Ticker

6/recent/ticker-posts

Ad Code

Responsive Advertisement

ಬೆಂಗಳೂರು ಹುಡುಗರ ತಂಡ ಅಯೋಜಿಸಿದ್ದ "ಮೊಳೆ ಮುಕ್ತ ಮರ ಬೆಂಗಳೂರು" ಜಾಗೃತಿ ಕಾಲ್ನಡಿಗೆ

 ಬೆಂಗಳೂರು ಹುಡುಗರ ತಂಡ ಅಯೋಜಿಸಿದ್ದ "ಮೊಳೆ ಮುಕ್ತ ಮರ ಬೆಂಗಳೂರು" ಜಾಗೃತಿ ಕಾಲ್ನಡಿಗೆ ಜಾಥಾಕ್ಕೆ‌ ಚಾಲನೆ ಮತ್ತು ಸಮಾರಂಭದಲ್ಲಿ ಭಾಗಿ: ಮಾನ್ಯ ಆಯುಕ್ತರು


ಅಂತಾರಾಷ್ಟ್ರೀಯ ಅರಣ್ಯ ದಿನದ ಅಂಗವಾಗಿ ಬೆಂಗಳೂರು ಹುಡುಗರ ತಂಡವು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಸಹಭಾಗಿತ್ವದೊಂದಿಗೆ ಇಂದು ಎಂ.ಜಿ.ರಸ್ತೆಯ ಬಾಲಭವನದಿಂದ ಪಾಲಿಕೆಯ ಆವರಣದಲ್ಲಿರುವ ಡಾ.ರಾಜ್‌ಕುಮಾರ್‌ ಗಾಜಿನ ಮನೆಯವರೆಗೆ ನಡೆದ "ಮೊಳೆ ಮುಕ್ತ ಮರ" ಬೆಂಗಳೂರಿಗಾಗಿ ಜಾಗೃತಿ ಕಾಲ್ನಡಿಗೆ ಜಾಥಾಕ್ಕೆ ಮಾನ್ಯ ಆಯುಕ್ತರು ಶ್ರೀ ಎನ್.ಮಂಜುನಾಥ್ ಪ್ರಸಾದ್, ಮಾನ್ಯ ಎಡಿಜಿಪಿ(ರೈಲ್ವೇಸ್) ಶ್ರೀ ಭಾಸ್ಕರ್ ರಾವ್ ಹಾಗೂ ಇನ್ನಿತರರು   ಕಾಲ್ನಡಿಗೆ ಜಾಥಾ ಮತ್ತು ಸಮಾರಂಭದಲ್ಲಿ ಭಾಗವಹಿಸಿದ್ದರು.


ನಾಗರಿಕರ ಸಹಭಾಗಿತ್ವದ ಕಾರ್ಯಕ್ರಮ:

ನಗರದಲ್ಲಿ ಮೊಳೆ ಮುಕ್ತ ಮರ ಬೆಂಗಳೂರುಗಾಗಿ ಹಲವಾರು ನಾಗರಿಕರು ಸಂಘ/ಸಂಸ್ಥೆಗಳು ಸೇರಿ ತಂಡಗಳನ್ನು ಮಾಡಿಕೊಂಡು ವಿಶಿಷ್ಟ ಕಾರ್ಯಕ್ರಮವನ್ನು ರೂಪಿಸಿ, ನಗರದಾದ್ಯಂತ ಮರಗಳ ಮೇಲೆ ಬಿತ್ತಿಪತ್ರಗಳನ್ನು ಅಂಟಿಸಲು ಹೊಡೆದಿರುವ ಮೊಳೆ, ಸ್ಟ್ಯಾಪ್ಲರ್ ಮೂಲಕ ಪಿನ್ ಹೊಡೆದಿರುವುದನ್ನು ತೆಗೆಯುವ ಕಾರ್ಯ ಯಶಸ್ವಿಯಾಗಿ ನಡೆಸುತ್ತಿರುವುದು ಶ್ಲಾಘನೀಯ ಕಾರ್ಯಕ್ರಮ. ಯಾವ ಕಾರ್ಯಕ್ರಮ/ಯೋಜನೆಯು ಜನರಿಂದ ಸ್ವಯಂ ರೂಪುಗೊಳ್ಳುತ್ತದೆಯೋ ಅದು ಯಶಸ್ವಿಯಾಗಲಿದೆ ಎಂದು ಆಯುಕ್ತರು ಶ್ರೀ ಎನ್. ಮಂಜುನಾಥ್ ಪ್ರಸಾದ್ ರವರು ತಿಳಿಸಿದರು.


