ಕನ್ನಡ ಸಾಹಿತ್ಯ ಪರಿಷತ್ತಿನ ‘ಡಾ. ರಾಜ್‍ಕುಮಾರ್ ದತ್ತಿ ಪ್ರಶಸ್ತಿ’ಗೆ 2020 ಮತ್ತು 2021ನೆಯ ಸಾಲಿಗೆ ಕ್ರಮವಾಗಿ ರಂಗಕಲಾವಿದ ಶ್ರೀ ಕೆ. ನರಸಿಂಹಯ್ಯ (ಪುಟ್ಟರಾಜು) ಮತ್ತು ಚಲನಚಿತ್ರ ನಟ ಮತ್ತು ನಿರ್ಮಾಪಕರಾದ ಶ್ರೀ ಬಸಂತಕುಮಾರ್ ಪಾಟೀಲರನ್ನು ಆಯ್ಕೆ ಮಾಡಲಾಗಿದೆ.
ದಿನಾಂಕ 17-03-2021 ರಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮನು ಬಳಿಗಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಆಯ್ಕೆ ಸಮಿತಿ ಸಭೆಯಲ್ಲಿ ಸರ್ವಾನುಮತದಿಂದ ಈ ತೀರ್ಮಾನ ಕೈಗೊಳ್ಳಲಾಯಿತು. ಪ್ರಶಸ್ತಿಯು ರೂ. 30,000-00 ನಗದು ಮತ್ತು ಫಲಕವನ್ನು ಒಳಗೊಂಡಿರುತ್ತದೆ.
ಶ್ರೀ ಬಸಂತಕುಮಾರ್ ಪಾಟೀಲ್ ಅವರು ಕನ್ನಡ ಚಲನಚಿತ್ರಗಳ ನಾಯಕ ನಟರಾಗಿ, ಐದು ರಾಷ್ಟ್ರೀಯ ಪ್ರಶಸ್ತಿ ಚಲನಚಿತ್ರಗಳ ನಿರ್ಮಾಪಕರಾಗಿ ಕನ್ನಡ ಚಿತ್ರರಂಗದ ಕೀರ್ತಿಯನ್ನು ಹೆಚ್ಚಿಸಿದವರು. ಖ್ಯಾತ ಉದ್ಯಮಿಯೂ ಆಗಿರುವ ಅವರು ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷರಾಗಿ ಹಾಗೂ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರಾಗಿಯೂ ತಮ್ಮ ಕಾರ್ಯಕ್ಷಮತೆಯನ್ನು ಮೆರೆದಿದ್ದಾರೆ.
ಶ್ರೀ ಕೆ. ನರಸಿಂಹಯ್ಯ (ಪುಟ್ಟರಾಜು) ಅವರು ಕಳೆದ 50 ವರ್ಷಗಳಿಂದ ಸತತವಾಗಿ ವೃತ್ತಿ ಮತ್ತು ಹವ್ಯಾಸಿ ರಂಗಭೂಮಿಗಳಲ್ಲಿ ಕಲಾವಿದರಾಗಿ ತಮ್ಮ ನೈಪುಣ್ಯತೆಯನ್ನು ಮೆರೆದವರು. ದೈಹಿಕವಾಗಿ ವಿಕಲಚೇತನರಾಗಿದ್ದರೂ ಉತ್ಸಾಹಕ್ಕೆ ಎಂದೂ ಕುಂದು ಬರದಂತೆ ನಟಿಸಿ ಜನ ಮೆಚ್ಚುಗೆ ಪಡೆದವರು. ಆಯ್ಕೆ ಸಮಿತಿಯ ಸದಸ್ಯರಾದ ಹಿರಿಯ ಚಿತ್ರ್ಯೋದ್ಯಮಿ ಎಸ್.ಎ. ಚಿನ್ನೇಗೌಡರ ಸಲಹೆಯ ಮೇರೆಗೆ ಸಮಿತಿಯು ಇವರನ್ನು ಈ ಪ್ರಶಸ್ತಿಗೆ ಪರಿಗಣಿಸಿ ಒಮ್ಮತದಿಂದ ಆಯ್ಕೆ ಮಾಡಿದೆ.
ಡಾ. ರಾಜ್‍ಕುಮಾರ್ ಅವರ ಕುಟುಂಬ ಪರಿಷತ್ತಿನಲ್ಲಿ ಇಟ್ಟಿರುವ ರೂ. ಐದು ಲಕ್ಷಗಳ ದತ್ತಿಯಿಂದ ಆಕರವಾಗುವ ಬಡ್ಡಿಯಲ್ಲಿ ಈ ಪುರಸ್ಕಾರವನ್ನು ರಂಗಭೂಮಿ ಅಥವಾ ಚಲನಚಿತ್ರರಂಗಕ್ಕೆ ಸಂಬಂಧಿಸಿದವರಿಗೆ ನೀಡಲಾಗುತ್ತದೆ.

0 Comments