ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸ್ವಚ್ಛ ಸರ್ವೇಕ್ಷಣ್ ಅಭಿಯಾನ-2021ರ ಅಂಗವಾಗಿ ಅಗರ ಕೆರೆ ದ್ವಾರದಿಂದ ಇಂದು ಬೆಳಗ್ಗೆ "ಪ್ಲಾಗ್ ರನ್" ಕಾರ್ಯಕ್ರಮಕ್ಕೆ ಶಾಸಕ ಸತೀಶ್ ರೆಡ್ಡಿ ರವರು ಚಾಲನೆ ನೀಡಿದರು. ಈ ವೇಳೆ ವಿಶೇಷ ಆಯುಕ್ತರು(ಘನತ್ಯಾಜ್ಯ) ಡಿ.ರಂದೀಪ್ ಹಾಗೂ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.
ಸ್ವಚ್ಛ ಸರ್ವೇಕ್ಷಣ್ ಅಭಿಯಾನದ ಭಾಗವಾಗಿ ಪ್ಲಾಗ್ ರನ್ ಕಾರ್ಯಕ್ರಮ ಆಯೋಜಿಸಿ ಹೆಚ್.ಎಸ್.ಆರ್ ಲೇಔಟ್, ಬಿಡಿಎ ಕಾಂಪ್ಲೆಕ್ಸ್ ಬಳಿಯ ಅಗರ ದ್ವಾರದಿಂದ ಜಗನ್ನಾಥ ದೇವಸ್ಥಾನದವರೆಗೆ ಬೆಳಗ್ಗೆ 6.45 ರಿಂದ ಬೆಳಗ್ಗೆ 9.30ರವರೆಗೆ ಸುಮಾರು 150 ಮಂದಿ ಪಾಲ್ಗೊಂಡು ಪ್ಲಾಸ್ಟಿಕ್ ಕವರ್, ಬಾಟಲ್ ಸೇರಿದಂತೆ 5 ಆಟೋ ಟಿಪ್ಪರ್ ತ್ಯಾಜ್ಯ ಸಂಗ್ರಹಿಸಲಾಗಿರುತ್ತದೆ.
ಘನತ್ಯಾಜ್ಯ ವಿಲೇವಾರಿ ಸಂಬಂಧ ಸಾರ್ವಜನಿಕರ ಅಭಿಪ್ರಾಯ ಸಂಗ್ರಹ ಬಹಳ ಮುಖ್ಯ. ನಗರದ ಸ್ವಚ್ಛತೆ ಕೇವಲ ಬಿಬಿಎಂಪಿ ಹಾಗೂ ಮಾರ್ಷಲ್ಸ್ ಗಳಿಂದ ಸಾಧ್ಯವಿಲ್ಲ. ನಾಗರಿಕರ ಬೆಂಬಲವೂ ಬೇಕಿದೆ. ಪ್ರತಿಯೊಬ್ಬರೂ ಸ್ವಚ್ಛ ಬೆಂಗಳೂರು ಮಾಡಲು ಪಣತೊಡಬೇಕು ಎಂದು ವಿಶೇಷ ಆಯುಕ್ತರು ರಂದೀಪ್ ರವರು ತಿಳಿಸಿದರು.
ಪ್ಲಾಗ್ ರನ್ ಮಾಡುವುದರಿಂದ ಸಾರ್ವಜನಿಕರು ಎಷ್ಟೆಲ್ಲಾ ಅನಗತ್ಯ ವಸ್ತುಗಳನ್ನು ಬಳಸುತ್ತಿದ್ದೇವೆ ಎಂಬ ಅರಿವು ಮೂಡಲಿದೆ. ಇದರಿಂದ ಮರುಬಳಕೆ ಮಾಡುವ ವಸ್ತುಗಳನ್ನು ಹೆಚ್ಚು ಹೆಚ್ಚು ಬಳಸಲು ಉತ್ತೇಜನ ಸಿಗಲಿದೆ. ಇನ್ನು ಸ್ವಚ್ಛ ಸರ್ವೇಕ್ಷಣ್ ಅಭಿಯಾನದ ಅಂಗವಾಗಿ ಇದುವರೆಗೆ ನಾಗರಿಕರಿಂದ 97 ಸಾವಿರ ಫೀಡ್ ಬ್ಯಾಕ್ ಬಂದಿದ್ದು, ಮಾರ್ಚ್ ಅಂತ್ಯದಲ್ಲಿ 1.5 ಲಕ್ಷ ಸಾರ್ವಜನಿಕ ಅಭಿಪ್ರಾಯ ಸಂಗ್ರಹದ ಗುರಿ ಹೊಂದಲಾಗಿದೆ ಎಂದರು.


0 Comments