ಬೆಂಗಳೂರು: 20 ವರ್ಷಗಳಿಂದ ಚಿಟ್ ಫಂಡ್ ನಡೆಸುತ್ತಿದ್ದ ತ್ರಿಮೂರ್ತಿಗಳನ್ನು ನಂಬಿ ನೂರಾರು ಜನ ಲಕ್ಷ ಲಕ್ಷ ಹೂಡಿಕೆ ಮಾಡಿದ್ದರು. ಸರ್ಕಾರಿ ನೌಕರರು, ನಿವೃತ್ತ ನೌಕರರು ಹಾಗೂ ಉದ್ಯಮಿಗಳನ್ನೇ ಟಾರ್ಗೆಟ್ ಮಾಡಿ ಕೋಟಿ ಕೋಟಿ ಲೂಟಿ ಮಾಡಿ ಪರಾರಿಯಾಗಿದ್ದವರನ್ನು ಬೆಂಗಳೂರಿನ CEN ಪೊಲೀಸರು ಬಂಧಿಸಿದ್ದಾರೆ.
ಚಿಟ್ ಫಂಡ್ ವ್ಯವಹಾರ ನಡೆಸಿ ಗ್ರಾಹಕರಿಗೆ ಕೋಟಿ ಕೋಟಿ ಮೋಸ ಮಾಡಿ ನೆರೆ ರಾಜ್ಯ ಆಂಧ್ರಪ್ರದೇಶದಲ್ಲಿ ತಲೆಮರೆಸಿಕೊಂಡಿದ್ದ ಮೂವರು ಸಹೋದರರನ್ನು ಬೆಂಗಳೂರಿನ ಸೈಬರ್ ಅಪರಾಧ, ಆರ್ಥಿಕ ಅಪರಾಧ ಮತ್ತು ಮಾದಕವಸ್ತುಗಳು ವಿಭಾಗದ ಪೊಲೀಸರು ಬಂಧಿಸಿದ್ದಾರೆ. ಮೂಲತಃ ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ವೆಂಕಟೇಶ್ ಬಾಬು, ಲೋಕೇಶ್ ಬಾಬು, ನಟರಾಜು ಕಳೆದ 20 ವರ್ಷದಿಂದ ಬೆಂಗಳೂರು ಉತ್ತರ ತಾಲೂಕಿನ ಶಿವನಪುರದಲ್ಲಿ ವಾಸಿಸುತ್ತಿದ್ದರು. ಆರಂಭದಲ್ಲಿ ಅಗರಬತ್ತಿ ವ್ಯಾಪಾರ ಮಾಡುತ್ತಿದ್ದರು.
500 ಜನ 8 ಕೋಟಿ ಹಣ: ಜನರ ವಿಶ್ವಾಸ ಗಳಿಸಿ ಸಣ್ಣ ಚೀಟಿ ವ್ಯವಹಾರ ಶುರು ಮಾಡಿದ ಇವರು ದೊಡ್ಡ ಚಿಟ್ ಫಂಡ್ ಉದ್ಯಮ ಪ್ರಾರಂಭಿಸಿ, ಸುಮಾರು 500 ಜನರಿಂದ ಹೂಡಿಕೆ ಮಾಡಿಸಿಕೊಂಡು ಸದ್ಯ 8 ಕೋಟಿಗೂ ಅಧಿಕ ಹಣವನ್ನು ಗುಳುಂ ಮಾಡಿ ಪರಾರಿಯಾಗಿರುವ ಆರೋಪ ಕೇಳಿ ಬಂದಿತ್ತು. ಸಹೋದರರಾದ ವೆಂಕಟೇಶ್ ಬಾಬು, ಲೋಕೇಶ್ ಬಾಬು, ನಟರಾಜು ವಿರುದ್ಧ ವಂಚನೆ ಆರೋಪ ಕೇಳಿ ಬಂದಿದ್ದು, ಕಳೆದ ಐದಾರು ತಿಂಗಳುಗಳಿಂದ ಕೈಗೆ ಸಿಗದೆ ಪರಾರಿಯಾಗಿದ್ದರು.
