ಮಲ್ಲೇಶ್ವರ ಎಂದರೆ ಹಲವಾರು ಎಂ ಪಿ ಎಲ್ ಶಾಸ್ತ್ರಿಗಳ ವಿದ್ಯಾರ್ಥಿಗಳು ! ಹಾಗಾಗಿ ಮಲ್ಲೇಶ್ವರದ ಹದಿನೈದನೇ ಅಡ್ಡರಸ್ತೆ ಎಂ ಪಿ ಎಲ್ ಶಾಸ್ತ್ರಿ ರಸ್ತೆಯಾದರೆ,ಅವರ ಮನೆ ಇದ್ದ ಆರನೇ ಮುಖ್ಯರಸ್ತೆ ರಾಜಮಂತ್ರ ಪ್ರವೀಣ ಹೆಚ್ ವಿ ನಂಜುಂಡಯ್ಯನವರ ರಸ್ತೆಯಾಗಿದೆ.ಅದರಂತೆಯೇ ನಾಲ್ಕನೇ ಮುಖ್ಯರಸ್ತೆಗೆ ಇಟ್ಟಿರುವ ಹೆಸರು ಹಿಮಾಂಶು ಶಾಸ್ತ್ರಿ ರಸ್ತೆ.ಅದೇ ಹಿಮಾಂಶು ಜ್ಯೋತಿ ಕಲಾಪೀಠ ಎಂಬ ಶಿಕ್ಷಣ ಸಂಸ್ಥೆಗಳ ರಸ್ತೆ.ಹಿಮಾಂಶು ಶಾಸ್ತ್ರಿಗಳ ಬಗ್ಗೆ ತಿಳಿಯುವ ಕುತೂಹಲ ನನಗೆಂದಿಗೂ ಇದ್ದೇ ಇತ್ತು ! ಹಿಮಾಂಶು ಸಂಸ್ಥೆ ಸಾಮಾನ್ಯದ್ದಲ್ಲ ಈಗಾಗಲೇ ಎಪ್ಪತ್ತೈದು ವರ್ಷಗಳನ್ನು ಮುಗಿಸಿ ಎಂಭತ್ತನೇ ವರ್ಷದತ್ತ ನಡೆದಿರುವ ಹೆಮ್ಮೆಯ ಸಂಸ್ಥೆ.
ಹಿಮಾಂಶು ಜ್ಯೋತಿ ಕಲಾಪೀಠದಲ್ಲಿ ವ್ಯಾಸಂಗ ಮಾಡಿರುವ ವಿದ್ಯಾರ್ಥಿಗಳು ಬಹಳಷ್ಟು ಮಂದಿ ಇದ್ದಾರೆ.ಎಷ್ಟೋ ಮಂದಿ ತಮ್ಮ ಮಕ್ಕಳನ್ನೂ ಅದೇ ಶಾಲೆಗೆ ಸೇರಿಸಿದವರಿದ್ದಾರೆ.ಶಾಲೆಯ ವಾರ್ಷಿಕೋತ್ಸವ ಅಥವಾ ಇತರೆ ಕಾರ್ಯಕ್ರಮಗಳಿಗೆ ಸಂಭ್ರಮದಿಂದ ತಮ್ಮ ಅಮ್ಮಂದಿರನ್ನೂ ಕರೆದುಕೊಂಡು ಬರುವ ಅಭಿಮಾನಿ ವಿದ್ಯಾರ್ಥಿಗಳಿದ್ದಾರೆ.
