ಚೆನ್ನೈ (ಏಪ್ರಿಲ್ 02); ತ.ನಾಡು ವಿಧಾನಸಭಾ ಚುನಾವಣೆಗೆ ಇನ್ನೇನು ನಾಲ್ಕು ದಿನ ಉಳಿದಿದೆ. ಇತ್ತ ಡಿಎಂಕೆ ನಾಯಕರ ಮನೆ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ಇಟ್ಟಿದ್ದಾರೆ. ಡಿಎಂಕೆ ನಾಯಕ ಎಂ. ಕೆ ಸ್ಟಾಲಿನ್ ಅಳಿಯ ಶಬರಿಸನ್ ಮನೆ ಮೇಲೆ ದಾಳಿ ನಡೆದಿದ್ದು, ಇದೇ ವೇಳೆ ಅಣ್ಣಾನಗರದ ಡಿಎಂಕೆ ಅಭ್ಯರ್ಥಿ ಮೋಹನ್ ಅವರ ಮಗನ ಮನೆ ಮೇಲೂ ದಾಳಿ ನಡೆಸಲಾಗಿದೆ. ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಅವರೊಂದಿಗೆ ಡಿಎಂಕೆ ಕಾರ್ಯತಂತ್ರ ಸಭೆ ನಡೆಸುತ್ತಿದ್ದ ಶಬರೀಸನ್ ನಿವಾಸದ ಮೇಲೂ ದಾಳಿ ನಡೆಸಲಾಗಿದೆ. ಈ ದಾಳಿ ಬೆನ್ನಿಗೆ ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿರುವ ಡಿಎಂಕೆ ಅಧಿನಾಯಕ ಎಂ.ಕೆ. ಸ್ಟಾಲಿನ್, "ನಾನು ಎಂ.ಕೆ ಸ್ಟಾಲಿನ್, ಹೋರಾಟಗಾರ ಕರುಣಾನಿಧಿ ಅವರ ಮಗ. ತುರ್ತು ಪರಿಸ್ಥಿತಿಯನ್ನು ಎದುರಿಸಿದವನು. ನಿಮ್ಮ ಈ ಐಟಿ ದಾಳಿಗೆ ಬೆದರುವವನಲ್ಲ, ನಾವು ಎಐಎಡಿಎಂಕೆ ನಾಯಕರಲ್ಲ ಎಂಬುದನ್ನು ನರೇಂದ್ರ ಮೋದಿಯವರು ಮರೆಯಬಾರದು" ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.
ಪೆರಂಬಲೂರ್‍ನಲ್ಲಿ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಅವರು, "ನಾನು ಇಂದು ಬೆಳಿಗ್ಗೆ ಚೆನ್ನೈನಿಂದ ತಿರುಚಿಗೆ ಬಂದಿದ್ದೇನೆ. ಚನ್ನೈನಲ್ಲಿನ ನನ್ನ ಮಗಳ ಮನೆ ಮೇಲೆ ಐಟಿ ದಾಳಿ ನಡೆದಿದೆ ಎಂಬ ಸುದ್ದಿ ತಿಳಿಯಿತು. ನರೇಂದ್ರ ಮೋದಿ ಸರ್ಕಾರ ತಮಿಳುನಾಡಿನಲ್ಲಿ ಎಐಎಡಿಎಂಕೆ ಸರ್ಕಾರವನ್ನು ಉಳಿಸಲು ಶತಪ್ರಯತ್ನ ಮಾಡುತ್ತಿದೆ. ನಾನು ನರೇಂದ್ರ ಮೋದಿಯವರಿಗೆ ಹೇಳಲು ಬಯಸುತ್ತೇನೆ, ಇದು ಡಿಎಂಕೆ ಪಕ್ಷ ಎಂಬುದನ್ನು ಮರೆಯಬೇಡಿ. ನಾನು ಕಲೈಜ್ಞರ್ (ಕರುಣಾನಿಧಿ)ಯವರ ಮಗ. ನಾನು ಯಾವುದಕ್ಕೂ ಹೆದರುವುದಿಲ್ಲ" ಎಂದು ಸ್ಟಾಲಿನ್ ಸವಾಲು ಹಾಕಿದ್ದಾರೆ.
ಚುನಾವಣೆಗೆ ನಾಲ್ಕು ದಿನ ಬಾಕಿ ಇರುವಂತೆ ಡಿಎಂಕೆ ಮುಖ್ಯಸ್ಥ ಎಂ.ಕೆ ಸ್ಟಾಲಿನ್ ಮಗಳು ಸೆಂಥಮರಾಯ್, ಅಳಿಯ ಸಬರೀಸನ್ ವಾಸಿಸುತ್ತಿರುವ ನೀಲಂಗರೈನಲ್ಲಿರುವ ಮನೆಯ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದು, ಅವರ ನಾಲ್ಕು ಮನೆಗಳಲ್ಲಿ ಶೋಧ ಕಾರ್ಯ ನಡೆಸಿದ್ದಾರೆ.
