Ticker

6/recent/ticker-posts

Ad Code

Responsive Advertisement

ಕೊಳ್ಳೇಗಾಲದ ಆಶ್ರಿತಾ ವಾಯುಪಡೆಯ ಮೊದಲ ಮಹಿಳಾ ಫ್ಲೈಟ್ ಟೆಸ್ಟ್ ಇಂಜಿನಿಯರ್

 ಚಾಮರಾಜನಗರ (ಮೇ 23) :  ಕೊಳ್ಳೇಗಾಲದ  ಆಶ್ರಿತಾ ವಿ. ಒಲೆಟಿ  ದೇಶದ ಮೊದಲ ಮಹಿಳಾ ಫ್ಲೈಟ್ ಟೆಸ್ಟ್ ಎಂಜಿನಿಯರ್​​​​ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 

2014ರಿಂದ ಭಾರತೀಯ ವಾಯುಪಡೆಯ ಟೆಕ್ನಿಕಲ್ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಆಶ್ರಿತಾ ಅವರು ಬೆಂಗಳೂರಿನಲ್ಲಿರುವ ಪ್ರತಿಷ್ಠಿತ ದಿ ಇಂಡಿಯನ್ ಏರ್ ಫೋರ್ಸ್ ಟೆಸ್ಟ್ ಪೈಲಟ್ ಸ್ಕೂಲ್  ನಲ್ಲಿ  ಟೆಸ್ಟ್ ಪೈಲಟ್ ಮತ್ತು ಫ್ಲೈಟ್ ಟೆಸ್ಟ್‌ ಇಂಜಿನಿಯರಿಂಗ್ ನಲ್ಲಿ ತರಬೇತಿ ಪಡೆದು ಪದವಿ ಪೂರೈಸಿದ್ದರು. ದಿ ಇಂಡಿಯನ್ ಏರ್ ಫೋರ್ಸ್ ಟೆಸ್ಟ್ ಪೈಲಟ್ ಸ್ಕೂಲ್  ನಲ್ಲಿ 1973 ರಲ್ಲಿ ಟೆಸ್ಟ್ ಪೈಲಟ್ ಮತ್ತು ಫ್ಲೈಟ್ ಟೆಸ್ಟ್‌ ಇಂಜಿನಿಯರಿಂಗ್  ಕೋರ್ಸ್   ಪ್ರಾರಂಭವಾದಾಗಿನಿಂದ ಈ ಕೋರ್ಸ್ ಅನ್ನು ಪೂರ್ಣಗೊಳಿಸಿದವರು ಕೇವಲ 275 ವಿದ್ಯಾರ್ಥಿಗಳು ಮಾತ್ರ.


