ವಿದ್ಯಾರ್ಥಿಗಳಿಗ ಸಕಾಲದಲ್ಲಿ ಪಾಸ್ ದೊರೆಯುವಂತೆ ಕ್ರಮ ಕೈಗೊಳ್ಳಬೇಕೆಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಹಾಗೂ ಸಕಾಲ ಸಚಿವ ಎಸ್. ಸುರೇಶ್ ಕುಮಾರ್ ಸೂಚಿಸಿದ್ದಾರೆ.
ಸೇವಾಸಿಂಧು ಪೋರ್ಟಲ್ ಮೂಲಕ ಬಸ್ ಪಾಸ್ ಪಡೆಯುವಲ್ಲಿ ವಿದ್ಯಾರ್ಥಿಗಳಿಗೆ ತೊಂದರೆಯಾಗಿರುವ ಕುರಿತು ಸಕಾಲ ಮತ್ತು ಸೇವಾ ಸಿಂಧು ಅಧಿಕಾರಿಗಳು ಹಾಗೂ ರಾಜ್ಯ ಸಾರಿಗೆ ಸಂಸ್ಥೆ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸೇವಾಸಿಂಧು ಪೋರ್ಟಲ್ ಮೂಲಕ ವಿದ್ಯಾರ್ಥಿಗಳ ರಿಯಾಯ್ತಿ ಬಸ್ ಪಾಸ್ ಪಡೆಯುವ ಸಂಬಂಧದಲ್ಲಿ ಸಮಸ್ಯೆಯಾಗುತ್ತಿರುವ ಕುರಿತು ನಮ್ಮ ಕಚೇರಿಗೆ ಇ-ಮೇಲ್ ಮೂಲಕ, ಪತ್ರಗಳ ಮೂಲಕ ದೂರುಗಳು ಬಂದಿವೆ. ಪ್ರವಾಸದ ಸಮಯದಲ್ಲಿ ರಾಜ್ಯದೆಲ್ಲೆಡೆಯ ವಿದ್ಯಾರ್ಥಿಗಳು ಮತ್ತು ಪೋಷಕರು ಈ ಕುರಿತ ಸಮಸ್ಯೆಗಳನ್ನು ನನ್ನಲ್ಲೂ ಹೇಳಿಕೊಂಡಿದ್ದು, ಪಾಸ್ ಪಡೆಯುವಲ್ಲಿನ ಸಮಸ್ಯೆಗಳನ್ನು ನಿವಾರಿಸಬೇಕೆಂದರು.
ಪ್ರಸ್ತುತ ಶೈಕ್ಷಣಿಕ ವರ್ಷ ಬಹಳ ತಡವಾಗಿ ಆರಂಭವಾಗಿದೆ. ಈ ಬಾರಿ ವಿದ್ಯಾರ್ಥಿಗಳು ಶಾಲೆಗೆ ಬರುವುದು ಕಡ್ಡಾಯವಲ್ಲವೆಂದು ಇಲಾಖೆಯ ಆದೇಶವಿದ್ದಾಗ್ಯೂ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಾಗುತ್ತಿರುವುದು ಸಂತೋಷದ ಹಾಗೂ ಸ್ಪೂರ್ತಿದಾಯಕ ಸಂಗತಿಯಾಗಿದೆ. ಆದರೆ ಸಕಾಲದಲ್ಲಿ ಬಸ್ ಪಾಸ್ ದೊರೆಯದೇ ಕೆಲವರು ಶಾಲೆಗೆ ಬಾರದೇ ಇರುವ ಕುರಿತು ಇಲಾಖೆಯ ಅಧಿಕಾರಿಗಳು ಪ್ರತಿದಿನ ಹಾಜರಾತಿ ವಿವರದಲ್ಲಿ ಷರಾ ದಾಖಲಿಸಿದ್ದಾರೆ. ನಿಗದಿತ ಅವಧಿಯಲ್ಲಿ ರಿಯಾಯ್ತಿ ಪಾಸ್ ದೊರೆಯದೇ ತರಗತಿಗೆ ಗೈರು ಹಾಜರಾಗುವ ಸಮಸ್ಯೆ ಉದ್ಭವಿಸದಂತೆ ಎರಡೂ ಇಲಾಖೆಗಳು ಗಮನಹರಿಸಬೇಕು ಎಂದರು ಸರೇಶ್ ಕುಮಾರ್ ಹೇಳಿದರು.ಪಾಸ್ ಪಡೆಯುವ ಅರ್ಜಿ ಭರ್ತಿ ಮಾಡುವಾಗ ವಿದ್ಯಾರ್ಥಿಯ ಆಧಾರ್ ಸಂಖ್ಯೆ ಮತ್ತು ಮೊಬೈಲ್ ಸಂಖ್ಯೆಯನ್ನು ಕಡ್ಡಾಯಗೊಳಿಸಿರುವುದರಿಂದ ಆಧಾರ್ ಕಾರ್ಡ್ ಮತ್ತು ಮೊಬೈಲ್ ಇಲ್ಲದ ವಿದ್ಯಾರ್ಥಿಗಳಿಗೆ ಪಾಸ್ ಪಡೆಯಲು ಸಾಧ್ಯವಾಗುತ್ತಿಲ್ಲ ಎಂಬ ದೂರುಗಳೂ ಇವೆ. ಅರ್ಜಿ ಸಲ್ಲಿಸಲು ವಿದ್ಯಾರ್ಥಿಗಳು ಸೈಬರ್ ಕೆಫೆಗಳ ಮೊರೆಹೋಗಬೇಕಿರುವುದರಿಂದ ಸೈಬರ್ ಕೆಫೆಗಳಿಗೆ ಸೇವಾಶುಲ್ಕ ಪಾವತಿಸಬೇಕಾಗಿರುವುದರಿಂದ ಮಕ್ಕಳಿಗೆ ಹೆಚ್ಚಿನ ಆರ್ಥಿಕ ಹೊರೆ ಬೀಳುತ್ತಿದೆ ಎಂದು ಕೆಲ ಪೋಷಕರು ಹೇಳಿರುವುದರಿಂದ ಇದನ್ನು ಹೇಗೆ ಸರಳೀಕರಿಸಬೇಕೆಂಬುದರ ಕುರಿತೂ ಚಿಂತನೆ ನಡೆಸಬೇಕೆಂದೂ ಸುರೇಶ್ ಕುಮಾರ್ ಸಲಹೆ ನೀಡಿದರು.
ಈಗಾಗಲೇ 12 ಲಕ್ಷ ಅರ್ಜಿಗಳು ಸಲ್ಲಿಕೆಯಾಗಿದ್ದು, 8.5 ಲಕ್ಷ ಅರ್ಜಿಗಳನ್ನು ವಿಲೇವಾರಿ ಮಾಡಿ ಪಾಸ್‍ಗಳನ್ನು ವಿತರಿಸಲಾಗಿದೆ ಎಂದು ಸಾರಿಗೆ ಸಂಸ್ಥೆ ಅಧಿಕಾರಿ ವಿಶ್ವನಾಥ್ ಹೇಳಿದರು. ಸಕಾಲ ಮಿಷನ್ ನಿರ್ದೇಶಕಿ ಡಾ. ಬಿ.ಆರ್. ಮಮತಾ, ಇಡಿಸಿಎಸ್ ನಿರ್ದೇಶಕಿ ದೀಪ್ತಿ ಕಾನಡೆ ಸಕಾಲ ಮಿಷನ್ ಅಧಿಕಾರಿ ವರಪ್ರಸಾದರೆಡ್ಡಿ ಮತ್ತಿತರ ಅಧಿಕಾರಿಗಳು ಹಾಜರಿದ್ದರು.


0 Comments