೆ ಪರಿಣಾಮ ಬೀರಬಲ್ಲದು. ಕೊನೆಯದಾಗಿ ಮೋನೊಕ್ಲೊನಾಲ್ ಪ್ರತಿಕಾಯ ಪ್ರತಿಕ್ರಿಯೆಗೆ ಕಡಿಮೆ ಸ್ಪಂದನೆ ಎಂಬುದು" ಎಂದು ರಾಜೇಶ್ ಭೂಷಣ್ ತಿಳಿಸಿದ್ದಾರೆ.

ಅತಿ ಹೆಚ್ಚು ಪರೀಕ್ಷೆಗಳನ್ನು ನಡೆಸಬೇಕು. ಆದ್ಯತೆ ಮೇರೆಗೆ ಲಸಿಕೆಗಳನ್ನು ತ್ವರಿತಗತಿಯಲ್ಲಿ ನೀಡಬೇಕು, ಸೋಂಕಿತರ ಪತ್ತೆ ಕಾರ್ಯ ನಡೆಯಬೇಕು ಎಂದು ಸೂಚನೆ ನೀಡಿದ್ದು, ಸೋಂಕಿನ ಪ್ರಕರಣ ಕಂಡುಬಂದಿರುವ ಜಿಲ್ಲೆ ಅಥವಾ ಪ್ರದೇಶದಲ್ಲಿ ಕಠಿಣ ಕ್ರಮಗಳನ್ನು ಜಾರಿಗೊಳಿಸಬೇಕು ಎಂದು ತಿಳಿಸಿದ್ದಾರೆ.

Post a Comment

0 Comments

Ad Code

Responsive Advertisement