ನಗರ ಹಸರೀಕರಣಗೊಳಿಸಲು ಕರೆ: ಮಾನ್ಯ ಆಯುಕ್ತರು

ನಗರವು 800 ಚ.ಕಿ.ಮೀ ವ್ಯಾಪ್ತಿಯಲ್ಲಿ 1.30 ಕೋಟಿ ಜನಸಂಖ್ಯೆ ವಾಸಿಸುತ್ತಿದ್ದು, ಶೇ. 50 ರಷ್ಟು ಯುವಕ/ಯುವತಿಯರಿದ್ದಾರೆ. ಈ ವೇಳೆ ಆಯುಕ್ತರು ಸ್ವತ: ತಮ್ಮ ಮಕ್ಕಳು ಕಬ್ಬನ್ ಉದ್ಯಾನವನದಲ್ಲಿ ಶಾಲಾ ವತಿಯಿಂದ ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಿದ್ದಾಗ, ಶಾಲಾ ವತಿಯಿಂದ ನೆನಪಿಗೆ ಎರಡು ಸಸಿಗಳನ್ನು ನೀಡಿದ್ದರು. ಅವುಗಳನ್ನು ನಮ್ಮ ಮನೆಯ ಮುಂಭಾಗದಲ್ಲಿ ನೆಟ್ಟು ಪೋಷಣೆ ಮಾಡಿದರು. ಅವುಗಳೀಗ ಹೆಮ್ಮರವಾಗಿ ಬೆಳೆದಿದ್ದು, ಆ ಮರಗಳು ಈಗ  ನೋಡಿದಾಗ ನಮ್ಮವು, ನಾವು ಬೆಳೆಸಿದ ಮರಗಳು ಎಂಬ ಭಾವನೆ ಸ್ವಾಭಾವಿಕವಾಗಿ ಬರಲಿದೆ.  ಈ ಪೈಕಿ ಯುವಕರು ಮನಸ್ಸು ಮಾಡಿದರೆ ಯಾವ ಕೆಲಸ ಬೇಕಾದರೂ ಮಾಡಬಹುದು. ಮೊಳೆ ಮುಕ್ತ ಬೆಂಗಳೂರು ಮಾಡುವ ನಿಮ್ಮ ದ್ಯೇಯೆಯನ್ನು ಹೀಗೆ ಮುಂದುವರಿಸಿಕೊಂಡು ಹೋಗಿ ಎಂದರು.