ವಾಯುಪಡೆಯ ಇತಿಹಾಸದಲ್ಲಿ ಕಠಿಣ ತರಬೇತಿಯ ನಂತರ ಈ ಕೋರ್ಸ್ ಅನ್ನು ಪೂರ್ಣಗೊಳಿಸಿದ  ಮೊದಲ ಮಹಿಳಾ ಅಧಿಕಾರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇನ್ನು ಮುಂದೆ ಏರ್ ಕ್ರಾಫ್ಟ್ ಅಂಡ್ ಸಿಸ್ಟಂ ಟೆಸ್ಟಿಂಗ್ ಎಸ್ಟಾಬ್ಲಿಷ್ಮೆಂಟ್ ನಲ್ಲಿ ಕರ್ತವ್ಯ ನಿರ್ವಹಿಸಲಿದ್ದಾರೆ. ಹೊಸ ವಿಮಾನ ಮತ್ತು ವ್ಯವಸ್ಥೆಗಳನ್ನು ಮೌಲ್ಯಮಾಪನ ಮಾಡುವುದು ಫ್ಲೈಟ್ ಟೆಸ್ಟ್ ಎಂಜಿನಿಯರ್‌ಗಳ ಕರ್ತವ್ಯವಾಗಿದೆ. ಅಲ್ಲದೆ ಯಾವುದೇ ಹೊಸ ವಿಮಾನ ಮತ್ತು ಪ್ರಮುಖ ವಾಯುಗಾಮಿ ವ್ಯವಸ್ಥೆಗಳು ಭಾರತದಲ್ಲಿ ಸೇವೆಗೆ ಸೂಕ್ತವೆಂದು ಪರಿಗಣಿಸಲು ಏರ್ ಕ್ರಾಫ್ಟ್ ಅಂಡ್ ಸಿಸ್ಟಂ ಟೆಸ್ಟಿಂಗ್ ಎಸ್ಟಾಬ್ಲಿಷ್ಮೆಂಟ್ (ASTE) ಅನುಮೋದನೆಯ ಹೊಂದಿರಬೇಕು.
ವೆಂಕಟೇಶ್ವರ ಜ್ಯುವೆಲರ್ಸ್ ಮಾಲೀಕ ವಿ.ವೆಂಕಟೇಶ್ ಬಾಬು ಮತ್ತು ಶ್ರೀಮತಿ ಒ.ವಿ.ವಾಣಿ ಅವರ ಪುತ್ರಿಯಾದ ಆಶ್ರಿತಾ ತಮ್ಮ ಪ್ರಾಥಮಿಕ ಹಾಗೂ ಪ್ರೌಢ ಶಾಲಾ  ವಿದ್ಯಾಭ್ಯಾಸ ಕೊಳ್ಳೇಗಾಲದಲ್ಲಿ ಮುಗಿಸಿದ್ದಾರೆ. ನಂತರ ಮೈಸೂರಲ್ಲಿ ಪಿಯುಸಿ ಹಾಗೂ ಬೆಂಗಳೂರಿನ ಇಂಜಿನಿಯರಿಂಗ್ ವ್ಯಾಸಂಗ ಮಾಡಿ ವಾಯುಪಡೆಯು ಟೆಕ್ನಿಕಲ್ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ತಮ್ಮ ಮೊಮ್ಮಗಳು ಅತ್ಯಂತ ಕಠಿಣ ತರಬೇತಿ ಪಡೆದು ಮೊದಲ ಮಹಿಳಾ ಫ್ಲೈಟ್ ಟೆಸ್ಟ್ ಇಂಜಿನಿಯರ್ ಆಗಿ ಆಯ್ಕೆಯಾಗಿರುವುದು ಹೆಮ್ಮೆಯ ವಿಚಾರ. ಅವಳು ಇದಕ್ಕಾಗಿ ಬಹಳ ಶ್ರಮವಹಿಸಿ ವಿದ್ಯಾಭ್ಯಾಸ ಮಾಡಿದ್ದಳು  ಎಂದು ಆಶ್ರಿತಾ ಅವರ ಅಜ್ಜ ವೇಣುಗೋಪಾಲ್ ಪ್ರತಿಕ್ರಿಯಿಸಿದ್ದಾರೆ.


ಕೊಳ್ಳೇಗಾಲ ಮೂಲದ ಆಶ್ರಿತಾ ಅವರು ಅತಿವೇಗವಾಗಿ ಸ್ಕ್ವಾಡ್ರನ್ ಲೀಡರ್  ಹುದ್ದೆ ಸಹ ಗಳಿಸಿ, ಕಠಿಣ ಪರೀಕ್ಷೆಗಳನ್ನು ಪಾಸು ಮಾಡಿ ಟೆಸ್ಟ್ ಪೈಲಟ್ ಆಗಿರುವುದು ಹೆಮ್ಮೆಯ ವಿಚಾರ ಎನ್ನುತ್ತಾರೆ ಹಿಂದೆ ವಾಯುಸೇನೆಯಲ್ಲಿದ್ದ ಪ್ರಸ್ತುತ ಮಲೈಮಹದೇಶ್ವಸ್ವಾಮಿ‌ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಆಗಿರುವ  ಜಯವಿಭವಸ್ವಾಮಿ.  ಈ ಹುದ್ದೆಗೆ ಉತ್ತರ ಭಾರತದ ಯುವ ಪುರುಷ ವಾಯುಸೇನೆ ಪೈಲೆಟ್‌ಗಳೇ ಹೆಚ್ಚಾಗಿ ಆಯ್ಕೆಯಾಗುತ್ತಾರೆ. ದಕ್ಷಿಣ ಭಾರತದ ಮಂದಿ ತೀರಾ ಕಡಿಮೆ. ಅದರಲ್ಲೂ ಮಹಿಳೆ ಇರಲೇ ಇಲ್ಲ. ಒಬ್ಬ ಮಹಿಳೆ ಟೆಸ್ಟ್ ಪೈಲಟ್ ಆಗುವುದು ಕನಸಿನ ಮಾತಾಗಿತ್ತು. ಇದೀಗ ಆ ಕನಸನ್ನು ಆಶ್ರಿತಾ ನನಸು ಮಾಡಿದ್ದಾರೆ ಎಂದು ಶ್ಲಾಘಿಸಿದ್ದಾರೆ.

Post a Comment

0 Comments

Ad Code

Responsive Advertisement