Ticker

6/recent/ticker-posts

Ad Code

Responsive Advertisement

ತಸ್ತೀಕ್ ಹೆಚ್ಚಳಕ್ಕೆ ಅರ್ಚಕರ ಮತ್ತು ಆಗಮಿಕರ ಆಗ್ರಹ

ಕರ್ನಾಟಕ ರಾಜ್ಯದಲ್ಲಿ ಸುಮಾರು 34 ಸಾವಿರ ಮುಜರಾಯಿ ‘ಸಿ’ ದರ್ಜೆಯ ದೇವಾಲಯಗಳಿದ್ದು, ಬಹುತೇಕ ಎಲ್ಲಾ ದೇವಾಲಯಗಳು ಗ್ರಾಮೀಣ ಪ್ರದೇಶದಲ್ಲೇ ಇರುತ್ತವೆ. ಈ ದೇವಾಲಯಗಳಿಗೆ ಬರುವ ತಸ್ತೀಕ್ ಹಣ ವಾರ್ಷಿಕ 48 ಸಾವಿರ, ಮಾಸಿಕ 4,000/- ರೂ.ಗಳನ್ನು ಪೂಜಾ ಕೈಂಕರ್ಯಗಳಿಗೆಂದು ನೀಡುತ್ತಿದ್ದು, ಈ ಹಣದಲ್ಲಿ ಅರ್ಚಕರ ಸಂಭಾವನೆ ಕೇವಲ ಮಾಸಿಕ 1,400/- ರೂ.ಗಳನ್ನು ಮಾತ್ರ ನೀಡುತ್ತಿದ್ದು, ಈ ಹಣದಲ್ಲಿ ಅರ್ಚಕರು ಹೇಗೆ ಜೀವನ ನಡೆಸುವುದು, ಮಕ್ಕಳಿಗೆ ವಿದ್ಯಾಭ್ಯಾಸ ನೀಡುವುದು, ಅವರ ಕುಟುಂಬದ ಆರೋಗ್ಯ ನೋಡಿ ಕೊಳ್ಳುವುದು, ವಯಸ್ಸಾದ ತಂದೆತಾಯಿಯರ ಪೆÇೀಷಣೆ, ಕುಟುಂಬ ನಿರ್ವಹಣೆ ಮಾಡುವುದೇ ಕಷ್ಟಕರವಾಗಿದೆ. ಹೀಗಿರುವಾಗ ಈ ನಮ್ಮ ಮೇಲ್ಕಂಡ ಸಂಘವು ಅನೇಕ ಬಾರಿ ಮುಜರಾಯಿ ಮಂತ್ರಿಗಳನ್ನು, ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದರೂ ಸಹ, ಇಲ್ಲಿಯವರೆವಿಗೂ ಏನೂ ಪ್ರಯೋಜನವಾಗಿಲ್ಲ. ನಮ್ಮ ಸಂಘವು ಹಲವಾರು ಬಾರಿ ಮನವಿ ಸಲ್ಲಿಸಿದ್ದರೂ ಸಹ ತಸ್ತೀಕ್ ಹೆಚ್ಚಳ ಮಾಡಿರುವುದಿಲ್ಲ. ಕಳೆದ ಸಾಲಿನಲ್ಲಿ ಮಾನ್ಯ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ, ತಸ್ತೀಕ್ ಬಿಟ್ಟು ಅರ್ಚಕರ ಗೌರವ ಸಂಭಾವನೆ 5,000/- ರೂ.ಗಳನ್ನು ನೀಡಿ ಎಂದು ಮನವಿಯನ್ನು ಸಲ್ಲಿಸಿರುತ್ತೇವೆ. ಅವರು ‘ಮೌಖಿಕವಾಗಿ ಮಾಡುತ್ತೇನೆ’ ಎಂದು ಹೇಳಿದ್ದರೂ ಸಹ ತಸ್ತೀಕ್ ಹೆಚ್ಚಳ ಮಾಡಲಿಲ್ಲ. ಹಾಗೆಯೇ ಈ ಬಜೆಟ್ ನಲ್ಲಿಯೂ ಸಹ ರಾಜ್ಯದ ಮುಜರಾಯಿ ದೇವಾಲಯಗಳ ಅರ್ಚಕರುಗಳನ್ನು ಕಡೆಗಾಣಿಸಿರುತ್ತೀರಿ. ಈ ಹಿಂದೆ ತಮ್ಮಲ್ಲಿ ಮನವಿ ಸಲ್ಲಿಸಿದಾಗ, ಮುಖ್ಯಮಂತ್ರಿಗಳು ಬಜೆಟ್‍ನಲ್ಲಿ ಮಾಡದಿದ್ದಲ್ಲಿ, ಇಲಾಖಾ ವತಿಯಿಂದ ಮಾಡುತ್ತೇನೆಂದು ಭರವಸೆ ನೀಡಿರುತ್ತೀರಿ. ಆದ್ದರಿಂದ ಈ ಕೂಡಲೇ ಸರ್ಕಾರದ ವತಿಯಿಂದಾಗಲೀ ಅಥವಾ ಧಾರ್ಮಿಕ ದತ್ತಿ ಇಲಾಖೆಯ ವತಿಯಿಂದಾಗಲೀ ಅರ್ಚಕರ ಗೌರವ ಸಂಭಾವನೆ ಮಾಸಿಕ 5,000/- ರೂ. ಅಥವಾ ಮಾಸಿಕ 5,000/- ರೂ. ತಸ್ತೀಕ್ ಹೆಚ್ಚಳ ಮಾಡಿ, ರಾಜ್ಯದ ‘ಸಿ’ ದರ್ಜೆಯ ಮುಜರಾಯಿ ದೇವಾಲಯಗಳ ಅರ್ಚಕರುಗಳಿಗೆ ಅನುಕೂಲ ಮಾಡಿಕೊಡ ಬೇಕೆಂದು ಮಾಧ್ಯಮದ ಮುಖಾಂತರ ಕೋರುತ್ತೇವೆ.


