ಚಾಮರಾಜನಗರ (ಮಾ.31): ಮೂರನೇ ಹಂತದ ಕೋವಿಡ್ ಲಸಿಕೆ ಹಾಕುವ ಅಭಿಯಾನದ ಆರಂಭದಲ್ಲಿ ತೀರಾ ಕಳಪೆ ಸಾಧನೆ ಕಂಡು ಬಂದಿದ್ದ ಚಾಮರಾಜನಗರ ಜಿಲ್ಲೆ ಇದೀಗ ರಾಜ್ಯದಲ್ಲೇ 3 ನೇ ಸ್ಥಾನಕ್ಕೇರುವ ಮೂಲಕ ಉತ್ತಮ ಪ್ರಗತಿ ಸಾಧಿಸುತ್ತಿದೆ. ಇದುವರೆಗಿನ ಅಂಕಿಅಂಶಗಳ ಪ್ರಕಾರ ಜಿಲ್ಲೆಯಲ್ಲಿ 60 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗು ಗಂಭೀರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ 45 ವರ್ಷ ಮೇಲ್ಪಟ್ಟವರಲ್ಲಿ 69812 ಮಂದಿ ಕೋವಿಡ್ ಲಸಿಕೆ ಹಾಕಿಸಿಕೊಂಡಿದ್ದಾರೆ.
ಮೂರನೇ ಹಂತದ ಕೋವಿಡ್ ಲಸಿಕೆ ಹಾಕಲು ಆರಂಭಿಸಿದ ಮೊದಲ ದಿನ ಅಂದರೆ ಮಾರ್ಚ್ 1 ರಂದು ಕೇವಲ ಆರು ಮಂದಿ ಮಾತ್ರ ಲಸಿಕೆ ಪಡೆದಿದ್ದರು. ನಂತರದ ದಿನಗಳಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜನರಲ್ಲಿ ಕೋವಿಡ್ ಲಸಿಕೆ ಹಾಕಿಸಿಕೊಳ್ಳುವ ಬಗ್ಗೆ ಜಾಗೃತಿ ಹಾಗೂ ವ್ಯಾಪಕ ಪ್ರಚಾರ ಸೇರಿದಂತೆ ಹಲವು ರೀತಿಯ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುವ ಮೂಲಕ ಚಾಮರಾಜನಗರ ರಾಜ್ಯದ ಮೊದಲ ಐದು ಜಿಲ್ಲೆಗಳ ಪೈಕಿ ಸ್ಥಾನ ಪಡೆದಿದೆ.ಜಿಲ್ಲೆಯಲ್ಲಿ 1,00,027 ಮಂದಿ ಹಿರಿಯ ನಾಗರೀಕರನ್ನು ಗುರುತಿಸಲಾಗಿದ್ದು ಇವರಲ್ಲಿ ಕೋವಿಡ್ ಲಸಿಕೆ ಬಗ್ಗೆ ಭಯ ಹಾಗು ತಪ್ಪು ಕಲ್ಪನೆಗಳನ್ನು ಹೋಗಲಾಡಿಸುವ ಮೂಲಕ ಹಾಗೂ ನೊಂದಣಿ ಮಾಡಿಸಲು ಇದ್ದ ಎಲ್ಲಾ ಅಡತಡೆಗಳನ್ನು ನಿವಾರಿಸುವ ಮೂಲಕ ಜಿಲ್ಲೆಯಲ್ಲಿ ಇದುವರೆಗೆ ಶೇಕಡಾ 45.44 ರಷ್ಟು ಮಂದಿಗೆ ಲಸಿಕೆ ಹಾಕಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ತಿಳಿಸಿದರು.
ಕೋವಿಡ್ ಲಸಿಕೆ ಹಾಕಿಸಿಕೊಳ್ಳಲು ಬರುವ ಪ್ರತಿಯೊಬ್ಬರು ತಮ್ಮ ಆಧಾರ ಕಾರ್ಡ್ ತರುವುದು ಕಡ್ಡಾಯವಾಗಿದೆ, ಪ್ರಾಥಮಿಕ ಆರೋಗ್ಯ ಕೇಂದ್ರ ಸಮುದಾಯ ಆರೋಗ್ಯ ಕೇಂದ್ರ ಹಾಗು ಆರೋಗ್ಯ ಉಪಕೇಂದ್ರಗಳಲ್ಲಿ ಮಂಗಳವಾರ, ಗುರುವಾರ ಹಾಗೂ ಭಾನುವಾರ ಹೊರತುಪಡಿಸಿ ಉಳಿದೆಲ್ಲಾ ದಿನಗಳಲ್ಲಿ ಲಸಿಕೆ ಹಾಕಲಾಗುವುದು. ಜಿಲ್ಲಾಸ್ಪತ್ರೆ ಹಾಗೂ ತಾಲೂಕು ಆಸ್ಪತ್ರೆಗಳಲ್ಲಿ ವಾರದ ಎಲ್ಲಾ ದಿನಗಳಲ್ಲೂ ಲಸಿಕೆ ಹಾಕಲಾಗುವುದು ಎಂದು ಅವರು ತಿಳಿಸಿದ್ದಾರೆ.

0 Comments