ಮಹಿಳೆ ಪ್ರತ್ಯಕ್ಷವಾದಾಗ ಮಾತ್ರ ಈ ಸೆಕ್ಸ್ ಸಿಡಿ ಸತ್ಯ ಏನೆಂಬುದು ಬಯಲಾಗಲಿದೆ. ಆ ಮಹಿಳೆಯ ಪೋಷಕರು ಒಂದು ರೀತಿಯ ಹೇಳಿಕೆ ನೀಡುತ್ತಿದ್ದಾರೆ, ಮಹಿಳೆಯ ವಿಡಿಯೋ ಹೇಳಿಕೆಯೇ ಒಂದು ರೀತಿ ಇದೆ. ಹೀಗಾಗಿ ಮೊದಲ ಸಂತ್ರಸ್ಥ ಮಹಿಳೆ ಎಸ್ಐಟಿ ಅಧಿಕಾರಿಗಳ ತನಿಖೆಗೆ ಒಳಗಾಗಲಿ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಇಂದು ತಿಳಿಸಿದ್ದಾರೆ. ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ಯಲ್ಲಿ ಸೆಕ್ಸ್ ಸಿಡಿ ಕೇಸ್ಗೆ ಸಂಬಂಧಿಸಿದಂತೆ ಮಾತನಾಡಿರುವ ಅವರು, "ಸಂಬಂಧಪಟ್ಟ ಮಹಿಳೆ ಬೆಂಗಳೂರು ಪೊಲೀಸ್ ಕಮಿಷನರ್ ಅಥವಾ ಪೊಲೀಸ್ ಠಾಣೆಗೆ ನೇರವಾಗಿ ಬಂದು ದೂರು ಕೊಟ್ಟಾಗ ಮಾತ್ರ ಸತ್ಯ ಗೊತ್ತಾಗಲಿದೆ. ಇದ್ಯಾವುದನ್ನು ಮಾಡದೆ ಎಲ್ಲವನ್ನೂ ಸಿಡಿಯ ಮೂಲಕ ಮಾಡುತ್ತೇನೆ ಎಂಬುದು ಆಗದಿರುವ ವಿಚಾರ" ಎಂದು ಅಭಿಪ್ರಾಯಪಟ್ಟಿದ್ದಾರೆ.
ಪ್ರಕರಣ ತನಿಖೆಯ ಬಗ್ಗೆಯೂ ಮಾತನಾಡಿರು ಸುರೇಶ್ ಕುಮಾರ್, "ಎಸ್ಐಟಿ ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡು ವಿಚಾರಣೆ ನಡೆಸುತ್ತಿದೆ. ಖಂಡಿತವಾಗಿಯೂ ಈ ಪ್ರಕರಣವನ್ನು ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗಲಿದ್ದಾರೆ" ಎಂದು ತಿಳಿಸಿದ್ದಾರೆ.ಸಿಡಿ ವಿಚಾರಕ್ಕೆ ಸದನದ ಕಲಾಪ ಬಲಿಯಾದ ಬಗ್ಗೆ ತೀವ್ರ ಅಸಮಧಾನ ವ್ಯಕ್ತಪಡಿಸಿದ ಸಚಿವ ಸುರೇಶ್ ಕುಮಾರ್, "ಖಾಸಗಿ ವಿಚಾರ ಮಾತನಾಡಲು ಬೇರೆ ಬೇರೆ ವೇದಿಕೆಗಳಿವೆ. ರಾಜ್ಯದ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚಿಸದೆ ಸದನದ ಸಮಯ ಸಂಪೂರ್ಣ ಹಾಳು ಮಾಡಲಾಗಿದೆ. ಎಲ್ಲಾ ಸದಸ್ಯರಿಗೂ ತಮ್ಮ ತಮ್ಮ ಕ್ಷೇತ್ರದ ವಿಚಾರಗಳ ಬಗ್ಗೆ ಚರ್ಚೆ ಮಾಡಬೇಕೆಂಬ ಆಸೆ ಇರುತ್ತದೆ. ಆದರೆ, ಸಿಡಿ ವಿಚಾರಕ್ಕೆ ಕಲಾಪ ಬಲಿಯಾಗಿರುವುದು ಅತ್ಯಂತ ಖೇದಕರ ಸಂಗತಿ ಈ ಬಗ್ಗೆ ಸಭಾಧ್ಯಕ್ಷರು ಸಹ ಬೇಸರಗೊಂಡಿದ್ದಾರೆ" ಎಂದಿದ್ದಾರೆ.
"ಈ ಬಗ್ಗೆ ಎಲ್ಲಾ ಪಕ್ಷದ ಹಿರಿಯರು ಗಂಭೀರವಾಗಿ ಅವಲೋಕನ ಮಾಡಬೇಕಿದೆ. ಸದನ ಇರೋದು ಯಾಕೆ? ಇಲ್ಲಿ ಯಾವ ವಿಚಾರವನ್ನು, ಯಾವ ಗಾಂಭೀರ್ಯತೆಯಿಂದ ಚರ್ಚಿಸಬೇಕು? ಎಂದು ಚಿಂತಿಸಬೇಕಿದೆ. ಸದನದಲ್ಲಿ ಅನಾವಶ್ಯಕ ವಿಚಾರಗಳಿಗೆ ದಿನಗಟ್ಟಲೆ ಸಮಯ ವ್ಯರ್ಥ ಮಾಡುವುದು ಎಷ್ಟರ ಮಟ್ಟಿಗೆ ಸರಿ? ಎಂಬುದರ ಬಗ್ಗೆಯೂ ಆಲೋಚಿಸಬೇಕಿದೆ" ಎಂದು ಅವರು ಹೇಳಿದ್ದಾರೆ.

0 Comments