ವಂಶಪಾರಂಪರ್ಯ ಅರ್ಚಕರ ಬರಾಬರ್ದ್ ಹಕ್ಕು ಬದಲಾವಣೆ

ಈ ಮೊದಲು ವಂಶಪಾರಂಪರ್ಯ ಅರ್ಚಕರ ಬರಾಬರ್ದ್ ಹಕ್ಕುಬದಲಾವಣೆಯು ಅರ್ಚಕರಿಗೆ ವಯಸ್ಸಾದ ಮೇಲೆ ಅಥವಾ ಮೃತಪಟ್ಟ ನಂತರ ಅವರ ಮಕ್ಕಳಿಗೆ ಅವರ ವಂಶವೃಕ್ಷ, ಅವರ ಪೂಜಾ ತರಬೇತಿಯ ಪ್ರಮಾಣ ಪತ್ರ, ಅವರ ವಯಸ್ಸಿನ ದೃಢೀಕರಣ ಪತ್ರ ಹಾಗೂ ಗ್ರಾಮದ ಹಿರಿಯ ನಾಗರೀಕರ ಹೇಳಿಕೆ ಹಾಗೂ ಗ್ರಾಮಸ್ಥರ ಹೇಳಿಕೆಯನ್ನು ರೆವಿನ್ಯೂ ಇನ್ಸ್‍ಪೆಕ್ಟರ್ ಮಹಜರು ವರದಿಯ ಮುಖಾಂತರ ಪಡೆದು ಅಥವಾ ಮುಜರಾಯಿ ತಹಸೀಲ್ದಾರ್‍ರವರಿಂದ ಮಹಜರು ಮಾಡಿಸಿ, ಅರ್ಚಕರಿಗೆ ಯಾವುದೇ ಷರತ್ತನ್ನು ವಿಧಿಸದೆ, ಅರ್ಚಕರ ಬರಾಬರ್ದ್ ಹಕ್ಕು ಬದಲಾವಣೆ ಮಾಡಲು ಈ ತಕ್ಷಣವೇ ಆದೇಶಿಸಿ, ಒಂದು ಸುತ್ತೋಲೆಯನ್ನು ಹೊರಡಿಸಿ, ನಂತರ ಮುಜರಾಯಿ ಕಾಯಿದೆಯಲ್ಲಿ ಕಾನೂನಿನ ತಿದ್ದುಪಡಿ ಮಾಡಿಕೊಡಬೇಕೆಂದು ಮಾಧ್ಯಮದ ಮೂಲಕ ಆಗ್ರಹಿಸುತ್ತೇವೆ.