ಏಪ್ರಿಲ್ 06 ರಂದು ತಮಿಳುನಾಡಿನಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಅದಕ್ಕೂ ಮುನ್ನ ಈ ಐಟಿ ದಾಳಿ ನಡೆದಿರುವುದು ಹಲವರು ಚರ್ಚೆಗಳಿಗೆ ಎಡೆಮಾಡಿಕೊಟ್ಟಿದೆ. ಕಳೆದ ತಿಂಗಳಷ್ಟೇ ಡಿಎಂಕೆ ಹಿರಿಯ ಮುಖಂಡ ಮತ್ತು ಅಭ್ಯರ್ಥಿ ಇ.ವಿ ವೇಲುರವರ ಮನೆ ಮೇಲೆ ಐಟಿ ದಾಳಿ ನಡೆದಿತ್ತು.
ಚುನಾವಣೆ ಸಂದರ್ಭದಲ್ಲಿ ನಡೆದ ಐಟಿ ದಾಳಿಯನ್ನು ಖಂಡಿಸಿರುವ ಡಿಎಂಕೆ, "ಕೇಂದ್ರ ಸರ್ಕಾರ ಐಟಿ ಇಲಾಖೆಯನ್ನು ತಮ್ಮ ಸ್ವಲಾಭಕ್ಕೆ ದುರುಪಯೋಗ ಪಡಿಸಿಕೊಳ್ಳುತ್ತಿದೆ" ಎಂದು ಚುನಾವಣಾ ಆಯೋಗಕ್ಕೆ ದೂರು ನೀಡಿದೆ.
ತೆರಿಗೆ ಅಧಿಕಾರಿಗಳು ಎಐಎಡಿಎಂಕೆ-ಬಿಜೆಪಿಯ ಚುನಾವಣಾ ಭವಿಷ್ಯಕ್ಕಾಗಿ ಕೆಲಸ ಮಾಡುತ್ತಿದ್ದಾರೆ'' ಎಂದು ಡಿಎಂಕೆ ಆರೋಪಿಸಿದ್ದು, ತೆರಿಗೆ ಇಲಾಖೆಯನ್ನು ಉನ್ನತ ಸ್ಥಾನಕ್ಕೆ ತರಲು ಚುನಾವಣಾ ಸಂಸ್ಥೆಯನ್ನು ಒತ್ತಾಯಿಸಿದೆ.
ಸ್ಟಾಲಿನ್ ಅಳಿಯನ ಮನೆ ಮೇಲೆ ಐಟಿ ದಾಳಿಇನ್ನು ಚುನಾವಣಾ ಪ್ರಚಾರದಲ್ಲಿ ಮಾತನಾಡಿರುವ ಸ್ಟಾಲಿನ್ ಮಗ ಉದಯನಿಧಿ ಸ್ಟಾಲಿನ್, ``ನಾನು ನನ್ನ ಹೆಸರಿನಲ್ಲಿರುವ ಎಲ್ಲಾ ಆಸ್ತಿಯನ್ನು ಅಮಿತ್ ಶಾರವರ ಮಗ ಜಯ್‍ಶಾರವರ ಹೆಸರಿಗೆ ಬರೆದುಕೊಡುತ್ತೇನೆ. ಅವರು ಅದೇ ರೀತಿ ಮಾಡಲು ಸಿದ್ದರಿದ್ದಾರ?'' ಎಂದು ಸವಾಲು ಹಾಕಿದ್ದಾರೆ. "ಅಮಿತ್ ಷಾ ಅವರ ಕೆಲಸವೆಂದರೆ ಇತರರನ್ನು ಬೆದರಿಸುವುದು ಮತ್ತು ಚುನಾಯಿತ ಸರ್ಕಾರಗಳನ್ನು ಉರುಳಿಸುವುದು… ನಾನು ಅವರಿಗೆ ಹೆದರುವುದಿಲ್ಲ, ನಾನು ಕಲೈಜ್ಞರ್ (ಕರುಣಾನಿಧಿ) ಯವರ ಮೊಮ್ಮಗ" ಎಂದು ಉದಯನಿಧಿ ಸ್ಟಾಲಿನ್ ಕಿಡಿಕಾರಿದ್ದಾರೆ.


0 Comments