ಕನ್ನಡ ನಾಡಿನ ಸಾಕ್ಷಿ ಪ್ರಜ್ಞೆ, ಶತಾಯುಷಿ, ಭಾರತದ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ ಅನುಯಾಯಿಯಾಗಿದ್ದ ಸ್ವಾತಂತ್ರ್ಯ ಹೋರಾಟಗಾರ ಶ್ರೀ ಎಚ್.ಎಸ್.ದೊರೆಸ್ವಾಮಿಯವರ ನಿಧನಕ್ಕೆ ಕರ್ನಾಟಕ ವಿಧಾನ ಪರಿಷತ್ತಿನ ಸಭಾಪತಿ ಮಾನ್ಯ ಶ್ರೀ ಬಸವರಾಜ ಹೊರಟ್ಟಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಸ್ವಾತಂತ್ರ್ಯ ಚಳುವಳಿಯ ಮುಂಚೂಣಿಯಲ್ಲಿದ್ದ ಎಚ್.ಎಸ್.ದೊರೆಸ್ವಾಮಿ ಸರಕಾರಿ ದಾಖಲೆಗಳನ್ನು ಹಾನಿ ಮಾಡಲು ಬಳಸಲಾಗುತ್ತಿದ್ದ ಟೈಮ್ ಬಾಂಬ್ ತಯಾರಿಕೆಯಲ್ಲಿ ತೊಡಗಿದ್ದ ಆರೋಪದಲ್ಲಿ 14 ತಿಂಗಳ ಕಾಲ ಸೆರೆವಾಸ ಅನುಭವಿಸಿದ್ದರು. ಆ ಸಂದರ್ಭದಲ್ಲಿ ಗಾಂಧೀಜಿಯವರ ಸತ್ಯ, ಅಹಿಂಸೆ ಮತ್ತು ಸತ್ಯಾಗ್ರದಂತಹ ಉತ್ಕ್ರಷ್ಟ ಹೋರಾಟದ ಮಾರ್ಗಗಳಿಂದ ಪ್ರಭಾವಿತಾಗಿದ್ದರು. ಸ್ವಾತಂತ್ರ್ಯ ಹೋರಾಟದಿಂದ ಇತ್ತೀಚಿನ ರೈತಪರ, ಜನಪರ ಹಾಗೂ ಸಾಮಾಜಿಕ ಹೋರಾಟಗಳಲ್ಲಿ ಸ್ವಯಂ ಸ್ಪೂರ್ತಿಯಿಂದ ಪಾಲ್ಗೊಳ್ಳುತ್ತಿದ್ದ ಅಪ್ರತಿಮ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಇಂದಿನ ಪೀಳಿಗೆ ಹಾಗೂ ಗಾಂಧೀ ವಾದಿಗಳ ನಡುವೆ ಮಹಾತ್ಮಾ ಗಾಂಧೀಜಿಯವರ ಕೊಂಡಿಯಂತಿದ್ದರು. ತಮ್ಮ ಇಡೀ ಬದುಕನ್ನು ಸಾಮಾಜಿಕ ಹೋರಾಟಗಳಿಗಾಗಿಯೇ ಮೀಸಲಿಟ್ಟಿದ್ದ ಎಚ್.ಎಸ್.ದೊರೆಸ್ವಾಮಿ ತಮ್ಮ ಇಳಿವಯಸ್ಸಿನಲ್ಲಿಯೂ ಸರಕಾರಿ ಭೂಕಬಳಿಕೆ ವಿರುದ್ಧ ಹೋರಾಟ, ರೈತ ಶೋಷಣೆಯ ವಿರುದ್ಧ ಸತ್ಯಾಗ್ರಹ, ಬ್ರಷ್ಟಾಚಾರ ವಿರೋಧಿ ಆಂದೋಲನ ಮುಂತಾದವುಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದರು.
ಕನ್ನಡ ನಾಡಿದ ಏಕೀಕರಣಕ್ಕಾಗಿಯೂ ಹೋರಾಟ ನಡೆಸಿದ್ದ ದೊರೆಸ್ವಾಮಿಯವರ ಅಗಲಿಕೆಯಿಂದ ಕನ್ನಡ ನಾಡು ಅಪ್ರತಿಮ ಹೋರಾಟಗಾರರನ್ನು ಕಳೆದುಕೊಂಡಿದ್ದು ಹೋರಾಟದ ಬಹುದೊಡ್ಡ ಶಕ್ತಿ ಮರೆಯಾದಂತಾಗಿದೆ ಎಂದು ಬಸವರಾಜ ಹೊರಟ್ಟಿ ಕಂಬನಿ ಮಿಡಿದಿದ್ದಾರೆ.
ರೈತನೋರ್ವನ ಜಮೀನು ಅಕ್ರಮ-ಸಕ್ರಮಕ್ಕೆ ಸಂಬಂಧಿಸಿದಂತೆ ತಹಶೀಲ್ದಾರ ಕಚೇರಿ ಸಿಬ್ಬಂದಿ ನೀಡುತ್ತಿರುವ ಶೋಷಣೆ ಕುರಿತು, ಕಳೆದ ಕೆಲ ದಿನಗಳ ಹಿಂದೆಯಷ್ಟೆ ದೊರೆಸ್ವಾಮಿಯವರು ಸುದೀರ್ಘ ಪತ್ರ ಬರೆದು ನ್ಯಾಯ ದೊರಕಿಸಿಕೊಡುವಂತೆ ತಮಗೆ ಮನವಿ ಮಾಡಿದ್ದನ್ನು ಸಭಾಪತಿ ಮಾನ್ಯ ಬಸವರಾಜ ಹೊರಟ್ಟಿ ಸ್ಮರಿಸಿಕೊಂಡಿದ್ದಾರೆ.
ಕಳೆದ ಎಪ್ರೀಲ್ 10 ರಂದು 103ನೇ ಹುಟ್ಟುಹಬ್ಬದ ನಿಮಿತ್ತ ಶುಭ ಕೋರಲು ದೊರೆಸ್ವಾಮಿಯವರ ಮನೆಗೆ ತೆರಳಿ ಅವರನ್ನು ಪ್ರೀತಿಯಿಂದ ಸನ್ಮಾನಿಸಿ ನಾಡಿನ ಹಲವು ವಿಷಯಗಳ ಕುರಿತು ಅವರೊಂದಿಗೆ ಚರ್ಚೆ ನಡೆಸಿದ್ದನ್ನು ಸಭಾಪತಿ ಬಸವರಾಜ ಹೊರಟ್ಟಿ ಭಾವುಕತೆಯಿಂದ ಸ್ಮರಿಸುತ್ತಾ ದೊರೆಸ್ವಾಮಿಯವರ ಆದರ್ಶಗಳು, ಹೋರಾಟದ ಮೈಲುಗಲ್ಲುಗಳು ಇಂದಿನ ಯುವ ಪೀಳಿಗೆಗೆ ಮಾದರಿಯಾಗಲಿ ಎಂದು ಆಶಿಸಿದ್ದಾರೆ.

0 Comments