ಮುಜರಾಯಿ ದೇವಾಲಯಗಳ ಜೀರ್ಣೋದ್ಧಾರ

ರಾಜ್ಯದಲ್ಲಿ ‘ಸಿ’ ದರ್ಜೆಯ ನಮ್ಮ ದೇವಾಲಯಗಳೇ ದುಃಸ್ಥಿತಿಯಲ್ಲಿದ್ದು, ಕೆಲವು ದೇವಾಲಯಗಳು ಬೀಳುವ ಹಂತದಲ್ಲಿವೆ, ಕೆಲವು ದೇವಾಲಯಗಳು ಸೋರುತ್ತಿವೆ, ದೇವಾಲಯಗಳಲ್ಲಿ ನೀರಿನ ಮತ್ತು ಶೌಚಾಲಯಗಳ ಸೌಕರ್ಯವೇ 

ಇಲ್ಲ, ಸುಮಾರು ದೇವಾಲಯಗಳಲ್ಲಿ ಕರೆಂಟ್ ಬಿಲ್ ಕಟ್ಟದೇ ಕರೆಂಟ್ ಇಲ್ಲ ದಂತಾಗಿದೆ, ಕೆಲವು ದೇವಾಲಯಗಳ ಕಾಂಪೌಂಡ್ ಬಿದ್ದುಹೋಗಿದೆ, ಅರ್ಚಕರು ದೇವರ ಪ್ರಸಾದ ಮಾಡಲು ಕೊಠಡಿಗಳಿಲ್ಲದೆ ಪರದಾಡುತ್ತಿದ್ದಾರೆ, ಎಷ್ಟೋ ಅರ್ಚಕರುಗಳಿಗೆ ಸ್ವಂತ ಮನೆಯೇ ಇರುವುದಿಲ್ಲ, ಕೆಲವು ದೇವಾಲಯಗಳಿಗೆ ಸುಣ್ಣ-ಬಣ್ಣವೇ ಇಲ್ಲದಂತಾಗಿದೆ, ಇನ್ನೂ ಕೆಲವು ದೇವಾಲಯಗಳಲ್ಲಿ ಹಣವಿಲ್ಲದೆ ಬ್ರಹ್ಮರಥೋತ್ಸವಾದಿಗಳೇ ನಡೆಯುತ್ತಿಲ್ಲ, ಕೇಳಿದರೆ ಹಣವಿಲ್ಲ ಎಂದು ಹೇಳುತ್ತಾರೆ, ನಮ್ಮ ದೇವಾಲಯಗಳ ಪರಿಸ್ಥಿತಿಯೇ ಹೀಗಿರುವಾಗ, ಸಾಮಾನ್ಯ ಸಂಗ್ರಹಣಾ ನಿಧಿಯಲ್ಲಿ ಖಾಸಗಿ ದೇವಾಲಯಗಳಿಗೆ ನೀಡದೆ, ಮುಜರಾಯಿ ದೇವಾಲಯಗಳಿಗೆ ಮಾತ್ರ ನೀಡಬೇಕೆಂದು ಮಾಧ್ಯಮದ ಮೂಲಕ ಕೋರುತ್ತೇವೆ.