ಬೆಂಗಳೂರು ಉದ್ಯಾನ ನಗರಿ ಎಂಬ ಹೆಗ್ಗಳಿಕೆ ಹಾಗೆಯೇ ಇರಬೇಕಾದರೆ ಇನ್ನೂ ಹೆಚ್ಚು ಹೆಚ್ಚು ಸಸಿಗಳನ್ನು ನಡೆಬೇಕು. ಈ ಸಂಬಂಧ ನಗರದ ಯುವಕ/ಯುವತಿಯರು ಸೇರಿ ಮುಂದಿನ ಮಳೆಗಾಲದಲ್ಲಿ 10 ಲಕ್ಷ ಸಸಿಗಳನ್ನು ನೆಡುವ ಕಾರ್ಯಕ್ರಮ ರೂಪಿಸಿಕೊಳ್ಳಿ. ಆ 10 ಲಕ್ಷ ಸಸಿಗಳನ್ನು‌ ಪಾಲಿಕೆಯಿಂದ  ಉಚಿತವಾಗಿ ನೀಡುತ್ತೇವೆ.  ಎಲ್ಲರೂ ನಮ್ಮ ನಗರವೆಂದು ಸಸಿಗಳನ್ನು ನೆಡಲು ಮುಂದೆ ಬಂದು ಸಾರ್ವಜನಿಕ ಸ್ಥಳಗಳಲ್ಲಿ ಸಸಿಗಳನ್ನು ನೆಟ್ಟು ಅದನ್ನು ಪೋಷಣೆ ಮಾಡಿದಾಗ ಹೆಚ್ಚು ಮರಗಳು ಬೆಳೆದು ಇನ್ನೂ ಹಚ್ಚ ಹಸಿರಾದ ನಗರವಾಗಿ ಬದಲಾಗಲಿದ್ದು, ಮುಂದಿನ ಪೀಳಿಗೆಗೆ ಒಳ್ಳೆಯ ಪರಿಸರ ನಿರ್ಮಿಸಲು  ಹೆಚ್ಚು ಅನುಕೂಲಕರವಾಗಲಿದೆ ಎಂದು ಹೇಳಿದರು.


ಎಡಿಜಿಪಿ(ರೈಲ್ವೇಸ್) ಶ್ರೀ ಭಾಸ್ಕರ್ ರಾವ್ ರವರು ಮಾತನಾಡಿ, ಬೆಂಗಳೂರು ನಗರದಲ್ಲಿ ಮರಗಳಿಗೆ ಹೊಡೆದಿರುವ ಮೊಳೆ ತೆಗೆದು ನಗರ ಸುಂದರವಾಗಿರಲು ಮುಂದಾದ ನಿಮ್ಮ ಯೋಚನೆ, ನಗರ ಮೇಲಿರುವ ಪ್ರೀತಿಗೆ ನನ್ನ ಅಭಿನಂದನೆಗಳು. ಮರಗಳ ಮೇಲೆ ಮೊಳೆ, ಬಿತ್ತಿಪತ್ರ, ಕೇಬಲ್ ಗಳ ತೆರವು ಮಾಡುವ ಕೆಲಸ ಆಗುತ್ತಿದೆ. ಪೊಲೀಸ್ ಇಲಾಖೆಯು ಕೂಡಾ ನಿಮ್ಮ ಜೊತೆ ಕೈಜೋಡಿಸಲಿದೆ ಎಂದು ಹೇಳಿದರು. ಸದರಿ ತಂಡವು ಕ್ರಿಯಾತ್ಮಕ ವಾಗಿ ಕಾರ್ಯನಿರ್ವಹಿಸುತ್ತಿದ್ದು, ಹಲವಾರು ಕಡೆ FIR ದಾಖಲಿಸಿ ಹಾಗೂ ಜಾಗೃತಿಯನ್ನು ಮೂಡಿಸಿ ಒಳ್ಳೆಯ ಕಾರ್ಯನಿರ್ವಹಿಸುತ್ತಿದೆ ಎಂದರು.