ಅವರಲ್ಲೊಬ್ಬರು ಈ ಭಾವಚಿತ್ರದಲ್ಲಿ ತನ್ನ ತಾಯಿ ಶ್ರೀಮತಿ.ವಿ ಬಿ ರಾಜಲಕ್ಷ್ಮಿಯವರೊಂದಿಗೆ ನಿಂತಿರು ಎಂ ಜೆ ರಾಘವೇಂದ್ರ.ಈತ ತನ್ನ ಶಾಲಾ ದಿನಗಳಲ್ಲಿ ಅಣ್ಣಾವೃ ನಟಿಸಿದ ದೇವತಾ ಮನುಷ್ಯ ಚಿತ್ರೀಕರಣವಾದಾಗ ಡಾ.ರಾಜ್ ಶಾಲಾ ಮಕ್ಕಳ ವಾಹನದ ಚಾಲಕನಾಗಿರುವ ದೃಶ್ಯದ ಮಕ್ಕಳ ಪೈಕಿ ಒಬ್ಬರು.ಕಳೆದ ಕೆಲವು ವರ್ಷಗಳಿಂದ ಹಿಮಾಂಶು ಶಾಲೆಯಲ್ಲಿ ಪುಟ್ಟ ಫನ್ ಫೇರ್ ನಡೆಸಿ ಬಂದ ಹಣವನ್ನು ಸಮಾಜ ಸೇವೆಗೆ ವಿನಿಯೋಗಿಸುವ ಉತ್ತಮ ಕೆಲಸ ನಡೆಯುತ್ತಿದೆ. ಹಿಮಾಂಶು ಶಾಲೆಯನ್ನು ಮುನ್ನಡೆಸುತ್ತಿರುವ ಶ್ರೀಯುತ ರಾವ್ ಮತ್ತು ಶ್ರೀ.ಕುಮಾರ್ ಸೋದರರ ಹೆಸರು ಮತ್ತು ಅವರ ಕುಟುಂಬ ಮಲ್ಲೇಶ್ವರದ ಮಂದಿಗೆ ಜನಜನಿತ. ನನಗೆ ರಾಘವೇಂದ್ರ ಪ್ರೌಢಶಾಲೆಯಲ್ಲಿ ಆಂಗ್ಲ ಶಿಕ್ಷಕರಾದ ಶ್ರೀ.ಎಸ್ ಸೋಮಸುಂದರಂ ನಿಜಕ್ಕೂ ದೇವತಾ ಮನುಷ್ಯ.ಇವರು ತಮ್ಮ ನಿವೃತ್ತಿಯ ನಂತರವೂ ಹಿಮಾಂಶು ಸಂಸ್ಥೆಯಲ್ಲಿ ತೊಡಗಿಸಿಕೊಂಡಿದ್ದು ಆ ಸಂಸ್ಥೆಯ ಬಗ್ಗೆ, ಆ ಸಂಸ್ಥೆಯ ಮುಖ್ಯಸ್ಥ ಸೋದರರು ಮತ್ತು ಅವರ ಕುಟುಂಬ ಮೇಲಿರುವ ಅಭಿಮಾನದಿಂದಲೇ ಎಂದು ಅರಿತಿದ್ದೇನೆ.
ಮೂವತ್ತರ ದಶಕದಲ್ಲಿ ಮಲ್ಲೇಶ್ವರದ ಸುಂದರತೆ ಕಲ್ಪನೆಗೂ ಮೀರಿದ್ದು.ಆ ದಿನಗಳಲ್ಲಿ ಶ್ರೀಮತಿ ಎಂ ಎಲ್ ಸುಂದರಮ್ಮ ಮತ್ತು ಶ್ರೀ.ಎಂ ಎಲ್ ಶ್ರೀನಿವಾಸ ಶಾಸ್ತ್ರಿಗಳು ಒಂದು ಕಾರ್ಯಕಾರಣ ಸಿದ್ಧಾಂತ ಜೀವನ ನಡೆಸಿದವರು. ಡಿಸೆಂಬರ್ 31 1933 ರಲ್ಲಿ ಹಿಮಾಂಶು ಜನನವಾಗುತ್ತಾರೆ. ಪುಟ್ಟ ಮಗುವಿದ್ದಾಗಲೇ ಅವರ ಜ್ಞಾನದ ಕುತೂಹಲವುಳ್ಳ ಅಸಾಧಾರಣ ದೈವದತ್ತ ಪ್ರತಿಭೆಯಾಗಿರುತ್ತಾರೆ.ಆದರೆ ವಿಧಿ ಲಿಖಿತ ಕೇವಲ ಮೂರು ವರ್ಷಗಳ ನಂತರ 28ನೇ ಮಾರ್ಚ್ 1936 ಇಹಲೋಕದ ತ್ಯಜಿಸುತ್ತಾರೆ.ಯುವ ಶಾಸ್ತ್ರಿ ದಂಪತಿಗಳ ಮನದಲ್ಲಿ ಜೀವನದ ಬಗ್ಗೆ ತುಮುಲಗಳು ಶುರುವಾಗುತ್ತವೆ.ಆಗ ಅವರ ಮನದಲ್ಲಿ ಜೀವನದ ಬಗ್ಗೆ ಆಶಾವಾದ ತುಂಬುವ ಒಂದು ಸ್ಮಾರಕ ಸಂಸ್ಥೆಯನ್ನು ಪ್ರಾರಂಭಿಸುವ ಮನಸ್ಸಾಗುತ್ತದೆ.ಇದು ಸಮಾಜ ನೀಡಬಹುದಾದ ಸೇವೆ ಎಂದೂ ಪರಿಗಣಿಸಿದಾಗ ಶಿಕ್ಷಣ ತಜ್ಞರು ಮತ್ತು ಸಮಾನ ಮನಸ್ಕರಾದ ಡಾ.ಎಂ ವಿ ಗೋಪಾಲಸ್ವಾಮಿ,ಶ್ರೀ.ಬಿ ಸುಂದರೇಶ್ವರ,ಶ್ರೀ.ಹೆಚ್ ಯೋಗಾನರಸಿಂಹಂಮ್, ಶ್ರೀಮತಿ ಸರಸ್ವತಮ್ಮ,ಶ್ರೀಮತಿ.ಆರ್ ಕಲ್ಯಾಣಮ್ಮ ಮೊದಲಾದವರು ಶಾಸ್ತ್ರಿ ದಂಪತಿಗಳಿಗೆ ಒಂದು ಪುಟ್ಟ ಕಿಂಡರ್ ಗಾರ್ಡನ್ ಶೈಲಿಯ ನರ್ಸರಿ ಶಾಲೆಯನ್ನು ತಮ್ಮ ಮನೆಯ ಆವರಣದಿಂದ ಆರಂಭಿಸಿ ಮಕ್ಕಳ ವಿದ್ಯಾಭ್ಯಾಸಕ್ಕೆ ನಾಂದಿ ಹಾಕಲು ಸಲಹೆ ನೀಡುತ್ತಾರೆ.