ಕೇಂದ್ರ ಕಛೇರಿಯಿಂದಲೇ ಕೋರ್ ಬ್ಯಾಂಕಿಂಗ್ ವ್ಯವಸ್ಥೆ

ಮುಜರಾಯಿ ದೇವಾಲಯಗಳಿಗೆ ನೀಡುತ್ತಿರುವ ತಸ್ತೀಕ್ ಹಣವನ್ನು ಕೆಲವು ತಾಲ್ಲೂಕುಗಳಲ್ಲಿ ತಾಲ್ಲೂಕು ಮಟ್ಟದಲ್ಲಿ ಕೋರ್ ಬ್ಯಾಂಕಿಂಗ್ ವ್ಯವಸ್ಥೆ ಇದ್ದು, ಈ ತಸ್ತೀಕ್ ಹಣವನ್ನು ಪಡೆಯಲು ಅರ್ಚಕರು ತಾಲ್ಲೂಕು ಕಛೇರಿಗಳಿಗೆ ಎಷ್ಟು ಅಲೆದರೂ ಸರಿಯಾದ ಸಮಯಕ್ಕೆ ತಸ್ತೀಕ್ ಹಣ ಅರ್ಚಕರ ಕೈ ಸೇರುತ್ತಿಲ್ಲ. ಕಾರಣ ಕಛೇರಿಗಳಲ್ಲಿ ಅಧಿಕಾರಿಗಳು ಸರಿಯಾಗಿ ಸ್ಪಂದಿಸುತ್ತಿಲ್ಲ. ದಿನನಿತ್ಯದ ಪೂಜಾಕೈಂಕರ್ಯಗಳಿಗೆ ನೀಡುವ ಹಣದಲ್ಲೇ 2 ರಿಂದ 5 ಸಾವಿರ ರೂ. ಲಂಚ ಕೊಡದೇ ಕೆಲಸ ಮಾಡಿಕೊಡುವುದಿಲ್ಲ. ಆದ್ದರಿಂದ ತಾವು ದಯಮಾಡಿ ಕೇಂದ್ರ (ಆಯುಕ್ತರು, ಧಾರ್ಮಿಕ ದತ್ತಿ) ಕಛೇರಿಯಿಂದಲೇ ನೇರವಾಗಿ ಅರ್ಚಕರ ಅಕೌಂಟ್‍ಗಳಿಗೆ ಕೋರ್ ಬ್ಯಾಂಕಿಂಗ್ ವ್ಯವಸ್ಥೆ ಮಾಡಿಸಿ, ಅರ್ಚಕರಿಗೆ ಆಗುತ್ತಿರುವ ತೊಂದರೆಯನ್ನು ತಪ್ಪಿಸಬೇಕೆಂದು ಮಾಧ್ಯಮದ ಮೂಲಕ ತಮ್ಮಲ್ಲಿ ಕೋರುತ್ತೇವೆ.

ಅರ್ಚಕರ ಕುಟುಂಬಗಳಿಗೆ ನೆರವು

ನಿಯಮ 16ರ ಪ್ರಕಾರ ಸೇವಾಂತ ಸೌಲಭ್ಯವನ್ನು ಈಗ ರೂ.50,000/- ನೀಡುತ್ತಿದ್ದು, ಇದನ್ನು ಸಾಮಾನ್ಯ ಸಂಗ್ರಹಣಾ ನಿಧಿಯಿಂದಾಗಲೀ ಅಥವಾ ಇಲಾಖೆಯಿಂದಾಗಲೀ 5 ಲಕ್ಷ ರೂ.ಗಳಿಗೆ ಹೆಚ್ಚಿಸಿಕೊಡಬೇಕೆಂದು ಮಾಧ್ಯಮದ ಮೂಲಕ ಕೋರುತ್ತೇವೆ.