ಬೆಂಗಳೂರು ಹುಡುಗರು ತಂಡದ ಪರವಾಗಿ: ಶ್ರೀ ವಿನೋದ್

ಬೆಂಗಳೂರು ಹುಡುಗರು ತಂಡದ ವಿನೋದ್ ಮಾತನಾಡಿ, ಸದರಿ ಯೋಜನೆಯು ಮೊದಲಿಗೆ ವಂಸಂತನಗರ ವಾಡ್೯ ವ್ಯಾಪ್ತಿಯಲ್ಲಿ ಮರಗಳ ಮೇಲೆ ಜಾಹೀರಾತು ನೋಡಿ ಅವುಗಳನ್ನು ತೆರವುಗೊಳಿಸಲು  4 ಜನ ಸೇಹ್ನಿತರು ತೀರ್ಮಾನಿಸಿ ಪ್ರಯತ್ನ ಪಟ್ಟೆವು. ಆಗ ನಮಗೆ ಅನುಭವವಾಗಿದ್ದು ಮರಗಳಿಗೆ ಮಳೆ ಹೊಡೆದು ತ್ರೀವವಾದ ಹಾನಿ ಉಂಟಾಗಿ ಪರಿಸರ ಕಲುಷಿತವಾಗುತ್ತಿರುವುದನ್ನು ಗಮನಿಸಿದೆವು. ಆಗ ನಮಗೆ ವಸಂತ ನಗರ ವಾಡ್೯ ಕಛೇರಿಯಲ್ಲಿ ಶ್ರೀ ಮಂಜುನಾಥ್ ಪ್ರಸಾದ್, ಮಾನ್ಯ ಆಯುಕ್ತರು, ಬಿಬಿಎಂಪಿ ರವರು ಪ್ರತಿ ತಿಂಗಳ ಮೊದಲ ಮತ್ತು ಮೊರನೆ ಶನಿವಾರ ಸಭೆ ನಡೆಸುತ್ತಿದ್ದದನ್ನು ಗಮನಿಸಿ ಮಾನ್ಯ ಆಯುಕ್ತರು ರವರನ್ನು ತಮ್ಮ ತಂಡದ ಕಾರ್ಯಕ್ಕೆ ಸಹಕರಿಸಿ ರಾಯಭಾರಿಯಾಗುವಂತೆ ಕೋರಿದೆವು.


ಮಾನ್ಯ ಆಯುಕ್ತರು ರವರು ನಮ್ಮೊಂದಿಗೆ ಆತ್ಮೀಯವಾಗಿ ಮಾತನಾಡಿ ನಿಮ್ಮ ತಂಡವು ಬರಿ ವಸಂತ ನಗರದ ಶಿವಾನಂದ ಸರ್ಕಲ್ ಬಳಿ ಕಾರ್ಯಮಾಡಿದರೆ ಸಾಲದು, ನಿಮ್ಮ ತಂಡವು ನಗರದಾದ್ಯಂತ ಸದರಿ ಕಾರ್ಯ ಹಮ್ಮಿಕೊಂಡು ಕಾರ್ಯನಿರ್ವಹಿಸುವುದಾದರೆ ನನ್ನ ಸಹಮತವಿದೆ ಎಂದು ತಿಳಿಸಿದರು. ಅದರಂತೆ, ನಾವು ಸಾಧ್ಯವಾದಷ್ಟು ನಗರದಾದ್ಯಂತ ಎಲ್ಲಾ ಸಂಘ/ಸಂಸ್ಥೆಗಳು/ಸಂಘಟನೆಗಳೊಂದಿಗೆ ಸಹಕರಿಸಿ ಜಾಗೃತಿ ಮೂಡಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದೇವೆ.

ತದನಂತರ ಶ್ರೀ ಭಾಸ್ಕರ್ ರಾವ್, ಎ.ಡಿ.ಜಿ.ಪಿ ರವರು ಸ್ವತಃ ನಮ್ಮ ಕಾರ್ಯವೈಖರಿಯನ್ನು ಸಾಮಾಜಿಕ ಜಾಲತಾಣದಲ್ಲಿ ಗಮನಿಸಿ ನಮ್ಮನ್ನು ಕರೆದು, ಸದರಿ ಕಾರ್ಯಕ್ಕೆ ಕಾನೂನಾತ್ಮಕವಾಗಿ ಯಾವುದೇ ಸಹಾಯ ಹಾಗೂ ನೆರವು ನೀಡುವುದಾಗಿ ತಿಳಿಸಿ, ಅದರಂತೆ ಈಗಾಗಲೇ ಮರಗಳಿಗೆ ಹಾನಿ ಉಂಟುಮಾಡಿರುವವರ ಮೇಲೆ ಸುಮಾರು 12 FIR ದಾಖಲಿಸಿ ನಮ್ಮ ಸೇವಾ ಕಾರ್ಯವನ್ನು ನಿರ್ವಹಿಸುತ್ತಿದ್ದೇವೆ.