ಕಳೆದ 20 ವರ್ಷದಿಂದ ಚಿಟ್ ಫಂಡ್ ವ್ಯವಹಾರ ಮಾಡುತ್ತಿದ್ದ ಸಹೋದರರು ಬಾಬು ಚಿಟ್ ಪಂಡ್ ಫ್ರೈವೇಟ್ ಲಿಮಿಟೆಡ್ ಹೆಸರಿನಲ್ಲಿ ಸಂಸ್ಥೆ ನೋಂದಣಿ ಸಹ ಮಾಡಿಸಿದ್ದಾರೆ. ನೋಂದಣಿಯಾದ ಸಂಸ್ಥೆಯಾದ್ದರಿಂದ ಮೋಸ ಮಾಡೋದಿಲ್ಲ ಎಂದು ನಂಬಿದ ಹೂಡಿಕೆದಾರರು ಅಧಿಕ ಬಡ್ಡಿಯಾಸೆಗೆ ಮೋಸ ಹೋಗಿದ್ದಾರೆ. ಮುಖ್ಯವಾಗಿ ಸರ್ಕಾರಿ ನೌಕರರು ಹಾಗೂ ನಿವೃತ್ತ ನೌಕರರು ಹೂಡಿಕೆ ಮಾಡುವಂತೆ ಮನವೊಲಿಸುತ್ತಿದ್ದ ಈ ಗ್ಯಾಂಗ್ ಅವರ ಹೆಂಡತಿ ಅಥವಾ ಮಕ್ಕಳ ಹೆಸರಿನಲ್ಲಿ ಹೂಡಿಕೆ ಮಾಡುವಂತೆ ಸೂಚಿಸಿದರೆ, ಉದ್ಯಮಿಗಳಿಗೆ ಅಧಿಕ ಬಡ್ಡಿಯಾಸೆ ತೋರಿಸಿ ಗಾಳ ಹಾಕುತ್ತಿದ್ದರು.ತಿಮ್ಮಪ್ಪನಾಣೆ ಮೋಸ ಮಾಡಲ್ಲ: ತಿರುಪತಿ ವೆಂಕಟರ ಮಣ ಸ್ವಾಮೀ ನಮ್ಮ ಮನೆ ದೇವರು, ನಾವು ಯಾರಿಗೂ ಮೋಸ ಮಾಡಲ್ಲ ಎಂದು ಜನರನ್ನ ನಂಬಿಸಿ ಹೂಡಿಕೆ ಮಾಡಿದ್ದವರಿಗೆ ಪಂಗನಾಮ ಬಳಿದು ಪರಾರಿಯಾ

ಗಿದ್ದರು. ಆರೋಪಿಗಳ ವಿರುದ್ದ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಅಪರಾದ ಸಂಖ್ಯೆ 0483/2020 ಯಲ್ಲಿ ಕರ್ನಾಟಕ ಪ್ರೊಟೆಕ್ಷನ್ ಆಫ್ ಇಂಟರೆಸ್ಟ್ ಡೆಪೊಸೀಟರ್ ಎಕ್ಸೋರ್ಬಿಟೆಂಟ್ ಆಕ್ಟ್ ಅಡಿಯಲ್ಲಿ ದೂರು ದಾಖಲಾಗಿತ್ತು.ಅಇಓ ವಿಭಾಗಕ್ಕೆ ಪ್ರಕರಣ: ಆರ್ಥಿಕ ಅಪರಾಧ ಆದ ಕಾರಣ ಮಾದನಾಯಕನಹಳ್ಳಿ ಪೊಲೀಸರು ಪ್ರಕರಣವನ್ನ ಬೆಂಗಳೂರಿನ ಅಇಓ ವಿಭಾಗಕ್ಕೆ ವರ್ಗಾವಣೆ ಮಾಡಿದ್ದರು. ಅಇಓ ವಿಭಾಗದ ಇನ್ಸ್ಪೆಕ್ಟರ್ ಶ್ರೀನಿವಾಸ್ ನೇತೃತ್ವದಲ್ಲಿ ತನಿಖೆ ನಡೆಸಿ ಮೊಬೈಲ್ ಟವರ್ ಲೊಕೇಷನ್ ಆಧಾರದ ಮೇಲೆ ನೆರೆಯ ರಾಜ್ಯ ಆಂಧ್ರಪ್ರದೇಶದಲ್ಲಿ ಬಂಧಿಸಿ ಪಂಚನಾಮೆ ನಡೆಸಲು ಶಿವನಪುರದ ಮನೆ ಬಳಿ ಕರೆದುಕೊಂಡು ಬಂದಾಗ ಸ್ಥಳೀಯರು ಪೊಲೀಸರ ವಾಹನಕ್ಕೆ ಮುತ್ತಿಗೆ ಹಾಕಿಕೊಂಡರು. ತನಿಖೆಗೆ ಸಹಕರಿಸಿ ಎಂದು ಪೊಲೀಸರು ಮನವಿ ಮಾಡಿಕೊಂಡು ಪಂಚನಾಮೆ ನಡೆಸಿದರು.
ಸದ್ಯ ಆತಂಕದಲ್ಲಿದ್ದ ಹೂಡಿಕೆದಾರರಿಗೆ ಆರೋಪಿಗಳ ಬಂಧನದಿಂದ ನಿಟ್ಟುಸಿರು ಬಿಡುವಂತಾಗಿದ್ದು, ಪ್ರಕರಣದ ತನಿಖೆಯ ನಂತರ ಹೂಡಿಕೆದಾರರಿಗೆ ನ್ಯಾಯ ಸಿಗಬೇಕಿದೆ.
0 Comments