ಈ ಸಲಹೆಯ ಸ್ಪೂರ್ತಿಯಿಂದ ಶಾಸ್ತ್ರಿ ದಂಪತಿಗಳು ತಮ್ಮ ಶಾಲೆಯನ್ನು ವಿನೂತನವಾಗಿ ಆರಂಭಿಸುತ್ತಾರೆ. ಶಾಲೆ ಎಂದರೆ ಒಂದು ವಿಹಾರ ಎಂದು ಪರಿಕಲ್ಪನೆ ಅವರದಾಗಿರುತ್ತದೆ.ಬೆಂಗಳೂರಿನಲ್ಲಿ ಆಗಿನ್ನೂ ನರ್ಸರಿ ಶಿಕ್ಷಣ ಶುರುವಾದ ದಿನಗಳೂ ಅದೇ ಸಮಯವಾಗಿರುತ್ತದೆ. ಹಿಮಾಂಶುವಿನ ತಂಗಿ ಕುಮಾರಿ ಚಿತ್ರಾ ಈ ವಿಹಾರ್ ಪರಿಕಲ್ಪನೆಯ ಹಿಮಾಂಶು ಶಾಲೆಯ ಮೊದಲ ವಿದ್ಯಾರ್ಥಿಯಾಗುತ್ತಾರೆ.ಶೈಕ್ಷಣಿಕ ವಿಚಾರಗಳು ಮಾತ್ರವೇ ಅಲ್ಲದೇ ಮಕ್ಕಳಿಗೆ ಸಾಂಸ್ಕೃತಿಕ ಚಟುವಟಿಕೆ ಕ್ರೀಡೆ ಮೌಲ್ಯಗಳನ್ನು ಸಮಾನವಾಗಿ ಕಲಿಸಿತ್ತಾ ಇಂದು ಮಲ್ಲೇಶ್ವರದ ಆದರ್ಶದ ಶಾಲೆಯಾಗಿ ಬೆಳೆದಿದೆ ಹಿಮಾಂಶು ! ನರ್ಸರಿಯಿಂದ ಪದವಿಪೂರ್ವ ಶಿಕ್ಷಣದ ತನಕ ವಿಸ್ತರಿಸಿದೆ.ಗ್ರಾಮೀಣ ವಿಭಾಗದಲ್ಲೂ ಸಹಾಯ ಮಾಡುವ ಮನೋಭಾವದಿಂದ ಗ್ರಾಮೀಣ ಭಾಗದಲ್ಲೂ ಶಾಲೆಯ ಶಾಖೆ ನಡೆಯುತ್ತಿದೆ.ಮೂರು ವರ್ಷಗಳು ಮಾತ್ರ ಬದುಕಿದ್ದ ಹಿಮಾಂಶು ಶಾಸ್ತ್ರಿಗಳು ತಮ್ಮ ತಂದೆ ತಾಯಿ ತಾಯಿಗಳಾದ ಶಾಸ್ತ್ರಿ ದಂಪತಿಗಳ ಮೂಲಕ ನೂರು ವರ್ಷಕ್ಕೂ ನೆನಪಿನಲ್ಲಿ ಉಳಿಯುವ ಸಂಸ್ಥೆಯಾಗಿ ವಿದ್ಯಾರ್ಥಿಗಳನ್ನು ಎಲ್ಲಿಂದಲೋ ಆಶೀರ್ವದಿಸುತ್ತಿದ್ದಾರೆ.







0 Comments