ಅಲ್ಲದೇ, ಹಲವಾರು ಸಂಘ ಸಂಸ್ಥೆಗಳು ಸಹ ನಮ್ಮ ಜೊತೆ ಕೈಜೊಡಿಸಿದ್ದು, ಸರ್ಕಾರದ ಕರ್ನಾಟಕ ಸಿವಿಲ್ ಡಿಫೆನ್ಸ್, ದೆಹಲಿ  ಕೇಂದ್ರ ಸಂಸ್ಥೆಯ  ಹಿಂದೂಸ್ಥಾನಿ ಸ್ಕೌಟ್ಸ್ ಮತ್ತು ಗೈಡ್ಸ್ ನ ನಗರದ ಪ್ರತಿನಿಧಿಗಳು, ವೀಲ್ ಛೇರ್ ಅಸೋಸಿಯೇಷನ್, ಪರಿವರ್ತನ ಟ್ರಸ್ಟ್, ಸಿಟಿಜನ್ ಟಾಸ್ಕ್ ಫೋರ್ಸ್‌ ಇನ್ನೂ ಮುಂತಾದವರು ಸದರಿ ಕಾರ್ಯದಲ್ಲಿ ಭಾಗವಹಿಸಿ ಸ್ಪೂರ್ತಿ ನೀಡಿರುವುದು ನಮ್ಮ ಜವಾಬ್ದಾರಿ ಹೆಚ್ಚಾಗಿದೆ ಎಂದರು.


ಸದರಿ ಜಾಥದಲ್ಲಿ ಪಾಲ್ಗೊಂಡ ಸಂಘ/ಸಂಸ್ಥೆ ಗಳಿಗೆ  ಜ್ಞಾಪರ್ಕಾಥವಾಗಿ ಸ್ಮರಣಿಕೆ, ಪ್ರಮಾಣಪತ್ರ ಮತ್ತು ಸಸಿಗಳನ್ನು ನೀಡಲಾಯಿತು.

ಕಾಲ್ನಡಿಕೆ ಜಾಥಾ ಮಾರ್ಗ: 

ಎಂ.ಜಿ.ರಸ್ತೆಯ ಬಾಲಭವನದಿಂದ ಪ್ರಾರಂಭವಾಗಿ, ಮ್ಯೂಸಿಯಂ ರಸ್ತೆ, ವಿಟ್ಟಲ್ ಮಲ್ಯಾ ರಸ್ತೆ, ರಾಜಾರಾಮ್ ಮೋಹನ್ ರಾಯ್ ರಸ್ತೆ‌ ಮೂಲಕ ಪಾಲಿಕೆ ಕೇಂದ್ರ ಕಛೇರಿ ಆವರಣದಲ್ಲಿರುವ ಡಾ.ರಾಜ್‌ಕುಮಾರ್‌ ಗಾಜಿನ ಮನೆಯವರೆಗೆ ಕಾಲ್ನಡಿಗೆ ಜಾಥಾ ನಡೆಯಿತು‌. ಕಾಲ್ನಡಿಗೆ ಜಾಥಾದಲ್ಲಿ ಮಕ್ಕಳು, ವಿಕಲಚೇತನರು, ಯುವಕ/ಯುವತಿಯರು ಸೇರಿದಂತೆ 600ಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದರು.

ಹೆಚ್ಚಿನ ಮಾಹಿತಿಗಾಗಿ: ಶ್ರೀ. ವಿನೋದ್, ಬೆಂಗಳೂರು ಹುಡುಗರು ತಂಡ. 9611733032




Post a Comment

0 Comments

Ad Code

Responsive Advertisement