‘ಸಿ’ ದರ್ಜೆ ದೇವಾಲಯಗಳಿಗೆ ವ್ಯವಸ್ಥಾಪನಾ ಸಮಿತಿ ರಚಿಸದಿರುವಂತೆ

ರಾಜ್ಯದ ಸಿ ದರ್ಜೆಯ ದೇವಾಲಯಗಳಿಗೂ ಸಹ ವ್ಯವಸ್ಥಾಪನಾ ಸಮಿತಿಯನ್ನು ರಚಿಸಬೇಕೆಂದು        ಆದೇಶಿಸಿರುತ್ತೀರಿ. ವಾರ್ಷಿಕ 5 ಲಕ್ಷ ಆದಾಯವಿಲ್ಲದ ದೇವಾಲಯಗಳಿಗೆ ಯಾವುದೇ ಕಾರಣಕ್ಕೂ ವ್ಯವಸ್ಥಾಪನಾ ಸಮಿತಿಯನ್ನು ರಚಿಸಬಾರ ದೆಂದು ಕೋರುತ್ತೇವೆ. ಏಕೆಂದರೆ, ಸಿ ದರ್ಜೆಯ ದೇವಾಲಯಗಳು ಗ್ರಾಮೀಣ ಭಾಗದಲ್ಲಿದ್ದು, ಈ ದೇವಾಲಯಗಳಿಗೆ ಆದಾಯವಿರುವುದಿಲ್ಲ. ದಿನ ನಿತ್ಯದ ಪೂಜಾ ಕೈಂಕರ್ಯ ನಡೆಸುವುದೇ ಅತ್ಯಂತ ಕಷ್ಟಕರವಾಗಿದೆ. ಈ ದೇವಾಲಯಗಳಿಗೆ ವ್ಯವಸ್ಥಾಪನಾ ಸಮಿತಿಯನ್ನು ರಚಿಸಿದ್ದೇ ಆದಲ್ಲಿ, ಗ್ರಾಮಗಳ ಜನಗಳಲ್ಲಿ ಸಾಮ್ಯತೆ ಕಡಿಮೆಯಾಗಿ ರಾಜಕೀಯ ಉದ್ಭವಿಸುವ ಸಾಧ್ಯತೆಗಳೇ ಹೆಚ್ಚಾಗಿರುತ್ತದೆ. ಆದ್ದರಿಂದ ಯಾವುದೇ ಕಾರಣಕ್ಕೂ ವ್ಯವಸ್ಥಾಪನಾ ಸಮಿತಿಯನ್ನು ರಚಿಸಬಾರದೆಂದು ಮಾಧ್ಯಮದ ಮುಖಾಂತರ ಮನವಿ ಮಾಡಿಕೊಳ್ಳುತ್ತೇವೆ.

ಜಿಲ್ಲಾ, ತಾಲ್ಲೂಕು ಕಛೇರಿಗಳಿಗೆ ಮುಜರಾಯಿ ಅಧಿಕಾರಿಗಳನ್ನು ನೇಮಿಸುವುದು

ನಾವು ಜಿಲ್ಲಾ, ತಾಲ್ಲೂಕು ಕಛೇರಿಗಳಿಗೆ ಭೇಟಿ ನೀಡುತ್ತಿದ್ದೇವೆ. ಜಿಲ್ಲಾಧಿಕಾರಿಗಳ ಕಛೇರಿಯಲ್ಲಾಗಲೀ ಅಥವಾ ತಾಲ್ಲೂಕು ಕಛೇರಿಯಲ್ಲಾಗಲೀ ಮುಜರಾಯಿ ಅಧಿಕಾರಿಗಳೇ ಇರುವುದಿಲ್ಲ. ಆದ್ದರಿಂದ ಮುಜರಾಯಿ ಕೆಲಸಗಳು 

ಸಕಾಲದಲ್ಲಿ ನಡೆಯುತ್ತಿಲ್ಲ. ಆದ್ದರಿಂದ ಅಧಿಕಾರಿಗಳನ್ನು ನೇಮಕಾತಿ ಅಥವಾ ನಿಯೋಜನೆ ಮಾಡಿಕೊಡಬೇಕೆಂದು ಮಾಧ್ಯಮದ ಮೂಲಕ ಕೋರುತ್ತೇವೆ. 

ಅರ್ಚಕರ ಭವನ

      ರಾಜ್ಯದ ನಾನಾ ಜಿಲ್ಲಾ, ತಾಲ್ಲೂಕುಗಳಿಂದ ಬೆಂಗಳೂರಿಗೆ ಬರುವ ಅರ್ಚಕರಿಗೆ ಉಳಿದುಕೊಳ್ಳಲು ಹಾಗೂ ನಿತ್ಯಕರ್ಮಗಳನ್ನು ಮತ್ತು ಸಂಧ್ಯಾವಂದನಾದಿಗಳನ್ನು ಮಾಡಲು ಸ್ಥಳವಿಲ್ಲದ ಕಾರಣ ಹೋಟೆಲ್ ರೂಮುಗಳನ್ನು ಮಾಡಿಕೊಳ್ಳಲು ಆರ್ಥಿಕವಾಗಿ ಅನುಕೂಲವಿಲ್ಲದ ಕಾರಣ ನಮ್ಮ ಸಂಘಕ್ಕೆ ಅರ್ಚಕರ ಭವನದ ಅವಶ್ಯಕತೆಯಿದ್ದು, ನಿವೇಶನ ನೀಡಬೇಕೆಂದು ಅನೇಕ ಬಾರಿ ಮನವಿ ಸಲ್ಲಿಸಿದ್ದರೂ ಸಹ ಸರ್ಕಾರ ಇದುವರೆವಿಗೂ ನಿವೇಶನ ನೀಡಿರುವುದಿಲ್ಲ. ಆದ್ದರಿಂದ ಈ ಕೂಡಲೇ ನಿವೇಶನ ನೀಡಬೇಕೆಂದು ಮಾಧ್ಯಮದ ಮೂಲಕ ವಿನಂತಿಸುತ್ತೇವೆ.  


ಶ್ರೀ ವೈಷ್ಣವ ಪ್ರಾಧಿಕಾರ ರಚಿಸಲು ಈಗಾಗಲೇ ಸುಮಾರು ಎಲ್ಲಾ ಸಮುದಾಯಗಳಿಗೂ ಅಭಿವೃದ್ಧಿ ಪ್ರಾಧಿಕಾರ ರಚಿಸಿದ್ದು, ಈ ಹಿಂದೆ ಶ್ರೀ ವೈಷ್ಣವ ಜನಾಂಗವು ತ್ರಿಮತಸ್ಥ ಬ್ರಾಹ್ಮಣರಲ್ಲಿ ಒಂದಾಗಿದ್ದು, ‘ಸಾಮಾನ್ಯ’ ಕ್ಯಾಟಗರಿ ಎಂದು ಗುರುತಿಸಿಕೊಂಡಿದ್ದು, ಈಗ ಶ್ರೀ ವೈಷ್ಣವ ಜನಾಂಗವನ್ನು ‘3 ಬಿ’ಗೆ ಸೇರಿಸಿರುತ್ತೀರಿ. ಈಗ ಬ್ರಾಹ್ಮಣ ಪ್ರಾಧಿಕಾರದಲ್ಲಿ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ನೀಡುವ ಯಾವ ಸವಲತ್ತುಗಳೂ ಸಹ ಶ್ರೀ ವೈಷ್ಣವ ಜನಾಂಗಕ್ಕೆ ದೊರೆಯುತ್ತಿಲ್ಲ. ಶ್ರೀ ವೈಷ್ಣವ ಜನಾಂಗವು ಕಡಿಮೆ ಜನಸಂಖ್ಯೆಯ ಅಲ್ಪಸಂಖ್ಯಾತರಾಗಿದ್ದು, ಆದ್ದರಿಂದ ‘ ಶ್ರೀ ವೈಷ್ಣವ ಪ್ರಾಧಿಕಾರ ’ ರಚನೆ ಮಾಡಲು ಸರ್ಕಾರಕ್ಕೆ ಮಾಧ್ಯಮದ ಮುಖಾಂತರ ಮನವಿ ಸಲ್ಲಿಸುತ್ತೇವೆ.

ಮುಜರಾಯಿ ದೇವಾಲಯಗಳ ಅರ್ಚಕರ ಕುಟುಂಬಗಳು ಒಂದು ಲಕ್ಷಕ್ಕೂ ಹೆಚ್ಚು ಕುಟುಂಬಗಳಿದ್ದು, ಇವರು ಈ ದೇವಾಲಯಗಳನ್ನೇ ನಂಬಿಕೊಂಡು ಜೀವನ ನಡೆಸುತ್ತಿದ್ದು, ಈ ಕುಟುಂಬಗಳಿಗೆ ಸರ್ಕಾರಗಳು ಅನ್ಯಾಯ ಮಾಡುತ್ತಿದ್ದು, ಸುಮಾರು 3 ವರ್ಷಗಳಿಂದ ತಸ್ತೀಕ್ ಹೆಚ್ಚಳ ಮಾಡದೆ ಸತಾಯಿಸುತ್ತಿದ್ದಾರೆ. ಮನವಿ ಸಲ್ಲಿಸುವಾಗ ಸರ್ಕಾರದಲ್ಲಿ ಹಣವಿಲ್ಲ ಎಂದು ಹೇಳುತ್ತಾರೆ. ಆದರೆ ಅನ್ಯಧರ್ಮದವರಿಗೆ ಕೋಟಿಗಟ್ಟಲೆ ಸರ್ಕಾರ ಹಣ ನೀಡುತ್ತದೆ. ಹಾಗೆಯೇ ದಿನಾಂಕ 21-03-2021 ರಂದು ಮಠಮಾನ್ಯಗಳಿಗೆ ಹಾಗೂ ಖಾಸಗಿ ದೇವಾಲಯಗಳಿಗೆ 80.25 ಕೋಟಿ ರೂ.ಗಳನ್ನು ನೀಡಿರುತ್ತಾರೆ ಹಾಗೂ ಅನ್ಯ ಸಮುದಾಯಗಳಿಗೆ ಕೋಟಿಗಟ್ಟಲೆ ಹಣ ನೀಡಲು ಸರ್ಕಾರದ ಬಳಿ ಹಣವಿರುತ್ತದೆ. ಆದರೆ ಗ್ರಾಮೀಣ ಪ್ರದೇಶದ ಅರ್ಚಕರು ದೇವಾಲಯಗಳಲ್ಲಿ ಆದಾಯವಿಲ್ಲದೆ ಜೀವನ ನಡೆಸುವುದು ಅತ್ಯಂತ ಕಷ್ಟಕರವಾಗಿದ್ದರೂ ಸಹ, ಸರ್ಕಾರ ಅರ್ಚಕರ ನೆರವಿಗೆ ಬಂದಿರುವುದಿಲ್ಲ. ಈ ಕೂಡಲೇ ಸರ್ಕಾರ ಎಚ್ಚೆತ್ತು ತಸ್ತೀಕ್ ಹೆಚ್ಚಳ ಮಾಡಬೇಕೆಂದು ನಮ್ಮ ಸಂಘವು ಆಗ್ರಹಿಸುತ್ತದೆ. ಅರ್ಚಕರು ಸೌಮ್ಯವಾದವರು, ಬೇಗನೆ ಪ್ರತಿಭಟನೆಗಳಿಗೆ ಇಳಿಯುವುದಿಲ್ಲ. ಆದ್ದರಿಂದ ಈ ಬೇಡಿಕೆಗಳನ್ನು ಈಡೇರಿಸಲು ಏಪ್ರಿಲ್ ತಿಂಗಳ ಕೊನೆಯ ವಾರದವರೆಗೂ ಕಾದು ನೋಡುತ್ತೇವೆ. ಸ್ಪಂದಿಸದಿದ್ದ ಪಕ್ಷದಲ್ಲಿ ಮುಂದೆ ಯಾವ ರೀತಿ ಹೋರಾಟ ನಡೆಸಬೇಕೆಂದು ಸಮಾಲೋಚಿಸಿ ಹೋರಾಟ ನಡೆಸಬೇಕಾಗುತ್ತದೆ ಎಂದು ಕರ್ನಾಟಕ ರಾಜ್ಯ ಧಾರ್ಮಿಕ ದತ್ತಿ ದೇವಾಲಯಗಳ ಅರ್ಚಕರ ಮತ್ತು ಆಗಮಿಕರ ಸಂಘದ ಅಧ್ಯಕ್ಷ ಡಾ. ಜಾನಕಿರಾಮ್ ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ADVT...






Post a Comment

0 Comments

Ad Code

Responsive Advertisement